ETV Bharat / sports

ಪೋರ್ಚುಗಲ್​ ಮಣಿಸಿ ಸೆಮೀಸ್​ ತಲುಪಿದ ಮೊರಾಕ್ಕೊ; ವಿಶ್ವಕಪ್​ ಗೆಲ್ಲದೇ ರೊನಾಲ್ಡೊ ನಿವೃತ್ತಿ?

author img

By

Published : Dec 11, 2022, 7:06 AM IST

ರೋಚಕ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ಮೊರಾಕ್ಕೊ ಬಲಿಷ್ಠ ಪೋರ್ಚುಗಲ್​ ತಂಡವನ್ನು 1-0 ಗೋಲಿನಿಂದ ಮಣಿಸಿ ಮೂರನೇ ತಂಡವಾಗಿ ಸೆಮಿಫೈನಲ್​ ತಲುಪಿತು. ಸೆಮೀಸ್​ನಲ್ಲಿ ಫ್ರಾನ್ಸ್‌ ವಿರುದ್ಧ ಸೆಣಸಾಡಲಿದೆ.

morocco-reaches-world-cup-semifinals
ಪೋರ್ಚುಗಲ್​ ಮಣಿಸಿ ಸೆಮೀಸ್​ ತಲುಪಿದ ಮೊರಾಕ್ಕೊ

ದೋಹಾ(ಕತಾರ್​): ಯೂಸೆಫ್​ ಎನ್​ ನೆಸ್ರೆ ಗಳಿಸಿದ ಏಕೈಕ ಗೋಲಿನಿಂದ ಮೊರಾಕ್ಕೊ ತಂಡ ವಿಶ್ವಶ್ರೇಷ್ಠ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ನೇತೃತ್ವದ ಬಲಿಷ್ಠ ಪೋರ್ಚುಗಲ್​ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಫಿಫಾ ವಿಶ್ವಕಪ್‌ ಸೆಮಿಫೈನಲ್​ ತಲುಪಿತು. ಈ ಮೂಲಕ ಸೆಮೀಸ್ ತಲುಪಿದ ಮೊದಲ ಆಫ್ರಿಕನ್​ ರಾಷ್ಟ್ರ ಎಂಬ ದಾಖಲೆಯನ್ನೂ ಬರೆಯಿತು.

ಈ ಸಲದ ವಿಶ್ವಕಪ್​ ಹಲವು ಅಚ್ಚರಿಯ ಫಲಿತಾಂಶಗಳನ್ನು ದಾಖಲಿಸಿದೆ. ಕ್ವಾರ್ಟರ್​ಫೈನಲ್​ನಲ್ಲಿ 5 ಬಾರಿಯ ವಿಶ್ವಚಾಂಪಿಯನ್​ ಬ್ರೆಜಿಲ್​ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದೆ. ಈಗ ಫೋರ್ಚುಗಲ್​ ಕೂಡ ಟೂರ್ನಿಯಿಂದ ಔಟಾಗಿದೆ. ಲಿಯೋನೆಲ್​ ಮೆಸ್ಸಿಯ ಅರ್ಜೆಂಟೀನಾ ಮಾತ್ರ ಸೆಮಿಫೈನಲ್​ ಘಟ್ಟ ತಲುಪಿದೆ.

ಯೂಸೆಫ್​ ಎನ್​ ನೆಸ್ರೆ ಆಕರ್ಷಕ ಹೆಡರ್:​ ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಮೊರಾಕ್ಕೊ ಆಟಗಾರರು ಪೋರ್ಚುಗಲ್​ ವಿರುದ್ಧವೂ ಅದೇ ಗುಣಮಟ್ಟ ಕಾಪಾಡಿಕೊಂಡು ಸಾಗಿದರು. ಪೋರ್ಚುಗೀಸ್​ ಕೋಚ್​ ಸ್ಯಾಂಟೋಸ್​ರ ಎಲ್ಲ ತಂತ್ರಗಳನ್ನು ಮೀರಿದ ಮೊರಾಕ್ಕೊ 42 ನೇ ನಿಮಿಷದಲ್ಲಿ ಯೂಸೆಫ್​ ಎನ್​ ನೆಸ್ರೆ ಹೆಡರ್​ ಮೂಲಕ ಗಳಿಸಿದ ಗೋಲಿನಿಂದ ಸೆಮಿಫೈನಲ್​ ಟಿಕೆಟ್​ ಖಾತ್ರಿಪಡಿಸಿಕೊಂಡಿತು.

