ETV Bharat / state

ನಿವೃತ್ತ ಸಿಬ್ಬಂದಿಯ ಸಾವಯವ ಕೃಷಿ.. ಇತರೆ ರೈತರಿಗೂ ಜಾಗೃತಿ ಮೂಡಿಸುತ್ತಿದ್ದಾರೆ ಬಾಗಲಕೋಟೆಯ ಅನ್ನದಾತ

author img

By ETV Bharat Karnataka Team

Published : Aug 27, 2023, 8:49 PM IST

ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಸಾವಯವ ಕೃಷಿಯತ್ತ ಗಮನ ಹರಿಸಿ ಬಾಗಲಕೋಟೆಯ ವ್ಯಕ್ತಿಯೊಬ್ಬರು ಹೊಸ ಜೀವನ ಸಾಗಿಸುತ್ತಿದ್ದಾರೆ.

ರೈತ ಶ್ರೀಶೈಲ ಕೂಗಲಿ
ರೈತ ಶ್ರೀಶೈಲ ಕೂಗಲಿ

ಸಾವಯವ ಕೃಷಿಯ ಮಹತ್ವದ ಬಗ್ಗೆ ರೈತ ಶ್ರೀಶೈಲ ಕೂಗಲಿ ಮಾಹಿತಿ ನೀಡಿದರು

ಬಾಗಲಕೋಟೆ : ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಆರಾಮಾಗಿ ಜೀವನ ಕಳೆಯಬೇಕು ಎನ್ನುವರು ಹೆಚ್ಚಾಗಿ ಇರುತ್ತಾರೆ. ಆದರೆ ಇಲ್ಲೊಬ್ಬರು ನಿವೃತ್ತರಾದ ಬಳಿಕ ರೈತರಾಗಿ ಮತ್ತೆ ತಮ್ಮ ಹೊಸ ಜೀವನ ಸಾಗಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಜಮೀನಿಗೆ ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು ಎಂದು ರೈತರಿಗೆ ಜಾಗೃತಿ ಮೂಡಿಸುವ ಜೊತೆಗೆ ಉಚಿತ ಸಾವಯವ ಗೊಬ್ಬರ ವಿತರಣೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಶ್ರೀಶೈಲ ಕೂಗಲಿ ಎಂಬ ಇವರು ಮೊದಲು ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಸೇನಾ ಖೋಟಾದಲ್ಲಿ ಪೊಲೀಸ್ ಇಲಾಖೆಯಲ್ಲಿ ತಮ್ಮ ಸೇವೆ ಮುಂದುವರೆಸಿದ್ದಾರೆ. ನಂತರ 23 ವರ್ಷ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿ, ನಿವೃತ್ತರಾದ ಬಳಿಕ ಈಗ ರೈತರಾಗಿದ್ದಾರೆ. ಬಾಗಲಕೋಟೆ ನಗರದ ನಿವಾಸಿಯಾಗಿರುವ ಇವರು ಅನಗವಾಡಿ ಪುನರ್ವಸತಿ ಕೇಂದ್ರದ ಬಳಿ ಸುಮಾರು‌ 8 ಎಕರೆ ಜಮೀನು ಹೊಂದಿದ್ದಾರೆ. ಈ ಜಮೀನಿನಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ತಮ್ಮ ತೋಟದಲ್ಲಿ ಸ್ವತಃ ತಯಾರು ಮಾಡಿರುವ ಸಾವಯವ ಗೊಬ್ಬರ ಬಳಕೆ ಮಾಡಿಕೊಂಡು ಗುಣಮಟ್ಟದ ಫಸಲು ತೆಗೆಯುತ್ತಿದ್ದಾರೆ.

