ETV Bharat / sports

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌: ಕ್ವಾರ್ಟರ್ ಫೈನಲ್​ನಲ್ಲಿ ಸಿಂಧುಗೆ ಸೋಲು

author img

By

Published : Apr 28, 2023, 10:53 PM IST

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ ಕ್ವಾರ್ಟರ್ ಫೈನಲ್​ನಲ್ಲಿ ಪಿವಿ ಸಿಂಧು ಹಾಗೂ ಎಚ್‌ಎಸ್‌ ಪ್ರಣಯ್‌ ಸೋಲನುಭವಿಸಿದ್ದಾರೆ.

Etv Bharat
ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌: ಕ್ವಾರ್ಟರ್ ಫೈನಲ್​ನಲ್ಲಿ ಸಿಂಧುಗೆ ಸೋಲು

ದುಬೈ (ಯುಎಇ): ಇಲ್ಲಿನ ಶೇಖ್ ರಶೀದ್ ಬಿನ್ ಹಮ್ದಾನ್ ಇಂಡೋರ್ ಹಾಲ್‌ನಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್​ನ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಪಿವಿ ಸಿಂಧು ಅವರು ವಿಶ್ವದ ನಂ. 2ನೇ ಶ್ರೇಯಾಂಕಿತ ಆ್ಯನ್ ಸೆ ಯಂಗ್ ವಿರುದ್ಧ ಸೋಲನುಭವಿಸಿದರು. ಇದರಿಂದ 2023 ರ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದಿದ್ದಾರೆ. ಶುಕ್ರವಾರ ನಡದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ 11ನೇ ಶ್ರೇಯಾಂಕಿತೆ ಸಿಂಧು 21-18, 5-21, 9-21 ಅಂತರದಲ್ಲಿ ದಕ್ಷಿಣ ಕೊರಿಯಾದ ಶಟ್ಲರ್ ವಿರುದ್ಧ ಸತತ ಆರನೇ ಸೋಲು ಅನುಭವಿಸಿದರು.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಉತ್ತಮ ಆಟ ಆರಂಭಿಸಿದರು. ಒಂದು ಹಂತದಲ್ಲಿ 13-16 ರಿಂದ ಹಿನ್ನಡೆಯಲ್ಲಿದ್ದರೂ ಮೊದಲ ಗೇಮ್ ಗೆದ್ದರು. ಭಾರತೀಯ ಆಟಗಾರ್ತಿ ತಮ್ಮ ಹಿಂದಿನ ಐದು ಹಣಾಹಣಿಯಲ್ಲಿ ಆನ್ ಸೆ ಯಂಗ್ ವಿರುದ್ಧ ಒಂದು ಪಂದ್ಯವನ್ನೂ ಗೆದ್ದಿರಲಿಲ್ಲ. ಆ್ಯನ್ ಸೆ ಯಂಗ್ ಎರಡನೇ ಗೇಮ್​ನಲ್ಲಿ ಪ್ರಾಬಲ್ಯ ಮೆರೆದರು. ಮೂರನೇ ಸೆಟ್​ನಲ್ಲಿ ಸಿಂಧು ಹೊರಾಟ ನಡೆಸಿದರಾದರೂ ಯಂಗ್ ಅವರನ್ನು ಭೇದಿಸಲು ಸಾಧ್ಯವಾಗಲಿಲ್ಲ.

ಕಳೆದ ವರ್ಷ ಮನಿಲಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನ ಕೊನೆಯ ಆವೃತ್ತಿಯಲ್ಲಿ, ಸಿಂಧು ಸೆಮಿಫೈನಲ್‌ನಲ್ಲಿ ಅಕಾನೆ ಯಮಗುಚಿ ವಿರುದ್ಧ ಸೋತು ಕಂಚಿಗೆ ತೃಪ್ತಿಪಟ್ಟಿದ್ದರು. 27ರ ಹರೆಯದ ಸಿಂಧು 2014ರಲ್ಲಿ ಕಂಚು ಗೆದ್ದಿದ್ದರು.

