ETV Bharat / state

ಮುಳಗಡೆ ನಗರಿ ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವಿಶೇಷ

author img

By

Published : Mar 6, 2023, 7:53 PM IST

Updated : Mar 6, 2023, 8:24 PM IST

ಬಾಗಲಕೋಟೆಯಲ್ಲಿ ಪ್ರತಿಯೊಂದು ಬಡಾವಣೆಗಳಲ್ಲೂ ಗೆಳೆಯರ ಬಳಗ ಕಟ್ಟಿಕೊಂಡು ಹೋಳಿ ಆಚರಣೆಯ ಸಂಪ್ರದಾಯ ಉಳಿಸಿಕೊಂಡು ಬಹಳ ವಿಜೃಂಭಣೆಯಿಂದ ಐದು ದಿನಗಳ ಕಾಲ ಆಚರಿಸಲಾಗುತ್ತದೆ.

holi-celebration-is-special-in-bagalkote
ಮುಳಗಡೆ ನಗರಿ ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವಿಶೇಷ

ಮುಳಗಡೆ ನಗರಿ ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವಿಶೇಷ

ಬಾಗಲಕೋಟೆ: ಇಡೀ ದೇಶದಲ್ಲಿಯೇ ಬಾಗಲಕೋಟೆಯ ಹೋಳಿ ಆಚರಣೆಗೆ ಒಂದು ವಿಶಿಷ್ಟತೆ ಇದೆ. ಬಾಗಲಕೋಟೆಯಲ್ಲಿ ಐದು ದಿನಗಳ ಕಾಲ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ನಗರದಲ್ಲಿ ಮುಖ್ಯವಾಗಿ 5 ಪೇಟೆಗಳಿವೆ. ಕಿಲ್ಲಾ, ಹಳಪೇಟೆ, ಹೊಸಪೇಟೆ, ಜೈನಪೇಟೆ ಮತ್ತು ವೆಂಕಟಪೇಟೆ. ಮುಳುಗಡೆಯಿಂದ ಇವೆಲ್ಲ ಮೂಲ ಸ್ವರೂಪದಲ್ಲಿ ಉಳಿದಿಲ್ಲ. ಈ ಐದು ಓಣಿಗಳಿಗೆ ತುರಾಯಿ ಹಲಗೆ ಬಾಗಲಕೋಟೆ ಹೋಳಿ ಹಬ್ಬದ ಅತಿ ಮುಖ್ಯ ಆಕರ್ಷಣೆ ಆಗಿದೆ.

ತುರಾಯಿ ಹಲಗೆ ಎಂದರೆ ಸುಮಾರು ಹತ್ತು ಚಿಟ್ಟಲಿಗೆಗಳ ಒಂದು ಬೃಹತ್ ಆಕಾರದ ಹಲಗೆ. ಈ ಹಲಗೆಯ ಮೇಲೆ ಬಿರುದಾಗಿ ಚಿನ್ನದ ಇಲ್ಲವೇ ಬೆಳ್ಳಿಯ ಕಳಸ ಇರುತ್ತದೆ. ಇದಕ್ಕೆ ತುರಾಯಿ ಎನ್ನುತ್ತಾರೆ. ತುರಾಯಿ ಮೇಲ್ಭಾಗದಲ್ಲಿ ರಂಗು ರಂಗಿನ ಗುಚ್ಛವಿದ್ದು ರಾತ್ರಿ ಸಮಯದಲ್ಲಿ ವಿದ್ಯುದ್ದೀಪಗಳಿಂದ ಅಲಂಕರಿಸಿರುತ್ತಾರೆ. ಇದರ ಜೊತೆಗೆ, ಹಿಂದಿನ ಕಾಲದಿಂದ ಬಂದ ರಂಗು ರಂಗಿನ ರೇಶ್ಮೆ ಬಟ್ಟೆಗಳ ಮೂವತ್ತು ಅಡಿ ಎತ್ತರದ ನಿಶಾನೆಗಳು ಇವೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ಹಲಗೆ ವಾದನ ಕೇಳುವುದೇ ಒಂದು ಸಂಭ್ರಮ. ಹಿರಿಯರು - ಕಿರಿಯರೆನ್ನದೇ ಎಲ್ಲ ವಯೋಮಾನದವರು ಇಲ್ಲಿ ಹಲಗೆ ನುಡಿಸುತ್ತಾರೆ. ಹಲಗೆವಾದನ ಪ್ರಾರಂಭವಾಗುವದು ಶಹನಾಯಿ ನುಡಿಸುವದರೊಂದಿಗೆ ಮುಖ್ಯ ಕಲಾವಿದನೊಬ್ಬ ದೊಡ್ಡ ಹಲಗೆಯನ್ನು ಹಿಡಿದು ನೃತ್ಯಕ್ಕೆ ಚಾಲನೆ ನೀಡುತ್ತಾನೆ. ಡಪ್ಪಿಗೆ ಸರಿಯಾಗಿ ಚಿಕ್ಕ ಹಲಗೆಯವರು ಪೆಟ್ಟು ಹಾಕುತ್ತಾರೆ. ಜತೆಗೆ ಡಗ್ಗಾ, ಝಮರಿ ಚಳ್ಳಮ, ಕಣಿಯ ವಾದಕರು ಕ್ರಮಬದ್ದ ಹೆಜ್ಜೆ ಹಾಕುತ್ತ ‘ಇನ್ನೂ ಯಾಕ ಬರಲಿಲ್ಲಾವ.. ಹುಬ್ಬಳ್ಳಿಯಾವ..’, ’ಚೆನ್ನಪ್ಪ ಚೆನ್ನಗೌಡಾ’ ಎಂಬ ಸನಾದಿ ಸೂರಿನೊಡನೆ ತನ್ಮಯವಾಗಿ ಹರ್ಷದಿಂದ ಕುಣಿದು ಕುಪ್ಪಳಿಸುತ್ತಾರೆ.