ಸ್ವಿಜರ್​ಲ್ಯಾಂಡ್ಸ್​ ಪಂದ್ಯದಲ್ಲೂ ಹೊರಗಿದ್ದ ಈ ಪೀಳಿಗೆಯ ಶ್ರೇಷ್ಠ ಫುಟ್ಬಾಲಿಗ ರೊನಾಲ್ಡೊರನ್ನು ತಂಡ 51 ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿಸಿತು. ಚುರುಕಿನ ಓಟದ ಮೂಲಕ ಗೋಲು ಗಳಿಸಲು ಪ್ರಯತ್ನಿಸಿದರೂ ಮೊರಾಕ್ಕೊ ಆಟಗಾರರು ಅವಕಾಶ ನೀಡಲಿಲ್ಲ. ವಿಶೇಷವೆಂದರೆ ಮೊರಾಕ್ಕೊ 3 ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ ಒಂದೇ ಒಂದು ಗೋಲು ಗಳಿಸಲು ಬಿಟ್ಟಿಲ್ಲ.

ವಿಶ್ವಕಪ್​ ಇಲ್ಲದೇ ರೊನಾಲ್ಡೊ ನಿವೃತ್ತಿ?: 37 ವರ್ಷದ ಕ್ರಿಶ್ಚಿಯಾನೊ ರೊನಾಲ್ಡೊ ಫುಟ್ಬಾಲ್​ ಕ್ರೀಡೆಯಲ್ಲಿ ಇತಿಹಾಸವೇ ನಿರ್ಮಿಸಿದ್ದರೂ ಒಂದೇ ಒಂದು ವಿಶ್ವಕಪ್​ ಗೆದ್ದಿಲ್ಲ. ಪೋರ್ಚುಗಲ್​ ತಂಡವನ್ನು ಪ್ರತಿನಿಧಿಸುವ ರೊನಾಲ್ಡೊ ತಂಡವನ್ನು ಕನಿಷ್ಠ ಫೈನಲ್​ವರೆಗೂ ಕೊಂಡೊಯ್ದಿಲ್ಲ. ಮುಂದಿನ ವಿಶ್ವಕಪ್​ ವೇಳೆಗೆ ರೊನಾಲ್ಡೊ 41 ವರ್ಷ ಪೂರೈಸಲಿದ್ದು, ವಿಶ್ವಕಪ್​ ಗೆಲ್ಲುವ ಕನಸು ಈಡೇರುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಪಂದ್ಯ ಸೋತ ಬಳಿಕ ರೊನಾಲ್ಡೊ ಮೈದಾನದ ಮೇಲೆ ಬಿದ್ದು ಕಣ್ಣೀರಿಟ್ಟರು.

ಸೆಮೀಸ್​ ತಲುಪಿದ ಆಫ್ರಿಕಾ ಖಂಡದ ಮೊದಲ ದೇಶ: ಪೋರ್ಚುಗಲ್​ ತಂಡವನ್ನು ಬಗ್ಗುಬಡಿದು ಮೊರಾಕ್ಕೊ ಸೆಮಿಫೈನಲ್​ ತಲುಪಿದ ಆಫ್ರಿಕಾ ಖಂಡದ ಮೊದಲ ದೇಶ ಎಂಬ ಹೊಸ ದಾಖಲೆ ಬರೆಯಿತು. ಇದಕ್ಕೂ ಮೊದಲು ಕ್ಯಾಮರೂನ್ (1990), ಸೆನೆಗಲ್ (2002) ಮತ್ತು ಘಾನಾ (2010) ಕ್ವಾರ್ಟರ್‌ಫೈನಲ್‌ ತಲುಪಿದ್ದೇ ಸಾಧನೆಯಾಗಿತ್ತು. ಸೆಮಿಫೈನಲ್​ನಲ್ಲಿ ಮೊರಾಕ್ಕೊ, ಫ್ರಾನ್ಸ್​​ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: ಪೀಲೆಗೆ ಎದುರಾದ ಆರೋಗ್ಯ ಸಮಸ್ಯೆ; ಕರುಳಿನ ಕ್ಯಾನ್ಸರ್​ನಿಂದ ಪಾರಾಗುವುದು ಹೇಗೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.