ETV Bharat / state

ಪಬ್​ಗೆ ನುಗ್ಗಿ ನೈತಿಕ ಪೊಲೀಸ್‌ಗಿರಿ ಯತ್ನ: ಎರಡು ಗುಂಪುಗಳ ನಡುವೆ ಹೊಡೆದಾಟ

author img

By

Published : Mar 5, 2023, 11:44 AM IST

Updated : Mar 5, 2023, 2:28 PM IST

ಬೆಂಗಳೂರಿನಲ್ಲಿ ತಡರಾತ್ರಿ ಸಂಘಟನೆಯೊಂದರ ಸದಸ್ಯರು ಪಬ್‌ನೊಳಗೆ ನುಗ್ಗಿ ನೈತಿಕ ಪೊಲೀಸ್‌ಗಿರಿಗೆ ಯತ್ನಿಸಿದ್ದು, ಎಲ್ಲರನ್ನೂ ಅಶೋಕ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

fight
ಎರಡು ಗುಂಪುಗಳ ನಡುವೆ ಮಾರಾಮಾರಿ

ಬ್ರಿಗೇಡ್ ರಸ್ತೆಯಲ್ಲಿ ಗಲಾಟೆ

ಬೆಂಗಳೂರು: ಪಬ್ ಒಳಗೆ ನುಗ್ಗಿ ನೈತಿಕ ಪೊಲೀಸ್‌ಗಿರಿಗೆ ಯತ್ನಿಸಿದ ಸಂಘಟನೆಯೊಂದರ ಸದಸ್ಯರು ಮತ್ತು ಪಬ್ ಸಿಬ್ಬಂದಿಯ ನಡುವೆ ಮಾರಾಮಾರಿ ನಡೆದಿರುವ ಘಟನೆ ತಡರಾತ್ರಿ ಅಶೋಕನಗರ ಠಾಣಾ ವ್ಯಾಪ್ತಿಯ ಬ್ರಿಗೇಡ್ ರಸ್ತೆಯಲ್ಲಿ ನಡೆದಿದೆ. ಕರ್ನಾಟಕ ಕಾರ್ಮಿಕರ ಪರಿಷತ್ ಎಂಬ ಸಂಘಟನೆಯ ಸುಮಾರು ಹದಿನೈದು ಸದಸ್ಯರು ಡೋಲು ಬಡಿದುಕೊಂಡು ಬ್ರಿಗೇಡ್ ರಸ್ತೆಯ ಪಬ್​ವೊಂದರ ಒಳ ಪ್ರವೇಶಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರನ್ನು ಬೌನ್ಸರ್​ಗಳು ತಡೆದಿದ್ದಾರೆ‌. ನಂತರ ಬೌನ್ಸರ್ಸ್ ಹಾಗೂ ಸಂಘಟನೆಯ ನಡುವೆ ವಾಗ್ವಾದ ಆರಂಭವಾಗಿದೆ. ಎರಡೂ ಗುಂಪಿನವರು ರಸ್ತೆಯಲ್ಲೇ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಆಶೋಕ ನಗರ ಪೊಲೀಸರು, ಸಂಘಟನೆಯ ಸದಸ್ಯರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ಪ್ರಕರಣ ಹೊರತುಪಡಿಸಿ, ರಾಜ್ಯದ ವಿವಿಧೆಡೆ ಇತ್ತೀಚೆಗೆ ನಡೆದ ಘಟನಾವಳಿಗಳನ್ನು ಮೆಲುಕು ಹಾಕುವುದಾದರೆ,

ಇದನ್ನೂ ಓದಿ: ಪಬ್‌ನಲ್ಲಿ ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆ; ಮಂಗಳೂರು ಪೊಲೀಸ್ ಆಯುಕ್ತರು ಹೇಳಿದ್ದೇನು?

