ETV Bharat / sports

ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್: ಕಾಮನ್​ವೆಲ್ತ್​ ಬಳಿಕ ಫೈನಲ್‌ ಪ್ರವೇಶಿಸಿದ ಪಿ.ವಿ.ಸಿಂಧು

author img

By

Published : Apr 2, 2023, 12:31 PM IST

ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್​ ಪಿ.ವಿ.ಸಿಂಧು ಫೈನಲ್​ ತಲುಪಿದ್ದು, ಈ ವರ್ಷದ ಮೊದಲ ಅಂತಿಮ ಸುತ್ತಿನ ಪಂದ್ಯ ಇದಾಗಿದೆ. ಕಳೆದ ನಾಲ್ಕು ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರು.

ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್
ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್

ಮ್ಯಾಡ್ರಿಡ್: ಎರಡು ಬಾರಿಯ ಒಲಂಪಿಕ್ ಪದಕ ವಿಜೇತೆ, ಭಾರತದ ತಾರಾ ಶಟ್ಲರ್​ ಪಿ.ವಿ.ಸಿಂಧು ಅವರು ಶನಿವಾರ ಇಲ್ಲಿ ನಡೆದ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಸೂಪರ್ 300 ಟೂರ್ನ್​ಮೆಂಟ್‌ನ ಫೈನಲ್​ ತಲುಪಿದ್ದಾರೆ. ಸಿಂಗಾಪುರದ ಯೆಯೊ ಜಿಯಾ ಮಿನ್ ವಿರುದ್ಧ ನಡೆದ ಸೆಮಿಫೈನಲ್​ನಲ್ಲಿ ನೇರ ಗೇಮ್‌ಗಳ ಜಯ ಸಾಧಿಸುವ ಮೂಲಕ ವರ್ಷದ ಮೊದಲ ಪ್ರಶಸ್ತಿ ಸುತ್ತಿಗೆ ತೇರ್ಗಡೆ ಹೊಂದಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್​ನಲ್ಲಿ 11 ನೇ ಶ್ರೇಯಾಂಕದ ಸಿಂಧು 48 ನಿಮಿಷಗಳ ಕಠಿಣ ಹೋರಾಟ ನಡೆಸಿ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಕೆಳ ಶ್ರೇಯಾಂಕದ ಸಿಂಗಾಪುರದ ಶಟ್ಲರ್ ವಿರುದ್ಧ 24-22, 22- 20 ಅಂತರದಿಂದ ರೋಚಕ ಗೆಲುವು ಸಾಧಿಸಿದರು.

ಪಂದ್ಯದಲ್ಲಿ ಉಭಯ ಆಟಗಾರ್ತಿಯರು ಸಮಬಲ ಸಾಧಿಸಿದರು. ಮೊದಲ ಸೆಟ್​​ನಲ್ಲಿ ಸಿಂಗಾಪುರದ ಶಟ್ಲರ್ ಯೆಯೊ ಆರಂಭದಲ್ಲೇ 4-0 ಅಂತರದ ಮುನ್ನಡೆ ಪಡೆದರು. ಆಟ ಮುಂದುವರಿದಂತೆ 15-20 ರಲ್ಲಿ ಮುನ್ನಡೆ ಪಡೆದು ಸೆಟ್​ ಗೆಲುವಿನ ಸನಿಹದಲ್ಲಿದ್ದರು. ಆದರೆ, ಈ ವೇಳೆ ತಮ್ಮ ಕೌಶಲ್ಯ ಪ್ರದರ್ಶಿಸಿದ ಭಾರತೀಯ ಶಟ್ಲರ್​ ಸಿಂಧು 20-20 ರಲ್ಲಿ ಸಮಬಲ ಸಾಧಿಸಿದರು. ಇದಾದ ಬಳಿಕವೂ ಪಟ್ಟು ಬಿಡದ ಆಟಗಾರ್ತಿಯರು 22-22 ರಲ್ಲಿ ಸಾಗಿದರು. ಕೊನೆಗೆ ಸಿಂಧು ಚಾಣಾಕ್ಷ್ಯತನದಿಂದ ಗೇಮ್​ ಪಾಯಿಂಟ್​ ಪಡೆದು 24-22 ರಲ್ಲಿ ಸೆಟ್​ ಜಯಿಸಿದರು.

ರೋಚಕ ಗೇಮ್​: ಎರಡನೇ ಗೇಮ್‌ನಲ್ಲೂ ಸಿಂಧು 1-4 ರಿಂದ ಆರಂಭಿಕ ಹಿನ್ನಡೆ ಅನುಭವಿಸಿದರು. ಮಧ್ಯಂತರದಲ್ಲಿ 11-6 ಅಂತರ ಕಾಪಾಡಿಕೊಂಡು 5 ಪಾಯಿಂಟ್‌ಗಳ ಮುನ್ನಡೆ ಸಾಧಿಸಿದರು. ಈ ಹಂತದಲ್ಲಿ ವಿಶ್ವ ಶ್ರೇಯಾಂಕದಲ್ಲಿ 33 ನೇ ಸ್ಥಾನದಲ್ಲಿರುವ ಯೆಯೊ ಜಿಯಾ ಮಿನ್​ ತಿರುಗಿಬಿದ್ದು 17-17 ರಲ್ಲಿ ಸಮಬಲ ಸಾಧಿಸಿದರು. ಸುಂದರ ಡ್ರಾಪ್ ಶಾಟ್​ಗಳ ಮೂಲಕ ಪಾಯಿಂಟ್​ ಗಳಿಸಿದರು.

