ETV Bharat / sports

ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಪೋಕ್ಸೋ ಕೇಸ್​: ಅಕ್ಟೋಬರ್​ 6ಕ್ಕೆ ತೀರ್ಪು ಕಾಯ್ದಿರಿಸಿದ ಪಟಿಯಾಲ ಕೋರ್ಟ್​

author img

By ETV Bharat Karnataka Team

Published : Sep 6, 2023, 5:29 PM IST

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್​ ರದ್ದು ಮಾಡುವ ಕುರಿತ ಆದೇಶವನ್ನು ಪಟಿಯಾಲ ಹೌಸ್ ಕೋರ್ಟ್ ಅಕ್ಟೋಬರ್ 6ಕ್ಕೆ ಮುಂದೂಡಿದೆ.

ಬ್ರಿಜ್ ಭೂಷಣ್ ಶರಣ್ ಸಿಂಗ್
ಬ್ರಿಜ್ ಭೂಷಣ್ ಶರಣ್ ಸಿಂಗ್

ನವದೆಹಲಿ: ಭಾರತೀಯ ಕುಸ್ತಿ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಅಪ್ರಾಪ್ತ ಮಹಿಳಾ ಕುಸ್ತಿಪಟು ದಾಖಲಿಸಿದ್ದ ಪೋಕ್ಸೊ ಪ್ರಕರಣವನ್ನು ವಜಾ ಮಾಡಬೇಕೇ ಬೇಡವೇ ಎಂಬುದರ ತೀರ್ಪನ್ನು ಪಟಿಯಾಲ ಹೌಸ್ ಕೋರ್ಟ್ ಅಕ್ಟೋಬರ್ 6ಕ್ಕೆ ಮುಂದೂಡಿದೆ. ದೂರು ನೀಡಿದ್ದ ಮಹಿಳಾ ಕುಸ್ತಿಪಟು ಕೇಸ್​ ವಾಪಸ್​ ಪಡೆದಿದ್ದು, ಪ್ರಕರಣವನ್ನು ಅಂತ್ಯಗೊಳಿಸಲು ದೆಹಲಿ ಪೊಲೀಸರು ಜೂನ್ 15 ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಮುಕ್ತಾಯಗೊಳಿಸುವ ಬಗ್ಗೆ ನ್ಯಾಯಾಲಯ ಇನ್ನಷ್ಟೇ ತೀರ್ಪು ನೀಡಬೇಕಾಗಿದೆ.

ನ್ಯಾಯಾಲಯದಲ್ಲಿ ಈ ಹಿಂದಿನ ವಿಚಾರಣೆಯ ವೇಳೆ, ಅಪ್ರಾಪ್ತ ಮಹಿಳಾ ಕುಸ್ತಿಪಟು ಮತ್ತು ಆಕೆಯ ತಂದೆಯ ಹೇಳಿಕೆ ಪಡೆದು, ಪ್ರಕರಣವನ್ನು ರದ್ದು ಮಾಡಲು ದೆಹಲಿ ಪೊಲೀಸರು ಕೋರ್ಟ್​ಗೆ ವರದಿ ನೀಡಿದ್ದಾರೆ. ಅಪ್ರಾಪ್ತೆ ಕುಸ್ತಿಪಟು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಹಿಂಪಡೆದಿದ್ದಾರೆ. ಹೀಗಾಗಿ ಕೇಸ್​ ರದ್ದು ಮಾಡಿ ಎಂದು ದೆಹಲಿ ಪೊಲೀಸರ ಪರವಾಗಿ ವಕೀಲ ಅತುಲ್ ಶ್ರೀವಾಸ್ತವ ವಾದ ಮಂಡಿಸಿದರು.

ಜೂನ್​ 15 ರಂದು ದೆಹಲಿ ಪೊಲೀಸರು ಪೋಕ್ಸೋ ಪ್ರಕರಣ ರದ್ದು ಮಾಡಲು ನೀಡಿರುವ ವರದಿಯನ್ನು ಕೋರ್ಟ್​ ಗಮನಿಸಿದ್ದು, ದೂರುದಾರರಾದ ಅಪ್ರಾಪ್ತ ಮಹಿಳಾ ಕುಸ್ತಿಪಟು ಮತ್ತು ಆಕೆಯ ತಂದೆಯಿಂದ ಹೇಳಿಕೆ ದಾಖಲಿಸಿದ್ದಾರೆ. ಕುಸ್ತಿಪಟು ತಂದೆ ಕೋಪದಲ್ಲಿ ಭರದಲ್ಲಿ ಬ್ರಿಜ್​ ಭೂಷಣ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಸ್​ ನೀಡಿದ್ದೆ ಎಂದು ಹೇಳಿದ್ದಾರೆ. ತನಿಖೆ ನಡೆಸಿದ್ದ ದೆಹಲಿ ಪೊಲೀಸರು ಕೇಸ್​ನಲ್ಲಿ ಆರೋಪಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ವರದಿ ನೀಡಿದ್ದಾರೆ.

ಭಾರತೀಯ ತಾರಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ, ಹಲ್ಲೆ ಆರೋಪ ಮಾಡಿ ದೆಹಲಿಯ ಜಂತರ್​ಮಂತರ್​ನಲ್ಲಿ ಪ್ರತಿಭಟನೆ ನಡೆಸಿದ್ದರು. ಆರೋಪ ಸಾಬೀತಾದರೆ ತಾವು ನೇಣು ಹಾಕಿಕೊಳ್ಳುವುದಾಗಿ ಬ್ರಿಜ್​ ಭೂಷಣ್​ ಸವಾಲು ಹಾಕಿದ್ದರು. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದ ಬಳಿಕ ಕುಸ್ತಿಪಟುಗಳು ಧರಣಿ ಕೈಬಿಟ್ಟಿದ್ದರು. ಬಳಿಕ ಪ್ರಕರಣದಲ್ಲಿ ಭೂಷಣ್​ಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

1599 ಪುಟಗಳ ಚಾರ್ಜ್​ಶೀಟ್​: ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಹಲವು ಸಂದರ್ಭಗಳಲ್ಲಿ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೆಹಲಿ ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ 1,599 ಪುಟಗಳ ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ. 6 ಕ್ಕೂ ಹೆಚ್ಚು ಮಹಿಳಾ ಕುಸ್ತಿಪಟುಗಳ ಹೇಳಿಕೆಗಳನ್ನು ಅದರಲ್ಲಿ ದಾಖಲಿಸಿದ್ದಾರೆ. ಇದರ ವಿಚಾರಣೆ ಬಾಕಿ ಇದೆ.

ಇದನ್ನೂ ಓದಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ: ಚಾರ್ಜ್‌ಶೀಟ್‌ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಕರ್ಮಕಾಂಡ ಬಯಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.