ETV Bharat / sports

SAFF Championship: ಲೆಬನಾನ್​ 'ಶೂಟೌಟ್​' ಮಾಡಿದ ಭಾರತ ಫೈನಲ್​ಗೆ, 9ನೇ ಪ್ರಶಸ್ತಿ ಮೇಲೆ ಕಣ್ಣು!

author img

By

Published : Jul 2, 2023, 7:06 AM IST

ಸ್ಯಾಫ್​ ಚಾಂಪಿಯನ್​ಶಿಪ್​ ಫುಟ್ಬಾಲ್ ಸೆಮಿಫೈನಲ್‌ನ ನಿನ್ನೆಯ​ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ಲೆಬನಾನ್​ ವಿರುದ್ಧ ಶೂಟೌಟ್​ನಲ್ಲಿ ಗೆದ್ದ ಭಾರತ ಫೈನಲ್​ ತಲುಪಿತು. ಜುಲೈ 4ರಂದು ಕುವೈತ್​ ಎದುರು ಪ್ರಶಸ್ತಿ ಸುತ್ತಿನ ಪೈಪೋಟಿ​ ನಡೆಯಲಿದೆ.

ಸ್ಯಾಫ್​ ಚಾಂಪಿಯನ್​ಶಿಪ್​
ಸ್ಯಾಫ್​ ಚಾಂಪಿಯನ್​ಶಿಪ್​

ಬೆಂಗಳೂರು: ಭರ್ತಿಯಾಗಿದ್ದ ಕಂಠೀರವ ಕ್ರೀಡಾಂಗಣದಲ್ಲಿ ಸಾವಿರಾರು ಅಭಿಮಾನಿಗಳ ನಿರೀಕ್ಷೆ ಈಡೇರಿದೆ. ಶನಿವಾರ ರಾತ್ರಿ ಇಲ್ಲಿ ನಡೆದ ಸ್ಯಾಫ್​ ಚಾಂಪಿಯನ್​ಶಿಪ್​ನ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಪುರುಷರ ಫುಟ್ಬಾಲ್​ ತಂಡ ಲೆಬನಾನ್​ ಅನ್ನು ಪೆನಾಲ್ಟಿ ಶೂಟೌಟ್​ನಲ್ಲಿ 4-2 ಗೋಲುಗಳಿಂದ ಮಣಿಸಿ 13ನೇ ಬಾರಿಗೆ ಫೈನಲ್ ಪ್ರವೇಶಿಸಿತು. ಈ ಮೂಲಕ 9ನೇ ಪ್ರಶಸ್ತಿ ಗೆಲ್ಲುವತ್ತ ದಾಪುಗಾಲಿಟ್ಟಿದೆ.

ರೋಚಕ ಸೆಮಿಫೈನಲ್​ ಪಂದ್ಯದಲ್ಲಿ ಉಭಯ ತಂಡಗಳು ಮದಗಜಗಳಂತೆ ಹೋರಾಟ ನಡೆಸಿದವು. ನಿಗದಿತ 90 ನಿಮಿಷಗಳಲ್ಲಿ ಇತ್ತಂಡಗಳು ಒಂದೇ ಒಂದು ಗೋಲು ದಾಖಲಿಸಲಿಲ್ಲ. ಹೆಚ್ಚುವರಿ ಸಮಯದಲ್ಲೂ ಗೋಲು ಬರಲೇ ಇಲ್ಲ. 120 ನಿಮಿಷಗಳ ಗೋಲುರಹಿತ ಆಟದಿಂದಾಗಿ ಕೊನೆಗೆ ಪೆನಾಲ್ಟಿ ಶೂಟೌಟ್​ ಮೊರೆ ಹೋಗಲಾಯಿತು. ಇದರಲ್ಲಿ ಭಾರತ ತನ್ನ ಅದ್ಭುತ ಕಾಲ್ಚಳಕ ಪ್ರದರ್ಶಿಸಿ 4-2ರಿಂದ ಪಂದ್ಯ ಗೆದ್ದು ಸಂಭ್ರಮಾಚರಣೆ ಮಾಡಿತು.

