ETV Bharat / sports

ಪ್ರೋ ಕಬಡ್ಡಿ ಲೀಗ್: ಯು ಮುಂಬಾಗೆ ಸೋಲುಣಿಸಿ 3ನೇ ಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್‌

author img

By

Published : Oct 23, 2022, 7:50 AM IST

ಪ್ರೋ ಕಬಡ್ಡಿ ಲೀಗ್​ನ ನಿನ್ನೆಯ ಹಣಾಹಣಿಯಲ್ಲಿ ಬೆಂಗಳೂರು ಬುಲ್ಸ್‌ ತಂಡವು ಯು ಮುಂಬಾ ವಿರುದ್ಧ ಅಮೋಘ ಗೆಲುವು ಸಾಧಿಸಿದೆ.

pro-kabaddi-league-bengaluru-bulls-beat-u-mumba-team
ಪ್ರೋ ಕಬಡ್ಡಿ ಲೀಗ್: ಯು ಮುಂಬಾಗೆ ಸೋಲುಣಿಸಿ ಮೂರನೇ ಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್‌

ಬೆಂಗಳೂರು: ಪ್ರೋ ಕಬಡ್ಡಿ ಲೀಗ್​ನಲ್ಲಿ ಶನಿವಾರ ಯು ಮುಂಬಾ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲಾರ್ಧದಲ್ಲಿ 11-24 ಅಂತರದ ಹಿನ್ನಡೆ ಹೊಂದಿದ್ದ ಬೆಂಗಳೂರು ಬುಲ್ಸ್‌ ದ್ವಿತಿಯಾರ್ಧದಲ್ಲಿ ಪುಟಿದೆದ್ದು 42-32 ಅಂತರದ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಬುಲ್ಸ್‌ ಪರ ಭರತ್‌ ರೈಡಿಂಗ್‌ನಲ್ಲಿ 16 ಅಂಕ ಗಳಿಸಿ ಜಯದ ರೂವಾರಿ ಎನಿಸಿದರು. ಇನ್ನೊಂದೆಡೆ ವಿಕಾಶ್‌ ಕಂಡೋಲ 8 ಅಂಕ ಪಡೆದು ಅದ್ಭುತ ಜಯಕ್ಕೆ ನೆರವಾದರು. ದ್ವಿತಿಯಾರ್ಧದಲ್ಲಿ ಬೆಂಗಳೂರು 31 ಅಂಕ ದೋಚುವ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.

Pro Kabaddi League: Bengaluru Bulls beat U Mumba
ಯು ಮುಂಬಾ - ಬೆಂಗಳೂರು ಬುಲ್ಸ್‌ ಪಂದ್ಯ

ದ್ವಿತಿಯಾರ್ಧದ ಆರಂಭದಲ್ಲೇ ಯು ಮುಂಬಾ ತಂಡವನ್ನು ಆಲೌಟ್‌ ಮಾಡಿದ ಬುಲ್ಸ್​, 21 ಅಂಕಗಳೊಂದಿಗೆ ಸವಾಲು ಮುಂದುವರೆಸಿತು. ರೈಡಿಂಗ್‌ನಲ್ಲಿ ಭರತ್‌ 12 ಅಂಕ ಗಳಿಸಿ ಸೂಪರ್‌ ಟೆನ್‌ ಸಾಧನೆ ಮಾಡಿದರು. 11 ನಿಮಿಷಗಳ ಆಟ ಬಾಕಿ ಇರುವಾಗ ಬೆಂಗಳೂರು ಎರಡನೇ ಸಲ ಯು ಮುಂಬಾ ತಂಡವನ್ನು ಆಲೌಟ್‌ ಮಾಡಿ 29-27ರಲ್ಲಿ ಮುನ್ನಡೆ ಸಾಧಿಸಿತು.