ತಕ್ಷಣವೇ ಎಚ್ಚೆತ್ತ ಸಿಂಧು ಸತತ ಎರಡು ಪಾಯಿಂಟ್​ ಗಳಿಸಿದರು. ಪಂದ್ಯ ಗೆಲ್ಲಲು 2 ಪಾಯಿಂಟ್​ ಇದ್ದಾಗ, ಸಿಂಗಾಪುರ ಆಟಗಾರ್ತಿ ಸ್ವಯಂಕೃತ ಅಪರಾಧ ಎಸಗಿ ವೈಡ್ ಡ್ರೈವಿಂಗ್ ಮಾಡುವ ಮೂಲಕ ಭಾರತೀಯ ಆಟಗಾರ್ತಿ ಮುಂದೆ ಮಂಡಿಯೂರಿದರು. ಸಿಂಧು ಈ ಸೆಟ್​ ಅನ್ನು 22-20 ರಲ್ಲಿ ಗೆಲುವು ಸಾಧಿಸಿದರು.

ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಚಿನ್ನ ಗೆದ್ದ ನಂತರ ಸಿಂಧುಗೆ ಇದು ಮೊದಲ ಫೈನಲ್ ಆಗಿದೆ. ಗಾಯದಿಂದಾಗಿ ದೀರ್ಘ ಕಾಲ ಅಂಗಳದಿಂದ ಹೊರಗುಳಿದಿದ್ದ ಸಿಂಧು ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಮೂಲಕ ಮತ್ತೆ ಸ್ಪರ್ಧಾ ಕಣಕ್ಕೆ ಇಳಿದಿದ್ದಾರೆ. ಈ ಋತುವಿನಲ್ಲಿ ಫಾರ್ಮ್‌ಗಾಗಿ ಹೆಣಗಾಡುತ್ತಿರುವ ಸಿಂಧುಗೆ ಈ ಗೆಲುವು ದೊಡ್ಡ ಸ್ಥೆರ್ಯ ನೀಡಿದೆ. ಡಬಲ್​ ಒಲಿಂಪಿಕ್ಸ್​ ಪದಕ ಗೆದ್ದಿದ್ದ ಆಟಗಾರ್ತಿ 2016 ರಲ್ಲಿ ಮೊದಲ ಬಾರಿಗೆ ಟಾಪ್ 10 ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಕೆಲ ದಿನಗಳ ಹಿಂದೆ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ, ಮೊದಲ ಸುತ್ತಿನಲ್ಲೆ ಹೊರಬಿದ್ದಿದ್ದರು. ಈ ತಿಂಗಳ ಆರಂಭದಲ್ಲಿ ನಡೆದ ಸ್ವಿಸ್ ಓಪನ್​ನಲ್ಲಿ ಉತ್ತಮವಾಗಿ ಆಡದೇ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ಜನವರಿಯಲ್ಲಿ ನಡೆದ ಇಂಡಿಯನ್ ಓಪನ್ ಮತ್ತು ಮಲೇಷ್ಯಾ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.

ಸಿಂಧು- ತುಂಜುಂಗ್​ ಮಧ್ಯೆ ಫೈನಲ್: ಫೈನಲ್​ನಲ್ಲಿ ಅವರು ಇಂಡೋನೇಷ್ಯಾದ ಜಾರ್ಜಿಯಾ ಮರಿಸ್ಕಾ ತುಂಜುಂಗ್​ ಅವರ ವಿರುದ್ಧ ಸೆಣಸಾಡಲಿದ್ದಾರೆ. 2ನೇ ಸೆಮಿಫೈನಲ್​ನಲ್ಲಿ ಜಾರ್ಜಿಯಾ ಅವರು ಸ್ಪೇನ್​ನ ಆಟಗಾರ್ತಿ, ವಿಶ್ವದ 7 ನೇ ಶ್ರೇಯಾಂಕಿತೆ ಕ್ಯಾರೋಲಿನಾ ಮರಿನ್​ ವಿರುದ್ಧ 10-21, 21-15, 21-10 ಅರಂತದಿಂದ ಗೆಲುವು ಸಾಧಿಸಿದರು. ಜಾರ್ಜಿಯಾ ಮರಿಸ್ಕಾ ತುಂಜುಂಗ್​ ವಿಶ್ವ ಶ್ರೇಯಾಂಕದಲ್ಲಿ 12 ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: 1960 ರ ದಶಕದ ಸ್ಟಾರ್​ ಕ್ರಿಕೆಟಿಗ ಸಲೀಂ ದುರಾನಿ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.