ಗೋಲು ರಹಿತ ಆಟ: ಪಂದ್ಯಾರಂಭದಲ್ಲಿ ಲೆಬನಾನ್​ ಉತ್ತಮ ಪ್ರದರ್ಶನ ನೀಡಿತು. ಚೆಂಡಿನ ಮೇಲೆ ಹಿಡಿತ ಸಾಧಿಸಿ ಗೋಲು ಗಳಿಸಲು ಹಲವು ಪ್ರಯತ್ನಗಳನ್ನು ನಡೆಸಿತು. ಮೊದಲ 10 ನಿಮಿಷ ಭಾರತ ಚೆಂಡನ್ನೇ ಪಡೆದಿರಲಿಲ್ಲ. 2ನೇ ನಿಮಿಷದಲ್ಲಿ ಲೆಬನಾನ್​ ಗೋಲಿಗೆ ಯತ್ನಿಸಿ ವೈಫಲ್ಯ ಕಂಡಿತು. ಇದಾದ ಬಳಿಕ ಎಚ್ಚೆತ್ತು ಹಿಡಿತ ಸಾಧಿಸಿತು. 16ನೇ ನಿಮಿಷದಲ್ಲಿ ಎದುರಾಳಿ ಗೋಲಿನೆಡೆಗೆ ನುಗ್ಗಿ ಗೋಲು ಗಳಿಸಲು ಯತ್ನಿಸಿತಾದರೂ ಫಲ ಸಿಗಲಿಲ್ಲ. ಮೊದಲಾರ್ಧದಲ್ಲಿ ಉಭಯ ತಂಡಗಳು ನಡೆಸಿದ ಹಲವು ಪ್ರಯತ್ನಗಳ ಹೊರತಾಗಿಯೂ ಯಾವುದೇ ಗೋಲು ದಕ್ಕಲಿಲ್ಲ.

ಸುನಿಲ್​ ಚೆಟ್ರಿ ಆಟಕ್ಕೆ ಲೆಬನಾನ್​ ಬ್ರೇಕ್​: ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಭಾರತ ತಂಡದ ನಾಯಕ ಸುನಿಲ್​ ಚೆಟ್ರಿಯನ್ನು ಲೆಬನಾನ್​ ಮಹತ್ವದ ಪಂದ್ಯದಲ್ಲಿ ಕಟ್ಟಿ ಹಾಕಿತು. ಪಂದ್ಯದುದ್ದಕ್ಕೂ ಗೋಲು ಗಳಿಸಲು ಚೆಟ್ರಿ ನಡೆಸಿದ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿತು. ಚೆಟ್ರಿ 93ನೇ ಮತ್ತು 95ನೇ ನಿಮಿಷದಲ್ಲಿ ಎರಡು ಬಾರಿ ಗೋಲು ಗಳಿಸಬಹುದಿತ್ತು. ಆದರೆ, ಇದನ್ನು ಲೆಬನಾನ್​ ಯಶಸ್ವಿಯಾಗಿ ತಡೆಯಿತು. ದ್ವಿತೀಯಾರ್ಧದಲ್ಲಿಯೂ ಎರಡೂ ತಂಡಗಳಿಗೆ ಯಾವುದೇ ಗೋಲು ಬಾರಿಸಲು ಸಾಧ್ಯವಾಗಲಿಲ್ಲ.

