ETV Bharat / state

ರಾಜ್ಯ ಸರ್ಕಾರದ ಸಚಿವರುಗಳಿಗೆ ಹೊಸ ಕಾರು ಭಾಗ್ಯ: 33 ಹೈಬ್ರಿಡ್ ಕಾರು ಖರೀದಿಸಿ ಹಂಚಿಕೆ

author img

By ETV Bharat Karnataka Team

Published : Oct 20, 2023, 5:53 PM IST

ಹಳೆ ಕಾರುಗಳು ಗರಿಷ್ಠ ಮಿತಿ 1 ಲಕ್ಷ ಕಿ.ಮೀ ಕ್ರಮಿಸಿರುವುದರಿಂದ ಹೊಸ ಕಾರುಗಳನ್ನು ಖರೀದಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Allotted 33 hybrid cars to ministers
ಸಚಿವರುಗಳಿಗೆ 33 ಇನ್ನೊವಾ ಹೈಬ್ರಿಡ್ ಕಾರು ಹಂಚಿಕೆ

ಬೆಂಗಳೂರು: ರಾಜ್ಯ ಸರ್ಕಾರ ತನ್ನ ಎಲ್ಲಾ ಸಚಿವರುಗಳಿಗೆ 33 ಹೊಸ ಇನ್ನೊವಾ ಕ್ರೆಸ್ಟಾ ಹೈಬ್ರಿಡ್ ಕಾರುಗಳನ್ನು ಖರೀದಿಸಿದೆ. ಕಳೆದೊಂದು ವಾರದಿಂದ ಐಷಾರಾಮಿ ಕಾರುಗಳನ್ನು ಸಚಿವರುಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಆಗಸ್ಟ್ 17ರಂದು ಈ ಸಂಬಂಧ ಆರ್ಥಿಕ ಇಲಾಖೆ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿತ್ತು. ಹೊಸ ಕಾರು ಖರೀದಿಸಲು ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದರು. ಅದರಂತೆ ಆರ್ಥಿಕ ಇಲಾಖೆ ಸುಮಾರು 9.9 ಕೋಟಿ ರೂ.‌ ಅನುದಾನ ಬಿಡುಗಡೆ ಮಾಡಿತ್ತು. ಟೆಂಡರ್ ಕರೆಯದೆ ನೇರವಾಗಿ ಟೊಯೋಟಾ ಕಿರ್ಲೋಸ್ಕರ್ ಮೊಟಾರ್ ಕಂಪನಿಯಿಂದ ಖರೀದಿಗೆ ಕೆಟಿಪಿಪಿ ಕಾಯ್ದೆಯಡಿ 4ಜಿ ವಿನಾಯಿತಿ ನೀಡಲಾಗಿತ್ತು.‌ ಒಂದು ಇನ್ನೊವಾ ಹೈಬ್ರಿಡ್ ಎಸ್ ಯುವಿ ಕಾರಿಗೆ ಸುಮಾರು 30 ಲಕ್ಷ ರೂ. ವೆಚ್ಚವಾಗಿದೆ.

ಹಳೆ ಕಾರುಗಳು ಗರಿಷ್ಠ ಮಿತಿ 1 ಲಕ್ಷ ಕಿ.ಮೀ ಗೂ ಅಧಿಕ ದೂರ ಕ್ರಮಿಸಿರುವುದರಿಂದ ನಿಯಮದ ಪ್ರಕಾರ ಹೊಸ ಕಾರು ಖರೀದಿಸಬೇಕಾಗಿದೆ. ನಿಯಮದಂತೆ 1 ಲಕ್ಷ ಕಿ.ಮೀ ಓಡಾಟ ಅಥವಾ 3 ವರ್ಷ ಬಳಕೆ ಯಾವುದು ಮೊದಲು ಅದರನ್ವಯ ಹೊಸ ಕಾರು ಖರೀದಿಸಬೇಕು. ಸಚಿವರ ಸುರಕ್ಷತೆಯ ದೃಷ್ಟಿಯಿಂದ ಖರೀದಿ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದಿನ ಕಾರುಗಳನ್ನು 2020ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಖರೀದಿಸಲಾಗಿತ್ತು. ಬಳಿಕ ಹೊಸ ಕಾರು ಖರೀದಿಸಿರಲಿಲ್ಲ‌.‌ ಕೆಲವು ಕಾರುಗಳು 2 ಲಕ್ಷ ಕಿ.ಮೀ. ಮೀರಿ ಓಡಾಡಿದ್ದವು. ಈಗಾಗಲೇ ಸುಮಾರು 25 ಹೊಸ ಕಾರುಗಳನ್ನು ಸಚಿವರುಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಕುಮಾರಕೃಪಾ ಅತಿಥಿ ಗೃಹದಲ್ಲಿ ಹೊಸ ಕಾರುಗಳನ್ನು ಇರಿಸಲಾಗಿದ್ದು, ನಂಬರ್‌ಪ್ಲೇಟ್ ಹಾಕಿ ಹಂಚಿಕೆ ಮಾಡಲಾಗುತ್ತಿದೆ.

ರಾಜ್ಯ ಈ ಬಾರಿ ತೀವ್ರ ಬರ ಎದುರಿಸುತ್ತಿದೆ. ಸುಮಾರು 216 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಎನ್‌ಡಿಆರ್‌ಎಫ್‌ನಡಿ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರದ ಬಳಿ 5,326.87 ಕೋಟಿ ರೂ. ಪರಿಷ್ಕೃತ ಬರ ಪರಿಹಾರದ ಮೊರೆ ಇಟ್ಟಿದೆ‌. ಅದರ ಜತೆಗೆ ಆರ್ಥಿಕ ಹೊರೆಯಿಂದ ಅಭಿವೃದ್ಧಿಗಾಗಿ ಅನುದಾನದ ಕೊರತೆಯನ್ನೂ ಎದುರಿಸುತ್ತಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸಚಿವರುಗಳಿಗೆ ಹೊಸ 33 ಹೈ ಎಂಡ್ ಕಾರು ಖರೀದಿ ಅಗತ್ಯವೇ ಎಂಬುದು ಸಾರ್ವಜನಿಕರ ಪ್ರಶ್ನೆ.

ಇದನ್ನೂಓದಿ: ಸರ್ವರ್‌ಗಳ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು: ಅಧಿಕಾರಿಗಳಿಗೆ ಸಚಿವ ಕೆ.ಎಚ್.ಮುನಿಯಪ್ಪ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.