ETV Bharat / sports

French Open: ಅಗ್ರ ಶ್ರೇಯಾಂಕಿತೆ ಇಗಾ ಸ್ವಿಯಾಟೆಕ್ ಮುಡಿಗೆ ಫ್ರೆಂಚ್‌ ಓಪನ್ ಟೆನಿಸ್‌ ಕಿರೀಟ; ಸತತ 3ನೇ ಪ್ರತಿಷ್ಠಿತ ಟ್ರೋಫಿ ಗೆದ್ದ ಕಿರಿಯ ಆಟಗಾರ್ತಿ

author img

By

Published : Jun 11, 2023, 7:29 AM IST

Updated : Jun 11, 2023, 8:10 AM IST

ಫ್ರೆಂಚ್​ ಓಪನ್​ ರೋಚಕ ಫೈನಲ್​ನಲ್ಲಿ 22 ವರ್ಷದ ಇಗಾ ಸ್ವಿಯಾಟೆಕ್ 26 ರ ಕ್ಯಾರೋಲಿನಾ ಮುಕೋವಾರನ್ನು ಸೋಲಿಸುವ ಮೂಲಕ ಚಾಂಪಿಯನ್​ ಆದರು. ಇದು ಅವರ ಸತತ ಮೂರನೇ ಫ್ರೆಂಚ್​, ವೃತ್ತಿ ಜೀವನದ ನಾಲ್ಕನೇ ಪ್ರಶಸ್ತಿ.

ಮೂರನೇ ಫ್ರೆಂಚ್​ ಗ್ರ್ಯಾನ್​ಸ್ಲಾಂ ಗೆದ್ದ ಇಗಾ ಸ್ವಿಯಾಟೆಕ್
ಮೂರನೇ ಫ್ರೆಂಚ್​ ಗ್ರ್ಯಾನ್​ಸ್ಲಾಂ ಗೆದ್ದ ಇಗಾ ಸ್ವಿಯಾಟೆಕ್

ಪ್ಯಾರಿಸ್: ಚೊಚ್ಚಲ ಫ್ರೆಂಚ್‌ ಓಪನ್ ಟೆನಿಸ್‌ ಗ್ರ್ಯಾನ್​​ಸ್ಲಾಂ ಜಯಿಸುವ ಗುರಿಯಲ್ಲಿದ್ದ ಜೆಕ್​​ ಗಣರಾಜ್ಯದ ಆಟಗಾರ್ತಿ ಕ್ಯಾರೋಲಿನಾ ಮುಕೋವಾ ಅವರನ್ನು ತೀವ್ರ ಹಣಾಹಣಿಯಲ್ಲಿ ಮಣಿಸಿದ ಪೋಲೆಂಡ್‌ ಆಟಗಾರ್ತಿ ಇಗಾ ಸ್ವಿಯಾಟೆಕ್‌ ಚಾಂಪಿಯನ್ ಆಗಿ ಹೊರಹೊಮ್ಮಿದರು. ರೋಚಕ ಫೈನಲ್​ ಗೆಲ್ಲುವ ಮೂಲಕ ಸತತ ಮೂರನೇ ಬಾರಿಗೆ ಫ್ರೆಂಚ್​ ಓಪನ್​ ಪ್ರಶಸ್ತಿ ಎತ್ತಿ ಹಿಡಿದರು. ಈ ಮೂಲಕ ಪ್ರತಿಷ್ಠಿತ ಟ್ರೋಫಿ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ (22 ವರ್ಷ) ಎಂಬ ಹೆಗ್ಗಳಿಕೆಯೂ ಅವರದ್ದಾಯಿತು.

ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಪೋಲೆಂಡ್​ನ 22 ವರ್ಷದ ಟೆನಿಸ್​ ತಾರೆ ಇಗಾ, ಕ್ಯಾರೋಲಿನಾ ಮುಕೋವಾ ವಿರುದ್ಧ 6-2, 5-7, 6-4 ಅಂತರದಿಂದ ಜಯ ಸಾಧಿಸಿದರು. ಈ ಮೂಲಕ 'ಪ್ಯಾರಿಸ್‌ ರಾಣಿ' ಪಟ್ಟದಲ್ಲಿ ಅವರು ಮುಂದುವರಿದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಅಂತಿಮ ಸೆಣಸಾಟದಲ್ಲಿ ಉಭಯ ಆಟಗಾರ್ತಿಯರು ಕೆಚ್ಚೆದೆಯ ಪ್ರದರ್ಶನ ನೀಡಿದರು. ಮೊದಲ ಸೆಟ್​ ಅನ್ನು ಇಗಾ ಜಯಿಸಿದರೆ, 2ನೇ ಸೆಟ್​ನಲ್ಲಿ ಮುಕೋವಾ ತಿರುಗೇಟು ನೀಡಿದರು. ನಿರ್ಣಾಯಕ ಮೂರನೇ ಸೆಟ್​ ಒಂದು ಹಂತದಲ್ಲಿ ಸಮಬಲದಲ್ಲಿ ಸಾಗಿದ್ದಾಗ ಪುಟಿದೆದ್ದ ಇಗಾ ಸ್ವಿಯಾಟೆಕ್​ ಚಾಂಪಿಯನ್​ ಆಗಿ ಹೊರಹೊಮ್ಮಿದರು. ಈ ಮೂಲಕ ಸ್ವಿಯಾಟೆಕ್‌ 2005-07ರ ಬಳಿಕ ಇಲ್ಲಿ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾದರು. ಈ ಹಿಂದೆ ಜಸ್ಟಿನ್‌ ಹೆನಿನ್‌ ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸಿದ್ದರು.

ಪ್ರಶಸ್ತಿ ಗೆಲುವಿನೊಂದಿಗೆ ತಮ್ಮ ಮೊದಲ ನಾಲ್ಕೂ ಗ್ರ್ಯಾನ್‌ಸ್ಲಾಮ್‌ ಫೈನಲ್‌ಗ‌ಳನ್ನು ಗೆದ್ದ ವಿಶ್ವದ 3ನೇ ಆಟಗಾರ್ತಿ(3 ಫ್ರೆಂಚ್​, 1 ಅಮೆರಿಕ ಓಪನ್​) ಎಂಬ ದಾಖಲೆಗೆ ಇಗಾ ಪಾತ್ರರಾದರು. ಮೋನಿಕಾ ಸೆಲೆಸ್‌ ಮತ್ತು ನವೋಮಿ ಒಸಾಕಾ ಅವರು ಆಡಿದ ಮೊದಲ ನಾಲ್ಕು ಫೈನಲ್​ಗಳಲ್ಲಿ ಗೆಲುವು ಸಾಧಿಸಿದ್ದರು.

ಹೀಗಿತ್ತು ಫೈನಲ್​ ಕದನ: ಮೊದಲ ಸೆಟ್​ ಆರಂಭದಲ್ಲಿ ಹಾಲಿ ಚಾಂಪಿಯನ್​ ಇಗಾ 0-2 ಯಲ್ಲಿ ಹಿನ್ನಡೆಯಲ್ಲಿದ್ದರು. ನಿಖರ ಹೊಡೆತಗಳು ಕೈತಪ್ಪುತ್ತಿದ್ದವು. ಬಳಿಕ ತನ್ನೆಲ್ಲಾ ಸಾಮರ್ಥ್ಯ ಧಾರೆ ಎರೆದ ಆಟಗಾರ್ತಿ ಬಳಿಕ 6-2 ರಲ್ಲಿ ಮೊದಲ ಸೆಟ್​ ಅನ್ನು ವಶಪಡಿಸಿಕೊಂಡರು. ಇದು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಒಂದೂ ಸೆಟ್​ ಸೋಲದೇ ಫೈನಲ್​ಗೆ ಬಂದಿದ್ದ ಮುಕೋವಾಗೆ ಆಘಾತ ನೀಡಿತು.

