ETV Bharat / state

ರಾಜ್ಯದಲ್ಲಿ 340 ಹೊಸ ಗ್ರಂಥಾಲಯ ಮಂಜೂರು: ಸಿಎಂ ಬೊಮ್ಮಾಯಿ

author img

By

Published : Mar 21, 2022, 9:57 PM IST

ಹೊಸ ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿಗಳು ಆಗಬೇಕಿದ್ದು ಅವುಗಳನ್ನು ಇದೇ ವರ್ಷ ಪ್ರಾರಂಭಿಸಲಾಗುವುದು. ಇದೇ ವರ್ಷದಲ್ಲಿ 3,409 ಗ್ರಂಥಾಲಯಗಳ ಡಿಜಿಟಲೀಕರಣವಾಗಬೇಕು. ಅಲ್ಲದೇ ರಾಜ್ಯದಲ್ಲಿ 340 ಹೊಸ ಗ್ರಂಥಾಲಯಗಳನ್ನು ಮಂಜೂರು ಮಾಡಲಾಗುವುದು ಎಂದು ಸಿಎಂ ಹೇಳಿದರು.

ಸಿಎಂ
ಸಿಎಂ

ಬೆಂಗಳೂರು: ರಾಜ್ಯದಲ್ಲಿ ಅಗತ್ಯವಿರುವ 340 ಹೊಸ ಗ್ರಂಥಾಲಯಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಜೂರಾತಿ ನೀಡುವುದಾಗಿ ಪ್ರಕಟಿಸಿ, ಆದೇಶವನ್ನು ಕೂಡಲೇ ಮಾಡುವುದಾಗಿ ಘೋಷಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಇಂದು ಶಿಕ್ಷಣ ಫೌಂಡೇಶನ್, ಡೆಲ್ ಇಂಟರ್ನ್ಯಾಷನಲ್ ಸರ್ವೀಸ್ಸ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ "ಗ್ರಾಮ ಡಿಜಿ ವಿಕಾಸನ - 2022"ನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊಸ ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿಗಳು ಆಗಬೇಕಿದ್ದು, ಅವುಗಳನ್ನು ಇದೇ ವರ್ಷ ಪ್ರಾರಂಭಿಸಲಾಗುವುದು. ಇದೇ ವರ್ಷದಲ್ಲಿ 3,409 ಗ್ರಂಥಾಲಯಗಳ ಡಿಜಿಟಲೀಕರಣವಾಗಬೇಕು ಎಂದರು.


ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ: ನವ ಕರ್ನಾಟಕದಿಂದ ನವ ಭಾರತ ನಿರ್ಮಾಣವಾಗಬೇಕಿದೆ. ಗ್ರಾಮೀಣ ಕರ್ನಾಟಕ ತನ್ನ ಸಂಪನ್ಮೂಲಗಳನ್ನು ಸದುಪಯೋಗ ಮಾಡಿಕೊಂಡರೆ ಎಲ್ಲಾ ರೀತಿಯಲ್ಲಿ ಸಾಧನೆ ಮಾಡಬಹುದು. ಗ್ರಾಮೀಣಾಭಿವೃದ್ಧಿ ಇಲಾಖೆ 3,000 ಮಾನವದಿನಗಳನ್ನು ಸೃಜಿಸಿ, ನೀಡಿದ್ದ ಗುರಿಗಿಂತ ಹೆಚ್ಚಿನ ಸಾಧನೆ ಮಾಡಿ ದಾಖಲೆ ನಿರ್ಮಿಸಿದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರ ಶಿಕ್ಷಣ ಫೌಂಡೇಷನ್​ನೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಲು ಸಿದ್ಧವಿದೆ. ಗ್ರಾಮ ಪಂಚಾಯಿತಿಗಳು, ಅವುಗಳ ಗ್ರಂಥಾಲಯಗಳ ಆಧುನೀಕರಣ ಮಾಡುವುದರಿಂದ ಪ್ರತಿ ಗ್ರಾಮವನ್ನು ಸಂಪರ್ಕಿಸಲು ಸಾಧ್ಯವಿದೆ. ದೊಡ್ಡ ಬದಲಾವಣೆಯನ್ನು ತರಬಹುದಾಗಿದೆ ಎಂದರು.

