ETV Bharat / sports

ಮಳೆಯಿಂದ ಫೈನಲ್​ ಪಂದ್ಯ ರದ್ದು: ಏಷ್ಯನ್​ ಗೇಮ್ಸ್​ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್​ ತಂಡಕ್ಕೆ ಚಿನ್ನದ ಪದಕ

author img

By ETV Bharat Karnataka Team

Published : Oct 7, 2023, 3:21 PM IST

Updated : Oct 7, 2023, 4:08 PM IST

ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಕ್ರಿಕೆಟ್​ ತಂಡ ಮೊದಲ ಯತ್ನದಲ್ಲೇ ಚಿನ್ನದ ಸಾಧನೆ ಮಾಡಿತು.

ಭಾರತ ಕ್ರಿಕೆಟ್​ ತಂಡಕ್ಕೆ ಚಿನ್ನದ ಪದಕ
ಭಾರತ ಕ್ರಿಕೆಟ್​ ತಂಡಕ್ಕೆ ಚಿನ್ನದ ಪದಕ

ಹ್ಯಾಂಗ್​ಝೌ: ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಕ್ರಿಕೆಟ್​ ತಂಡಕ್ಕೆ ಚಿನ್ನದ ಪದಕ ದೊರೆತಿದೆ. ಇಂದು ನಡೆದ ಫೈನಲ್​ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಕೂಟದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಟೀಂ ಇಂಡಿಯಾಗೆ ಬಂಗಾರದ ಪದಕ ಒಲಿದಿದೆ. ಫೈನಲ್​ ಪ್ರವೇಶಿಸಿದ್ದ ಇನ್ನೊಂದು ತಂಡ ಅಫ್ಘಾನಿಸ್ತಾನಕ್ಕೆ ಬೆಳ್ಳಿ ದೊರೆತಿದೆ.

ಇಲ್ಲಿನ ಪಿಂಗ್​ಫೆಂಗ್​ ಕ್ಯಾಂಪಸ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಚಿನ್ನ ಗೆಲ್ಲುವ ಫೇವರೆಟ್​ ತಂಡವಾಗಿ ಕಣಕ್ಕಿಳಿದ ಟೀಂ ಇಂಡಿಯಾ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ನಾಯಕ ಋತುರಾಜ್​ ಗಾಯಕ್ವಾಡ್​ರ ನಿರ್ಧಾರವನ್ನು ಸಮರ್ಥಿಸಿಕೊಂಡ ಬೌಲರ್​ಗಳು ಅಫ್ಘನ್​ ಬ್ಯಾಟಿಂಗ್​ ಪಡೆಯ ಮೇಲೆ ದಂಡೆತ್ತಿ ಹೋದರು.

2ನೇ ಓವರ್​ನಲ್ಲೇ ಝಬೇಸ್​ ಅಕ್ಬರಿ ವಿಕೆಟ್ ಕಿತ್ತ ಶಿವಂ ದುಬೆ ಅಫ್ಘನ್​ ತಂಡದ ಕುಸಿತಕ್ಕೆ ನಾಂದಿ ಹಾಡಿದರು. ಇದಾದ ಬಳಿಕ ಸತತ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿದ ತಂಡ 52 ರನ್​ ಗಳಿಸುವಷ್ಟಲ್ಲಿ ಪ್ರಮುಖ 5 ವಿಕೆಟ್​ ನಷ್ಟ ಅನುಭವಿಸಿತು. ನಾಲ್ವರು ಆಟಗಾರರು ಒಂದಂಕಿಗೆ ವಿಕೆಟ್​ ಒಪ್ಪಿಸಿದರು. ಇದರಿಂದ 100 ರ ಒಳಗೆ ಆಲೌಟ್​ ಆಗುವ ಭೀತಿಯಲ್ಲಿತ್ತು.

