ETV Bharat / state

ಸಂಸತ್​ ಭದ್ರತಾ ಲೋಪ ಪ್ರಕರಣ; ಬಾಗಲಕೋಟೆಯಲ್ಲಿ ಟೆಕ್ಕಿ ಪೊಲೀಸ್​ ವಶಕ್ಕೆ

author img

By ETV Bharat Karnataka Team

Published : Dec 21, 2023, 11:09 AM IST

Updated : Dec 21, 2023, 1:39 PM IST

ಸಂಸತ್​​ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಮತ್ತೊಬ್ಬ ಟೆಕ್ಕಿಯನ್ನು ಪೊಲೀಸರು​ ವಶಕ್ಕೆ ಪಡೆದಿದ್ದಾರೆ.

ಸಂಸತ್ತು ಭದ್ರತಾ ಪ್ರಕರಣ
ಸಂಸತ್ತು ಭದ್ರತಾ ಪ್ರಕರಣ

ಬಾಗಲಕೋಟೆ: ಸಂಸತ್​​ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಮತ್ತೊಬ್ಬ ಟೆಕ್ಕಿಯನ್ನು ದೆಹಲಿ ಪೊಲೀಸರು ಬುಧವಾರ ರಾತ್ರಿ​ ವಶಕ್ಕೆ ಪಡೆದಿದ್ದಾರೆ. 30 ವರ್ಷದ ಸಾಯಿಕೃಷ್ಣ ಜಗಲಿ ವಶಕ್ಕೆ ಪಡೆಯಲಾದ ಟೆಕ್ಕಿ ಆಗಿದ್ದಾರೆ. ಸದ್ಯ ದೆಹಲಿ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ಧಾರೆ.

ಪ್ರಕರಣದ ಬಗ್ಗೆ ಎಸ್​​​​ಪಿ ಹೇಳಿದ್ದಿಷ್ಟು: ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ದೆಹಲಿಯಿಂದ ನಾಲ್ಕು ಜನ ಪೊಲೀಸರು ಬಂದು ಸಾಯಿಕೃಷ್ಣನನ್ನು ವಿಚಾರಣೆಗೆಂದು ಕರೆದುಕೊಂಡು ಹೋಗಿದ್ದಾರೆ‌. ಹೈದರಾಬಾದ್ ಮೂಲಕ ದೆಹಲಿಗೆ ತೆರಳಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾಯಿಕೃಷ್ಣ ತಂದೆ ಪ್ರತಿಕ್ರಿಯೆ: ದೆಹಲಿ ಪೊಲೀಸರ ವಶದಲ್ಲಿರುವ ಸಾಯಿಕೃಷ್ಣ ತಂದೆಯಾಗಿರುವ ನಿವೃತ್ತ ಡಿವೈಎಸ್​​​​ಪಿ ವಿಠಲ್​ ಜಗಲಿ ಅವರು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. ’’ತಮ್ಮ ಪುತ್ರನನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗುತ್ತೇವೆ ಎಂದು ಮಾಹಿತಿ ನೀಡಿ, ಕರೆದುಕೊಂಡು ಹೋಗಿದ್ದಾರೆ. ಇಬ್ಬರು ರೂಮ್​​ಮೇಟ್​​​​​​ಗಳು​ ಆಗಿದ್ದರಿಂದ ಇಬ್ಬರ ಸಮಕ್ಷಮ ವಿಚಾರಣೆ ಮಾಡಲಿದ್ದಾರೆ. ಮತ್ತೆ ಎರಡು ದಿನದಲ್ಲಿ ವಾಪಸ್​ ಕಳುಹಿಸಲಿದ್ದಾರೆ. ಬಂದ ನಂತರ ಇಬ್ಬರು ಸೇರಿ ಸಮಗ್ರ ಮಾಹಿತಿ ನೀಡುತ್ತೇವೆ‘‘ ಎಂದು ತಿಳಿಸಿದರು.

