ETV Bharat / sports

ಯುರೋಪಿಯನ್ನರು ಪ್ರಾಬಲ್ಯ ಸಾಧಿಸಿದ ಕ್ರೀಡೆಯಲ್ಲಿ ನೀರಜ್, ನಾನು​ ಮೊದಲಿಗರೆಂಬುದು ಹೆಮ್ಮೆ: ಅರ್ಷದ್ ನದೀಮ್‌

author img

By ETV Bharat Karnataka Team

Published : Aug 28, 2023, 8:27 PM IST

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನ ಜಾವೆಲಿನ್​ ಥ್ರೋ ಫೈನಲ್​ನಲ್ಲಿ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್‌ ಬೆಳ್ಳಿ ಪದಕ ಗೆದ್ದಿದ್ದಾರೆ.

Neeraj Chopra -  Arshad Nadeem
Neeraj Chopra - Arshad Nadeem

ಕರಾಚಿ (ಪಾಕಿಸ್ತಾನ): ಮುಂದಿನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಕ್ಕಾಗಿ ಭಾರತದ ನೀರಜ್ ಚೋಪ್ರಾ ಮತ್ತು ನನ್ನ ನಡುವೆ ಕಠಿಣ ಪೈಪೋಟಿ ಏರ್ಪಡಲಿದೆ. ಆದರೆ ಯುರೋಪ್​ನಲ್ಲಿ ನಡೆದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿರುವುದು ಸಂತೋಷ ತಂದಿದೆ ಎಂದು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಸ್ಪರ್ಧಿ ಪಾಕಿಸ್ತಾನದ ಅರ್ಷದ್ ನದೀಮ್​ ಹೇಳಿದರು.

"ನೀರಜ್ ಮತ್ತು ನಾನು ಆರೋಗ್ಯಕರ ಸ್ಪರ್ಧೆ ಹೊಂದಿದ್ದೇವೆ. ನಾವು ಒಬ್ಬರನ್ನೊಬ್ಬರು ತುಂಬಾ ಗೌರವಿಸುತ್ತೇವೆ. ಪಾಕಿಸ್ತಾನ-ಭಾರತದ ಪೈಪೋಟಿ ಕೆಟ್ಟ ರೀತಿಯಲ್ಲಿ ಇಲ್ಲ. ಸಾಮಾನ್ಯವಾಗಿ ಯುರೋಪಿಯನ್​ ಪ್ರಾಬಲ್ಯವಿರುವ ಸ್ಪರ್ಧೆಯಲ್ಲಿ ನಾವಿಬ್ಬರೂ ಮುಂಚೂಣಿಗೆ ಬಂದಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ" ಎಂದು ನದೀಮ್ ತಿಳಿಸಿದರು.

ಕಳೆದ ವರ್ಷ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 90.18 ಮೀಟರ್‌ ದೂರ ಜಾವೆಲಿನ್ ಎಸೆದು ನದೀಮ್ ಚಿನ್ನ ಗೆದ್ದಿದ್ದರು. "ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಸ್ಪರ್ಧಿ ಚೋಪ್ರಾರ ವಿರುದ್ಧದ ಸೋಲು ನನಗೆ ಬೇಸರ ಉಂಟುಮಾಡಿಲ್ಲ" ಎಂದಿದ್ದಾರೆ. ಕಳೆದ ವರ್ಷ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಗಾಯದ ಕಾರಣ ನೀರಜ್​ ಚೋಪ್ರಾ ಸ್ಪರ್ಧಿಸಿರಲಿಲ್ಲ. ಅಂದು ನದೀಮ್​ ಯುರೋಪಿಯನ್​ ರಾಷ್ಟ್ರಗಳ ಅಥ್ಲೀಟ್‌ಗಳನ್ನು ಮಣಿಸಿ ಚಿನ್ನ ಗೆದ್ದಿದ್ದರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ ಫೈನಲ್​ನಲ್ಲಿ ನೀರಜ್​ ನದೀಮ್​ರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದರು.

‘‘ಮೊಣಕೈ ಶಸ್ತ್ರಚಿಕಿತ್ಸೆಗೊಳಗಾಗಿ ಸುಮಾರು ಒಂದು ವರ್ಷದ ಬಳಿಕ ಅಂತರರಾಷ್ಟ್ರೀಯ ಸ್ಪರ್ಧೆಗೆ ಮರಳಿರುವ ನಾನು 87.82 ಮೀಟರ್ ದೂರ ತಲುಪಿರುವುದು ಅತ್ಯಂತ ತೃಪ್ತಿದಾಯಕ ಸಾಧನೆ. ನಾನು ಕ್ರಿಕೆಟಿಗನಾಗಲು ಬಯಸಿದ್ದೆ. ಆದರೆ ನನ್ನ ಸಹೋದರರು ಮತ್ತು ಸ್ಪೋರ್ಟ್ಸ್ ಮಾಸ್ಟರ್ ನನಗೆ ಉನ್ನತ ಅಥ್ಲೀಟ್ ಆಗಲು ಮೈಕಟ್ಟು ಮತ್ತು ತ್ರಾಣವಿದೆ ಎಂದು ಹೇಳಿದರು. ಅದಕ್ಕಾಗಿ ಈ ಕ್ರೀಡೆಯನ್ನು ಆಯ್ದುಕೊಂಡೆ" ಎಂದು ಹೇಳಿದರು.

"ನಾನು ನನ್ನ ದೇಶಕ್ಕಾಗಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲು ಬಯಸುತ್ತೇನೆ. ಇದಕ್ಕೆ ಸಾಕಷ್ಟು ಕಠಿಣ ಪರಿಶ್ರಮ, ತರಬೇತಿ ಮತ್ತು ಅತ್ಯುತ್ತಮ ಸಲಕರಣೆಗಳ ಅಗತ್ಯವಿದೆ. ಆದರೆ ಈಗ ನಾನು ಅತ್ಯುತ್ತಮ ಎದುರಾಳಿಯ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸಲು ಸಮರ್ಥನಾಗಿದ್ದೇನೆ ಎಂದು ನನಗೆ ತಿಳಿದಿದೆ" ಎಂದರು.

"ನನಗೆ ಉನ್ನತ ತರಬೇತುದಾರರು, ವಿದೇಶಿ ತರಬೇತಿ ಮತ್ತು ಅತ್ಯುತ್ತಮ ಸಲಕರಣೆಗಳಿಲ್ಲ. ಏಕೆಂದರೆ ಪಾಕಿಸ್ತಾನ ಅಥ್ಲೆಟಿಕ್ಸ್ ಫೆಡರೇಶನ್ ಯಾವಾಗಲೂ ಹಣದ ಕೊರತೆಯಲ್ಲೇ ಇರುತ್ತದೆ. ಪಾಕ್​ನಲ್ಲಿ ಕ್ರೀಡೆಗಳೆಂದರೆ ಕ್ರಿಕೆಟ್​ಗೆ ಮಾತ್ರ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ನನಗೆ ತರಬೇತಿ ನೀಡಿದ ವಾಪ್ಡಾಗೆ ಕೃತಜ್ಞನಾಗಿದ್ದೇನೆ" ಎಂದು ಅವರು ತಿಳಿಸಿದ್ದಾರೆ. (ಪಿಟಿಐ)

ಇದನ್ನೂ ಓದಿ:'ತಿರಂಗದ ಮೇಲೆ ಆಟೋಗ್ರಾಫ್​ ಹಾಕಲಾರೆ': ಮೆಚ್ಚುಗೆ ಗಳಿಸಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.