ಗ್ರಾಮೀಣ ಮಟ್ಟದಲ್ಲಿಯೂ ಡಿಜಿಲೀಕರಣವನ್ನು ತರುವ ಸರ್ಕಾರದ ನಿರ್ಣಯವನ್ನು ಕಾರ್ಯರೂಪಕ್ಕೆ ತರಲಾಗಿದೆ. ‘ಗ್ರಾಮ ಡಿಜಿ ವಿಕಸನ’ ಭದ್ರ ಭವಿಷ್ಯವನ್ನು ನಿರ್ಮಿಸುವ ಕಾರ್ಯಕ್ರಮವಾಗಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾರ್ಗದರ್ಶನ ನೀಡುವ ‘ಮುಖ್ಯಮಂತ್ರಿ ಮಾರ್ಗದರ್ಶಿನಿ’ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಡಿಜಿಲೀಕರಣಕ್ಕೆ ಒತ್ತು ನೀಡುವಂತಹ ಗ್ರಾಮ ಒನ್ ಕಾರ್ಯಕ್ರಮವನ್ನು ಸರ್ಕಾರ ಪ್ರಾರಂಭಿಸಿದೆ. ಗ್ರಾಮೀಣ ಜನರಿಗೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ, ಡಿಜಿಟಲೀಕರಣದ ಜ್ಞಾನ ನೀಡುವ ಗುರಿಯನ್ನು ಈ ತಂತ್ರಾಂಶ ವಾಹಿನಿಯ ಮೂಲಕ ಸಾಧಿಸಲಾಗುವುದು. ಈ ನಿಟ್ಟಿನಲ್ಲಿ ‘ಗ್ರಾಮ ಡಿಜಿ ವಿಕಸನ’ ವಿದ್ಯಾರ್ಥಿಗಳ ಹಾಗೂ ಗ್ರಾಮೀಣ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜ್ಞಾನದ ಮೂಲಕ ವ್ಯಕ್ತಿತ್ವ ವಿಕಸನ: ತಳಹಂತದ ಜನರಿಗೆ ತಂತ್ರಾಂಶ ಜ್ಞಾನ ಬಳಕೆಗೆ ಹಿಂಜರಿಕೆ ಇದೆ. ಡಿಜಿಟಲ್ ತಂತ್ರಾಜ್ಞಾನ ಮೊಬೈಲ್ಗಳಿಂದ ವೃದ್ಧಿಯಾಗಿದೆ. ಗ್ರಾಮೀಣ ಭಾಗದ ಜನರು ಜ್ಞಾನದ ಮೂಲಕ ವ್ಯಕ್ತಿ ವಿಕಸನವಾಗಲು ಪ್ರತಿಯೊಂದು ಗ್ರಾಮಪಂಚಾಯತಿ ಗ್ರಂಥಾಲಯಗಳನ್ನು ಡಿಜಿಟಲೈಸ್ ಮಾಡಲಾಗಿದೆ. ಡಿಜಿಟಲ್ ಗ್ರಂಥಾಲಯಗಳಲ್ಲಿ ಯಾವೆಲ್ಲಾ ವಿಷಯಗಳು ಮಕ್ಕಳಿಗೆ ಲಭ್ಯವಾಗಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಕೆಲಸ ಸಿಕ್ಕಿ ಆದಾಯ ಹೆಚ್ಚಾದರೆ, ರಾಜ್ಯದ ತಲಾ ಆದಾಯ ಕೂಡ ಹೆಚ್ಚಾಗುತ್ತದೆ. ನಿಮ್ಮ ಲೈಬ್ರರಿಯ ಸದ್ಭಳಕೆ ಆಗಬೇಕು. ಈ ಡಿಜಿ ಲೈಬ್ರರಿಯ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು. ಗ್ರಾಮ ಪಂಚಾಯತ್ ಸದಸ್ಯರು ಮತ್ತು ಪಿಡಿಓಗಳು ಲೈಬ್ರರಿಗಳ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಯಶಸ್ವಿಗೆ ದಾನಿಗಳು ಕಾರಣ: ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಯಶಸ್ವಿಗೆ ಕಾರಣರಾದ ದಾನಿಗಳಿಗೆ ಧನ್ಯವಾದ. ಮಕ್ಕಳಿಗೆ ಜ್ಞಾನದ ಬಗ್ಗೆ ಅರಿವು ಮೂಡಿಸುವ ಕೆಲಸಕ್ಕೆ ವಿಧಾನಸೌಧದಲ್ಲಿ ನಡೆದ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಒತ್ತು ನೀಡಲಾಗಿದೆ. ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒಗಳು ಈ ಬಗ್ಗೆ ಒತ್ತು ನೀಡಿದ್ದಾರೆ. ಇದು ಭವಿಷ್ಯದ ಬದಲಾವಣೆ ಸಂಕೇತ ಎಂದರು.

