ETV Bharat / sports

ಜಾವೆಲಿನ್: ಡೈಮಂಡ್‌ ಲೀಗ್ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವಲ್ಲಿ ನೀರಜ್ ಚೋಪ್ರಾ ವಿಫಲ, 2ನೇ ಸ್ಥಾನಕ್ಕೆ ತೃಪ್ತಿ

author img

By ETV Bharat Karnataka Team

Published : Sep 17, 2023, 7:08 AM IST

Updated : Sep 17, 2023, 7:25 AM IST

Neeraj Chopra: ಭಾರತದ ಹೆಮ್ಮೆಯ ಚಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅಮೆರಿಕದಲ್ಲಿ ಶನಿವಾರ ನಡೆದ ಡೈಮಂಡ್ ಲೀಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ನೀರಜ್ ಚೋಪ್ರಾ
ನೀರಜ್ ಚೋಪ್ರಾ

ಯೂಜಿನ್ (ಅಮೆರಿಕ): ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರು ಡೈಮಂಡ್‌ ಲೀಗ್ ಚಾಂಪಿಯನ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ವಿಫಲರಾದರು. ಅಮೆರಿಕದ ಯೂಜಿನ್‌ನಲ್ಲಿ ನಡೆದ ಪಂದ್ಯದಲ್ಲಿ ಅವರು 83.80 ಮೀಟರ್ ದೂರ ಜಾವೆಲಿನ್‌ ಎಸೆಯುವ ಮೂಲಕ ಸಾಮಾನ್ಯ ಪ್ರದರ್ಶನ ನೀಡಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಇಲ್ಲಿನ ಹಾರ್ವರ್ಡ್ ಫೀಲ್ಡ್‌ನಲ್ಲಿ ಸ್ಪರ್ಧೆ ನಡೆಯುತ್ತಿದ್ದಾಗ ಗಾಳಿ ಬಲವಾಗಿ ಬೀಸುತ್ತಿತ್ತು. ಇದು 25 ವರ್ಷದ ಚೋಪ್ರಾ ಪ್ರದರ್ಶನಕ್ಕೂ ಅಡ್ಡಿಯಾಯಿತು. ಮೊದಲ ಪ್ರಯತ್ನಗಳಲ್ಲಿ ಅವರು ಫೌಲ್ ಆದರು. ಇವರ ಅತ್ಯುತ್ತಮ ಪ್ರಯತ್ನ ಎರಡನೇ ಎಸೆತದಲ್ಲಿ ದಾಖಲಾಯಿತು. ಚೋಪ್ರಾ 83.80 ಮೀ, 81.37 ಮೀ (ಫೌಲ್‌), 80.74 ಮತ್ತು 80.90 ಮೀ ದೂರ ಜಾವೆಲಿನ್ ಎಸೆದರು.

ಪ್ರಸಕ್ತ ಸೀಸನ್‌ನಲ್ಲಿ ಇದು ಚೋಪ್ರಾರ ಸಾಮಾನ್ಯ ಪ್ರದರ್ಶನವಾಗಿದೆ. 85 ಮೀಟರ್‌ಗಿಂತ ಕಡಿಮೆ ದೂರ ಭರ್ಜಿ ಎಸೆದಿದ್ದು ಕೂಡಾ ಈ ಕೂಟದಲ್ಲಿ ಮೊದಲು. 2022ರಲ್ಲಿ ಜೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ 88.44 ಮೀ ದೂರ ಎಸೆಯುವ ಮೂಲಕ ಚೋಪ್ರಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಜೆಕ್ ರಿಪಬ್ಲಿಕ್‌ನ ಜೇಕಬ್‌ ವಡ್ಲೇಜ್ ಚಾಂಪಿಯನ್‌: ಪ್ರಸ್ತುತ ವರ್ಷ, ಜೆಕ್ ರಿಪಬ್ಲಿಕ್ ದೇಶದ ಜೇಕಬ್‌ ವಡ್ಲೇಜ್ ಅವರು 84.24 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವುದರೊಂದಿಗೆ ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದು ಇವರು ಗಳಿಸಿದ 3ನೇ ಡೈಮಂಡ್‌ ಲೀಗ್ ಚಾಂಪಿಯನ್ ಪ್ರಶಸ್ತಿಯೂ ಹೌದು. ದೇಶವನ್ನು ಪ್ರತಿನಿಧಿಸುತ್ತಿದ್ದ 6 ಸ್ಪರ್ಧಿಗಳ ತಂಡವನ್ನು ಜೇಕಬ್‌ ಮುನ್ನಡೆಸಿದರು.

