ETV Bharat / state

ಅತ್ಯಾಚಾರ ಆರೋಪ ಎದುರಿಸುತ್ತಿರುವ ರಮೇಶ್​ ಜಾರಕಿಹೊಳಿಯವರನ್ನು ಬಂಧಿಸಿ : ಮಾಜಿ ಸಚಿವೆ ಉಮಾಶ್ರೀ ಆಗ್ರಹ

author img

By

Published : May 29, 2021, 8:22 PM IST

Updated : May 29, 2021, 10:08 PM IST

ಕೂಡಲೇ ರಮೇಶ್​ ಜಾರಕಿಹೊಳಿ ಅವರನ್ನು ಬಂಧಿಸುವುದರ ಜೊತೆಗೆ ಸರ್ಕಾರ ರಚನೆಗೆ ಸಹಾಯ ಮಾಡಿದ ವ್ಯಕ್ತಿಯ ಋಣ ಸಂದಾಯ ನೀತಿಗೆ ಭಾಗಿಯಾಗದೇ, ಅನ್ಯಾಯಕ್ಕೆ ಒಳಗಾದ ಹೆಣ್ಣಿಗೆ ನ್ಯಾಯ ಕೊಡಿಸಬೇಕು..

bagalkote
bagalkote

ಬಾಗಲಕೋಟೆ : ಬಿಜೆಪಿ ಸರ್ಕಾರದ ಹಿಂದಿನ ಮಂತ್ರಿಗಳಾಗಿದ್ದ ರಮೇಶ್ ಜಾರಕಿಹೊಳಿಯವರನ್ನು ಈ ಕೂಡಲೇ ಬಂಧಿಸಬೇಕು, ಅನ್ಯಾಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಕೊಡಿಸಬೇಕು ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರಾದ ಉಮಾಶ್ರೀ ಆಗ್ರಹಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಿಡಿ ಪ್ರಕರಣದ ಸಂತ್ರಸ್ತೆ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಆಕೆ ತನಗೆ ಆದ ಅನ್ಯಾಯವನ್ನು ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದಾಳೆ.

ಅದಕ್ಕೂ ಮೊದಲೂ ಸಿಡಿ ಬಿಡುಗಡೆ ಆದಾಗ ಮಂತ್ರಿಗಳಾದಂತವರು ಸಿಡಿಯಲ್ಲಿ ಇರೋದು ನಾನು ಅಲ್ಲ. ಆಕೆಯ ಪರಿಚಯವಿಲ್ಲ, ಆಕೆಯನ್ನು ಭೇಟಿ ಮಾಡಿಲ್ಲ ಎಂದೆಲ್ಲಾ ಹೇಳಿದರು.

ಇದಾದ ನಂತರ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಿತು. ಈ ಕಡೆ ಗೃಹ ಮಂತ್ರಿಗಳೇ ಹೇಳಿರುವಂತೆ ಆಕೆ ಬಂದು ದೂರು ಕೊಟ್ಟರೆ ಎಫ್‌ಐರ್ ದಾಖಲಿಸುತ್ತೇವೆ ಎಂದಿದ್ದರು.

ಎಫ್‌ಐಆರ್ ದಾಖಲಾದ ನಂತರ ಅತ್ಯಾಚಾರದ ಆರೋಪವನ್ನು ಹೊತ್ತಿರುವ ಆರೋಪಿ ಯಾವುದೇ ಕಾರಣಕ್ಕೂ ಬಹಿರಂಗವಾಗಿ ಓಡಾಡಲು ಸಾಧ್ಯವಿಲ್ಲ. ಸಾಮಾನ್ಯದವರಾದರೆ ಕೂಡಲೇ ಬಂಧಿಸುತ್ತಾರೆ. ಆದರೆ, ಈ ಪ್ರಕರಣದಲ್ಲಿ ಅವರನ್ನು ಬಂಧಿಸಿಲ್ಲ.

ಮಾಜಿ ಸಚಿವೆ ಉಮಾಶ್ರೀ ಆಗ್ರಹ

ಅದಕ್ಕೆ ಕೊರೊನಾ ಕಾರಣ ನೀಡಿದ್ದರು. ಅದಾದ ನಂತರವೂ ಅವರು ಆರಾಮಾಗಿ ಓಡಾಡಿಕೊಂಡಿದ್ದಾರೆ. ಆದರೂ ಪೊಲೀಸ್ರು ಅವರನ್ನು ಬಂಧಿಸುತ್ತಿಲ್ಲ.

ಇದೆಲ್ಲವನ್ನು ನೋಡಿದಾಗ ಸರ್ಕಾರ ಅವರ ರಕ್ಷಣೆಗೆ ನಿಂತಿದೆ ಎನ್ನುವ ಅನುಮಾನ ಉಂಟಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ರು.

