ETV Bharat / sports

ಏಷ್ಯನ್ ಗೇಮ್ಸ್‌: ಭಾರತದ ಧ್ವಜಧಾರಿಗಳಾಗಿ ಹಾಕಿ ನಾಯಕ ಹರ್ಮನ್‌ಪ್ರೀತ್ ಸಿಂಗ್, ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಆಯ್ಕೆ

author img

By PTI

Published : Sep 21, 2023, 10:54 AM IST

ಚೀನಾದ ಹ್ಯಾಂಗ್‌ಝೌನಲ್ಲಿ ಶನಿವಾರದಿಂದ ಏಷ್ಯನ್ ಕ್ರೀಡಾಕೂಟ ಆರಂಭವಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಮತ್ತು ಲೊವ್ಲಿನಾ ಬೊರ್ಗೊಹೈನ್ ಭಾರತದ ಧ್ವಜಧಾರಿಗಳಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಹರ್ಮನ್‌ಪ್ರೀತ್ ಸಿಂಗ್, ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್
ಹರ್ಮನ್‌ಪ್ರೀತ್ ಸಿಂಗ್, ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್

ನವದೆಹಲಿ: ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರು ಸೆಪ್ಟೆಂಬರ್ 23 ರಂದು ಚೀನಾದ ಹ್ಯಾಂಗ್‌ಝೌನಲ್ಲಿ ಆರಂಭವಾಗಲಿರುವ ಏಷ್ಯನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿರಲಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟು 655 ಭಾರತೀಯ ಅಥ್ಲೀಟ್‌ಗಳು ಸ್ಪರ್ಧಿಸುತ್ತಿದ್ದಾರೆ. ಇದು ಇಲ್ಲಿವರೆಗಿನ ಅತಿದೊಡ್ಡ ಭಾರತದ ಸ್ಪರ್ಧಿಗಳ ತಂಡವಾಗಿದೆ.

ಈ ಬಾರಿ ನಮ್ಮ ಏಷ್ಯನ್ ಗೇಮ್ಸ್‌ ಸ್ಪರ್ಧಿಗಳ ತಂಡವನ್ನು ಇಬ್ಬರು ಧ್ವಜಧಾರಿಗಳು ಮುನ್ನಡೆಸಲಿದ್ದಾರೆ. ಹಾಕಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಏಷ್ಯನ್ ಗೇಮ್ಸ್‌ ಭಾರತ ತಂಡದ ಮುಖ್ಯಸ್ಥ ಭೂಪಿಂದರ್ ಸಿಂಗ್ ಬಜ್ವಾ ಹೇಳಿದರು.

2018ರ ಜಕಾರ್ತಾ ಏಷ್ಯನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಸ್ಟಾರ್ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಅವರು ಭಾರತ ತಂಡದ ಧ್ವಜಧಾರಿಯಾಗಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ 69 ಕೆ.ಜಿ ವಿಭಾಗದಲ್ಲಿ ಲೊವ್ಲಿನಾ ಕಂಚಿನ ಪದಕ ಗೆದ್ದಿದ್ದರು. ಈ ವರ್ಷ, ನವದೆಹಲಿಯಲ್ಲಿ ನಡೆದ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 75 ಕೆಜಿ ವಿಭಾಗದಲ್ಲಿ ಚಿನ್ನದ ಪ್ರದರ್ಶನ ನೀಡಿದ್ದರು.

ಹರ್ಮನ್‌ಪ್ರೀತ್ ವಿಶ್ವದ ಅತ್ಯುತ್ತಮ ಡ್ರ್ಯಾಗ್-ಫ್ಲಿಕ್ಕರ್‌ಗಳಲ್ಲಿ ಒಬ್ಬರು. ಟೋಕಿಯೊ ಗೇಮ್ಸ್‌ನಲ್ಲಿ ಐತಿಹಾಸಿಕ ಕಂಚು ಗೆದ್ದ ತಂಡದ ಭಾಗವಾಗಿದ್ದರು. 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಸ್ವಯಂ ಅರ್ಹತೆ ಪಡೆಯಲು ಭಾರತೀಯ ಪುರುಷರ ಹಾಕಿ ತಂಡವು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗುರಿಯಾಗಿಸಿಕೊಂಡಿದೆ. (ಪಿಟಿಐ)

ಏಷ್ಯನ್ ಗೇಮ್ಸ್ ಎಂಬುದು ಒಲಿಂಪಿಕ್ಸ್ ನಂತರ ಅತಿ ದೊಡ್ಡ ಕ್ರೀಡಾಕೂಟ. ಈ ಕೂಟದಲ್ಲಿ ಭಾರತ ಸೇರಿದಂತೆ 45 ದೇಶಗಳು ಸ್ಪರ್ಧಿಸುತ್ತಿವೆ. ಈಗಾಗಲೇ ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯ ಪ್ರಾರಂಭವಾಗಿದೆ. ಭಾರತ ಕ್ರಿಕೆಟ್‌ನಲ್ಲಿಯೂ ಸ್ಪರ್ಧಿಸುತ್ತಿದೆ. ಹ್ಯಾಂಗ್‌ಝೌ ನಗರ ಏಷ್ಯನ್ ಕ್ರೀಡಾಕೂಟ ಆಯೋಜಿಸುತ್ತಿದೆ. ಸ್ಕ್ವಾಷ್, ಬ್ಯಾಡ್ಮಿಂಟನ್, ಟೆನ್ನಿಸ್‌ನಂತಹ ಇತರ ಆಟಗಳನ್ನು ಹೆಚ್ಚಾಗಿ ಈ ನಗರದಲ್ಲಿ ಆಡಿಸಲಾಗುತ್ತದೆ. ಇನ್ನೂ ಐದು ನಗರಗಳಲ್ಲಿ ಕೆಲವು ಪಂದ್ಯಗಳು ನಡೆಯಲಿವೆ.

ವಿವಿಧ ದೇಶಗಳ 11 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. 1,000ಕ್ಕೂ ಹೆಚ್ಚು ಪದಕಗಳನ್ನು ಜಯಸಲಿದ್ದಾರೆ. ಭಾರತ ಈ ಸಲದ ಗೇಮ್ಸ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 100 ಪದಕ ಗೆಲ್ಲುವ ಗುರಿ ಹೊಂದಿದೆ. 655 ಸದಸ್ಯರ ಬಲಿಷ್ಠ ತಂಡವನ್ನು ಭಾರತ ಅಖಾಡಕ್ಕಿಳಿಸಲಿದೆ. ದೇಶದ ಆಟಗಾರರು 41 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್ ತಂಡದಲ್ಲಿ 68 ಮಂದಿ ಸ್ಪರ್ಧಿಗಳಿದ್ದಾರೆ.

ಇದನ್ನೂ ಓದಿ: ಏಷ್ಯನ್‌ ಗೇಮ್ಸ್‌: ಭಾರತದ ಸ್ಪರ್ಧಿಗಳ ಮೇಲೆ ಪದಕ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.