ETV Bharat / state

ಬಾಲಕನಿಗೆ ಫುಲ್ ಟಿಕೆಟ್ ನೀಡಿದ ಬಸ್ ಕಂಡಕ್ಟರ್​ಗೆ ಬಡ್ಡಿ ಸಮೇತ ಹಣ ವಾಪಸ್ ನೀಡಲು ಆದೇಶ

author img

By ETV Bharat Karnataka Team

Published : Jan 12, 2024, 8:01 AM IST

10 ವರ್ಷದ ಬಾಲಕನಿಗೆ ಅರ್ಧ ಟಿಕೆಟ್ ನೀಡದೇ ಫುಲ್ ಟಿಕೆಟ್ ನೀಡಿದ ಬಸ್ ಕಂಡಕ್ಟರ್​ಗೆ ಬಡ್ಡಿ ಸಮೇತ ಹಣ ವಾಪಸ್ ನೀಡುವಂತೆ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.

ksrtc bus conductor
ಕಂಡಕ್ಟರ್​ಗೆ ಬಡ್ಡಿ ಸಮೇತ ಹಣ ವಾಪಸ್ ನೀಡುವಂತೆ ಆದೇಶ

ಬಾಗಲಕೋಟೆ: 12 ವರ್ಷದೊಳಗಿನ ಬಾಲಕನಿಗೆ ಪೂರ್ಣ ಪ್ರಮಾಣದ ಟಿಕೆಟ್ ನೀಡಿದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್​​ಗೆ ಹೆಚ್ಚುವರಿಯಾಗಿ ಪಡೆದ ಹಣವನ್ನು ಬಡ್ಡಿ ಸಮೇತ ವಾಪಸ್ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಮಾಡಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅನಂತಪುರ ಗ್ರಾಮದ ನಿವಾಸಿ ದೀಪಾ ಹಿರೇಮಠ ಎಂಬವರು ಜುಲೈ 1 ,2023ರಂದು ಮುಧೋಳದಿಂದ ವಿಜಯಪುರಕ್ಕೆ ಬಸ್​ನಲ್ಲಿ ಹೊರಟಿದ್ದರು. ಪುತ್ರ ಕೂಡ ಇವರೊಂದಿಗೆ ಪ್ರಯಾಣಿಸುತ್ತಿದ್ದ. ಪುತ್ರನಿಗೆ ಅರ್ಧ ಟಿಕೆಟ್ ನೀಡುವಂತೆ ಕಂಡಕ್ಟರ್‌ಗೆ ಕೇಳಿದ್ದರು. ವಯಸ್ಸು 12 ವರ್ಷ ದಾಟಿದ್ದು, ಪೂರ್ಣ ಟಿಕೆಟ್ ತೆಗೆದುಕೊಳ್ಳುವಂತೆ ಕಂಡಕ್ಟರ್ ತಿಳಿಸಿದ್ದರು. ಮಹಿಳೆ ಆಧಾರ್ ಕಾರ್ಡ್ ತೋರಿಸಿದರೂ ನಂಬಿರಲಿಲ್ಲ. ಇದರಿಂದಾಗಿ 95 ರೂಪಾಯಿ ಕೊಟ್ಟು ಫುಲ್ ಟಿಕೆಟ್ ಪಡೆದೇ ಅವರು ಪ್ರಯಾಣಿಸಿದ್ದರು.

ತಮ್ಮ ಮಗನಿಗೆ 10 ವರ್ಷ 11 ತಿಂಗಳು ಮಾತ್ರ ಆಗಿದೆ ಎಂದು ಆಧಾರ್ ಕಾರ್ಡ್ ತೋರಿಸಿದರೂ ನಂಬದ ಕಂಡಕ್ಟರ್ ಫುಲ್ ಟಿಕೆಟ್ ನೀಡಲು ಪಟ್ಟು ಹಿಡಿದಿದ್ದರು. ಫುಲ್ ಟಿಕೆಟ್ ಪಡೆಯದಿದ್ದರೆ ಬಸ್‌ನಿಂದ ಕೆಳಗಿಳಿಯುವಂತೆಯೂ ಸೂಚಿಸಿ ಅವಮಾನಿಸಿದ್ದರು ಎಂದು ಮಹಿಳೆ ದೂರು ನೀಡಿದ್ದರು.

ಪ್ರಕರಣದ ಕುರಿತು ಡಿಪೋ ಮ್ಯಾನೇಜರ್‌ಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಬಳಿಕ ವಕೀಲರಿಂದ ನೋಟಿಸ್ ಕಳುಹಿಸಿದರೂ ಫಲಪ್ರದವಾಗದ ಹಿನ್ನೆಲೆಯಲ್ಲಿ ಮಹಿಳೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.

ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ವಿಚಾರಣೆ ನಡೆಸಿ, ಕಂಡಕ್ಟರ್​ ತಪ್ಪು ಸಾಬೀತಾಗಿದೆ. ರಸ್ತೆ ಸಾರಿಗೆ ಸಂಸ್ಥೆಯ ನಿಯಮ ಉಲ್ಲಂಘಿಸಿ ಪೂರ್ಣ ಟಿಕೆಟ್ ಕೊಟ್ಟು ಸೇವಾ ನ್ಯೂನತೆ ಮತ್ತು ಅನುಚಿತ ವರ್ತನೆಯ ಜೊತೆಗೆ ಹೆಚ್ಚಿನ ಹಣ ಪಡೆದುಕೊಂಡಿದ್ದರಿಂದ 50 ರೂಪಾಯಿಗೆ ಶೇ.9ರಷ್ಟು ಬಡ್ಡಿ ಸಮೇತ ಹಣ ನೀಡಬೇಕು. ಮಾನಸಿಕ ಹಿಂಸೆ ಅನುಭವಿಸಿರುವುದರಿಂದ ವಿಶೇಷ ಪರಿಹಾರವಾಗಿ 2 ಸಾವಿರ ರೂ, ಪ್ರಕರಣಕ್ಕಾಗಿ ಆಯೋಗಕ್ಕೆ ಅಲೆದಾಡಲು ಮಾಡಿರುವ ವೆಚ್ಚಕ್ಕಾಗಿ ಒಂದು ಸಾವಿರ ರೂ ನೀಡಬೇಕು ಎಂದು ಆಯೋಗದ ಅಧ್ಯಕ್ಷ ಡಿ.ವೈ.ಬಸಾಪೂರ, ಸದಸ್ಯರಾದ ಸಿ.ಹೆಚ್.ಸಮಿಉನ್ನಿಸಾ ಅಬ್ರಾರ್, ಕಮಲಕಿಶೋರ ಅವರನ್ನೊಳಗೊಂಡ ಪೀಠ ಅದೇಶಿಸಿದೆ.

ಇದನ್ನೂ ಓದಿ: ಚಿಕ್ಕಮಗಳೂರು: 8 ದಿನಗಳ ಅಂತರದಲ್ಲಿ 2 ಕರುಗಳಿಗೆ ಜನ್ಮ ನೀಡಿದ ಎಮ್ಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.