ETV Bharat / state

110 ಹಳ್ಳಿಗಳಿಗೆ ಕಾವೇರಿ ನೀರುಣಿಸುವ ಯೋಜನೆ ಮಾರ್ಚ್‌ನಲ್ಲಿ ಪೂರ್ಣ

author img

By ETV Bharat Karnataka Team

Published : Dec 29, 2023, 8:03 PM IST

5,550 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು ಮಾಡುವ 5ನೇ ಹಂತದ ಯೋಜನಾ ಕಾಮಗಾರಿ ಮಾರ್ಚ್‌ನೊಳಗೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.

BWSSB
ಬಿಡಬ್ಲ್ಯೂಎಸ್ಎಸ್​ಬಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) ಒಳಪಡುವ 110 ಹಳ್ಳಿಗಳ ಪ್ರದೇಶಗಳಿಗೆ 775 ದಶ ಲಕ್ಷ ಲೀಟರ್ ಹೆಚ್ಚುವರಿ ಕುಡಿಯುವ ನೀರು ಪೂರೈಸುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ (ಹಂತ-3) ಕಾವೇರಿ 5ನೇ ಹಂತದ ಕಾಮಗಾರಿಯನ್ನು ಜೈಕಾ ಸಾಲದ ಅನುದಾನದಡಿ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.

ಶುಕ್ರವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಲಮಂಡಳಿ, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ 225 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಸುಮಾರು 50 ಲಕ್ಷಕ್ಕೂ ಹೆಚ್ಚಿನ ನಾಗರಿಕರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಯೋಜನೆಯ ಪೂರ್ಣ ಉದ್ದೇಶವಾಗಿದೆ. ಯೋಜನೆಯಿಂದಾಗಿ ಈ ಹಳ್ಳಿಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯ ಸ್ಥಿತಿಯು ಸುಧಾರಿಸಲಿದೆ. ಈ ಯೋಜನೆಯ ಅಂದಾಜು ವೆಚ್ಚ 5,550 ಕೋಟಿಯಾಗಿ ಎಂದು ಮಾಹಿತಿ ನೀಡಿದೆ.

ಈ ಯೋಜನೆಯಡಿ ಕುಡಿಯುವ ನೀರಿನ ಜಲಶುದ್ಧೀಕರಣ ಸಾಮರ್ಥ್ಯ ವಿನ್ಯಾಸ ಮತ್ತು ನಿರ್ಮಾಣ ಮತ್ತು ನಿರ್ವಹಣೆ, ಜಲಸಂಗ್ರಾಹಗಾರ ಮತ್ತು ಜಲರೇಚಕ ಯಂತ್ರಾಗಾರದ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಜಲಸಂಗ್ರಾಹಗಾರ ಮತ್ತು ಜಲರೇಚಕ ಯಂತ್ರಾಗಾರದ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆ ಕಾಮಗಾರಿ, ಟಿ.ಕೆ.ಹಳ್ಳಿಯಿಂದ ಹಾರೋಹಳ್ಳಿಯವರೆಗೆ 3000 ಮಿ.ಮೀ ವ್ಯಾಸದ ಕೊಳವೆ ಮಾರ್ಗ, ಹಾರೋಹಳ್ಳಿಯಿಂದ ವಾಜರಹಳ್ಳಿಯವರೆಗೆ 3,000 ಮಿ.ಮೀ ವ್ಯಾಸದ ಕೊಳವೆ ಮಾರ್ಗದ ಕಾಮಗಾರಿ, ಸೆಂಟ್ರಲ್ ಲ್ಯಾಜ್ ಸಿಸ್ಟಮ್ ಬೆಂಗಳೂರು ನಗರದ ಪೂರ್ವ/ಪಶ್ಚಿಮ ಭಾಗದಲ್ಲಿ ಕುಡಿಯುವ ನೀರಿನ ಕೊಳವೆ ಮಾರ್ಗ ಹಾಗೂ ಜಲಸಂಗ್ರಾಹಗಾರಗಳ ನಿರ್ಮಾಣ ಯೋಜನೆ ಕಾಮಗಾರಿಗಳನ್ನು ಜಲಮಂಡಳಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಈ ಎಲ್ಲಾ ಕಾಮಗಾರಿಗಳು ಮಾರ್ಚ್-2024ಕ್ಕೆ ಪೂರ್ಣಗೊಂಡು ಚಾಲನೆಗೊಳ್ಳಲಿವೆ ಎಂದು ತಿಳಿಸಿದೆ.

ಎಲ್ಲ ಕಾಮಗಾರಿಗಳು ಕೋವಿಡ್-19 ಸಾಂಕ್ರಾಮಿಕ ರೋಗ ಹಾಗೂ ರಾಷ್ಟ್ರೀಯ ಹೆದ್ದಾರಿ ಮತ್ತು ಇತರೆ ಇಲಾಖೆಗಳ ಅನುಮತಿ ವಿಳಂಬದಿಂದ ಪೂರ್ಣಗೊಳ್ಳುವಿಕೆಯಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸವಾಗಿದೆ. ಆದರೂ ಮಂಡಳಿಯ ನಿರಂತರ ಮೇಲ್ವಿಚಾರಣೆಯಿಂದ ಬೆಂಗಳೂರು ನಗರದ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕಾಮಗಾರಿಗಳು ಮಾರ್ಚ್-2024 ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.

ಏಪ್ರಿಲ್ ತಿಂಗಳಲ್ಲಿ ಪ್ರಾಯೋಗಿಕ ಚಾಲನೆ ನಡೆಸಲಾಗುತ್ತದೆ. ಮೇ ತಿಂಗಳಿನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಹೆಚ್ಚುವರಿ ಕುಡಿಯುವ ನೀರನ್ನು ಪೂರೈಸಲಾಗುತ್ತದೆ ಎಂದು ಬಿಡಬ್ಲ್ಯೂಎಸ್ಎಸ್‌ಬಿ ತಿಳಿಸಿದೆ.

ಇದನ್ನೂಓದಿ: ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ ಸಾವಿರ ಕೋಟಿ ರೂ ಕ್ರಿಯಾ ಯೋಜನೆಗೆ ಸಿಎಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.