ETV Bharat / state

SSLC ಫಲಿತಾಂಶ ಪ್ರಕಟ: ಬೇರೆಯವರಿಂದ ಪರೀಕ್ಷೆ ಬರೆಸಿದ್ದ ವಿದ್ಯಾರ್ಥಿನಿ ಡಿಬಾರ್​, ಉಳಿದವರೆಲ್ಲರೂ ಪಾಸ್​

author img

By

Published : Aug 9, 2021, 3:49 PM IST

Updated : Aug 9, 2021, 8:38 PM IST

ಇಂದು ರಾಜ್ಯದ ನೂತನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ನಾಗೇಶ್ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಿಸಿದ್ದಾರೆ. ಶೇ.99.9ರಷ್ಟು ಫಲಿತಾಂಶ ಹೊರ ಬಂದಿದೆ ಎಂದು ಶಿಕ್ಷಣ ಸಚಿವ ನಾಗೇಶ್​ ಹೇಳಿದರು.

ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ
ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ

ಬೆಂಗಳೂರು: ಇಂದು ರಾಜ್ಯದ ನೂತನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ನಾಗೇಶ್ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಿಸಿದ್ದಾರೆ. ಶೇ.99.9ರಷ್ಟು ಫಲಿತಾಂಶ ಹೊರಬಂದಿದೆ. ಒಬ್ಬಳೇ ಒಬ್ಬ ವಿದ್ಯಾರ್ಥಿನಿ ಬಿಟ್ಟು ಉಳಿದೆಲ್ಲ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್​ ಆಗಿದ್ದಾರೆ. ಆ ವಿದ್ಯಾರ್ಥಿನಿ ತಾನು ಪರೀಕ್ಷಾ ಕೊಠಡಿಗೆ ಬಾರದೇ ಬೇರೆಯವರಿಂದ ಪರೀಕ್ಷೆ ಬರೆಸಿದ್ದ ಕಾರಣ ಡಿಬಾರ್​ ಮಾಡಲಾಗಿದೆ. ಆ ವಿದ್ಯಾರ್ಥಿನಿಯನ್ನು ಬಿಟ್ಟು ಉಳಿದೆಲ್ಲವರೂ ತೇರ್ಗಡೆಯಾಗಿದ್ದಾರೆ ಎಂದು ಶಿಕ್ಷಣ ಸಚಿವ ನಾಗೇಶ್​ ಹೇಳಿದರು.

ಅಂದಿನ ಶಿಕ್ಷಣ ಮಂತ್ರಿಗಳಾದ ಸುರೇಶ್​ಕುಮಾರ್ ಹಾಗೂ ಅವರಿಗೆ ಪೂರ್ಣ ಬೆಂಬಲಕೊಟ್ಟ ಆಗಿನ ಸಿಎಂ ಯಡಿಯೂರಪ್ಪ ಅವರನ್ನು ನಾನು ಈ ಸಂದರ್ಭ ನೆನಪಿಸಿಕೊಳ್ಳುತ್ತೇನೆ. ಎಲ್ಲ ವಿದ್ಯಾರ್ಥಿಗಳಿಗೆ ಮಾಡೆಲ್​ ಪ್ರಶ್ನೆ ಪತ್ರಿಕೆ ಕಳುಹಿಸಿ, ಅಲ್ಲಿನ ಶಿಕ್ಷಕರ ಸಹಾಯದಿಂದ ಅವರನ್ನು ಎಕ್ಸಾಂಗೆ ಸಿದ್ಧಗೊಳಿಸಿ ಪರೀಕ್ಷೆ ಬರೆಸಿದೆವು ಎಂದು ಶಿಕ್ಷಣ ಸಚಿವ ನಾಗೇಶ್​ ಹೇಳಿದರು.

ಸಾಂಕ್ರಾಮಿಕ ಕೊರೊನಾ ಸೋಂಕು ವ್ಯಾಪಿಸಿದ್ದ ಕಾರಣಕ್ಕೆ 2020-21ರ ಎಸ್ಎಸ್ಎಲ್​ಸಿ ಪರೀಕ್ಷೆಯನ್ನು ನಡೆಸಬೇಕಾ ಬೇಡವೇ ಎಂಬ ಸಾಕಷ್ಟು ವಾದ - ವಿವಾದಗಳು ನಡೆದಿದ್ದವು. ಇವುಗಳ ಮಧ್ಯೆಯೇ ನಿರಾಳವಾಗಿ ಪರೀಕ್ಷೆಯು ಜುಲೈ 19, 22 ರಂದು ನಡೆದಿತ್ತು.

