ETV Bharat / sports

ಫ್ರೆಂಚ್‌ ಓಪನ್‌ : ಕೊಕೊ ಗಾಫ್‌ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ ಇಗಾ ಸ್ವಿಯಾಟೆಕ್‌

author img

By

Published : Jun 4, 2022, 8:29 PM IST

Updated : Jun 4, 2022, 10:13 PM IST

ವಿಶ್ವ ನಂ.1 ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್​​ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ..

french-open-2022-iga-swiatek-outclasses-coco-gauff-to-win-2nd-title
ಫ್ರೆಂಚ್‌ ಓಪನ್‌: ಕೊಕೊ ಗಾಫ್‌ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ ಇಗಾ ಸ್ವಿಯಾಟೆಕ್‌

ಪ್ಯಾರಿಸ್‌ : ವಿಶ್ವದ ನಂ.1 ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್​​ ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ. ಫೈನಲ್​ ಹಣಾಹಣಿಯಲ್ಲಿ ಸ್ವಿಯಾಟೆಕ್‌, ಅಮೆರಿಕದ ಕೊಕೊ ಗಾಫ್‌ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಶನಿವಾರ ರೋಲ್ಯಾಂಡ್ ಗ್ಯಾರೋಸ್ ಫೈನಲ್‌ನಲ್ಲಿ ಇಗಾ ಸ್ವಿಯಾಟೆಕ್ 18ರ ಹರೆಯದ ಕೊಕೊ ಗಾಫ್ ಅವರನ್ನು 6-1, 6-3ರ ನೇರ ಸೆಟ್‌ಗಳಿಂದ ಸೋಲಿಸಿದರು. 2020ರಲ್ಲಿ ಕೂಡ ಫ್ರೆಂಚ್‌ ಓಪನ್‌ ಎತ್ತಿ ಹಿಡಿದಿದ್ದ ಸ್ವಿಯಾಟೆಕ್ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಪೋಲೆಂಡ್‌ನ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಗಾ 3 ವರ್ಷಗಳ ಅಂತರದಲ್ಲೇ ಎರಡನೇ ಸಲ ರೋಲ್ಯಾಂಡ್ ಗ್ಯಾರೋಸ್ ಪ್ರೇಕ್ಷಕರೆದುರು ಸಂಭ್ರಮಿಸಿದರು.

ಪ್ಯಾರಿಸ್‌ನಲ್ಲಿ ಕಿಕ್ಕಿರಿದು ತುಂಬಿದ್ದ ಜನಸಮೂಹದ ಎದುರು ಅಮೆರಿಕದ ಯುವ ಆಟಗಾರ್ತಿ ಕೊಕೊ ಗಾಫ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡರು. ಏಕಮುಖವಾದ ಫೈನಲ್​ನಲ್ಲಿ ಸ್ವಿಯಾಟೆಕ್ ಕೇವಲ ಒಂದು ಗಂಟೆ 8 ನಿಮಿಷಗಳಲ್ಲೇ ಭರ್ಜರಿ ಜಯ ದಾಖಲಿಸಿದರು. 2000ನೇ ಇಸವಿಯಲ್ಲಿ ಯುಎಸ್​ನ ವಿಲಿಯಮ್ಸ್ ಸೃಷ್ಟಿಸಿದ್ದ ಸತತ 35 ಗೆಲುವಿನ ದಾಖಲೆಯನ್ನು ಪೋಲೆಂಡ್‌ ಆಟಗಾರ್ತಿ ಸಮಗೊಳಿಸಿದರು.

ಫೈನಲ್‌ನಲ್ಲಿ ಸ್ವಿಯಾಟೆಕ್​ಗೆ ಕಠಿಣ ಸವಾಲೊಡ್ಡಲು ವಿಫಲರಾದ ಗಾಫ್ ಮೊದಲ ಸೆಟ್​ನಲ್ಲೇ ವಿಚಲಿತರಾದರು. ಎರಡನೇ ಸೆಟ್‌ನ ಆರಂಭದಲ್ಲಿ 2-0 ಮುನ್ನಡೆ ಸಾಧಿಸಿ ಪುನರಾಗಮನದ ಭರವಸೆ ಮೂಡಿಸಿದರೂ ಕೂಡ ಮತ್ತೆ ಮುಗ್ಗರಿಸಿದರು. ಬಳಿಕ 2-2ರಲ್ಲಿ ಸಮಬಲ ಸಾಧಿಸಿದ ಸ್ವಿಯಾಟೆಕ್‌, 6-3ರಿಂದ ಸೆಟ್​​ ಗೆದ್ದು ಗೆಲವಿನ ಸಂಭ್ರಮದಲ್ಲಿ ತೇಲಿದರು.

ಡಬಲ್ಸ್ ಫೈನಲ್ : ಸಿಂಗಲ್ಸ್​ ರನ್ನರ್​ ಅಪ್​ ಆದ ಗಾಫ್, ತಮ್ಮದೇ ದೇಶದ ಜೆಸ್ಸಿಕಾ ಪೆಗುಲಾ ಜೊತೆ ಭಾನುವಾರ ನಡೆಯುವ ಮಹಿಳೆಯರ ಡಬಲ್ಸ್ ಫೈನಲ್​​ನಲ್ಲಿ ಟ್ರೋಫಿ ಗೆಲ್ಲುವ ಅವಕಾಶ ಹೊಂದ್ದಾರೆ. 8ನೇ ಶ್ರೇಯಾಂಕದ ಈ ಜೋಡಿ ಕೆಳ ಶ್ರೇಯಾಂಕದ ಫ್ರೆಂಚ್ ಜೋಡಿಯಾದ ಕ್ರಿಸ್ಟಿನಾ ಮ್ಲಾಡೆನೊವಿಕ್ ಮತ್ತು ಕ್ಯಾರೊಲಿನ್ ಗಾರ್ಸಿಯಾ ಅವರನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ: T20 ವಿಶ್ವಕಪ್ ಕ್ವಾಲಿಫೈಯರ್​​ನಲ್ಲಿ ಕೇವಲ 8 ರನ್​​ಗಳಿಗೆ ನೇಪಾಳ ತಂಡ ಆಲೌಟ್​!

Last Updated : Jun 4, 2022, 10:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.