ಇದಾದ ಬಳಿಕ 2 ನೇ ಸೆಟ್​ ಮದಗಜಗಳ ಕಾದಾಟಕ್ಕೆ ಸಾಕ್ಷಿಯಂತಿತ್ತು. ಚೊಚ್ಚಲ ಪ್ರಶಸ್ತಿ ಗೆಲ್ಲಬೇಕೆಂಬ ಹಠದಲ್ಲಿದ್ದ ಕ್ಯಾರೋಲಿನಾ ಮುಕೋವಾ ಆರಂಭದಲ್ಲಿ 3-0 ಯಲ್ಲಿ ಹಿಂದಿದ್ದರೂ, ಪುಟಿದೆದ್ದು ಕೊನೆಯಲ್ಲಿ 5-7 ರ ಮುನ್ನಡೆ ಸಾಧಿಸಿ ಸೆಟ್​ ವಶಪಡಿಸಿಕೊಂಡರು. ಇದರಿಂದ ಗೇಮ್​ ನಿರ್ಣಾಯಕ ಮೂರನೇ ಸೆಟ್​ಗೆ ಹೋಯಿತು.

ಮೂರನೇ ಸೆಟ್​ನಲ್ಲಿ 2-0 ಮುನ್ನಡೆ ಸಾಧಿಸಿದ ಮುಕೋವಾ ಪ್ರಶಸ್ತಿಯತ್ತ ಧಾವಿಸುತ್ತಿದ್ದರೆ, ಹಾಲಿ ಚಾಂಪಿಯನ್​ ಇಗಾ ಒಂದು ಹಂತದಲ್ಲಿ 4-4 ರಲ್ಲಿ ಸಮಬಲ ಸಾಧಿಸಿದರು. ಇದಾದ ಬಳಿಕ ಸರ್ವ್ ವೇಳೆ ಮುಕೋವಾ ಡಬಲ್​ ಫಾಲ್ಟ್ ಮಾಡಿ ಸೆಟ್​ ಬಿಟ್ಟುಕೊಟ್ಟರು. ಇದರಿಂದ ಕೊನೆಯ ಸೆಟ್​ ಅನ್ನು ಇಗಾ 6-4 ರಲ್ಲಿ ಗೆದ್ದು ಫ್ರೆಂಚ್​ ಕಿರೀಟವನ್ನು ವಶಪಡಿಸಿಕೊಂಡರು. ಗೆಲುವಿನ ಬಳಿಕ ಮೈದಾನದಲ್ಲೇ ಕಣ್ಣು ಮುಚ್ಚಿಕೊಂಡು ಕುಳಿತು ಸಂಭ್ರಮಿಸಿದರು. ಇತ್ತ ಸೋತ ದುಖಃದಲ್ಲಿ ಮುಕೋವಾ ಪ್ರಶಸ್ತಿ ಪ್ರದಾನದ ವೇಳೆ ಕಣ್ಣೀರು ಹಾಕಿದರು.

ಗೆಲುವಿನ ಬಳಿಕ ಮಾತನಾಡಿ ಇಗಾ ಸ್ವಿಯಾಟೆಕ್​, "ಮೂರನೇ ಫ್ರೆಂಚ್​ ಪ್ರಶಸ್ತಿ ಗೆದ್ದಿರುವುದು ಖುಷಿ ತಂದಿದೆ. ಪಂದ್ಯ ನಿಜವಾಗಿಯೂ ಪೈಪೋಟಿಯಿಂದ ಕೂಡಿತ್ತು. ಬಹಳಷ್ಟು ಏರಿಳಿತಗಳು ಕಂಡು ಬಂದವು. ಒತ್ತಡವನ್ನು ನಿಭಾಯಿಸಿ ಗೆದ್ದೆ. ಮುಕೋವಾ ಕೂಡ ಅದ್ಭುತ ಆಟವಾಡಿದರು" ಎಂದರು.

