ETV Bharat / state

ಬಸವಣ್ಣನವರ ಲೋಕತಂತ್ರ ವಿಶ್ವಕ್ಕೆ ಮಾದರಿ.. ರಾಹುಲ್​ ಗಾಂಧಿ

author img

By

Published : Apr 23, 2023, 4:56 PM IST

Updated : Apr 23, 2023, 10:21 PM IST

ಬಸವಣ್ಣನವರು ಪ್ರಜಾಪ್ರಭುತ್ವ, ಸಮಾನತೆ ಬಗ್ಗೆ ತಮ್ಮಲ್ಲಿ ಆತ್ಮಾವಲೋಕನ ಮಾಡಿಕೊಂಡು, ಅಂತಹ ತತ್ವವನ್ನು ಬೆಳೆಸಿಕೊಂಡು ಬರುವ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

rahul-participated-in-the-basava-jayanti-event-in-bagalkot
ಬಾಗಲಕೋಟೆ:ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಭಾಗಿ

ಬಸವಣ್ಣನವರ ಲೋಕತಂತ್ರ ವಿಶ್ವಕ್ಕೆ ಮಾದರಿ.. ರಾಹುಲ್​ ಗಾಂಧಿ

ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಯುವ ನಾಯಕ ರಾಹುಲ್ ಗಾಂಧಿ ಇಂದು ಬಸವ ಜಯಂತಿ ಅಂಗವಾಗಿ ಅಣ್ಣ ಬಸವಣ್ಣನವರ ನಾಡು, ಧಾರ್ಮಿಕ ಕೇಂದ್ರ ಕೂಡಲಸಂಗಮಕ್ಕೆ ಭೇಟಿ ನೀಡಿ ಸಂಗಮನಾಥನ ದರ್ಶನ ಪಡೆದರು. ರಾಹುಲ್ ಗಾಂಧಿ ತ್ರಿವೇಣಿ ಸಂಗಮ ದಲ್ಲಿರುವ ಐಕ್ಯ ಸ್ಥಳ ಹಾಗೂ ಸಂಗಮನಾಥ ದೇವರ ದರ್ಶನ ಪಡೆದುಕೊಂಡು, ಸಂಗಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿದರು. ನಂತರ ಬಸವಣ್ಣನವರ ಐಕ್ಯ ಸ್ಥಳ ಮತ್ತು ತ್ರಿವೇಣಿ ನದಿಗಳ ಸಂಗಮ ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡರು.

ಬಳಿಕ ಮಾತನಾಡಿದ ರಾಹುಲ್ ಗಾಂಧಿ ಅವರು, ಬಸವ ಜಯಂತಿ ಆಚರಣೆಗೆ ಆಗಮಿಸಿದ್ದಕ್ಕೆ ಬಹಳ ಖುಷಿಯಾಗಿದೆ. ಇಂತಹ ಅವಕಾಶ ಮಾಡಿಕೊಟ್ಟ ಸ್ವಾಮೀಜಿಗಳಿಗೆ ಆಭಾರಿ ಆಗಿದ್ದೇನೆ. ಗದಗಿನ ತೊಂಟದಾರ್ಯ ಸ್ವಾಮೀಜಿ ಭಾಷಣ ಮಾಡಿ, ಹಿಂದಿಯಲ್ಲಿ ಭಾಷಾಂತರ ಮಾಡುತ್ತಾ ಬಸವಣ್ಣನವರ ಬಗ್ಗೆ ಮಾಹಿತಿ‌ ನೀಡಿರುವುದಕ್ಕೆ ಧನ್ಯವಾದಗಳು. ಬಸವಣ್ಣನವರ ಲೋಕತಂತ್ರ ವಿಶ್ವಕ್ಕೆ ಮಾದರಿಯಾಗಿದೆ. ಪ್ರಜಾಪ್ರಭುತ್ವದ ಸಂಸದೀಯ ಮಾದರಿಯನ್ನು ಈ ಹಿಂದೆ ಬಸವಣ್ಣನವರು ಮಾಡಿದ್ದನ್ನು ಈಗಲೂ ಅನುಸರಿಸಿಕೊಂಡು ಹೋಗಲಾಗುತ್ತದೆ ಎಂದರು.

ಎಲ್ಲಿ ಕತ್ತಲು ಕಾಣುತ್ತದೆಯೋ ಅಲ್ಲಿ ಬೆಳಕು ಚೆಲ್ಲುತ್ತದೆ. ಹಾಗೆ ಸಮಾಜದಲ್ಲಿ ಎಲ್ಲಿ ಕತ್ತಲು ಇರುತ್ತದೆಯೋ ಅಲ್ಲಿ ಜಾತಿ ವ್ಯವಸ್ಥೆ ಎಂಬ ಕತ್ತಲಾಗಿರುವ ಸಮಾಜವನ್ನು ಬದಲಾವಣೆ ಮಾಡುವ ಮೂಲಕ ಬಸವಣ್ಣನವರು ಬೆಳಕು ತಂದುಕೊಟ್ಟಿದ್ದಾರೆ. ಇನ್ನೊಬ್ಬರಿಗೆ ಸವಾಲ್ ಹಾಕುವುದು ಸರಳ ಇರುತ್ತದೆ. ಆದರೆ ನಮ್ಮಷ್ಟಕ್ಕೆ ನಾವೇ ಪರಿಶುದ್ಧಿಗೊಳ್ಳಬೇಕಾಗಿದೆ. ಇಂತಹ ಕಾರ್ಯವನ್ನು ಬಸವಣ್ಣನವರು 8 ವರ್ಷದ ಬಾಲಕನಿದ್ದಾಗಿನಿಂದ ಮಾಡಿಕೊಂಡು‌ ಬಂದಿದ್ದರು ಎಂದು ಹೇಳಿದರು.

