ETV Bharat / sports

ಕ್ರೀಡೆ: ವಿಶ್ವ ಭೂಪಟದಲ್ಲಿ ಭಾರತ ಎಲ್ಲಿದೆ?

author img

By ETV Bharat Karnataka Team

Published : Oct 9, 2023, 5:12 PM IST

Updated : Oct 10, 2023, 6:36 AM IST

ಒಟ್ಟು 28 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದೆ.

Where do we stand in comparison to them?
Where do we stand in comparison to them?

ನವದೆಹಲಿ : ಚೀನಾದ ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್​ನಲ್ಲಿ ಭಾಗವಹಿಸಿದ ಭಾರತೀಯ ಸ್ಪರ್ಧಿಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಈವೆಂಟ್​ನ 72 ವರ್ಷಗಳ ಇತಿಹಾಸದಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ ಭಾರತ 28 ಚಿನ್ನದ ಪದಕ ಸೇರಿದಂತೆ ಒಟ್ಟು 107 ಪದಕಗಳನ್ನು ತನ್ನದಾಗಿಸಿಕೊಂಡಿತು.

ಈ ಅದ್ಭುತ ಪ್ರದರ್ಶನದ ಮೂಲಕ ಭಾರತವು ಒಟ್ಟಾರೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿ ಪ್ರತಿಷ್ಠೆ ಹೆಚ್ಚಿಸಿಕೊಂಡಿದೆ. ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ಮಾತ್ರ ನಮಗಿಂತ ಮುಂದಿವೆ. ಇದೊಂದು ಐತಿಹಾಸಿಕ ಸಾಧನೆಯಾಗಿದ್ದು, 2018 ರಲ್ಲಿ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಮ್ಮ ತಂಡದ 70 ಪದಕಗಳ ಸಾಧನೆಯನ್ನು ಮೀರಿಸಿದೆ.

ಈ ಗೆಲುವು ಭಾರತೀಯ ಕ್ರೀಡಾಪಟುಗಳ ಅಚಲ ಸಮರ್ಪಣೆ ಮತ್ತು ದೃಢತೆಯನ್ನು ತೋರಿಸಿದೆ. ಭಾರತೀಯ ಕ್ರೀಡಾಪಟುಗಳು ಸವಾಲಿನ ಪರಿಸ್ಥಿತಿಗಳ ನಡುವೆಯೂ ಉತ್ತಮ ಸಾಧನೆ ಮುಂದುವರಿಸಿದ್ದಾರೆ. 1951ರ ಉದ್ಘಾಟನಾ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನ ಮತ್ತು 1962ರ ಜಕಾರ್ತಾ ಕ್ರೀಡಾಕೂಟದಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪ್ರಯಾಣ ಆರಂಭವಾಗಿತ್ತು.

ಈ ಬಾರಿ 5-11 ರ ನಡುವಿನ ರ್ಯಾಂಕಿಂಗ್​​ನೊಂದಿಗೆ ಪ್ರಾರಂಭವಾದ ಭಾರತೀಯ ತಂಡದ ಗಮನಾರ್ಹ ಪ್ರದರ್ಶನವು ನೂರಕ್ಕೂ ಹೆಚ್ಚು ಪದಕಗಳಿಗೆ ಕಾರಣವಾಯಿತು. ಕ್ರೀಡಾಪಟುಗಳು ತಮ್ಮ ಅಸಾಧಾರಣ ಪ್ರದರ್ಶನದಿಂದ ಇಡೀ ರಾಷ್ಟ್ರದ ಮೆಚ್ಚುಗೆ ಗಳಿಸಿದರು. ವಿಶೇಷವೆಂದರೆ, ಭಾರತೀಯ ಬಿಲ್ಲುಗಾರರಾದ ಜ್ಯೋತಿ ಮತ್ತು ಓಜಾಸ್ ಪ್ರವೀಣ್ ಅವರ ಅತ್ಯುತ್ತಮ ಪ್ರದರ್ಶನವು ತಲಾ ಮೂರು ಚಿನ್ನದ ಪದಕಗಳನ್ನು ಗಳಿಸಿತು. ಇದಲ್ಲದೆ, ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಬ್ಯಾಡ್ಮಿಂಟನ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು.