ಕಾಮ ದಹನ: ಬಾಗಲಕೋಟೆಯ ಹೋಳಿ ಆಚರಣೆಯ ಕಾಮ ದಹನ ಪ್ರಕ್ರಿಯೆ ಸಕಲ ಸಮುದಾಯದವರ ಪಾಲ್ಗೊಳ್ಳುವಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಹೋಳಿಯ ದಿನ ಕಾಮನನ್ನು ಸುಡುವುದಕ್ಕಾಗಿ ಹುಡುಗರು ಓಣಿಯ ಮನೆಮನೆಯಲ್ಲೂ ಕಣ್ಣು ತಪ್ಪಿಸಿ ಕುಳ್ಳು, ಕಟ್ಟಿಗೆ, ನಿಚ್ಚಣಿಕೆ ಕದ್ದು ತಂದು ಒಂದೆಡೆ ಕೂಡಿಹಾಕುವ ಸಂಪ್ರದಾಯವಿದೆ. ಬಹುತೇಕ ಈ ಸಂಪ್ರದಾಯ ಮರೆಯಾಗಿದೆ. ಕೇಳಿ ಮತ್ತು ಕೊಂಡು ತಂದ ಕಟ್ಟಿಗೆ, ಕುಳ್ಳು ಮತ್ತು ಬಿದಿರುಗಳನ್ನು ರಾಶಿಗಟ್ಟಲೇ ಹೇರಿ ಅದರ ನಡುವೆ ಕಾಮನ ಚಿತ್ರ ಬರೆದು ಚಿತ್ರವನ್ನು ಕೋಲಿಗೆ ಅಂಟಿಸಿ ಕಾಮನಿಗೆ ಪೂಜೆ ಸಲ್ಲಿಸಿ ದಹಿಸಲು ಸಿದ್ದರಾಗುತ್ತಾರೆ.

ನಂತರ ಹಲಗೆ ಮೇಳದೊಂದಿಗೆ ನಿಶಾನೆ ಹಾಗೂ ಚಲುವಾದಿ ಬಟ್ಟಲುದೊಂದಿಗೆ ಓಣಿಯ ಶೆಟ್ಟರನ್ನು ಕರೆದುಕೊಂಡು ದಲಿತರ ಓಣಿಗೆ ಹೋಗಿ ಅಲ್ಲಿ ಖಾತೆದಾರರ ಮನೆಯಲ್ಲಿ ವೀಳ್ಯದೆಲೆ, ಅಡಕೆ ಕೊಟ್ಟು ಅವರನ್ನು ಆಮಂತ್ರಿಸುವ ಸಂಪ್ರದಾವಿದೆ. ಆಚರಣೆಯ ಬಾಬುದಾರರಾದ ಖಾತೆದಾರರ ಮನೆಯಿಂದಲೇ ಬೆಂಕಿ ತಂದು ಕಾಮದಹನ ಮಾಡಲಾಗುತ್ತದೆ. ನಸುಕಿನ ಜಾವದಿಂದ ಆರಂಭವಾದ ಕಾಮದಹನವು ರಾತ್ರಿಯವರೆಗೂ ನಗರದ ವಿವಿಧ ಓಣಿ ಮತ್ತು ಬಡಾವಣೆಗಳಲ್ಲಿ ಪ್ರಮುಖ ಕಾಮಣ್ಣರ ದಹನ ನಡೆಯುತ್ತದೆ.

