ETV Bharat / sports

ಪಾಕ್​ಗೆ ಮತ್ತೆ ನವಾಜ್​ ವಿಲನ್! ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆಗೆ ಐತಿಹಾಸಿಕ ಗೆಲುವು

author img

By

Published : Oct 27, 2022, 8:14 PM IST

Updated : Oct 27, 2022, 9:28 PM IST

ಜಿಂಬಾಬ್ವೆ ನೀಡಿದ್ದ 130 ರನ್​ಗಳ ಸಾಧಾರಣ ಗುರಿ ಸಾಧಿಸುವಲ್ಲಿ ಎಡವಿದ ಪಾಕಿಸ್ತಾನ ಸೋಲು ಕಂಡಿತು. ಜಿಂಬಾಬ್ವೆ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಪಾಕ್​ ವಿರುದ್ಧ ಗೆದ್ದು ಬೀಗಿತು. ಪಾಯಿಂಟ್​ ಪಟ್ಟಿಯಲ್ಲಿ ಪಾಕ್​ ಕೊನೆಯ ಸ್ಥಾನದಲ್ಲಿದೆ.

zimbabwe
ವಿಶ್ವಕಪ್‌ನಲ್ಲಿ ಜಿಂಬಾಬ್ವೆಗೆ ಐತಿಹಾಸಿಕ ಗೆಲುವು

ಪರ್ತ್​(ಆಸ್ಟ್ರೇಲಿಯಾ): ಪಾಕಿಸ್ತಾನಕ್ಕೆ ಮೊಹಮದ್​ ನವಾಜ್​ ಮತ್ತೆ ವಿಲನ್​ ಆಗಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲಿ ವೈಡ್​, ನೋಬಾಲ್​ ಹಾಕಿ ಪಂದ್ಯ ಕೈಚೆಲ್ಲುವಂತೆ ಮಾಡಿದ್ದರು. ಇಂದು ಜಿಂಬಾಬ್ವೆ ವಿರುದ್ಧ ಕೊನೆಯಲ್ಲಿ ಔಟ್​ ಆಗಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಜಿಂಬಾಬ್ವೆ ನೀಡಿದ್ದ 130 ರನ್​ಗಳ ಸಾಧಾರಣ ಗುರಿ ಮುಟ್ಟುವಲ್ಲಿ ಎಡವಿಬಿದ್ದ ಪಾಕಿಸ್ತಾನ ಅಂತಿಮವಾಗಿ 1 ರನ್ನಿಂದ ಸೋತು ತೀವ್ರ ಮುಖಭಂಗ ಅನುಭವಿಸಿತು.

ಕ್ರಿಕೆಟ್​ನಲ್ಲಿ ಮತ್ತೆ ಬೆಳೆಯುತ್ತಿರುವ ಜಿಂಬಾಬ್ವೆ ಮೊದಲು ಬ್ಯಾಟ್​ ಮಾಡಿ 8 ವಿಕೆಟ್​ಗೆ 130 ರನ್​ ಗಳಿಸಿತ್ತು. ಸಲೀಸಾಗಿ ಗೆಲ್ಲಬಹುದಾಗಿದ್ದ ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಗೆಲುವಿನಂಚಿನಲ್ಲಿ ಮತ್ತೆ ಎಡವಿಬಿದ್ದು 8 ವಿಕೆಟ್​ಗೆ 129 ಗಳಿಸಿ 1 ರನ್ನಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಜಿಂಬಾಬ್ವೆ ವಿಶ್ವಕಪ್​ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ.

