ETV Bharat / state

ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ತರುವ ಪ್ರಯತ್ನ ಮಾಡಿ : ಕಟೀಲ್​ಗೆ ಸಚಿವ ಆರ್ ಬಿ ತಿಮ್ಮಾಪೂರ ಟಾಂಗ್

author img

By ETV Bharat Karnataka Team

Published : Nov 5, 2023, 4:33 PM IST

ಜನವರಿಯಲ್ಲಿ ಸರ್ಕಾರ ಬೀಳುತ್ತದೆ ಎಂಬ ಕಟೀಲ್ ಹೇಳಿಕೆಗೆ ಅಬಕಾರಿ ಸಚಿವ ಆರ್​ ಬಿ ತಿಮ್ಮಾಪೂರ ಅವರು ಪ್ರತಿಕ್ರಿಯಿಸಿದ್ದು, ನಮ್ಮ ಸರ್ಕಾರ ಭದ್ರವಾಗಿದೆ ಎಂದಿದ್ದಾರೆ.

ಅಬಕಾರಿ ಸಚಿವ ಆರ್​ ಬಿ ತಿಮ್ಮಾಪೂರ
ಅಬಕಾರಿ ಸಚಿವ ಆರ್​ ಬಿ ತಿಮ್ಮಾಪೂರ

ಅಬಕಾರಿ ಸಚಿವ ಆರ್​ ಬಿ ತಿಮ್ಮಾಪೂರ

ಬಾಗಲಕೋಟೆ : ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ತರುವ ಪ್ರಯತ್ನ ಮಾಡಿ ಎಂದು ಅಬಕಾರಿ ಸಚಿವ ಆರ್. ಬಿ ತಿಮ್ಮಾಪೂರ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್ ಅವರಿಗೆ ಟಾಂಗ್ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಟೀಲ್ ಸಾಹೇಬರೆ ಬರೀ ಮಾತನಾಡುವುದು, ಗಲ್ಲಿ ಗಲ್ಲಿ ಸಂಚಾರ ಮಾಡುವುದನ್ನು ಬಿಟ್ಟು ದೆಹಲಿಗೆ ಹೋಗಿ ಹಣ ತೆಗೆದುಕೊಂಡು ಬನ್ನಿ ಎಂದು ತಿರುಗೇಟು ನೀಡಿದರು. ರಾಜ್ಯಕ್ಕೆ ಕೇಂದ್ರದಿಂದ ಕೊಡಬೇಕಿರುವ ಹಣವೇ ಬರುತ್ತಿಲ್ಲ. ಇನ್ನು ಹೆಚ್ಚಿನ ಹಣ ಏನು ಕೊಡುತ್ತಾರೆ. ಇವರಿಗೆ ಮಾತನಾಡಲು ಏನು ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು.

ಇದೇ ಸಮಯದಲ್ಲಿ ಜನವರಿಯಲ್ಲಿ ಸರ್ಕಾರ ಬೀಳುತ್ತದೆ ಎಂಬ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಭದ್ರವಾಗಿದೆ. ಯಾವಾಗ ಕಾಂಗ್ರೆಸ್ ಸರ್ಕಾರ ಬಂದಿದೆ, ಆಗ ಐದು ವರ್ಷ ಸರ್ಕಾರ ನಡೆದಿದೆ. ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಸರ್ಕಾರ ಬಿದ್ದಿಲ್ಲ, ಬೀಳುವುದು ಇಲ್ಲ. ಬಿಜೆಪಿಯಲ್ಲಿ ಮಾತ್ರ ಕಚ್ಚಾಟ ಇರೋದು ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿಯೇ ಆಪರೇಷನ್‌ ಆಗುತ್ತೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಇದು ಎಲ್ಲಾ ಊಹಾಪೋಹ. ಏನೂ ಇಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮಾತ್ರ ನಡೆಯುತ್ತದೆ. ಅವರ ಪಕ್ಷದ ಸರ್ಕಾರ ಇದ್ದಾಗ ಯಡಿಯೂರಪ್ಪ ಅವರನ್ನೇ ಜೈಲಿಗೆ ಕಳಿಸಿದ್ದರು ಎಂದು ಟೀಕಿಸಿದರು.

ಕಳೆದ ದಿನ ಸಿಎಂ ಕರೆದ ಉಪಹಾರ ಚರ್ಚೆ ಏನಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೋ ಕಾಮೆಂಟ್ ಎಂದು ಹೇಳುವ ಮೂಲಕ ಯಾವುದೇ ಮಾಹಿತಿ ಬಹಿರಂಗಪಡಿಸಲಿಲ್ಲ. ಸಭೆ ಬಗ್ಗೆ ಏನೇ ಕೇಳಿದರೂ ನೋ ಕಾಮೆಂಟ್ ಎನ್ನುವ ಮೂಲಕ ಸಚಿವ ತಿಮ್ಮಾಪೂರ ಜಾರಿಕೊಂಡರು.

ಕಾಂಗ್ರೆಸ್ ‌ಪಕ್ಷದ ಶಾಸಕರು ಬಿಜೆಪಿ ‌ಸೇರುತ್ತಾರೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಜನರನ್ನು ಸೆಳೆಯಲು ಈ ತರಹದ ಹೇಳಿಕೆ ನೀಡುತ್ತಿದ್ದಾರೆ. ಲೋಕಸಭಾ ಚುನಾವಣೆಯ ಮೊದಲೇ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಜನ ಸೇರ್ಪಡೆ ಆಗಲಿದ್ದಾರೆ. ಅದನ್ನು ಹೇಗಾದರೂ ಮಾಡಿ ತಡೆ ಹಿಡಿಯಲು ಬಿಜೆಪಿಯವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದು ಜಗಜ್ಜಾಹೀರಾಗಿದೆ ಎಂದಿದ್ದಾರೆ.

ಅದಕ್ಕೆ ಬಿಜೆಪಿ ಪಕ್ಷದವರು ಹೇಗಾದರೂ ಮಾಡಿ, ಸರ್ಕಾರ ರಚನೆ ಮಾಡುತ್ತೇವೆ ಎಂದು ಸುಳ್ಳು, ಪೊಳ್ಳುಗಳನ್ನು ಹೇಳಿ ಸುಭದ್ರ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವ ತಿಮ್ಮಾಪೂರ ವಾಗ್ದಾಳಿ ನಡೆಸಿದರು. ಡಿ ಕೆ ಶಿವಕುಮಾರ್ ಅವರು ಸಿಎಂ ಆದರೆ ಜೆಡಿಎಸ್ ಬೆಂಬಲ ನೀಡುವ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಅವರ ಹತ್ತಿರ ಏನು ಬಂಡವಾಳ ಇಲ್ಲ ಎಂಬುದಕ್ಕೆ ಇದೇ ಉದಾಹರಣೆ. ಇವರು ಮಾತನಾಡುವ ದಾಟಿ ನೋಡಿದರೆ ಸಣ್ಣ ಹುಡುಗರು ಕೂಡ ನಗುವಂತಾಗಿದೆ ಎಂದು ಸಚಿವರು ವ್ಯಂಗ್ಯವಾಡಿದರು.

ಇದನ್ನೂ ಓದಿ: ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ, ಕೇವಲ ಮಾಧ್ಯಮಗಳಲ್ಲಿ ವದಂತಿ ಅಷ್ಟೇ: ಸಚಿವ ಆರ್ ಬಿ ತಿಮ್ಮಾಪೂರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.