ಬಣ್ಣದ ಬಂಡಿಗಳು: ಬಾಗಲಕೋಟೆ ಹೋಳಿಯ ಮುಖ್ಯ ಆಕರ್ಷಣೆ ಬಣ್ಣದ ಬಂಡಿಗಳು. ನೂರಾರು ಎತ್ತಿನ ಗಾಡಿಗಳಲ್ಲಿ ದೊಡ್ಡ ಹಂಡೆಗಳಲ್ಲಿ ಬಣ್ಣ ತುಂಬಿಕೊಂಡು ಬಣ್ಣವಾಡುವುದನ್ನು ನೋಡಿ ಕಣ್ತುಂಬಿಕೊಳ್ಳುವುದೇ ಜೀವನದ ಒಂದು ಸಾರ್ಥಕ ಭಾವ. ಇತ್ತೀಚಿಗೆ ಬಣ್ಣವಾಡಲು ಎತ್ತಿನ ಬಂಡಿಗಳ ಬದಲು ಟ್ರ್ಯಾಕ್ಟರ್, ಟ್ರಕ್ಕುಗಳನ್ನು ಉಪಯೋಗಿಸುತ್ತಿದ್ದಾರೆ. ಒಂದೊಂದು ಓಣಿಯವರು ಕನಿಷ್ಠ ಐವತ್ತರಿಂದ ಅರವತ್ತು ಎತ್ತಿನ ಗಾಡಿಗಳಲ್ಲಿ, ಒಂದೊಂದು ಗಾಡಿಗಳಲ್ಲಿ ನಾಲ್ಕಾರು ಹಂಡೆ, ಇಲ್ಲವೇ ಬ್ಯಾರಲ್ಲುಗಳನ್ನಿಟ್ಟು ಅವುಗಳ ತುಂಬ ಬಣ್ಣ ತುಂಬಿ ಕೇಕೇ ಹಾಕುತ್ತಾ ಹಾದಿ ಬೀದಿಯಲ್ಲಿ ನೆರೆದ ಜನರಮೇಲೆ ಬಣ್ಣ ಎರಚುತ್ತಾರೆ.

ಸೋಗಿನ ಬಂಡಿಗಳು: ಬಾಗಲಕೋಟ ಹೋಳಿ ಆಚರಣೆಯ ಸಂದರ್ಭದ ಸೋಗಿನ ಬಂಡಿಗಳು ಭಾರತೀಯ ಪರಂಪರೆಯ ಸಂಸ್ಕತಿಯ ಅನಾವರಣಕ್ಕೆ ಸಾಕ್ಷಿಯಾಗಿವೆ. ರಾಮಾಯಣ, ಮಹಾಭಾರತದ ಸಂದರ್ಭಗಳನ್ನು ಕಣ್ಣಿಗೆ ಕಟ್ಟುವಂತೆ ವೇಷ ತೊಟ್ಟು ಬಂಡಿಗಳಲ್ಲಿ ಬಂದು ಪ್ರದರ್ಶಿಸುವ ‘ಸೋಗಿನ ಬಂಡಿಗಳು’ ಬಾಗಲಕೋಟೆ ಹೋಳಿಗೆ ವಿಶೇಷ ಕಳೆ ಕಟ್ಟುತ್ತವೆ.

ವಿಡಂಬನಾತ್ಮಕ ಸೋಗಿನ ಬಂಡಿಗಳ ಸ್ಥಬ್ಧ ಚಿತ್ರ: ಓಕಳಿಯಾಟದಂತೆ ಒಂದೊಂದು ಓಣಿಯವರು ಸೋಗಿನ ಬಂಡಿಗಳ ಪ್ರದರ್ಶನ ಮಾಡುವುದು ಮೊದಲಿನಿಂದಲೂ ಬೆಳೆದು ಬಂದಿದೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ರಾಜಕೀಯ, ಹಾಗೂ ವಿಡಂಬನಾತ್ಮಕ ಸೋಗಿನ ಬಂಡಿಗಳು ಸ್ಥಬ್ಧ ಚಿತ್ರಗಳ ಹಾಗೆ ರಾರಾಜಿಸುತ್ತವೆ. ಬಣ್ಣದ ದಿನದ ರಾತ್ರಿ ಸೋಗಿನ ಬಂಡಿಯಿಂದ ಹಳೆ ಬಾಗಲಕೋಟೆ ಮಾರುಕಟ್ಟೆ ಪ್ರದೇಶ ವಿಜೃಂಬಿಸುತ್ತದೆ.