ಕೊನೆಯ ಓವರ್​ ಥ್ರಿಲ್ಲರ್​: ಪಾಕಿಸ್ತಾನ ತಂಡ ಬೌಲಿಂಗ್​, ಬ್ಯಾಟಿಂಗ್​ನಲ್ಲಿ ಸದೃಢವಾಗಿದ್ದರೂ ಪಂದ್ಯವನ್ನು ಕೊನೆಯ ಓವರ್​ವರೆಗೂ ಕೊಂಡೊಯ್ದು ಅಂತಿಮವಾಗಿ ಸೋಲನುಭವಿಸಿತು. ಕೊನೆಯ ಓವರ್​ನಲ್ಲಿ ಗೆಲ್ಲಲು 11 ರನ್​ಗಳ ಅವಶ್ಯಕತೆ ಇತ್ತು. ಕ್ರೀಸ್​ನಲ್ಲಿದ್ದುದು ಕಳೆದ ಪಂದ್ಯದ ಸೋಲಿನ ಕಾರಣರಾಗಿದ್ದ​ ಮೊಹಮದ್​ ನವಾಜ್​ ಮತ್ತು ಮೊಹಮದ್​ ವಾಸಿಂ​ ಜೂನಿಯರ್​. ಬ್ರಾಡ್​ ಈವನ್ಸ್​ ಎಸೆದ ಮೊದಲ ಬಾಲ್​ ಅನ್ನು ಬಲವಾಗಿ ಹೊಡೆದ ನವಾಜ್​ 3 ರನ್​ ತೆಗೆದರು.

ಬಳಿಕ ಸ್ಟ್ರೈಕ್​ ಪಡೆದ ವಾಸೀಂ ಜೂನಿಯ​ರ್​​ ಬೌಂಡರಿ ಗಳಿಸಿದರು. ಮೂರನೇ ಎಸೆತದಲ್ಲಿ 1 ರನ್​ ಬಂತು. ನಾಲ್ಕನೇ ಎಸೆತ ಎದುರಿಸಿದ ನವಾಜ್​ ರನ್​ ಗಳಿಸಲಿಲ್ಲ. ಈ ವೇಳೆ ತಂಡ ತೀವ್ರ ಒತ್ತಡಕ್ಕೆ ಸಿಲುಕಿತು. 2 ಎಸೆತಗಳಲ್ಲಿ ಗೆಲುವಿಗೆ 3 ರನ್​ ಬೇಕಿತ್ತು. ನವಾಜ್​ ಎದುರಿಸಿದ 5 ನೇ ಬಾಲ್​ ನೇರವಾಗಿ ಇರ್ವಿನ್​ ಕೈಸೇರಿತು.

ಇದು ಪಾಕಿಸ್ತಾನದ ಹೃದಯ ಒಡೆದು ಹಾಕಿತು. ಪಂದ್ಯ ಗೆಲ್ಲಿಸಬೇಕಿದ್ದ ನವಾಜ್​ 3 ರನ್​ ಅಗತ್ಯವಿದ್ದಾಗ ಔಟಾಗಿ ಅಭಿಮಾನಿಗಳ ಕೋಪಕ್ಕೆ ಕಾರಣವಾದರು. ನವಾಜ್​ ಕೂಡ ಬ್ಯಾಟ್​ ತಲೆಮೇಲಿಟ್ಟುಕೊಂಡು ಕೆಲಕ್ಷಣ ಮೈದಾನದಲ್ಲೇ ಕುಸಿದರು. ಕೊನೆಯ ಎಸೆತವನ್ನು ಶಾಹೀನ್​ ಆಫ್ರಿದಿ ಎದುರಿಸಿ ಓಡುತ್ತಿದ್ದಾಗ 1 ಮಾತ್ರ ಗಳಿಸಿ ರನೌಟ್​ ಆದರು. ಇದರಿಂದ ಜಿಂಬಾಬ್ವೆ ಪಾಕಿಸ್ತಾನ ವಿರುದ್ಧ 1 ರನ್ನಿಂದ ಗೆಲುವಿನ ದಾಖಲೆ ಬರೆಯಿತು. ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಇದೇ ಮೊದಲ ಮತ್ತು ಒಟ್ಟಾರೆ 2ನೇ ಗೆಲುವಾಗಿದೆ.