ಚಿಕ್ಕ ವಯಸ್ಸಿನಲ್ಲಿಯೇ ಬಸವಣ್ಣನವರ ವಿಚಾರ ಹೇಗೆ ಬಂದಿತು ಎಂದು ಸ್ವಾಮೀಜಿಗೆ ಕೇಳಿದಾಗ, ಸ್ವಾಮೀಜಿ ಹೇಳಿದರು.. ಗೆಳೆಯರ ಪರಸ್ಥಿತಿಯನ್ನು ನೋಡಿ, ಅವರ ಕುಟುಂಬದವರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ನೋಡಿ ಇದರ ಬದಲಾವಣೆ ಮಾಡಲು ಚಿಂತನೆ ನಡೆಸಿದರು ಎಂದು ಸ್ವಾಮೀಜಿ ತಿಳಿಸಿದರು. ಬಸವಣ್ಣನವರ ಪ್ರಜಾಪ್ರಭುತ್ವ, ಸಮಾನತೆ ಬಗ್ಗೆ ತಮ್ಮಲ್ಲಿ ಆತ್ಮಾವಲೋಕನೆ ಮಾಡಿಕೊಂಡು, ಅಂತಹ ತತ್ವವನ್ನು ಬೆಳೆಸಿಕೊಂಡು ಬರುವ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡಿದ್ದಾರೆ. ಹೀಗಾಗಿ ನೂರಾರು ವರ್ಷಗಳಾದರೂ ಅವರ ಮೂರ್ತಿಗೆ ಹೂವು ಸರ್ಮಪಣೆ ಮಾಡಿ ಗೌರವ ನೀಡಲಾಗುತ್ತದೆ ಎಂದು ರಾಹುಲ್​ ಗಾಂಧಿ ಹೇಳಿದ್ರು.

ಬಹಳ ಜನರಿಗೆ ಸತ್ಯದ ಬಗ್ಗೆ ಅರಿವು ಇದ್ದರೂ ಸಹ, ಸತ್ಯ ಹೇಳಲು ಹೆದರುತ್ತಾರೆ. ಬಸವಣ್ಣನವರು ಹಾಗೆ ಮಾಡಿಲ್ಲ, ಸಮಾಜದ ಬದಲಾವಣೆಗಾಗಿ ಸತ್ಯವನ್ನು ಹೇಳುತ್ತಿದ್ದರು. ಆದರೆ ಸಮಾಜದ ಮುಂದೆ ಸತ್ಯವನ್ನು ಹೇಳುವುದು ಕಷ್ಟಕರವಾಗುತ್ತದೆ. ಇಲ್ಲಿಗೆ ಬಂದಿದ್ದು ಬಹಳ ಸಂತೋಷ ಏಕೆಂದರೆ ಸ್ವಾಮೀಜಿ ಮಾತನ್ನು ಕೇಳಿ ಖುಷಿಯಾಗಿದೆ. ಬಸವಣ್ಣನವರ ತಮ್ಮ ಜೀವನ ಪರ್ಯಂತ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಬಹಳ ವಿಚಾರ ತಿಳಿದುಕೊಳ್ಳಲು ಅನುಕೂಲವಾಗಿದೆ. ಈ ಹಿಂದೆ ಬಂದು ಹೋಗಿದ್ದೇನೆ. ಬಸವಣ್ಣನವರ ಅಧ್ಯಯನ ಸಹ ಮಾಡಿದ್ದೇನೆ. ಆದರೆ ಬಸವಣ್ಣನವರು ಯಾರಿಗೂ ಭಯ ಪಡೆದೆ ಬದಲಾವಣೆಗಾಗಿ ಕ್ರಾಂತಿ ಮಾಡಿದ್ದಾರೆ ಎಂದು ರಾಹುಲ್​ ಗಾಂಧಿ ಬಣ್ಣಿಸಿದರು.

ಇದಕ್ಕೂ ಮೊದಲು ಗದಗಿನ ತೋಂಟದಾರ್ಯ ಸ್ವಾಮೀಜಿಯವರು ಮಾತನಾಡಿ, ಬಸವಣ್ಣನವರು ಹುಟ್ಟಿ ಬೆಳೆದ ಹಾಗೂ ಅವರ ಜೀವನ ಚರಿತ್ರೆ ಬಗ್ಗೆ ಮಾಹಿತಿ‌ ನೀಡಿದರು. ಬಸವ ಧರ್ಮ ಪೀಠದ ವತಿಯಿಂದ ಸ್ಥಳೀಯ ಸ್ವಾಮೀಜಿ ಮಹಾದೇವ ಶ್ರೀಗಳು ರಾಹುಲ್ ಗಾಂಧಿ ಅವರಿಗೆ ಸನ್ಮಾನಿಸಿ ಗೌರವಿಸಿದರು. ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ ಹಾಗೂ ವೀಣಾ ಕಾಶಪ್ಪನವರ ದಂಪತಿ ಬಸವಣ್ಣನವರ ಮೂರ್ತಿಯನ್ನು ನೀಡಿ ಗೌರವಿಸಿದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಎಂ ಬಿ ಪಾಟೀಲ್​ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಶೃಂಗೇರಿಯಲ್ಲಿ ಚಂಡಿಕಾಯಾಗ ನಡೆಸಿದ ಡಿ ಕೆ ಶಿವಕುಮಾರ್

Last Updated : Apr 23, 2023, 10:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.