ಸಹೋದರಿಯ ಪ್ರತಿಕ್ರಿಯೆ: ಈ ಬಗ್ಗೆ ಸಾಯಿಕೃಷ್ಣ ಸಹೋದರಿ ಮಾತನಾಡಿದ್ದು, ''ದೆಹಲಿಯಿಂದ ಇಲ್ಲಿಗೆ ಪೊಲೀಸರು ಆಗಮಿಸಿದ್ದರು. ಕೆಲ ಸಮಯ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಪೊಲೀಸರು ಕೇಳಿದ ಪ್ರಶ್ನೆಗೆ ಸಾಯಿಕೃಷ್ಣ ಸರಿಯಾಗಿ ಮಾಹಿತಿ ನೀಡಿದ. ಆದರೆ, ಹೆಚ್ಚಿನ ಮಾಹಿತಿ ಅವಶ್ಯಕತೆ ಇರುವುದರಿಂದ ಸಾಯಿಕೃಷ್ಣನನ್ನು ದೆಹಲಿಗೆ ಕರೆದುಕೊಂಡು ಹೋಗಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದರು. ನಾವು ಕರೆದುಕೊಂಡು ಹೋಗುವಂತೆ ಹೇಳಿದೆವು. ಸಾಯಿಕೃಷ್ಣ ಮತ್ತು ಮನೋರಂಜನ್​ ಸೇರಿ ಒಟ್ಟು ಮೂವರು ಓದುವಾಗ ರೂಮೆಟ್​ ಆಗಿದ್ದರು. ಇಲ್ಲಿಗೆ ಯಾವತ್ತೂ ಆತ ಬಂದಿಲ್ಲ. ನನ್ನ ತಮ್ಮ ದ್ವಿತೀಯ ಪಿಯುಸಿಯನ್ನು ಬಾಗಲಕೋಟೆಯಲ್ಲಿ ಮುಗಿಸಿದ. ಬಳಿಕ ಇಂಜಿನಿಯರಿಂಗ್​ ಅನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದ. ಕೆಲವು ದಿನ ಖಾಸಗಿ ಕಂಪನಿಯೊಂದರಲ್ಲಿ ವರ್ಕ್​ ಫ್ರಂ ಹೋಮ್​ ಕೆಲಸ ಮಾಡಿದ. ಬಳಿಕ ಕೆಲಸ ಬಿಟ್ಟು ಇದೀಗ ತನ್ನದೇ ಆದ ಆ್ಯಪ್​ವೊಂದನ್ನು ಅಭಿವೃದ್ಧಿಪಡಿಸುತ್ತಿದ್ದಾನೆ. ಸದ್ಯ ಕೇಳಿ ಬರುತ್ತಿರುವ ಮನೋರಂಜನ್ ಪ್ರಕರಣಕ್ಕೂ ನಮ್ಮ ಸಹೋದರನಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ರೂಮೆಟ್​ ಆಗಿದ್ದರಿಂದ ಆತನನ್ನು ಕರೆದುಕೊಂಡು ಹೋಗಿದ್ದಾರೆ. ಪೊಲೀಸರ ಯಾವುದೇ ವಿಚಾರಣೆಗೂ ಸಿದ್ಧ. ತಪ್ಪು ಮಾಡಿಲ್ಲ ಎಂದರೆ ಹೆದರುವುದು ಏತಕ್ಕೆ'' ಎಂದು ಪ್ರಶ್ನಿಸಿದರು.

ಇದನ್ನು ಓದಿ: ಮೈಸೂರು: ಎರಡನೇ ದಿನವೂ ದೆಹಲಿ ಪೊಲೀಸರಿಂದ ಮನೋರಂಜನ್ ಪೋಷಕರ ವಿಚಾರಣೆ - ವೀಡಿಯೋ

Last Updated : Dec 21, 2023, 1:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.