ಮನುಷ್ಯ ವಿಕಸನವಾದರೆ ಸಮಾಜ ಹಾಗೂ ದೇಶ ವಿಕಸನವಾಗುತ್ತದೆ. ವ್ಯಕ್ತಿ ಸಂಘಜೀವಿ, ಒಂಟಿಯಾಗಿ ಜೀವನ ಮಾಡೋದಕ್ಕೆ ಸಾಧ್ಯವಿಲ್ಲ. ಅವಶ್ಯಕತೆಗೆ ಅನುಗುಣವಾಗಿ ಜ್ಞಾನ ಬೆಳೆದಿದೆ. ಅಕ್ಷರ ಜ್ಞಾನದಿಂದ ವಿಜ್ಞಾನ ಆಯಿತು. ವಿಜ್ಞಾನದಿಂದ ತಂತ್ರಜ್ಞಾನ ಆಯಿತು. ತಂತ್ರಜ್ಞಾನದಿಂದ ಡಿಜಿಟಲ್ ಜ್ಞಾನ ಆಯಿತು. ಮನುಷ್ಯ ವಿಕಸನವಾದಂಗೆ ಜ್ಞಾನವು ವಿಕಸನ ಆಗಿದೆ. ತಳಹಂತದ ಜನಕ್ಕೆ ಇದನ್ನು ಬಳಕೆ ಮಾಡೋದಕ್ಕೆ ಕಷ್ಟ ಆಗುತ್ತಿತ್ತು. ಮೊಬೈಲ್ ಟೆಕ್ನಾಲಜಿ ಬಂದ ಮೇಲೆ ಡಿಜಿಟಲ್ ಟೆಕ್ನಾಲಜಿ ಮಾಹಿತಿ ಸಿಗುತ್ತಿದೆ. ಪ್ರತಿ ಗ್ರಾಮ ಪಂಚಾಯತ್ ಲೈಬ್ರರಿಯಲ್ಲಿ ಈ ಡಿಜಿಟಲ್ ಜ್ಞಾನ ಸಿಗಬೇಕು. ರಷ್ಯಾ‌ ಉಕ್ರೇನ್ ಯುದ್ಧವನ್ನು ನಾವು ಮೊಬೈಲ್​ನಲ್ಲಿ ನೋಡುತ್ತಿದ್ದೇವೆ. ಡಿಜಿಟಲ್ ಜ್ಞಾನದಲ್ಲಿ ಒಳ್ಳೆಯದನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ದೇಶದಲ್ಲಿ ಇದು ಮೊದಲ ಕಾರ್ಯಕ್ರಮ. 1,200 ಡಿಜಿಟಲ್ ಲೈಬ್ರರಿ ಆಗುತ್ತಿದೆ.

ಇದನ್ನೂ ಓದಿ: ಮೇಕೆದಾಟು ವಿಚಾರದಲ್ಲಿ ತಮಿಳುನಾಡು ವಿಧಾನಸಭೆ ನಿರ್ಣಯ ಕಾನೂನು ಬಾಹಿರ: ಸಿಎಂ

ರಾಜ್ಯದ ಮೂಲೆ ಮೂಲೆಯಿಂದ ಬಂದ ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಓಗಳು ಮೊದಲು ಕಲಿಯಬೇಕು ಎಂದರು. ಧರ್ಮಸ್ಥಳ ಸಂಸ್ಥೆ, ಪ್ರೇಮಜಿ ಸಂಸ್ಥೆ ಹಾಗೂ ಡೆಲ್ ಸಂಸ್ಥೆಗಳು ನಮ್ಮಜೊತೆ ಕೈ ಜೋಡಿಸಿವೆ. 5,623 ಗ್ರಂಥಾಲಯಗಳು ಡಿಜಿಟಲ್ ಲೈಬ್ರರಿ ಆಗಬೇಕು. ಹಾಗಾಗಿ, ಖಾಸಗಿ ಸಂಸ್ಥೆಗಳು ಮುಂದೆ ಬರಬೇಕು ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ. ಆಶ್ವತ್ಥನಾರಾಯಣ ಮಾತನಾಡಿ, ಗ್ರಾಮೀಣಭಾಗದಲ್ಲಿ ಮಕ್ಕಳು ಕಲಿಕೆ ವಿಚಾರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಆಧುನೀಕ ತಂತ್ರಜ್ಞಾನ ಕೊರತೆ ಇತ್ತು. ಹಲವು ಸಂಸ್ಥೆಗಳು ಡಿಜಿಟಲ್ ಸೌಲಭ್ಯ ಒದಗಿಸ್ತಿವೆ.

ನಮ್ಮ ಸಮಾಜ ಜ್ಞಾನದ ಸಮಾಜ ಆಗಬೇಕು ಅಂದರೆ ಶಾಲೆಗಳ ಗುಣಮಟ್ಟ ಹೆಚ್ಚಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಬೇಕಾದರೆ ಪುಸ್ತಕ ಸಿಗುವುದು ಕಷ್ಟ. ಹೀಗಾಗಿ ಡಿಜಿಟಲ್ ಲೈಬ್ರರಿ ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.