ಬಿಲ್ಲುಗಾರಿಕೆ, ಕಬಡ್ಡಿ, ಕ್ರಿಕೆಟ್, ಬ್ಯಾಡ್ಮಿಂಟನ್, ಶೂಟಿಂಗ್, ಅಥ್ಲೆಟಿಕ್ಸ್ ಮತ್ತು ಇತರ ವಿಭಾಗಗಳಲ್ಲಿ ಭಾರತೀಯ ತಂಡದ ಸಾಮೂಹಿಕ ಆಕ್ರಮಣಶೀಲ ಆಟದಿಂದ ಇಷ್ಟೊಂದು ಪದಕಗಳನ್ನು ಗೆಲ್ಲಲು ಸಾಧ್ಯವಾಗಿದೆ. ಕಳೆದ ಬಾರಿ ಜಕಾರ್ತಾದಲ್ಲಿ 132 ಚಿನ್ನ ಸೇರಿದಂತೆ 289 ಪದಕಗಳನ್ನು ಗೆದ್ದಿದ್ದ ಚೀನಾ, ಈ ಬಾರಿ 201 ಚಿನ್ನ ಸೇರಿದಂತೆ 383 ಪದಕಗಳೊಂದಿಗೆ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

ಈ ದೃಷ್ಟಿಕೋನದಲ್ಲಿ ಹೇಳುವುದಾದರೆ, ಭಾರತದ ರಾಜ್ಯಗಳಲ್ಲಿ ಒಂದಾದ ಬಿಹಾರವು ಸರಿಸುಮಾರು 13 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಇದಕ್ಕೆ ಹೋಲಿಸಿದರೆ, 12 ಕೋಟಿ ಜನಸಂಖ್ಯೆ ಹೊಂದಿರುವ ಜಪಾನ್ 52 ಚಿನ್ನ ಸೇರಿದಂತೆ ಒಟ್ಟು 188 ಪದಕಗಳನ್ನು ಗಳಿಸಿದೆ. ಒಡಿಶಾ ರಾಜ್ಯವು ಸುಮಾರು ಐದು ಕೋಟಿ ಜನಸಂಖ್ಯೆಯನ್ನು ಹೊಂದಿದ್ದರೆ, ಅದೇ ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣ ಕೊರಿಯಾ 42 ಚಿನ್ನ ಸೇರಿದಂತೆ 190 ಪದಕಗಳನ್ನು ಹೊಂದಿದೆ. 140 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತವು ಕ್ರೀಡಾ ಶ್ರೇಷ್ಠತೆಯ ಹಾದಿಯಲ್ಲಿ ಸಾಗಬೇಕಾದ ದಾರಿ ಬಹಳ ದೂರವಿದೆ.

ಕ್ರೀಡಾ ಜಗತ್ತಿನಲ್ಲಿ ಶಾಶ್ವತ ಶಕ್ತಿ ಕೇಂದ್ರವಾಗಿರುವ ಚೀನಾ 1982 ರ ಏಷ್ಯನ್ ಕ್ರೀಡಾಕೂಟದಿಂದ ನಿರಂತರವಾಗಿ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿದೆ. ಚೀನಾದ ಸಾಟಿಯಿಲ್ಲದ ಯಶಸ್ಸಿಗೆ ಅದು ತನ್ನ ದೇಶಾದ್ಯಂತ ಸ್ಥಾಪಿಸಿರುವ ಸಾವಿರಾರು ಜಿಮ್​ಗಳು ಮತ್ತು ಅತ್ಯಂತ ಚಿಕ್ಕ ವಯಸ್ಸಿನಿಂದಲೇ ಅಸಾಧಾರಣ ಪ್ರತಿಭಾವಂತ ಯುವಕರನ್ನು ಗುರುತಿಸಿ ಪೋಷಿಸುವ ವಿಧಾನ ಕಾರಣವಾಗಿದೆ.