10 ನಿಮಿಷಗಳ ಆಟದಲ್ಲಿ ಬೆಂಗಳೂರು ಬುಲ್ಸ್‌ 18 ಅಂಕ ಗಳಿಸಿ ತಕ್ಕ ತಿರುಗೇಟು ನೀಡಿತು. ಭರತ್‌ 16 ರೈಡಿಂಗ್‌ ಅಂಕ ಗಳಿಸುವುದರೊಂದಿಗೆ ಬೆಂಗಳೂರು ಬುಲ್ಸ್‌ 42-32 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು. ಯು ಮುಂಬಾ ಪರ ಗುಮಾನ್‌ ಸಿಂಗ್‌ 11 ಅಂಕ ಪಡೆದರು.

Pro Kabaddi League: Bengaluru Bulls beat U Mumba
ಯು ಮುಂಬಾ - ಬೆಂಗಳೂರು ಬುಲ್ಸ್‌ ಹಣಾಹಣಿ

ಮೊದಲಾರ್ಧದಲ್ಲಿ ಯು ಮುಂಬಾ ಬೃಹತ್‌ ಮುನ್ನಡೆ: ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ಆತ್ಮವಿಶ್ವಾಸದಲ್ಲಿದ್ದ ಬೆಂಗಳೂರು ಬುಲ್ಸ್‌ ತಂಡ ಯು ಮುಂಬಾ ವಿರುದ್ಧ ಪ್ರಥಮಾರ್ಧದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ಯು ಮುಂಬಾ ಮೊದಲಾರ್ಧದಲ್ಲಿ 24-11 ಅಂತರದಲ್ಲಿ ಮುನ್ನಡೆ ಪಡೆದಿತ್ತು. ರೈಡಿಂಗ್‌ನಲ್ಲಿ ಗುಮಾನ್‌ ಸಿಂಗ್‌ 7 ಅಂಕ ಗಳಿಸಿ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ಆರಂಭದಿಂದಲೂ ಯು ಮುಂಬಾ ತಂಡದ ಪ್ರತಿಯೊಬ್ಬ ಆಟಗಾರರೂ ಅಂಕ ಗಳಿಸಿರುವುದು ಪಂದ್ಯದ ವಿಶೇಷವಾಗಿತ್ತು. ಲೆಫ್ಟ್‌ ಕಾರ್ನರ್‌ನಲ್ಲಿ ಮೋಹಿತ್‌ ಹಾಗೂ ಸುರಿಂದರ್‌ ಸಿಂಗ್‌ ಒಟ್ಟು 4 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ರೈಟ್‌ ಕಾರ್ನರ್‌ನಲ್ಲಿ ರಾಹುಲ್‌ ಸತ್ಪಾಲ್‌ 3 ಅಂಕಗಳನ್ನು ಗಳಿಸಿ ಬೆಂಗಳೂರು ಬುಲ್ಸ್‌ ತಂಡವನ್ನು ನಿಯಂತ್ರಿಸುವಲ್ಲಿ ಸಫಲರಾದರು. ಬೆಂಗಳೂರು ಬುಲ್ಸ್‌ ರೈಡಿಂಗ್‌ನಲ್ಲಿ ಕೇವಲ 9 ಅಂಕಗಳನ್ನು ಗಳಿಸಿತು. ಎರಡು ಬಾರಿ ಆಲೌಟ್‌ ಆಗುವ ಮೂಲಕ ಬೃಹತ್‌ ಹಿನ್ನಡೆ ಹೊಂದಿತ್ತು. ಟ್ಯಾಕಲ್‌ ವಿಭಾಗದಲ್ಲಿ ಸಂಪೂರ್ಣ ವಿಫಲಗೊಂಡು ಕೇವಲ 2 ಅಂಕ ಗಳಿಸಿತ್ತು.

ಇದನ್ನೂ ಓದಿ: T20 World Cup: ಗ್ಲೆನ್​ ಫಿಲಿಪ್ಸ್​​ರ ಫ್ಲೈಯಿಂಗ್ ಕ್ಯಾಚ್​ಗೆ ಸ್ಟೊಯಿನೀಸ್​ ಸ್ಟನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.