ಇನ್ನೊಂಡೆದೆ ಭಾರತದ ರೋಹನ್ ಕಪೂರ್-ಎನ್ ಸಿಕ್ಕಿ ರೆಡ್ಡಿ ಅವರ ಮಿಶ್ರ ಡಬಲ್ಸ್ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ಇಂಡೋನೇಷ್ಯಾದ ಡೆಜಾನ್ ಫರ್ಡಿನಾನ್ಸ್ಯಾ-ಗ್ಲೋರಿಯಾ ಇಮ್ಯಾನುಯೆಲ್ಲೆ ವಿಡ್ಜಾಜಾ ಅವರ ವಿಶ್ವದ ನಂ. 19 ಜೋಡಿ ವಿರುದ್ಧ 18-21, 21-19, 15-21 ರಿಂದ ಸೋತಿದೆ.

ಕಾಮನ್‌ವೆಲ್ತ್ ಗೇಮ್ಸ್ 2022ರ ಪುರುಷರ ಡಬಲ್ಸ್ ಚಾಂಪಿಯನ್‌ಗಳಾದ ಸಾತ್ವಿಕ್‌ ಸಾಯಿ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಸೆಮಿಫೈನಲ್‌ನಲ್ಲಿ ಸ್ಥಾನಕ್ಕಾಗಿ ಮೂರನೇ ಶ್ರೇಯಾಂಕದ ಇಂಡೋನೇಷ್ಯಾದ ಮೊಹಮ್ಮದ್ ಅಹ್ಸನ್ ಮತ್ತು ಹೆಂಡ್ರಾ ಸೆಟಿಯಾವಾನ್ ವಿರುದ್ಧ ಸೆಣಸಲಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ವಿಶ್ವದ ನಂ. 9ನೇ ಶ್ರೇಯಾಂಕದ ಹೆಚ್‌ಎಸ್‌ ಪ್ರಣಯ್‌ ಅವರು ವಿಶ್ವದ ನಂ. 15ನೇ ಶ್ರೇಯಾಂಕದ ಜಪಾನ್‌ನ ಕಾಂತಾ ತ್ಸುನೇಯಮಾ ವಿರುದ್ಧ ಆಡಿದ್ದು, ಅವರು ಸಹ 11-21, 9-13ರ ನೇರ ಸೆಟ್​ನಲ್ಲಿ ಸೋಲನುಭವಿಸಿದರು.

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ ಜರ್ನಿ: ಪಿವಿ ಸಿಂಧು ಕೇವಲ ಎರಡು ಗೇಮ್‌ಗಳಲ್ಲಿ ಚೀನಾದ ಹಾನ್ ಯುಯೆ ಅವರನ್ನು 21-12, 21-15 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್​ಗೆ ಲಗ್ಗೆ ಇಟ್ಟಿದ್ದರು. ಅವರು ತೈವಾನ್‌ನ ಹ್ಸು ವೆನ್-ಚಿ ಅವರನ್ನು 21-15, 22-20 ರಿಂದ ಸೋಲಿಸಿ 16ರ ಸುತ್ತಿಗೆ ಪ್ರವೇಶಿಸಿದ್ದರು.

ಪ್ರಣಯ್ 21-16, 5-21, 21-18 ರಿಂದ ಇಂಡೋನೇಷ್ಯಾದ ಚಿಕೊ ಔರಾ ದ್ವಿ ವಾರ್ಡೋಯೊ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್​ಗೆ ಪ್ರವೇಶ ಪಡೆದಿದ್ದರು. ಪ್ರಣಯ್ ಹೆಚ್‌ಎಸ್ ಅವರು 32ರ ಸುತ್ತಿನಲ್ಲಿ ಮ್ಯಾನ್ಮಾರ್‌ನ ಫೋನ್ ಪಿಯೆ ನೈಂಗ್ ಅವರನ್ನು 21-14, 21-9ರಿಂದ ಸೋಲಿಸಿದರು.

ಇದನ್ನೂ ಓದಿ: ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌: ಪಿವಿ ಸಿಂಧು, ಪ್ರಣಯ್ ಕ್ವಾರ್ಟರ್‌ಫೈನಲ್​ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.