ಅರ್ಚಕನ ಮೇಲೆ ಹಲ್ಲೆ: ಇನ್ನು ಕಳೆದ ತಿಂಗಳ ಫೆಬ್ರವರಿ 21 ರಂದು ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿ ಮಠದ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಗ್ರಾಮಸ್ಥರು ಹಾಗೂ ಅರ್ಚಕರ ನಡುವೆ ಮಾರಾಮಾರಿ ನಡೆದಿತ್ತು. ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಬಸವಣ್ಣ ದೇವಸ್ಥಾನದಲ್ಲಿ ಪ್ರಕಾಶ್ ಮುಳುಗಂದ ಮಠ ಅವರು ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರ ಕಾರ್ಯವೈಖರಿಗೆ ಬೇಸತ್ತ ಗ್ರಾಮಸ್ಥರು ಪೂಜೆ ಮಾಡದಂತೆ ಅರ್ಚಕರಿಗೆ ಹೇಳಿದ್ದಾರೆ. ಹೀಗಾಗಿ, ಗಲಾಟೆ ನಡೆದಿತ್ತು. ಈ ವೇಳೆ ಅರ್ಚಕನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿತ್ತು.

ಇದನ್ನೂ ಓದಿ: ಹುಬ್ಬಳ್ಳಿ ಬಳಿ ಮಠದ ಪೂಜೆ ವಿಚಾರಕ್ಕೆ ಗಲಾಟೆ: ಅರ್ಚಕನ ಮೇಲೆ ಹಲ್ಲೆ

ಶಾಸಕರೊಂದಿಗೆ ವಾಗ್ವಾದ: ಕುಣಿಗಲ್‌ ಪುರಸಭೆಯ 18 ನೇ ವಾರ್ಡ್‌ನ ನಗರೋತ್ಥಾನ ಯೋಜನೆ ಕಾಮಗಾರಿ ವಿಚಾರದಲ್ಲಿ ನಮ್ಮನ್ನು ಪರಿಗಣಿಸಿಲ್ಲ ಎಂದು ಆರೋಪಿಸಿದ ಪುರಸಭೆ ಜೆಡಿಎಸ್ ಸದಸ್ಯ ಶ್ರೀನಿವಾಸಮೂರ್ತಿ ಭೂಮಿ ಪೂಜೆಗೆ ಅಡ್ಡಿಪಡಿಸಿ ಶಾಸಕರೊಂದಿಗೆ ವಾಗ್ವಾದ ನಡೆಸಿದ ಘಟನೆ ಕಳೆದ ಫೆ 9ರಂದು ನಡೆದಿತ್ತು. ಕಾಂಗ್ರೆಸ್ ಶಾಸಕ ರಂಗನಾಥ್‌ ಕಾಮಗಾರಿಯ ಭೂಮಿ ಪೂಜೆಗೆ ಬಂದಾಗ ಹೌಸಿಂಗ್‌ ಬೋರ್ಡ್ ರಸ್ತೆ ಅಭಿವೃದ್ಧಿಗೆ ಪಟ್ಟಿ ಸಲ್ಲಿಸಿದ್ದು, ಅಧಿಕಾರಿಗಳು ಶಾಸಕರ ಬೆಂಬಲಿಗನೊಬ್ಬನ ಪ್ರಭಾವಕ್ಕೆ ಮಣಿದು ನಿಗದಿತ ಪಟ್ಟಿ ಕೈಬಿಟ್ಟು, ಬೇರೆ ರಸ್ತೆಗಳನ್ನು ಅಂತಿಮ ಕ್ಷಣದಲ್ಲಿ ಸೇರಿಸಿದ್ದಾರೆ. ನಮ್ಮ ಗಮನಕ್ಕೆ ಬಾರದೆ ಕಾಮಗಾರಿಯ ಪೂಜೆಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಆರೋಪಿಸಿ ಪೂಜೆಗೆ ಶ್ರೀನಿವಾಸಮೂರ್ತಿ ಅಡ್ಡಿಪಡಿಸಿದರು. ಒಂದು ಹಂತದಲ್ಲಿ ಇಬ್ಬರು ಹಾಲಿ ಹಾಗೂ ಮಾಜಿ ಸದಸ್ಯರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು.

ಇದನ್ನೂ ಓದಿ: ತುಮಕೂರು: ಕಾಂಗ್ರೆಸ್ ಶಾಸಕ ರಂಗನಾಥ್, ಪುರಸಭೆ ಸದಸ್ಯನ ನಡುವೆ ಮಾತಿನ ಚಕಮಕಿ

Last Updated :Mar 5, 2023, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.