ಶಹೀದುಲ್ಲಾ- ನಾಯಕ ನೈಬ್​ ನೆರವು: ತಂಡ 100 ರ ಗಡಿ ದಾಟುವುದು ಕಷ್ಟ ಎಂದಾಗ ಮಧ್ಯಮ ಕ್ರಮಾಂಕದ ಆಟಗಾರ ಶಹೀದುಲ್ಲಾ ಕಮಲ್​ ಉತ್ತಮ ಬ್ಯಾಟಿಂಗ್​ ಮಾಡಿ ತಂಡವನ್ನು ಮೇಲೆತ್ತಿದರು. 43 ಎಸತೆಗಳಲ್ಲಿ 49 ರನ್​ ಗಳಿಸಿದ ಕಮಲ್​ಗೆ, ನಾಯಕ ಗುಲ್ಬದಿನ್​ ನೈಬ್​ (27) ಉತ್ತಮ ಸಾಥ್​ ನೀಡಿದರು. ತಂಡ 18.2 ಓವರ್​ಗಳಲ್ಲಿ 112 ರನ್​ ಗಳಿಸಿದ್ದಾಗ ಮಳೆ ಆರಂಭವಾಯಿತು. ಧಾರಾಕಾರವಾಗಿ ಮಳೆ ಬಿದ್ದಿದ್ದರಿಂದ ಮೈದಾನ ಸಂಪೂರ್ಣ ಒದ್ದೆಯಾಯಿತು. ಹೀಗಾಗಿ ಪಂದ್ಯವನ್ನು ಅಂಪೈರ್​ಗಳು ರದ್ದುಗೊಳಿಸಲು ನಿರ್ಧರಿಸಿದರು.

ಮಳೆಗೆ ಪಂದ್ಯ ಆಹುತಿಯಾಗಿದ್ದರಿಂದ, ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದ ಟೀಂ ಇಂಡಿಯಾವನ್ನು ವಿಜಯಿ ಎಂದು ಘೋಷಿಸಲಾಯಿತು. ಈ ಮೂಲಕ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಕ್ರಿಕೆಟ್​ ತಂಡ ಸ್ವರ್ಣ ಪದಕವನ್ನು ಗೆದ್ದುಕೊಂಡಿತು. ರನ್ನರ್​ ಅಪ್​ ಅಫ್ಘಾನಿಸ್ತಾನಕ್ಕೆ ಬೆಳ್ಳಿ ಪದಕ ಸಿಕ್ಕಿತು.

ಮೊದಲ ಯತ್ನದಲ್ಲೇ ಚಿನ್ನ: 2010, 2014 ರ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಕ್ರಿಕೆಟ್ ತಂಡ ಕಣಕ್ಕಿಳಿದಿರಲಿಲ್ಲ. ಮೊದಲ ಬಾರಿಗೆ ಕೂಟದಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾ ನಾಯಕ ಋತುರಾಜ್​ ಗಾಯಕ್ವಾಡ್​ ನೇತೃತ್ವದಲ್ಲಿ ಚಿನ್ನದ ಸಾಧನೆ ಮಾಡಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಸೆಣಸಾಟದಲ್ಲಿ ಪಾಕಿಸ್ತಾನ ವಿರುದ್ಧ ಡಕ್ವರ್ಥ್​ ಲೂಯಿಸ್​ ನಿಯಮದಡಿ ಬಾಂಗ್ಲಾದೇಶ ವಿಜಯ ಸಾಧಿಸಿ ಕಂಚು ಪಡೆದುಕೊಂಡಿತು.

ಇದನ್ನೂ ಓದಿ: ಏಷ್ಯಾಡ್​​ನಲ್ಲಿ 'ಸಾಚಿ' ಜೋಡಿ ವಿಕ್ರಮ.. ಬ್ಯಾಡ್ಮಿಂಟನ್​ನಲ್ಲಿ ಮೊದಲ ಬಾರಿಗೆ ದಾಖಲೆಯ ಚಿನ್ನ

Last Updated : Oct 7, 2023, 4:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.