ETV Bharat / state

ಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಚಿವ ಅಂಜನಮೂರ್ತಿ ಅಂತ್ಯಕ್ರಿಯೆ

author img

By

Published : Mar 23, 2023, 9:02 PM IST

Updated : Mar 23, 2023, 10:14 PM IST

ಹೃದಯಾಘಾತದಿಂದ ಮೃತರಾದ ಮಾಜಿ ಸಚಿವ ಅಂಜನಮೂರ್ತಿಯವರ ಅಂತಿಮ ವಿಧಿವಿಧಾನ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

Last rites of former minister Anjanamurthy
ಮಾಜಿ ಸಚಿವ ಅಂಜನಮೂರ್ತಿಯವರ ಅಂತಿಮ ವಿಧಿವಿಧಾನ

ಮಾಜಿ ಸಚಿವ ಅಂಜನಮೂರ್ತಿ ಅಂತ್ಯಕ್ರಿಯೆ

ನೆಲಮಂಗಲ (ಬೆಂಗಳೂರು ಗ್ರಾಮಾಂತರ) : ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಅಂಜನಮೂರ್ತಿಯವರು ಇಂದು ಮುಂಜಾನೆ ಹೃದಯಘಾತದಿಂದ ಸಾವನ್ನಪ್ಪಿದ್ದು, ಅಂತಿಮ ವಿಧಿವಿಧಾನ ಸಕಲ ಸರ್ಕಾರಿ ಗೌರವದೊಂದಿಗೆ ಮೃತ ಅಂಜನಮೂರ್ತಿ ಅವರ ಅಂತ್ಯಕ್ರಿಯೆ ನೆರವೇರಿತು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಂತಿಮ ದರ್ಶನ ಪಡೆದರು.

ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಚುನಾಯಿತರಾಗಿ, ವಸತಿ ಸಚಿವರಾಗಿ ಕೆಲಸ ನಿರ್ವಹಿಸಿದ ಮಾಜಿ ಸಚಿವ ಅಂಜನಮೂರ್ತಿ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾದರು. ಇಂದು ಸಂಜೆ ನೆಲಮಂಗಲ ತಾಲೂಕಿನ ವಿಶ್ವೇಶ್ವರಪುರದ ಅವರ ತೋಟದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಪರಿಶಿಷ್ಟ ಸಮುದಾಯಕ್ಕೆ ಸೇರಿದ ಅವರ ಅಂತಿಮ ವಿಧಿ ವಿಧಾನಗಳನ್ನು ಹಿಂದೂ ಧರ್ಮದ ಪದ್ಧತಿಯಂತೆ ನೆರವೇರಿಸಲಾಯಿತು.

ಮೃತ ಅಂಜನಮೂರ್ತಿ ಅವರ ಅಂತ್ಯಕ್ರಿಯೆಯಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ಸಚಿವ ಗೋವಿಂದ ಕಾರಜೋಳ, ಕೇಂದ್ರ ಸಚಿವ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಮಾಜಿ ಸಚಿವ ಹೆಚ್. ಅಂಜನೇಯ, ಹೆಚ್.ಎಂ. ರೇವಣ್ಣ, ಸಂಸದ ಡಿ.ಕೆ ಸುರೇಶ್ ಸೇರಿದಂತೆ ಹಲವು ನಾಯಕರು ಪಕ್ಷಾತೀತವಾಗಿ ಅಂತಿಮ ದರ್ಶನ ಪಡೆದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು, ಅಂಜನಮೂರ್ತಿ ಅವರು ಸರಳ ಸಜ್ಜನಿಕೆ ಇದ್ದಂತ ರಾಜಕಾರಣಿ ಆಗಿದ್ದವರು. ಇತ್ತೀಚಿಗೆ ನನ್ನ ಭೇಟಿ ಮಾಡಿದ್ದ ಅವರು, ನಾನು ಕೂಡ ನೆಲಮಂಗಲ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಬಾರಿ ನನಗೆ ಕಾಂಗ್ರೆಸ್​ ಪಕ್ಷದಿಂದ ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು. ಆದರೆ ಇವತ್ತು ಅವರು ಇಲ್ಲ ಎಂದರೆ ನಿಜವಾಗಿಯೂ ನಂಬಲು ಸಾಧ್ಯವಿಲ್ಲ. ಈ ಹಿಂದೆಯೂ ಸಹಾ ಸಚಿವರಾಗಿ, ಉಪಸಭಾಪತಿಯಾಗಿ ನಮ್ಮ ಪಕ್ಷವನ್ನು ಮುನ್ನಡೆಸಿದ ಹಿರಿಯ ನಾಯಕ ಆಂಜನಮೂರ್ತಿ ಅವರನ್ನು ಚುನಾವಣಾ ವೇಳೆಯಲ್ಲಿ ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದರು.

ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ, ಮೊನ್ನೆಯಷ್ಟೇ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್​ ಅವರ ಮಗನಿಗೆ ನಂಜನಗೂಡು ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಅದರಂತೆ ಮೃತ ಮಾಜಿ ಸಚಿವ ಅಂಜನಮೂರ್ತಿ ಅವರ ಕುಂಟುಂಬಸ್ಥರಿಗೆ ಟಿಕೆಟ್​ ನೀಡುತ್ತಿರಾ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದರು. ಈ ಸಂದರ್ಭದಲ್ಲಿ ಉತ್ತರಿಸಿದ ಸಿದ್ದರಾಮಯ್ಯ ಅವರು, ನಂಜನಗೂಡು ಕ್ಷೇತ್ರಕ್ಕೆ ಟಿಕೆಟ್​ಗಾಗಿ ಮಾಜಿ ಸಚಿವ ಡಾ ಎಚ್‌.ಸಿ ಮಹದೇವಪ್ಪ ಅವರು ಮತ್ತು ಮೃತ ಧ್ರುವನಾರಾಯಣ್​ ಅವರು ಅರ್ಜಿ ಸಲ್ಲಿಸಿದ್ದರು. ಆದರೇ ಧ್ರುವನಾರಾಯಣ ಅವರ ಆಕಾಲಿಕ ಮರಣದಿಂದ ಡಾ ಎಚ್​ಸಿ ಮಹದೇವಪ್ಪ ಅವರು ಚುನಾವಣೆ ನಿಲ್ಲೋದಿಲ್ಲ ಎಂದು ಹೇಳಿ ಧ್ರುವನಾರಾಯಣ ಅವರ ಮಗನಿಗೆ ಟಿಕೆಟ್​ ಕೊಡುವಂತೆ ಹೇಳಿದ್ದಾರೆ. ಎರಡು ಬೇರೆ ಬೇರೆ ಸನ್ನಿವೇಷಗಳು, ಟಿಕೆಟ್ ನೀಡುವ ಅಂತಿಮ ನಿರ್ಧಾರ ಹೈಕಮಾಂಡ್​ ಗೆ ಸೇರಿದ್ದು ಎಂದು ಹೇಳಿದರು.

ಇದನ್ನೂ ಓದಿ :​ಮಾಜಿ ಸಚಿವ ಅಂಜನಮೂರ್ತಿ(78) ಇನ್ನಿಲ್ಲ

Last Updated : Mar 23, 2023, 10:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.