ಕಾಮದಹನ, ಬಣ್ಣದ ಬಂಡಿ, ಸೋಗಿನ ಬಂಡಿ ಈ ಎಲ್ಲ ಆಚರಣೆಗಳೊಂದಿಗೆ ವಿವಿಧ ಬಡಾವಣೆಗಳಲ್ಲಿ ‘ಹಲಗೆ ಮೇಳ’ ಗಳು ನಡೆಯುತ್ತವೆ. ಈ ಭಾರಿ ಮಹಿಳೆಯರು, ಯುವತಿಯರು ಸಹ ಸಂಪ್ರದಾಯ ಇಳಕಲ್​ ಸೀರೆ ಉಡುಗೆ ತೊಟ್ಟು ಹಲಗೆ ಮೇಳದ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಸ್ಪರ್ಧಾತ್ಮಕವಾಗಿ ನಡೆಯುವ ಮೇಳಗಳಿಗೆ ಬಹುಮಾನ ನೀಡಲಾಗುತ್ತದೆ.

ಮುಳುಗಡೆಯ ಬಾಗಲಕೋಟೆಯಲ್ಲಿ ಯಾವ ಹಬ್ಬದಾಚರಣೆಗಳೂ ಮುಳುಗಿ ಹೋಗದಂತೆ ಹಿಂದಿನ ವೈಭವವನ್ನು ಕಾಯ್ದುಕೊಂಡು ಬರುವಲ್ಲಿ ಇಲ್ಲಿನ ಹಿರಿಯರ ಮತ್ತು ಯುವ ಸಮುದಾಯದವರ ಪಾತ್ರ ದೊಡ್ಡದು. ನಗರದ ಬಾಗಲಕೋಟ ಹೋಳಿ ಆಚರಣಾ ಸಮಿತಿ, ಮಹಾತ್ಮ ಗಾಂಧಿ ರಸ್ತೆ ವರ್ತಕರ ಸಂಘ, ಜ್ಯೋತಿಪ್ರಕಾಶ ಸಾಳುಂಕೆ ಅಭಿಮಾನಿಗಳ ಗೆಳೆಯರ ಬಳಗ, ಕಿಲ್ಲಾಗಲ್ಲಿ, ವಿದ್ಯಾಗಿರಿ, ನವನಗರಗಳ ಗೆಳೆಯರ ಬಳಗ, ಸುಭಾಶಚಂದ್ರ ಭೋಸ ಯುವಕ ಸಂಘ.

ಹೀಗೆ ಪ್ರತಿಯೊಂದು ಬಡಾವಣೆಗಳಲ್ಲೂ ಗೆಳೆಯರ ಬಳಗ ಕಟ್ಟಿಕೊಂಡು ಬಾಗಲಕೋಟೆ ಹೋಳಿ ಆಚರಣೆಯ ಸಂಪ್ರದಾಯವನ್ನು ಉಳಿಸಿಕೊಂಡು ಬಂದ ಕೀರ್ತಿ ಇಲ್ಲಿ ಮುಳುಗಡೆಯೊತ್ತರ ಬಾಗಲಕೋಟೆಯ ಸಮಸ್ತ ಜನತೆಗೆ ಸಲ್ಲುತ್ತದೆ. ಒಟ್ಟಾರೆ ಬಡವ, ಶ್ರೀಮಂತವೆನ್ನದೇ ಜಾತಿ, ಮತ, ಪಂಥಗಳನ್ನು ಮರೆತು ಮೇಲು ಕೀಳು ಎಂಬ ಮತೀಯ ಭಾವನೆಗಳನ್ನು ತೊರೆದು ಆಚರಿಸುವ ಭಾವೈಕ್ಯದ ಸಂಕೇತವಾದ ಹೋಳಿ ಹಬ್ಬವು ನಮ್ಮ ಸಂಸ್ಕೃತಿ ಪ್ರತೀಕವಾಗಿದೆ.

ಇದನ್ನೂ ಓದಿ: ಅಗ್ನಿಸಾಕ್ಷಿಯೂ ಇಲ್ಲ, ಮಾಂಗಲ್ಯವೂ ಇಲ್ಲ; ನಿರ್ಭಯವಾಗಿ ನಡೆದ ಅಂತರ್ಜಾತಿ ವಿವಾಹ

Last Updated :Mar 6, 2023, 8:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.