ತಂಡದ ಹಿಟ್ಟರ್​ಗಳು ಫೇಲ್​​: ಇದಕ್ಕೂ ಮೊದಲು ತಂಡದ ಪ್ರಮುಖ ಬ್ಯಾಟರ್​ಗಳಾದ ಮೊಹಮದ್​ ರಿಜ್ವಾನ್​, ನಾಯಕ ಬಾಬರ್​ ಅಜಂ ಮತ್ತೆ ಕೈಕೊಟ್ಟರು. ಬಾಬರ್​ 4, ರಿಜ್ವಾನ್​ 14 ರನ್ನಿಗೆ ಗಂಟುಮೂಟೆ ಕಟ್ಟಿದರು. ಇಫ್ತಿಕಾರ್ ಅಹ್ಮದ್​ 5, ಶಾದಾಬ್​ ಖಾನ್​ 17, ಹೈದರ್​ ಅಲಿ ಸೊನ್ನೆ ಸುತ್ತಿದರು.

ತಂಡ ಸತತ ವಿಕೆಟ್​ ಕಳೆದುಕೊಂಡರೂ ಶಾನ್​ ಮಸೂದ್​​ ಮತ್ತೆ ಆಪದ್ಭಾಂದವರಾದರು. 44 ರನ್​ ಗಳಿಸಿದರು. ವಾಸೀಂ ಜೂನಿಯ್​ ಔಟಾಗದೇ 12 ರನ್​ ಮಾಡಿದರು. ಜಿಂಬಾಬ್ವೆ ಪರವಾಗಿ ಸಿಕಂದರ್​ ರಾಜಾ 3, ಬ್ರಾಡ್​ ಇವನ್ಸ್​ 2 ವಿಕೆಟ್​ ಕಿತ್ತರು.

ಪರದಾಡಿದ ಜಿಂಬಾಬ್ವೆ ಬ್ಯಾಟರ್​ಗಳು: ಮೊದಲು ಬ್ಯಾಟ್​ ಮಾಡಿದ ಜಿಂಬಾಬ್ವೆ ತಂಡ ಪಾಕ್​ ವೇಗಿಗಳ ದಾಳಿಗೆ ನಲುಗಿ 8 ವಿಕೆಟ್​ಗೆ 130 ಸಾಧಾರಣ ಮೊತ್ತ ದಾಖಲಿಸಿತು. ವೆಸ್ಲೆ ಮಧೆವೆರೆ 17, ಕ್ರೇಗ್​ ಇರ್ವಿನ್​ 19, ಸೀನ್​ ವಿಲಿಯಮ್ಸನ್​ 31 ಬ್ರಾಡ್​ ಇವನ್ಸ್​ 19 ರನ್​ ಗಳಿಸಿದರು. ಪಾಕಿಸ್ತಾನದ ಪರವಾಗಿ ಮೊಹಮದ್​ ವಾಸೀಂ ಜೂನಿಯರ್​ 4 ವಿಕೆಟ್ ಕಿತ್ತು ಪ್ರಭಾವಿಯಾದರೆ, ಶಾದಾಬ್​ ಖಾನ್​ 3, ಹ್ಯಾರೀಸ್​ ರೌಫ್​ 1 ವಿಕೆಟ್ ಪಡೆದರು. 2 ಪಂದ್ಯಗಳನ್ನೂ ಸೋತಿರುವ ಪಾಕಿಸ್ತಾನ ಪಾಯಿಂಟ್​ ಪಟ್ಟಿಯಲ್ಲಿ ಕೊನೆಗೆ ದೂಡಿದೆ.

ಇದನ್ನೂ ಓದಿ: ಸಿಡ್ನಿಯಲ್ಲಿ ವಿರಾಟ್​ ಕೊಹ್ಲಿ ಸಿಕ್ಸರ್ ಪಟಾಕಿ; ತನ್ನದೇ ಶಾಟ್‌ಗೆ ರನ್‌ ಮಷಿನ್‌ ಅಚ್ಚರಿ

Last Updated : Oct 27, 2022, 9:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.