ETV Bharat / state

ಬಿಜೆಪಿ ಶಾಸಕರಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ

author img

By

Published : Jul 21, 2023, 2:31 PM IST

Updated : Jul 21, 2023, 3:47 PM IST

ಇಂದು ಸದನ‌ ಬಹಿಷ್ಕರಿಸಿರುವ ಬಿಜೆಪಿ ಶಾಸಕರು ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಧರಣಿನಿರತ ಪ್ರತಿಪಕ್ಷ ಬಿಜೆಪಿ
ಧರಣಿನಿರತ ಪ್ರತಿಪಕ್ಷ ಬಿಜೆಪಿ

ಬಿಜೆಪಿ ಶಾಸಕರಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ

ಬೆಂಗಳೂರು: ಹತ್ತು ಮಂದಿ ಬಿಜೆಪಿ ಶಾಸಕರ ಅಮಾನತು ವಿರೋಧಿಸಿ ಸದನ‌ ಬಹಿಷ್ಕರಿಸಿ ಬಿಜೆಪಿ ಉಭಯ ಸದನ ಸದಸ್ಯರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಎರಡನೇ ದಿನವಾದ ಇಂದೂ ಪ್ರತಿಭಟನೆ ನಡೆಸಿದರು. ಹತ್ತು ಶಾಸಕರ ಅಮಾನತು ಖಂಡಿಸಿ, ಶಿಷ್ಟಾಚಾರ ಉಲ್ಲಂಘಿಸಿ ಐಎಎಸ್ ಅಧಿಕಾರಿಗಳನ್ನು ನಿಯೋಜನೆ ವಿರೋಧಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸರ್ಕಾರ ಹಾಗೂ ಸ್ಪೀಕರ್ ವಿರುದ್ಧ ಧಿಕ್ಕಾರ ಕೂಗಿ ಬಿಜೆಪಿ ಶಾಸಕರು ತಮ್ಮ ಆಕ್ರೋಶ ಹೊರಹಾಕಿದರು. ಸಿದ್ದರಾಮಯ್ಯ ಹಿಟ್ಲರ್ ಎಂಬ ಘೋಷಣೆಗಳನ್ನು ಕೂಗಿ ಬಿಜೆಪಿ ಶಾಕಸರು ಧರಣಿ ನಡೆಸಿದರು. ಧರಣಿಯಲ್ಲಿ ಮಾಜಿ ಸಿಎಂ ಬಸವರಾಜು ಬೊಮ್ಮಾಯಿ, ಆರ್.ಅಶೋಕ್, ಅಶ್ವತ್ಥ್ ನಾರಾಯಣ್, ಸುನೀಲ್ ಕುಮಾರ್, ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ಬಿ.ವೈ.ವಿಜಯೇಂದ್ರ, ಕೋಟಾ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್ ಮುಂತಾದವರು ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ನಿನ್ನೆಯೂ ಬಿಜೆಪಿ ಶಾಸಕರು ಸದನ ಬಹಿಷ್ಕರಿಸಿ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ್ದರು. ಬಳಿಕ ವಿಧಾನಸೌಧದಿಂದ ರಾಜಭವನದ ವರೆಗೆ ಕಾಲ್ನಡಿಗೆ ನಡೆಸಿದ ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಸ್ಪೀಕರ್ ವಿರುದ್ದ ದೂರು ನೀಡಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರೂ ಉಪಸ್ಥಿತರಿದ್ದರು. ಇನ್ನು ಬಿಜೆಪಿ ಶಾಸಕರ ಅಮಾನತು ಆದೇಶವನ್ನು ವಿರೋಧಿಸಿ ಪ್ರತಿಪಕ್ಷಗಳು ವಿಧಾನಸಭೆಯ ಸದನದ ಕಲಾಪವನ್ನು 2ನೇ ದಿನವಾದ ಇಂದು ಕೂಡ ಬಹಿಷ್ಕರಿಸಿದ್ದು, ಪ್ರತಿಪಕ್ಷಗಳ ಆಸನಗಳು ಖಾಲಿ ಹೊಡೆಯುತ್ತಿದ್ದವು.