ತಮ್ಮ ಜಮೀನಿನಲ್ಲಿ ಕೃಷಿ ಕುಟೀರ ಎಂದು ನಿರ್ಮಾಣ ಮಾಡಿ, ವಿವಿಧ ಬಗೆಯ ಸಾವಯವ ಗೊಬ್ಬರ ತಯಾರಿಸಿ, ಜಮೀನಿಗೆ ಬಳಕೆ ಮಾಡುತ್ತಿದ್ದಾರೆ. ಗೋಕೃಪಾಮೃತ ಎಂದು ಗೋವಿನ ಮೂತ್ರ ಮತ್ತು ಸಗಣಿಯಿಂದ ತಯಾರಿಸಿ ಈ ಸಾವಯವ ಗೊಬ್ಬರವನ್ನು ಜಮೀನಿಗೆ ಬಳಕೆ ಮಾಡುತ್ತಾರೆ. ಇದರ ಜೊತೆಗೆ ವೀಕ್ಷಣೆ ಮಾಡಲು ಬಂದ ರೈತರಿಗೆ ಉಚಿತವಾಗಿ ಒಂದು ಬಾಟಲ್​ನಲ್ಲಿ ಕೊಟ್ಟು ಕಳಿಸುತ್ತಾರೆ. ಅಲ್ಲದೇ ತಮ್ಮ ಜಮೀನಿಗೆ ಬಳಕೆ ಮಾಡುವಂತೆ ಜಾಗೃತಿ ಮೂಡಿಸುತ್ತಾರೆ. ಇದರ ಜೊತೆಗೆ ಮಜ್ಜಿಗೆ, ಬೆಲ್ಲ, ಮೊಸರು ಕೊಳೆಯಲು ಬಿಟ್ಟು ಅದರಿಂದ ತಯಾರಾಗುವ ಪದಾರ್ಥ, ಬಿಲ್ವಪತ್ರೆ ಕಾಯಿ, ಎಲೆಯಿಂದ ತಯಾರಿಸಿದ ಗೊಬ್ಬರ ಹಾಗೂ ವೇಸ್ಟ್​​ ಡಿಕಾಂಪೋಸರ್, ಸಸ್ಯ ಲೋಕದ ಜೀವಾಮೃತ, ಇದು ಹೇಗೆ ತಯಾರಿಸಲಾಗುತ್ತದೆ ಎಂಬ ಮಾಹಿತಿ ಸಹ ಇಡಲಾಗಿದೆ.

ಇದರ ಜೊತೆಗೆ ಕಲ್ಲಿನ ಅರ್ಕ ಎಂಬ ಸಾವಯವ ಪದಾರ್ಥದಿಂದ ಗೊಬ್ಬರ ತಯಾರಿಸಿ, ಜಮೀನುಗಳಿಗೆ ಬಳಕೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ಯಾವ ಕಲ್ಲು ಬಳಕೆ ಮಾಡಿಕೊಳ್ಳಬೇಕು. ಹೇಗೆ ಮಿಶ್ರಣ ಮಾಡಿ ಜಮೀನಿಗೆ ಬಳಕೆ ಮಾಡಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಕಲ್ಲಿನಿಂದ ತಯಾರಿಸಿದ ಬೆಳೆಗಳಿಗೆ ಜಮೀನುಗಳಿಗೆ ಯಾವ ರೀತಿಯಾಗಿ ಅನುಕೂಲವಾಗಲಿದೆ ಎಂದು ವಿವರಣೆ ಸಹ ನೀಡುತ್ತಾರೆ. ಈರುಳ್ಳಿಯನ್ನು ನೀರಿನಲ್ಲಿ ಕೊಳೆಯಿಸಿ, ಅದರಿಂದ ಉಂಟಾಗುವ ದ್ರವ ರೂಪದ ನೀರನ್ನು ಬಳಕೆ ಮಾಡುವುದು ಬೆಳೆಗೆ ಹೇಗೆ ಜೀವಾಮೃತವಾಗುತ್ತದೆ ಎಂದು ಈ ರೈತ ತೋರಿಸಿಕೊಟ್ಟಿದ್ದಾರೆ.