ಜಿಲ್ಲಾವಾರು ಫಲಿತಾಂಶದ ಮಾಹಿತಿ:
ಜಿಲ್ಲಾವಾರು ಫಲಿತಾಂಶದ ಮಾಹಿತಿ

ಎಸ್ಎಸ್ಎಲ್​ಸಿ ಪರೀಕ್ಷೆಯನ್ನು ವಿಶೇಷ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ಮಾದರಿಯನ್ನ ಬದಲಾಯಿಸಿ ಬಹು ಆಯ್ಕೆ ಪ್ರಶ್ನೆಗಳನ್ನು ನೀಡಿ ನಡೆಸಲಾಗಿತ್ತು. ಅದು ಕೂಡ 6 ದಿನಗಳ ಪರೀಕ್ಷೆಗೆ ಕತ್ತರಿ ಹಾಕಿ, ವಿಷಯವಾರು ಮೂಲಕ ಎರಡೇ ದಿನ ಪರೀಕ್ಷೆ ನಡೆಸಲಾಯ್ತು.

ಈ ಸಲದ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಒಟ್ಟಾರೆ ಹಾಜರಾತಿ 96.65 ರಷ್ಟು ಇತ್ತು. ಕಳೆದ ವಾರ್ಷಿಕ ಪರೀಕ್ಷೆಗಿಂತ ಹೆಚ್ಚು ಮಕ್ಕಳು ಈ ಸಲ ಹಾಜರಾಗಿದ್ದರು. ಇದೀಗ 8 ಲಕ್ಷಕ್ಕೂ ಅಧಿಕ ಮಕ್ಕಳು ಪರೀಕ್ಷೆ ಬರೆದಿದ್ದರು.

ಬೇರೆಯವರ ಕೈಯಲ್ಲಿ ಪರೀಕ್ಷೆ ಬರೆಸಿದ ಅಭ್ಯರ್ಥಿ ಡಿಬಾರ್:

ಈ ಸಲದ ಪರೀಕ್ಷೆಯಲ್ಲಿ ಯಾರನ್ನೂ ಫೇಲ್ ಮಾಡುವುದಿಲ್ಲ ಅಂತ ಹೇಳಲಾಗಿತ್ತು. ಆದರೆ ವಿದ್ಯಾರ್ಥಿನಿಯೊಬ್ಬಳು ತಾನು ಪರೀಕ್ಷೆ ಬರೆಯದೇ ಬೇರೆಯವರ ಕೈಯಲ್ಲಿ ಪರೀಕ್ಷೆ ಬರೆಸಿದ ಪ್ರಕರಣವೊಂದು ಪರೀಕ್ಷಾ ಮಂಡಳಿಗೆ ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ ಅಭ್ಯರ್ಥಿಯಾಗಿದ್ದು ಆಕೆಯನ್ನ ಡಿಬಾರ್ ಮಾಡಲಾಗಿದೆ. ಇನ್ನು ಯಾವ ಜಿಲ್ಲೆ, ಯಾವ ಶಾಲೆ ಅಭ್ಯರ್ಥಿ ಎಂಬ ವಿಚಾರವನ್ನ ಮಂಡಳಿಯು ಗುಪ್ತವಾಗಿ ಇಟ್ಟಿದೆ.

ಜಿಲ್ಲಾವಾರು ಫಲಿತಾಂಶದ ಮಾಹಿತಿ:

ಬೆಂಗಳೂರು ಉತ್ತರ ಪ್ರಥಮ, ಬೆಂಗಳೂರು ದಕ್ಷಿಣ ದ್ವಿತೀಯ ಹಾಗೂ ರಾಮನಗರ ತೃತೀಯ ಸ್ಥಾನದಲ್ಲಿವೆ.

ಶೇ. 99.9 ವಿದ್ಯಾರ್ಥಿಗಳು ಪಾಸ್​:

ಶೇ.99.9 ವಿದ್ಯಾರ್ಥಿಗಳು ಉರ್ತೀಣರಾಗಿದ್ದು, ಅದರಲ್ಲಿ 4,70,160 ವಿದ್ಯಾರ್ಥಿಗಳು ಹಾಗೂ 4,01281 ವಿದ್ಯಾರ್ಥಿನಿಯರು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅದರಲ್ಲಿ A+ ಗ್ರೇಡ್- 1,28,931, A ಗ್ರೇಡ್- 2,50,317, B- ಗ್ರೇಡ್- 2,87,684, C- 1,13,610 ಹಾಗೂ ಗ್ರೇಸ್ ಮಾರ್ಕ್ಸ್​ ಪಡೆದು 9 ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ ಎಂದು ಸಚಿವರು ತಿಳಿಸಿದರು.

