ETV Bharat / sports

ಮಲೇಷ್ಯಾ ಓಪನ್: ಭಾರತದ ಸಾತ್ವಿಕ್‌-ಚಿರಾಗ್​ ಜೋಡಿ ರನ್ನರ್​ಅಪ್​

author img

By ETV Bharat Karnataka Team

Published : Jan 14, 2024, 7:53 PM IST

ಮಲೇಷ್ಯಾ ಓಪನ್‌ ಫೈನಲ್‌ನಲ್ಲಿ ಭಾರತದ ಸಾತ್ವಿಕ್‌ ಮತ್ತು ಚಿರಾಗ್ ಜೋಡಿ ಚೀನಾದ ವಿರುದ್ಧ 21-9, 18-21, 17-21 ಅಂತರದಿಂದ ಸೋಲು ಅನುಭವಿಸಿದರು.

Etv Bharatmalaysia-open-satwik-chirag-end-as-runner-up
ಮಲೇಷ್ಯಾ ಓಪನ್ 2024: ಚೀನಿಯರ ವಿರುದ್ಧ ಸೋತು ರನ್ನರ್​ಅಪ್​ ಆದ ಸಾತ್ವಿಕ್‌-ಚಿರಾಗ್​ ಜೋಡಿ

ಮಲೇಷ್ಯಾ: ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಮಲೇಷ್ಯಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್​ ಕೂಟದ ಪುರುಷರ ಡಬಲ್ಸ್ ಫೈನಲ್‌ ಪಂದ್ಯದಲ್ಲಿ ಸೋತು ರನ್ನರ್​ಅಪ್​ಗೆ ತೃಪ್ತಿಪಟ್ಟರು. ಈ ಜೋಡಿ ವಿಶ್ವ ನಂಬರ್​ 1 ಚೀನಾದ ವೀ ಕೆಂಗ್ ಲಿಯಾಂಗ್ ಮತ್ತು ವಾಂಗ್‌ ಚಾಂಗ್‌ ವಿರುದ್ಧ ಸೋಲು ಅನುಭವಿಸಿತು.

ಜನವರಿ 14ರ ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ 21-9ರ ಅಂತರದಿಂದ ಮೊದಲ ಸೆಟ್​ ಗೆದ್ದ ಭಾರತೀಯ ಆಟಗಾರರು, ಬಳಿಕ 2 ಮತ್ತು 3ನೇ ಸೆಟ್​​ನಲ್ಲಿ ಅದೇ ವೇಗವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಚೀನಾದ ವಾಂಗ್ ಚಾಂಗ್ ಮತ್ತು ವೀ ಕೆಂಗ್ ಲಿಯಾಂಗ್ ಜೋಡಿ ಎರಡನೇ ಸೆಟ್ ಅನ್ನು 21-18 ಅಂತರದಿಂದ ಕೈವಶ ಮಾಡಿಕೊಂಡರು. ಪಂದ್ಯದ ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ 10-3 ಅಂತರದಿಂದ ಮುನ್ನಡೆ ಸಾಧಿಸಿದರು.

ಬಳಿಕ ವಿಜೃಂಭಿಸಿದ ಚೀನಾ ಜೋಡಿ 12-10 ಅಂತರದ ಮುನ್ನಡೆ ಕಾಯ್ದುಕೊಂಡಿತು. ಲಿಯಾಂಗ್ ಅದ್ಭುತ ಕ್ರಾಸ್ಕೋರ್ಟ್ ಡ್ರಾಪ್ ಶಾಟ್ ಮೂಲಕ ಚೀನಾ 20-16 ಮುನ್ನಡೆ ಗಳಿಸಿತು. ಭಾರತೀಯ ಜೋಡಿಗೆ ಕಮ್​ಬ್ಯಾಕ್​ ಮಾಡಲು ಅವಕಾಶ ನೀಡಿದ ಚೀನಾ ಕೊನೆಗೆ 21-17 ಅಂತರದಲ್ಲಿ ಪಂದ್ಯ ಗೆದ್ದು ಚಾಂಪಿಯನ್ ಆಯಿತು.

ಇತ್ತೀಚೆಗಷ್ಟೇ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ 'ಖೇಲ್ ರತ್ನ' ಪ್ರಶಸ್ತಿಗೆ ಸಾತ್ವಿಕ್ ಮತ್ತು ಚಿರಾಗ್ ಭಾಜನರಾಗಿದ್ದರು. ಇವರು 2023ರಲ್ಲಿ ನಡೆದ ಹಲವು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಮುಖೇನ ಉತ್ತಮ ಫಾರ್ಮ್​ನೊಂದಿಗೆ ಮಲೇಷ್ಯಾ ಓಪನ್‌ ಸೂಪರ್‌ ಬ್ಯಾಡ್ಮಿಂಟನ್ ಕೂಟಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, ಫೈನಲ್‌ನಲ್ಲಿ ಸೋತು​, ಸ್ವಲ್ಪದರಲ್ಲೇ ಪ್ರಶಸ್ತಿ ಕಳೆದುಕೊಂಡರು.

ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್ 2024ರ ಅರ್ಹತಾ ಪಂದ್ಯ; ಭಾರತಕ್ಕೆ ಅಮೆರಿಕದ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.