ಜೇಕಬ್‌ ವಡ್ಲೇಜ್ ಅವರು ಬುಡಾಪೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು 2017 ಮತ್ತು 2018 ರಲ್ಲಿ ನಡೆದ ಡೈಮಂಡ್‌ ಲೀಗ್ ಚಾಂಪಿಯನ್‌ಶಿಪ್‌ ಗೆದ್ದುಕೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದರು. ನಿನ್ನೆ ನಡೆದ ಡೈಮಂಡ್‌ ಲೀಗ್‌ ಪಂದ್ಯದ ಸ್ಥಳದಲ್ಲೇ 2022 ರ ವಿಶ್ವ ಚಾಂಪಿಯನ್‌ಶಿಪ್‌ ಪಂದ್ಯ ನಡೆದಿದ್ದು, ನೀರಜ್ ಚೋಪ್ರಾ ದ್ವಿತೀಯ ಸ್ಥಾನ ಪಡೆದಿದ್ದರು.

ಭಾರತದ ಹೆಮ್ಮೆಯ ಕ್ರೀಡಾಪಟು ಚೋಪ್ರಾ ವೈಯಕ್ತಿಕ ಅತ್ಯುತ್ತಮ ಎಂದು ಪರಿಗಣಿಸಲಾದ 89.94 ಮೀಟರ್ ದೂರ ಭರ್ಜಿ ಎಸೆದ ದಾಖಲೆ ಹೊಂದಿದ್ದಾರೆ. ದೋಹಾದಲ್ಲಿ ನಡೆದ ಎರಡು ಪಂದ್ಯಗಳು ಮತ್ತು ಇತ್ತೀಚೆಗೆ (ಕಳೆದ ತಿಂಗಳು) ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದಿದ್ದರು. ಅಷ್ಟೇ ಅಲ್ಲ, ನೀರಜ್‌ ಚೋಪ್ರಾ ಚಾವೆಲಿನ್ ಇತಿಹಾಸದಲ್ಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಕಿರೀಟ ಗೆದ್ದ ವಿಶ್ವದ ಏಕೈಕ ಆಟಗಾರರಾಗಿದ್ದಾರೆ.

ಚೋಪ್ರಾ ಮುಂದಿನ ತಿಂಗಳು ಹಾಂಗ್‌ಜೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನತ್ತ ತಮ್ಮ ದೃಷ್ಟಿ ನೆಟ್ಟಿದ್ದಾರೆ. 2028ರಲ್ಲಿ ಇಂಡೋನೇಷ್ಯಾ ನಡೆದ ಏಷ್ಯಾಡ್‌ ಕೂಟದಲ್ಲಿ ಸಾಧಿಸಿದ ಚಿನ್ನದ ಪದಕವನ್ನು ಅವರು ಉಳಿಸಿಕೊಳ್ಳಲು ಅಖಾಡಕ್ಕಿಳಿಯಲಿದ್ದಾರೆ. (ಪಿಟಿಐ)

ಇದನ್ನೂ ಓದಿ: Diamond League 2023 Final: ಡೈಮಂಡ್​ ಮೇಲೆ ಮತ್ತೆ ಕಣ್ಣಿಟ್ಟ ನೀರಜ್ ಚೋಪ್ರಾ

Last Updated : Sep 17, 2023, 7:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.