ETV Bharat / sports

ರೈಲು ದುರಂತದಲ್ಲಿ ಮಡಿದವರಿಗೆ ಹಾಕಿ ಆಟಗಾರರ ಕಂಬನಿ: ಪಂದ್ಯಕ್ಕೂ ಮುನ್ನ ಮೌನಾಚರಣೆ

author img

By

Published : Jun 4, 2023, 9:46 AM IST

ಒಡಿಶಾದಲ್ಲಿ ನಡೆದ ಭೀಕರ ತ್ರಿವಳಿ ರೈಲು ದುರಂತಕ್ಕೆ ಹಾಕಿ ಆಟಗಾರರು ಸಂತಾಪ ಸೂಚಿಸಿದರು. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮೌನಾಚರಣೆ ಮಾಡಿದರು.

ಒಡಿಶಾ ರೈಲು ದುರಂತಕ್ಕೆ ಕಂಬನಿ ಮಿಡಿದ ಹಾಕಿ ಆಟಗಾರರು
ಒಡಿಶಾ ರೈಲು ದುರಂತಕ್ಕೆ ಕಂಬನಿ ಮಿಡಿದ ಹಾಕಿ ಆಟಗಾರರು

ಲಂಡನ್: ಒಡಿಶಾದಲ್ಲಿ ತ್ರಿವಳಿ ರೈಲುಗಳ ಭೀಕರ ಡಿಕ್ಕಿ ದುರಂತದಲ್ಲಿ 288 ಜನರು ಬಲಿಯಾಗಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಬಗ್ಗೆ ದೇಶವಲ್ಲದೇ, ವಿಶ್ವವೇ ಕಣ್ಣೀರಾಗಿದೆ. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಎಫ್​ಐಎಚ್​ ಪ್ರೊ ಲೀಗ್​ ಹಾಕಿಯಲ್ಲಿ ಭಾರತೀಯ ಆಟಗಾರರು ದುರಂತಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಿ ಸಂತಾಪ ಸೂಚಿಸಿದರು. ಅಲ್ಲದೇ, ತಂಡ ಸದಸ್ಯರು ಕಪ್ಪು ಪಟ್ಟಿ ಧರಿಸಿ ಪಂದ್ಯವನ್ನು ಆಡಿದರು. ಭಾರತ ಮತ್ತು ಇಂಗ್ಲೆಂಡ್​ನ ಧ್ವಜಗಳನ್ನು ಕೆಳಮಟ್ಟದಲ್ಲಿ ಹಾರಿಸಿ ಶೋಕ ವ್ಯಕ್ತಪಡಿಸಲಾಯಿತು.

ಭಾರತೀಯ ಹಿರಿಯ ಪುರುಷರ ಹಾಕಿ ತಂಡದ ಸದಸ್ಯರು ನಿನ್ನೆಯ ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕೂ ಮೊದಲು ಒಡಿಶಾ ರೈಲು ದುರಂತಕ್ಕೆ ಕಂಬನಿ ಮಿಡಿದರು. ಮೈದಾನದಲ್ಲಿಯೇ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿದರು. ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಗಳು ಅನಾಹುತವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು. ಅಲ್ಲದೇ, ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿ ಆಟವಾಡಿದರು.

ಭೀಕರ ದುರಂತ: ಜೂನ್​ 2 ರಂದು (ಶುಕ್ರವಾರ) ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಜವರಾಯ ಕಾದು ಕುಳಿತಿದ್ದ. ನಿಲ್ದಾಣದ ಹೊರಭಾಗದಲ್ಲಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್​ ರೈಲು ಚಲಿಸುತ್ತಿದ್ದಾಗಲೇ ಹಳಿ ತಪ್ಪಿದೆ. ಇದರಿಂದ ಇನ್ನೊಂದು ಲೈನ್​ನಲ್ಲಿ ನಿಂತಿದ್ದ ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಗೂಡ್ಸ್​ ಮತ್ತು ಕೋರಮಂಡಲ್​ ರೈಲಿನ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದಿವೆ.