ಅಂದು ಸಿಡಿಯಲ್ಲಿ ಇರುವುದು ನಾನಲ್ಲ ಎಂದು ಹೇಳಿರುವ ಆರೋಪಿ ಸ್ಥಾನದಲ್ಲಿರುವ ಮಹನೀಯರು ಇವತ್ತು ಹೇಗೆ ಆ ಸಿಡಿಯಲ್ಲಿರುವುದು ನಾನೇ, ಅವಳು ಅವಳೇ ಎನ್ನುತ್ತಿರುವುದು ನೋಡಿದರೆ ಅವರಿಗೆ ಗೊತ್ತಿದೆ, ಅವರು ಮನಸ್ಸಿಗೆ ಗೊತ್ತಿದೆ. ಅವರು ತಪ್ಪು ಮಾಡಿದ್ದಾರೆ ಎಂದ್ರು.

ಈ ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಇದೆ. ಇಂತಹ ಪ್ರಕರಣಗಳು 60 ರಿಂದ 90 ದಿನಗಳೊಳಗಾಗಿ ಮುಗಿಯಬೇಕು. ಆದರೆ, 60 ದಿನ ಕಳೆದರೂ ಸರ್ಕಾರ ವಿಶೇಷ ತನಿಖಾದಳದ ಅಧಿಕಾರಿಗಳನ್ನು ರಜೆಯ ಮೇಲೆ ಮನೆಗೆ ಕಳುಹಿಸಿದ್ದಾರೆ. ಇದರ ಅರ್ಥ ಆರೋಪಿಯ ರಕ್ಷಣೆಗೆ ಸರ್ಕಾರವೇ ಮುಂದಾಗಿದೆ ಎಂದು ಆರೋಪಿಸಿದರು.

ಪ್ರತಿ ಬಾರಿ ಏನೇ ನಡೆದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ನಡೆದಿದೆ. ಈ ಪ್ರಕರಣದಲ್ಲಿಯೂ ಅದೇ ರೀತಿ ಆಗಿದೆ. ನಮ್ಮ ರಾಜ್ಯದಲ್ಲಿ ರಾಜಕೀಯ ಒತ್ತಡದಿಂದ ಪೊಲೀಸ್ರ ಕೈಕಟ್ಟಿ ಹಾಕಿದಂತಾಗಿದೆ.

ಆರೋಪ ಹೊತ್ತಿರುವ ಮಂತ್ರಿಗಳು ಗೃಹ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಗೃಹ ಮಂತ್ರಿಗಳು ವಿವರಣೆ ಕೊಡಬೇಕು ಎಂದ್ರು.

ಡಿಎನ್‌ಎ ಟೆಸ್ಟ್ ಏಕೆ ಮಾಡಿಸಲಿಲ್ಲ: ಅತ್ಯಾಚಾರ ಪ್ರಕರಣದಲ್ಲಿ ಅಂತಹ ಆರೋಪವನ್ನು ಹೊತ್ತವರಿಂದ ಡಿಎನ್‌ಎ ಟೆಸ್ಟ್ ಆಗಲೇಬೇಕು ಎಂದು ಕಾನೂನಿನಲ್ಲಿ ಹೇಳಿದ್ದಾರೆ. ಯಾಕೆ ಅದು ಆಗಲಿಲ್ಲ ? ತಮ್ಮ ಆರೋಪಿ ಅದರಲ್ಲಿ ಸಿಲುಕಿಕೊಂಡರೆ ಎನ್ನುವ ಆತಂಕ ಸರಕಾರಕ್ಕಿದೆಯೇ?.

ಈ ಸರಕಾರ ಅಸ್ಥಿತ್ವಕ್ಕೆ ಬರಲು ಕಾರಣ ಅವರೇ ಎಂದು ಸರಕಾರಕ್ಕೆ ಗೊತ್ತಿರುವ ಕಾರಣ ಅಂತಹ ವ್ಯಕ್ತಿಯನ್ನು ರಕ್ಷಣೆ ಮಾಡುತ್ತಿರುವ ಸರಕಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದ್ರು.

ಕೂಡಲೇ ರಮೇಶ್​ ಜಾರಕಿಹೊಳಿ ಅವರನ್ನು ಬಂಧಿಸುವುದರ ಜೊತೆಗೆ ಸರ್ಕಾರ ರಚನೆಗೆ ಸಹಾಯ ಮಾಡಿದ ವ್ಯಕ್ತಿಯ ಋಣ ಸಂದಾಯ ನೀತಿಗೆ ಭಾಗಿಯಾಗದೇ, ಅನ್ಯಾಯಕ್ಕೆ ಒಳಗಾದ ಹೆಣ್ಣಿಗೆ ನ್ಯಾಯ ಕೊಡಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

Last Updated : May 29, 2021, 10:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.