ಶೂಟೌಟ್​ ಹೀಗಿತ್ತು...: 120 ನಿಮಿಷ ಆಟ ಮುಗಿದರೂ ಯಾವುದೇ ತಂಡಕ್ಕೆ ಗೋಲು ಸಿಗದ ಕಾರಣ ಪೆನಾಲ್ಟಿ ಶೂಟೌಟ್​ ನಡೆಸಲಾಯಿತು. ಭಾರತ ತಂಡ ಸ್ಥಳೀಯ ಅಭಿಮಾನಿಗಳ ಭಾರೀ ಬೆಂಬಲದ ಮಧ್ಯೆ ಶೂಟೌಟ್​ಗಿಳಿಯಿತು. ಮೊದಲ ಯತ್ನದಲ್ಲೇ ಭಾರತದ ನಾಯಕ ಸುನಿಲ್​ ಚೆಟ್ರಿ ಗೋಲು ಗಳಿಸಿದರು. ಲೆಬನಾನ್​ ತಂಡದ ನಾಯಕ ಮಾಟೌಕ್​ರ ಯತ್ನವನ್ನು ಭಾರತದ ಗೋಲಿ ಗುರ್​ಪ್ರೀತ್ ಸಂಧು ತಡೆದರು.

ಇದರಿಂದ ಆರಂಭದಲ್ಲೇ ಮುನ್ನಡೆ ಸಾಧಿಸಿತು. ಬಳಿಕ ಅನ್ವರ್ ಅಲಿ, ಮಹೇಶ್ ಸಿಂಗ್ ಮತ್ತು ಉದಾಂತ ಸಿಂಗ್ ಭಾರತಕ್ಕೆ ಗೋಲು ತಂದರು. ಅತ್ತ ಲೆಬನಾನ್​ 4 ಪ್ರಯತ್ನಗಳಲ್ಲಿ ವಾಲಿದ್ ಶೌರ್ ಮತ್ತು ಮೊಹಮ್ಮದ್ ಸಾಡೆಕ್ ಮಾತ್ರ ಗೋಲು ಗಳಿಸಿದ್ದರಿಂದ 4-2 ರಲ್ಲಿ ಸೋಲು ಕಂಡರು.ಇತ್ತೀಚೆಗೆ ಒಡಿಶಾದಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್‌ ಕಪ್‌ನಲ್ಲಿ 2-0 ಅಂತರದಿಂದ ಲೆಬನಾನ್‌ ವಿರುದ್ಧ ಭಾರತ ಗೆಲುವು ಸಾಧಿಸಿತ್ತು. ಲೆಬನಾನ್​ ವಿರುದ್ಧ ಸತತ ಎರಡನೇ ಗೆಲುವು ಇದಾಗಿದೆ.

ಜುಲೈ 4ರಂದು ಫೈನಲ್​ ಪಂದ್ಯ: ಲೆಬನಾನ್​ ಮಣಿಸಿ 13ನೇ ಬಾರಿಗೆ ಫೈನಲ್​ಗೆ ಬಂದಿರುವ ಬಲಿಷ್ಠ ಭಾರತ ತಂಡ ಜುಲೈ 4 ರಂದು(ಮಂಗಳವಾರ) ಕುವೈತ್​ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಸೆಮಿಫೈನಲ್​ಲ್ಲಿ ಕುವೈತ್​ ಬಾಂಗ್ಲಾದೇಶವನ್ನು 1-0 ಗೋಲಿನಿಂದ ಸೋಲಿಸಿತ್ತು. 8 ಬಾರಿಯ ಚಾಂಪಿಯನ್​ ಭಾರತ 9ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಹಿಂದಿನ 13 ಆವೃತ್ತಿಗಳಲ್ಲಿ 8 ಬಾರಿ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದೆ. 2003ರಲ್ಲಿ ಮಾತ್ರ ಸೆಮಿಫೈನಲ್​ ತಲುಪಿರಲಿಲ್ಲ.

ಇದನ್ನೂ ಓದಿ; West Indies Out Of World Cup: ಏಕದಿನ ವಿಶ್ವಕಪ್‌ನಿಂದ ಹೊರ ಬಿದ್ದ ವೆಸ್ಟ್ ಇಂಡೀಸ್.. ಅರ್ಹತೆ ಕಳೆದುಕೊಂಡ ಚಾಂಪಿಯನ್​ ತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.