ETV Bharat / state

ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆ ಅನುಷ್ಠಾನಕ್ಕೆ ಕ್ರಮ: ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಮೇಳ

author img

By

Published : Feb 4, 2021, 10:52 AM IST

15 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಬೃಹತ್ ಸಾಲ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಫಲಾನುಭವಿಗಳಿಗೆ ಸಾಲ ವಿತರಣೆ ಕಾರ್ಯ ಫೆಬ್ರವರಿ 15 ರೊಳಗಾಗಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

bagalkota
ಬಾಗಲಕೋಟೆ

ಬಾಗಲಕೋಟೆ: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಆತ್ಮ ನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ನೀಡುವ ಉದ್ದೇಶದಿಂದ ವಿವಿಧ ಬ್ಯಾಂಕ್‍ಗಳ ಮೂಲಕ ಜಿಲ್ಲೆಯಾದ್ಯಂತ ಸಾಲ ಮೇಳ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಸ್ಥರ ಆತ್ಮ ನಿಧಿ ಯೋಜನೆಯ ವಿವಿಧ ಬ್ಯಾಂಕ್‍ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲೆಯ ಎಲ್ಲ ಬ್ಯಾಂಕರ್ಸ್​ ಇಲಾಖೆಯೊಂದಿಗೆ ಸಹಕಾರ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸಾಲ ವಿತರಿಸುವ ಕಾರ್ಯ ನೂರಕ್ಕೆ ನೂರರಷ್ಟಾಗಬೇಕು ಎಂದರು.

ಬೇರೆ ಬೇರೆ ಜಿಲ್ಲೆಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಕಷ್ಟು ಸಾಲ ವಿತರಿಸಿವೆ. ಜಿಲ್ಲೆಯಲ್ಲಿಯೂ ಸಹ ನಿಗದಿತ ಅವಧಿಯೊಳಗೆ ಸಾಲ ವಿತರಣೆಗೆ ಕ್ರಮಕೈಗೊಳ್ಳಬೇಕು. ಈ ಯೋಜನೆ ಕಳೆದ ವರ್ಷ ಜೂನ್ 1 ರಿಂದ ಪ್ರಾರಂಭವಾಗಿದ್ದು, ಪ್ರತಿ ಫಲಾನುಭವಿಗಳಿಗೆ ತಲಾ 10 ಸಾವಿರ ಸಾಲ ನೀಡುವ ಯೋಜನೆ ಇದಾಗಿದೆ. ಜಿಲ್ಲೆಯಲ್ಲಿ ಒಟ್ಟು 6694 ಫಲಾನುಭವಿಗಳ ಪೈಕಿ 2334 ಜನರಿಗೆ ಮಾತ್ರ ಸಾಲ ಮಂಜೂರಾತಿ ನೀಡಲಾಗಿದೆ. 1940 ಮಂಜೂರಾತಿ ಪ್ರಕ್ರಿಯೆಯಲ್ಲಿದ್ದು, ಇನ್ನು 2420 ಬಾಕಿ ಉಳಿದಿವೆ. ಶೇ.34 ರಷ್ಟು ಮಾತ್ರ ಪ್ರಗತಿ ಸಾಧನೆಯಾಗಿರುವುದನ್ನು ಕಂಡು ಜಿಲ್ಲಾಧಿಕಾರಿಗಳು ವಿಷಾಧ ವ್ಯಕ್ತಪಡಿಸಿದರು.

ನಗರ ಸ್ಥಳೀಯ ಸಂಸ್ಥೆಗಳಾದ ಅಮೀನಗಡದಲ್ಲಿ 155 ಅರ್ಜಿಗಳ ಪೈಕಿ 39, ಬಾದಾಮಿ 328 ಪೈಕಿ 73, ಬಾಗಲಕೋಟೆ 776 ಪೈಕಿ 157, ಬೆಳಗಲಿ 180 ಪೈಕಿ 164, ಬೀಳಗಿ 172 ಪೈಕಿ 88, ಗುಳೇದಗುಡ್ಡ 278 ಪೈಕಿ 67, ಹುನಗುಂದ 251 ಪೈಕಿ 72, ಇಳಕಲ್ 605 ಪೈಕಿ 256, ಜಮಖಂಡಿ 987 ಪೈಕಿ 343, ಕಮತಗಿ 152 ಪೈಕಿ 38, ಕೆರೂರ 350 ಪೈಕಿ 82, ಮಹಾಲಿಂಗಪೂರ 488 ಪೈಕಿ 42, ಮುಧೋಳ 654 ಪೈಕಿ 210, ರಬಕವಿ ಬನಹಟ್ಟಿ 948 ಪೈಕಿ 517 ಹಾಗೂ ತೇರದಾಳ 362 ಪೈಕಿ 186 ಫಲಾನುಭವಿಗಳಿಗೆ ಮಾತ್ರ ಸಾಲ ವಿತರಣೆಗೆ ಮಂಜೂರಾತಿ ನೀಡಲಾಗಿದೆ. ಉಳಿದವರಿಗೆ ಯಾಕೆ ನೀಡಿಲ್ಲವೆಂದು ಪ್ರಶ್ನಿಸಿದರು.