ಅದೇ ಸಮಯಕ್ಕೆ ವಿರುದ್ಧ ದಿಕ್ಕಿನಿಂದ ಎಸ್‌ಎಂವಿಪಿ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಯಶವಂತಪುರದಿಂದ ಬಂದ ಹೌರಾ ಎಕ್ಸ್​ಪ್ರೆಸ್​ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ವೇಗವಾಗಿ ಡಿಕ್ಕಿಯಾಗಿದೆ. ಇದರಿಂದ ಭೀಕರತೆ ಉಂಟಾಗಿದೆ. ಮೂರು ರೈಲುಗಳ ನಡುವಿನ ತಿಕ್ಕಾಟದಲ್ಲಿ ಈವರೆಗೆ 288 ಪ್ರಾಣ ಪಕ್ಷಿಗಳು ಹಾರಿ ಹೋಗಿವೆ. ಘಟನಾ ಸ್ಥಳದಲ್ಲಿ ರಾಶಿ ರಾಶಿ ಹೆಣಗಳನ್ನು ರಕ್ಷಣಾ ಪಡೆಗಳು ಹೊರತೆಗೆದು ಹಾಕುತ್ತಿದ್ದ ದೃಶ್ಯ ಮನಕಲಕುತ್ತಿತ್ತು. ಎನ್​ಡಿಆರ್​ಎಫ್​ನ 7 ತಂಡಗಳು, ಪೊಲೀಸರು, ಸ್ಥಳೀಯರು ಸೇರಿದಂತೆ ನಾನಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಹೌರಾ ಸೂಪರ್​ ಫಾಸ್ಟ್ ಎಕ್ಸ್‌ಪ್ರೆಸ್‌ನ 17 ಬೋಗಿಗಳು ಹಳಿತಪ್ಪಿದ್ದವು. ಇದು ಕಳೆದ 15 ವರ್ಷಗಳಲ್ಲಿಯೇ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ. ಗಾಯಗೊಂಡಿದ್ದ ಸಾವಿರಾರು ಜನರು ರಕ್ಷಣೆಗಾಗಿ, 30 ಬಸ್‌ಗಳ ಜೊತೆಗೆ 200 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್‌ನ 7 ತಂಡಗಳು, ಒಡಿಆರ್‌ಎಫ್‌ನ 5 ತಂಡಗಳು ಮತ್ತು 24 ಅಗ್ನಿಶಾಮಕ ಸೇವಾ ಘಟಕಗಳು, ಸ್ಥಳೀಯ ಪೊಲೀಸರು ಮತ್ತು ಸ್ವಯಂಸೇವಕರು ಎರಡು ದಿನ ನುಜ್ಜುಗುಜ್ಜಾದ ರೈಲು ಬೋಗಿಗಳ ಮಧ್ಯೆ ಬದುಕುಳಿದ ಮತ್ತು ಮೃತದೇಹಗಳನ್ನು ಹೆಕ್ಕಿ ತೆಗೆದರು ಎಂದು ಅವರು ಹೇಳಿದರು.

ಇಂಗ್ಲೆಂಡ್​ ವಿರುದ್ಧ ಶೂಟೌಟ್​ ಗೆಲುವು: ಇನ್ನು, ಇಂಗ್ಲೆಂಡ್​ ಎದುರಿನ ಪಂದ್ಯದಲ್ಲಿ ಭಾರತ ಪುರುಷರು 4-2 ರಲ್ಲಿ ಶೂಟೌಟ್​ ಗೆಲುವು ಸಾಧಿಸಿದರು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು 4-4 ರಲ್ಲಿ ಸಮಬಲ ಸಾಧಿಸಿದವು. ಇದರಿಂದ ಪಂದ್ಯ ಡ್ರಾ ಆದ ಕಾರಣ ಶೂಟೌಟ್​ ಮೊರೆ ಹೋಗಲಾಯಿತು. ಅದ್ಭುತ ಪ್ರದರ್ಶನ ತೋರಿದ ಭಾರತೀಯರು ಚೆಂಡನ್ನು ನಾಲ್ಕು ಬಾರಿ ಗೋಲುಪೆಟ್ಟಿಗೆಗೆ ಸೇರಿಸಿದರೆ, ಎಡವಿದ ಇಂಗ್ಲೆಂಡ್​ ಹಾಕಿ ಪಟುಗಳು 2 ಬಾರಿ ಮಾತ್ರ ಯಶಸ್ವಿಯಾದರು. ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಪಾಯಿಂಟ್​ ಪಟ್ಟಿಯಲ್ಲಿ 2ನೇ ಸ್ಥಾನ ಸಂಪಾದಿಸಿತು.

ಇದನ್ನೂ ಓದಿ: 90ಕ್ಕೂ ಹೆಚ್ಚು ರೈಲು ಸಂಚಾರ ರದ್ದು; ಒಡಿಶಾದಿಂದ ಹೊರಹೋಗುವ ವಿಮಾನ ದರ ಏರಿಸದಂತೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.