ಪದಕ ಗಳಿಕೆಯಲ್ಲಿ ಚೀನಾಕ್ಕಿಂತ ಹಿಂದೆ ಇರುವ ಜಪಾನ್ ಮತ್ತು ದಕ್ಷಿಣ ಕೊರಿಯಾ ಕೂಡ ಕ್ರೀಡಾ ಜಗತ್ತಿನಲ್ಲಿ ಗಮನಾರ್ಹ ಯಶಸ್ಸನ್ನು ಪ್ರದರ್ಶಿಸಿವೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿನ ಕ್ರೀಡಾಸಕ್ತಿಯನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡುವುದು ಜಪಾನ್​ ಸರ್ಕಾರದ ನೀತಿಯಾಗಿದೆ. ಜಪಾನ್​ನಲ್ಲಿ ಆಟದ ಮೈದಾನವಿಲ್ಲದ ಶಾಲೆಗಳೇ ಇಲ್ಲವೆಂದರೆ ಅತಿಶಯೋಕ್ತಿಯಲ್ಲ.

ಮತ್ತೊಂದೆಡೆ, ದಕ್ಷಿಣ ಕೊರಿಯಾವು 'ಚೀನಾ ಮಾದರಿ'ಗೆ ಹೋಲುವ ವಿಶಿಷ್ಟ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದು ಯುವ ಕ್ರೀಡಾ ಪ್ರತಿಭೆಗಳಿಗೆ ವೈಜ್ಞಾನಿಕ ತರಬೇತಿಯನ್ನು ನೀಡುವತ್ತ ಗಮನ ಹರಿಸಿದೆ. ಕ್ರೀಡೆಗಳು ಆತ್ಮವಿಶ್ವಾಸದ ಮೂಲವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ರಾಷ್ಟ್ರೀಯ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ಹಲವಾರು ರಾಷ್ಟ್ರಗಳು ಅರ್ಥ ಮಾಡಿಕೊಂಡಿವೆ. ಈ ವಿಧಾನವು ಜಾಗತಿಕ ವೇದಿಕೆಗಳಲ್ಲಿ ಮೆಚ್ಚುಗೆಯನ್ನು ಗಳಿಸಿದೆ.

ಭಾರತದಲ್ಲಿಯೂ ಅಂಥ ಯಶಸ್ಸನ್ನು ಪುನರಾವರ್ತಿಸಲು ಅಸಾಧಾರಣ ಪ್ರತಿಭಾವಂತ ವ್ಯಕ್ತಿಗಳಿಗೆ ಅಥ್ಲೆಟಿಕ್ ಸೌಲಭ್ಯಗಳು, ಮೂಲಸೌಕರ್ಯ ಮತ್ತು ಸಾಕಷ್ಟು ಪ್ರೋತ್ಸಾಹವನ್ನು ಒದಗಿಸುವತ್ತ ಗಮನ ಹರಿಸಿ ಎಲ್ಲ ರಾಜ್ಯಗಳಲ್ಲೂ ಇದೇ ರೀತಿಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ಭಾರತವು ಹೇರಳವಾದ ಕ್ರೀಡಾ ಪ್ರತಿಭೆಗಳನ್ನು ಹೊಂದಿದ್ದು, ಸಾಂಸ್ಥಿಕ ಬೆಂಬಲವನ್ನು ಒದಗಿಸಿದರೆ ಹಲವಾರು ಕ್ರೀಡಾ ತಾರೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ : ಕ್ರಿಕೆಟ್​ ವಿಶ್ವಕಪ್ 2023 : ರಾಹುಲ್​, ವಿರಾಟ್ ಆಟವನ್ನ ಹೊಗಳಿದ ರೋಹಿತ್​

Last Updated : Oct 10, 2023, 6:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.