ಪೊಲೀಸ್ ಠಾಣೆಗಳಲ್ಲಿ ಮಾಮೂಲು ಫಿಕ್ಸ್ ಆಗಿದೆ: ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಶಾಲಾ ಮಕ್ಕಳಿಗೆ 2000 ಶೆಡ್ಯೂಲ್ ಬಸ್ ಕೊಡ್ತೀವಿ ಅಂದಿದ್ದೆವು. ಅದನ್ನೂ ತೆಗೆದು ಹಾಕಿದ್ದಾರೆ. ಶಾಲಾ ಮಕ್ಕಳು ಬದುಕುವ ಹಕ್ಕು ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಎಲ್ಲಿ ಬೇಕಾದರು ಕೊಲೆ ಸುಲಿಗೆ ನಡೆಯುತ್ತಿದೆ. ಕೆಲವು ಪೊಲೀಸ್ ಠಾಣೆಯಲ್ಲಿ ಮಾಮೂಲು ಫಿಕ್ಸ್ ಆಗಿದೆ. ಪೊಲೀಸ್ ಠಾಣೆಯಲ್ಲಿ ರಾಜಾರೋಷವಾಗಿ ಮಾಮೂಲು ಫಿಕ್ಸ್ ಆಗಿದೆ. ಪೊಲೀಸ್ ಠಾಣೆಯನ್ನು ಹರಾಜು ಹಾಕುತ್ತಿದ್ದಾರೆ.

ಮಾಮೂಲು ಹರಾಜು ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಸಾಮಾನ್ಯ ಜನರ ಬದುಕನ್ನು ಅಸ್ಥಿರ ಮಾಡಿದ್ದಾರೆ. ಇವರ ಬಜೆಟ್ ಜನವಿರೋಧಿ ಬಜೆಟ್. ಸಾಲವನ್ನು ಹೆಚ್ಚು ಮಾಡಿದ್ದಾರೆ. ಸಾಲದ ಕೀರ್ತಿ ಸಿದ್ದರಾಮಯ್ಯಗೆ ಸೇರುತ್ತದೆ. ಈ ಬಾರಿ 85,000 ಕೋಟಿ ಸಾಲ ಮಾಡಿದ್ದೀರ. ಎಲ್ಲಾ ಭಾಗ್ಯಗಳಿಗೆ ಎಸ್​ಸಿಪಿಟಿಎಸ್ ಪಿ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ಪಂಚ ಗ್ಯಾರಂಟಿಗೆ 13,000 ಕೋಟಿ ಎಸ್​ಸಿಪಿಟಿಎಸ್​ಪಿ ಹಣ ದುರ್ಬಳಕೆ: ಗೃಹಲಕ್ಷ್ಮಿ ಯೋಜನೆಗೆ ಸುಮಾರು 6,000 ಕೋಟಿ ರೂ. ಎಸ್​ಸಿಪಿ ಟಿಎಸ್​ಪಿಯಿಂದ ದುರ್ಬಳಕೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ. ಪಂಚ ಗ್ಯಾರಂಟಿಗಳಿಗಾಗಿ 13,000 ಕೋಟಿ ರೂ. ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಎಸ್​ಸಿಪಿಟಿಎಸ್​ಪಿ ಯೋಜನೆ ಹಣವನ್ನು ಕೊಟ್ಟಿದ್ದೀರ. ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ದಲಿತ ಶಾಸಕರುಗಳಿಗೆ, ಮಂತ್ರಿಗಳಿಗೆ ಕೇಳಲು ನರ ಇಲ್ಲವಾ?. ದಲಿತರಿಗೆ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿದ್ಯುತ್ ದರ ಹೆಚ್ಚಿಸಿ ಶಾಕ್ ಕೊಟ್ಟಿದ್ದೀರಿ, ಮುಂದೆ ಹಾಲಿನ‌ ದರವೂ ಹೆಚ್ಚಾಗಲಿದೆ. 2013-18ರಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಭ್ರಷ್ಟಾಚಾರ ಇರುವ ಸ್ಥಾನ ಸಿದ್ದರಾಮಯ್ಯ ಸರ್ಕಾರಕ್ಕೆ ಕೊಟ್ಟಿದೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಪಿಯೋನ್​ನಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ವರ್ಗಾವಣೆಯ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು.