ಕೋವಿಡ್ ಭೀತಿಯಲ್ಲಿದ್ದ 5,063 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ:

ಕೋವಿಡ್ ಭೀತಿ ಇದ್ದ ಕಾರಣಕ್ಕೆ ಸುಮಾರು 5,063 ವಿದ್ಯಾರ್ಥಿಗಳ ಪೋಷಕರು ಪರೀಕ್ಷೆ ಬರೆಯಿಸಲು ಹಿಂದೇಟು ಹಾಕಿದರು. ಮುಂದಿನ ಸಲ ಪರೀಕ್ಷೆ ಬರೆಯುವ ಆಯ್ಕೆಯನ್ನ ತೆಗೆದುಕೊಂಡಿದ್ದರು. ಹೀಗಾಗಿ ಈ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ಮೂರನೇ ವಾರದಲ್ಲಿ ಕೋವಿಡ್ ಪರಿಸ್ಥಿತಿ ನೋಡಿಕೊಂಡು ಪರೀಕ್ಷೆ ನಡೆಸಲಾಗುವುದು. ಪ್ರಥಮ ಪ್ರಯತ್ನ ಅಂತಲೇ ಇವರನ್ನ ಪರಿಗಣಿಸಿ ಪರೀಕ್ಷೆ ನಡೆಸಲಾಗುವುದು.

ಅಂಕವಾರು ಮಾಹಿತಿ:

  • 625 ಅಂಕಕ್ಕೆ 625- 157 ಮಕ್ಕಳು
  • 623 ಅಂಕ - 289 ಮಕ್ಕಳು
  • 622 ಅಂಕ - 2 ಮಕ್ಕಳು
  • 621 ಅಂಕ - 449 ಮಕ್ಕಳು
  • 620 ಅಂಕ - 28 ಮಕ್ಕಳು

ವಿಷಯವಾರು ಔಟ್ ಆಫ್ ಔಟ್ ಅಂಕ ಪಡೆದವರು:

  • ಪ್ರಥಮ ಭಾಷೆಯಲ್ಲಿ 125ಕ್ಕೆ 125 ಅಂಕ - 25,702 ವಿದ್ಯಾರ್ಥಿಗಳು
  • ದ್ವಿತೀಯ ಭಾಷೆಯಲ್ಲಿ100ಕ್ಕೆ 100 ಅಂಕ - 36,628 ವಿದ್ಯಾರ್ಥಿಗಳು
  • ತೃತೀಯ ಭಾಷೆಯಲ್ಲಿ 100ಕ್ಕೆ 100 ಅಂಕ - 36,776 ವಿದ್ಯಾರ್ಥಿಗಳು
  • ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ - 6321 ವಿದ್ಯಾರ್ಥಿಗಳು
  • ವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕ - 3,649 ವಿದ್ಯಾರ್ಥಿಗಳು
  • ಸಮಾಜ ವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕ - 9,367 ವಿದ್ಯಾರ್ಥಿಗಳು

ಎಸ್ಎಸ್ಎಲ್​ಸಿ ರಿಸಲ್ಟ್ ವೀಕ್ಷಿಸಲು ಹೀಗೆ ಮಾಡಿ:

  • sslc.Karnataka.gov.in ಅಥವಾ karresults.nic.in ಅಥವಾ kseeb.kar.nic.in ಗೆ ಭೇಟಿ ನೀಡಿ
  • ಸ್ಕ್ರೀನ್​ನಲ್ಲಿ ಕಾಣುವ ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ರೋಲ್ ನಂಬರ್ ಅನ್ನು ನಮೂದಿಸಿ ಲಾಗಿನ್ ಆಗಿ
  • ಬಳಿಕ ಅಲ್ಲಿ ಕೇಳುವ ನಿಮ್ಮ ಇತರ ಮಾಹಿತಿಗಳನ್ನೂ ತುಂಬಿರಿ
  • ಫಲಿತಾಂಶವನ್ನು ವೀಕ್ಷಿಸಲು ನಿಮ್ಮ ಮಾಹಿತಿಯನ್ನು ಸಬ್ಮಿಟ್ ಮಾಡಿ
  • ತಾತ್ಕಾಲಿಕ ಅಂಕಪಟ್ಟಿ ಆನ್​ಲೈನ್​ನಲ್ಲಿಯೇ ಲಭ್ಯವಾಗುತ್ತದೆ
  • ಅದನ್ನು ಅಲ್ಲಿಂದಲೇ ಡೌನ್​ಲೌಡ್ ಮಾಡಿಕೊಳ್ಳಬಹುದು

ಎಸ್​ಎಸ್​ಎಲ್​ಸಿ ಫಲಿತಾಂಶದ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

Last Updated : Aug 9, 2021, 8:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.