"ವಿಶ್ವದ ಪ್ರಭಾವಿ ಆಟಗಾರ್ತಿ ಮುಂದೆ ಆಡುವುದು ಸುಲಭವಲ್ಲ. ಇಗಾ ಅವರು ಪ್ರಶಸ್ತಿ ಗೆದ್ದಿರುವುದು ಅರ್ಹವಾಗಿದೆ. ಅವರ ಸವಾಲು ಎದುರಿಸಿದ್ದು ನನಗೆ ಖುಷಿ ಇದೆ. ಚೊಚ್ಚಲ ಪ್ರಶಸ್ತಿ ಜಯಿಸುವ ಕನಸು ಈಡೇರಲಿಲ್ಲ" ಎಂದು ಪರಾಜಯಗೊಂಡ ಕ್ಯಾರೋಲಿನಾ ಮುಕೋವಾ ಹೇಳಿದರು.

ಕಿರಿಯ ಆಟಗಾರ್ತಿ: 22 ವರ್ಷದ ಇಗಾ 4 ಗ್ರ್ಯಾನ್​ಸ್ಲಾಂ ಗೆದ್ದ ಅತಿ ಕಿರಿಯ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು. ಇದಕ್ಕೂ ಮೊದಲು 2002 ರ ಅಮೆರಿಕ ಓಪನ್‌ ಗೆದ್ದಿದ್ದ ಸೆರೆನಾ ವಿಲಿಯಮ್ಸ್ 20 ವರ್ಷವಿದ್ದಾಗಲೇ 4 ಪ್ರಶಸ್ತಿ ಜಯಿಸಿದ್ದರು. ಇದು ಈವರೆಗಿನ ದಾಖಲೆಯಾಗಿಯೇ ಉಳಿದಿದೆ.

2 ನೇ ಟೆನಿಸ್​ ತಾರೆ: ಫ್ರೆಂಚ್​ ಗ್ರ್ಯಾನ್​ಸ್ಲಾಂ ಗೆಲ್ಲುವ ಮೂಲಕ ಇಗಾ ಸ್ವಿಯಾಟೆಕ್​ 20.5 ಕೋಟಿ ಬಹುಮಾನ ಜೇಬಿಗಿಳಿಸಿಕೊಂಡರೆ, ರನ್ನರ್​ ಅಪ್​ ಆದ ಮುಕೋವಾ ಅವರು 10.2 ಕೋಟಿ ಪಡೆದರು. ಇದಲ್ಲದೇ, ವಿಶ್ವ ನಂಬರ್​ 1 ಟೆನಿಸ್​ ತಾರೆ ಇಗಾ ಸ್ವಿಯಾಟೆಕ್​ 2007 ರ ಬಳಿಕ ಸತತ 2 ಬಾರಿ ಫ್ರೆಂಚ್​​ ಚಾಂಪಿಯನ್​ ಪಟ್ಟ ಅಲಂಕರಿಸಿದ ಆಟಗಾರ್ತಿ ಎಂಬ ದಾಖಲೆ ಬರೆದರು. ಇದಕ್ಕೂ ಮೊದಲು ಬೆಲ್ಜಿಯಂನ ಜಸ್ಟಿನ್​ ಹೆನಿನ್​ ಈ ದಾಖಲೆ ಮಾಡಿದ್ದಾರೆ

ಇದನ್ನೂ ಓದಿ: French Open 2023: ಮಹಿಳಾ ಸಿಂಗಲ್ಸ್ ಫೈನಲ್ಸ್​ನಲ್ಲಿ ಕುತೂಹಲದ ಕಾದಾಟ.. ಹಾಲಿ ಚಾಂಪಿಯನ್​ ಇಗಾ ವಿರುದ್ಧ ಮುಚೋವಾ ಕಣಕ್ಕೆ

Last Updated : Jun 11, 2023, 8:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.