ಮುಂದುವರೆದು, ಅನ್ನಭಾಗ್ಯದಲ್ಲಿ, ಗೃಹಲಕ್ಷ್ಮಿಯಲ್ಲಿ, ಗೃಹ ಜ್ಯೋತಿಯಲ್ಲಿ ದೋಖಾ ಆಗಿದೆ. ಅತ್ಯಂತ ಕೆಟ್ಟ ಆರ್ಥಿಕ ನಿಲುವನ್ನು ಸಿದ್ದರಾಮಯ್ಯ ತಮ್ಮ 14ನೇ ಬಜೆಟ್​ನಲ್ಲಿ ತೋರಿಸಿದ್ದಾರೆ. ಯಪಿಎ ಅವಧಿಯಲ್ಲಿ ಎಷ್ಟು ಅನುದಾನ ಕೊಟ್ಟಿದ್ದಾರೆ, ಎನ್ ಡಿಎ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂದು ಬಹಿರಂಗ ಚರ್ಚೆ ಮಾಡೋಣ. ನಾನು ಸವಾಲು ಹಾಕುತ್ತೇನೆ ಎಂದರು.

ಸಿದ್ದರಾಮಯ್ಯರದ್ದು ಉತ್ತರ ಕುಮಾರನ ಪೌರುಷ: ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, ಕರ್ನಾಟಕ ವಿಧಾನಸಭೆಯಲ್ಲಿ ಸ್ಪೀಕರ್ ಆಡಳಿತ ಶುರುವಾಗಿದೆ. ವೆಸ್ಟ್ ಎಂಡ್ ಹೊಟೇಲ್​ಗೆ ಊಟಕ್ಕೆ ಯಾಕೆ ಹೋಗಿದ್ದೀರಿ. ಅಷ್ಟು ಪಾಪರ್ ಆಗಿದ್ದೀರಾ?. ಸಿದ್ದರಾಮಯ್ಯ ಊಟ ಹಾಕ್ತಾರೆ, ಡಿಕೆಶಿ ಊಟ ಹಾಕ್ತಾರೆ. ಕಾಂಗ್ರೆಸ್ ಆಫೀಸ್​ನಲ್ಲಿ ಊಟ ಹಾಕುವುದಕ್ಕೆ ಆಗಲ್ವಾ?. ಸ್ಪೀಕರ್ ಅವರು ವೆಸ್ಟ್ ಎಂಡ್ ಹೊಟೇಲ್​ಗೆ ಹೋಗಿ ಊಟ ಮಾಡಬೇಕಿತ್ತಾ? ಎಂದು ಮಾಜಿ ಸಚಿವ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯವರು ವಿಧಾನಸಭೆ ಬಾಗಿಲನ್ನು ಅವತ್ತು ಒದ್ದಿದ್ದರು. ಕಾಂಗ್ರೆಸ್ ರೌಡಿಗಳು, ಅನಾಗರೀಕರಾಗಿದ್ದಾರೆ. ಸಿದ್ದರಾಮಯ್ಯರದ್ದು ಉತ್ತರ ಕುಮಾರನ ಪೌರುಷ. ವಿಪಕ್ಷಗಳೇ ಇಲ್ಲ ಆದರೂ ಭಾಷಣ ಮಾಡುತ್ತಾರೆ. ಇದು ವಿಧಾನಸೌಧ ಪಾಲಿಗೆ ಕಳಂಕವಾಗಿದೆ. ಒಂದೇ ಊಟಕ್ಕೆ ಇಷ್ಟು ಅವಾಂತರ ಮಾಡಿದರಲ್ಲಾ?. ಈ ಸರ್ಕಾರ ಒಂದು ವರ್ಷನೂ ಇರಲ್ಲ. ಈ ಗೂಂಡಾಗಿರಿ ಸರ್ಕಾರ ಹೆಚ್ಚು ದಿನ ಉಳಿಯಲ್ಲ. ಇಂಥ ಸರ್ಕಾರ ತೊಲಗಬೇಕು. ಅಲ್ಲಿವರೆಗೆ ನಾವು ಹೋರಾಟ ಮಾಡುತ್ತೇವೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

Last Updated : Jul 21, 2023, 3:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.