ETV Bharat / sports

ವಿಶ್ವಕಪ್ ಕ್ರಿಕೆಟ್‌: ರೂಟ್‌, ಬಟ್ಲರ್‌ ಜವಾಬ್ದಾರಿಯುತ ಬ್ಯಾಟಿಂಗ್; ನ್ಯೂಜಿಲೆಂಡ್‌ಗೆ 283 ರನ್​ ಟಾರ್ಗೆಟ್‌

author img

By ETV Bharat Karnataka Team

Published : Oct 5, 2023, 11:23 AM IST

Updated : Oct 5, 2023, 7:55 PM IST

World Cup 2023: ವಿಶ್ವಕಪ್​ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​, ರನ್ನರ್​ ಅಪ್​ ನ್ಯೂಜಿಲೆಂಡ್​ ವಿರುದ್ಧ ಸಾಧಾರಣ ಮೊತ್ತ ಕಲೆಹಾಕಿತು.

ಇಂಗ್ಲೆಂಡ್​ ನ್ಯೂಜಿಲೆಂಡ್ ಮೊದಲ ಪಂದ್ಯ
ಇಂಗ್ಲೆಂಡ್​ ನ್ಯೂಜಿಲೆಂಡ್ ಮೊದಲ ಪಂದ್ಯ

ಅಹಮದಾಬಾದ್‌: ನಂಬಿಕಸ್ಥ ಬ್ಯಾಟರ್​ ಜೋ ರೂಟ್​ ಅರ್ಧಶತಕ, ನಾಯಕ ಜೋಸ್​ ಬಟ್ಕರ್​ ಅವರ ಉಪಯುಕ್ತ ಕಾಣಿಕೆಯಿಂದಾಗಿ ಏಕದಿನ ವಿಶ್ವಕಪ್​ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​, ರನ್ನರ್​ ಅಪ್​ ನ್ಯೂಜಿಲೆಂಡ್​ ವಿರುದ್ಧ 9 ವಿಕೆಟ್​ ನಷ್ಟಕ್ಕೆ 282 ರನ್​ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. 2019 ರ ವಿಶ್ವಕಪ್​ ಫೈನಲ್​ನಲ್ಲಿ ಟೈ ಆಗಿದ್ದ ಪಂದ್ಯದಲ್ಲಿ ಬೌಂಡರಿ ಕಟ್​ ಆಧಾರದ ಮೇಲೆ ಇಂಗ್ಲೆಂಡ್​ ಎದುರು ಸೋತಿದ್ದ ಕಿವೀಸ್​ ಆರಂಭಿಕ ಪಂದ್ಯದಲ್ಲಿ ಬಿಗಿ ಬೌಲಿಂಗ್ ದಾಳಿ ನಡೆಸಿತು.

ಆರಂಭಿಕರಾದ ಜಾನಿ ಬೈರ್​ಸ್ಟೋವ್​ ಮತ್ತು ಹೊಡಿಬಡಿ ಆಟಗಾರ ಡೇವಿಡ್​ ಮಲಾನ್​ ಸಾಧಾರಣ ಆರಂಭ ನೀಡಿದರು. ತಂಡ 40 ರನ್​ ಗಳಿಸಿದ್ದಾಗ ಮಲಾನ್​ (14) ಔಟಾದರು. ಇದಾದ ಬಳಿಕ ಜಾನಿ ಕೂಡ 33 ರನ್​ಗೆ ಪೆವಿಲಿಯನ್​ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಬಲ ನೀಡಬೇಕಿದ್ದ ಹ್ಯಾರಿ ಬ್ರೂಕ್ಸ್​ (25) ಮತ್ತು ಮೊಯೀನ್​ ಅಲಿ (11) ಅಲ್ಪ ಮೊತ್ತಕ್ಕೆ ವಿಕೆಟ್​ ನೀಡಿದರು. ಇದರಿಂದಾಗಿ ತಂಡ 118 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿತು.

ಜೋ​ ರೂಟ್​ ಅರ್ಧಶತಕ: ತಂಡ ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದಾಗ ನೆರವಾದ ತಂಡದ ಸ್ಟಾರ್​ ಬ್ಯಾಟರ್​ ಜೋ ರೂಟ್​ ನಿಧಾನಗತಿಯಲ್ಲಿ ರನ್​ ಕಲೆಹಾಕಿದರು. ಇನ್ನೊಂದು ತುದಿಯಲ್ಲಿ ನಾಯಕ ಜೋಸ್​ ಬಟ್ಲರ್​ ಕೂಡ ರೂಟ್​ಗೆ ಸಾಥ್​ ನೀಡಿದರು. ಇಬ್ಬರೂ ಸೇರಿ 60 ರನ್​ಗಳ ಜೊತೆಯಾಟ ನೀಡಿದರು. ಬಟ್ಲರ್​ 43 ಗಳಿಸಿದ್ದಾಗ ಮ್ಯಾಟ್​ ಹೆನ್ರಿಗೆ ವಿಕೆಟ್​ ನೀಡಿದರು. ಅತ್ತ ರೂಟ್​ 37 ನೇ ಅರ್ಧಶತಕ ಬಾರಿಸಿದರು. ಕೊನೆಯಲ್ಲಿ ಲಿಯಾಮ್​ ಲಿವಿಂಗ್​ಸ್ಟೋನ್​ 20, ಸ್ಯಾಮ್​ ಕರ್ರನ್​ 14, ಅದಿಲ್​ ರಶೀದ್​ 15 ರನ್​ಗಳಿಂದ ತಂಡ ಒಟ್ಟಾರೆ 50 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 282 ರನ್​ ಗಳಿಸಿತು.

ಕಿವೀಸ್​ ಬಿಗುವಿನ ದಾಳಿ: ಕಳೆದ ವಿಶ್ವಕಪ್​ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ರೀತಿಯಲ್ಲಿ ದಾಳಿ​ ಮಾಡಿದ ನ್ಯೂಜಿಲೆಂಡ್​ ಬೌಲಿಂಗ್​ ಪಡೆ, ಇಂಗ್ಲೆಂಡ್​ ಬ್ಯಾಟರ್​ಗಳನ್ನು ದೊಡ್ಡ ಮೊತ್ತ ಗಳಿಸದಂತೆ ಕಟ್ಟಿ ಹಾಕಿದರು. ವೇಗಿ ಮ್ಯಾಟ್​ ಹೆನ್ರಿ 10 ಓವರ್​ಗಳ ಕೋಟಾದಲ್ಲಿ ಕೇವಲ 48 ರನ್​ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್​ ಕಿತ್ತರು. ಸ್ಪಿನ್ನರ್​ಗಳಾದ ಮಿಚೆಲ್​ ಸ್ಯಾಂಟ್ನರ್​ ಮತ್ತು ಗ್ಲೆನ್​ ಫಿಲಿಪ್ಸ್​ ತಲಾ 2 ವಿಕೆಟ್​ ಪಡೆದರು. ಟ್ರೆಂಟ್​ ಬೌಲ್ಟ್, ಭಾರತೀಯ ಮೂಲದ ರಚಿನ್​ ರವೀಂದ್ರ ತಲಾ 1 ವಿಕೆಟ್​ ಗಳಿಸಿದರು.

ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023: ತೈವಾನ್ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಭಾರತದ ಮಹಿಳಾ ಆರ್ಚರಿ ತಂಡ: ಬಿಲ್ಲುಗಾರಿಕೆಯಲ್ಲಿ ದೇಶಕ್ಕೆ ಐದನೇ ಪದಕ...

Last Updated : Oct 5, 2023, 7:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.