ಇದನ್ನೂ ಓದಿ: ಶುಲ್ಕ ಕಟ್ಟುವ ವಿಚಾರಕ್ಕೆ ವಾಗ್ವಾದ: ಖಾಸಗಿ ಶಾಲೆಯವರಿಂದ ವಿದ್ಯಾರ್ಥಿ ಹಾಗೂ ಪೋಷಕರ ಮೇಲೆ ಹಲ್ಲೆ ಆರೋಪ

ಬಾಕಿ ಸಾಲ ವಿತರಣೆಗೆ ಜಿಲ್ಲೆಯ 15 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಬೃಹತ್ ಸಾಲ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಫಲಾನುಭವಿಗಳಿಗೆ ಸಾಲ ವಿತರಣೆ ಕಾರ್ಯ ಫೆಬ್ರವರಿ 15 ರೊಳಗಾಗಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಾಲ ಮೇಳದಲ್ಲಿಯೇ ಫಲಾನುವಿಗಳಿಗೆ ಮಂಜೂರಾತಿ ಆದೇಶ ನೀಡುವ ವ್ಯವಸ್ಥೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗಿದೆ. ಫೆಬ್ರವರಿ 8 ರಂದು ಬಾಗಲಕೋಟೆಯ ಕಲಾಭವನದಲ್ಲಿ ಸಾಲ ಮೇಳ ಹಮ್ಮಿಕೊಳ್ಳುವಂತೆ ಸೂಚಿಸಿದರು.

ಜಿ.ಪಂ ಸಿಇಓ ಟಿ.ಭೂಬಾಲನ್ ಮಾತನಾಡಿ, ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳ ಒಂದಕ್ಕೊಂದು ವಿಲೀನಗೊಂಡ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗೆ ವರ್ಗಾವಣೆಯಾಗಬೇಕಾದ 14 ಮತ್ತು 15ನೇ ಹಣಕಾಸಿನ ಯೋಜನೆಯಡಿ ಸರ್ಕಾರದಿಂದ ನಿಗದಿಪಡಿಸಲಾದ ಅನುದಾನವನ್ನು ತಾಂತ್ರಿಕ ಕಾರಣಗಳಿಂದ ತಟಸ್ಥಗೊಂಡಿದೆ. ಸರ್ಕಾರ ಫೆಬ್ರವರಿ 15 ರೊಳಗಾಗಿ ವೆಚ್ಚ ಮಾಡಲು ಗಡುವು ನೀಡಿದ್ದು, ಬ್ಯಾಂಕರ್ಸ್‍ ಮುತುವರ್ಜಿ ವಹಿಸಿ ಹಣ ವರ್ಗಾವಣೆಗೆ ಕ್ರಮಕೈಗೊಳ್ಳಲು ತಿಳಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಉಕ್ಕಲಿ, ಕೆನರಾ ಬ್ಯಾಂಕಿನ ರಿಜನಲ್ ಮ್ಯಾನೇಜರ ವೈ.ಸತೀಶಬಾಬು, ಜಿಲ್ಲಾ ಅಗ್ರಣಿ ಬ್ಯಾಂಕ್‍ನ ವ್ಯವಸ್ಥಾಪಕ ಪಿ.ಗೋಪಾಲರೆಡ್ಡಿ ಸೇರಿದಂತೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಎಲ್ಲ ವಿಧದ ಬ್ಯಾಂಕ್ ವ್ಯವಸ್ಥಾಪಕರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.