ಇದರ ಜೊತೆಗೆ ವಿವಿಧ ವ್ಯರ್ಥ ಆಗುವ ಧವಸ ಧಾನ್ಯ ಹಾಗೂ ಆಹಾರ ಪದಾರ್ಥಗಳನ್ನು ಕೊಳೆಯಿಸಿ ಉಂಟಾಗುವ ಪದಾರ್ಥವು ಸಾವಯವ ಗೊಬ್ಬರವನ್ನಾಗಿ ಉಪಯೋಗಿಸಲಾಗುತ್ತದೆ. ಇವರು‌ ಈ ರೀತಿಯಾಗಿ ವಿವಿಧ ಬಗೆಯಿಂದ ಸಾವಯವ ಗೊಬ್ಬರ ತಯಾರಿಸಿ ತಮ್ಮ ಜಮೀನಿಗೆ ಉಪಯೋಗಿಸುತ್ತಾರೆ. ಇದರಿಂದ ಜಮೀನು ಸಹ ಫಲವತ್ತತೆ ಆಗಲಿದ್ದು, ಬೆಳೆಗಳು ಸಹ ಉತ್ತಮ ಫಸಲು ನೀಡುತ್ತದೆ. ಸಾವಯವ ಗೊಬ್ಬರ ತಯಾರಿಸುವ ವಿಧಾನ ಬಗ್ಗೆ ಗೋಡೆಯ ಮೇಲೆ ನಾಮಫಲಕ ಹಾಕಿದ್ದಾರೆ.

ಯಾರೇ ರೈತರು ಬಂದು ಎಲ್ಲವನ್ನೂ ವೀಕ್ಷಣೆ ಮಾಡಿ, ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗಲಿ ಎಂದು ಹೀಗೆಲ್ಲಾ ಮಾಡಿದ್ದಾರೆ. ಮನುಷ್ಯರಿಗೆ ಕೆಂಪು ರಕ್ತ ಕಣಗಳು ಹಾಗೂ ಬಿಳಿ ರಕ್ತ ಕಣಗಳು ಹೇಗೆ? ಆರೋಗ್ಯಕರವಾಗಲು ಸಾಧ್ಯವೋ ಅದೇ ರೀತಿಯಾಗಿ ಇಂತಹ ಸಾವಯವ ಗೊಬ್ಬರ ಜಮೀನುಗಳಿಗೆ ಬಳಕೆ ಮಾಡುವುದರಿಂದ ಜಮೀನು ಫಲವತ್ತತೆ ಆಗುತ್ತದೆ. ಚೆನ್ನಾಗಿ ಫಸಲು ಬರುತ್ತದೆ ಎಂದು ಶ್ರೀಶೈಲ ಕೂಗಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರೈತರು ಕಡಿಮೆ ಅವಧಿಗೆ ಹೆಚ್ಚು ಫಸಲು ಬರುತ್ತದೆ ಎಂದು ರಾಸಾಯನಿಕ ಗೊಬ್ಬರ ಬಳಕೆ ಮಾಡದೆ, ಸಾವಯವ ಗೊಬ್ಬರ ಬಳಸಿಕೊಂಡು, ಜಮೀನು ಫಲವತ್ತತೆ ಉಳಿಸುವುದರ ಜೊತೆಗೆ ಚೆನ್ನಾಗಿ ಫಸಲು ತೆಗೆಯಲು ಸಾಧ್ಯವಾಗುತ್ತದೆ ಎಂದು ರೈತರಿಗೆ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ: 1 ಎಕರೆ ಪ್ರದೇಶದಲ್ಲಿ 4 ಟನ್​ಗೂ ಅಧಿಕ ಮಾವು ಬೆಳೆ ನಿರೀಕ್ಷೆ; ಹಾವೇರಿಯ ರೈತನ ಸಾವಯವ ಕೃಷಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.