ಮಹಿಳಾ ಐಪಿಎಲ್​: ನಾಳೆ ತಂಡಗಳ ಹರಾಜು; ಬಿಸಿಸಿಐಗೆ ₹4 ಸಾವಿರ ಕೋಟಿ ಆದಾಯ ನಿರೀಕ್ಷೆ

author img

By

Published : Jan 24, 2023, 9:03 AM IST

wipl-team

ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)​ ತಂಡಗಳ ಹರಾಜು ಪ್ರಕ್ರಿಯೆ ನಾಳೆ(ಬುಧವಾರ) ನಡೆಯಲಿದೆ. ಪುರುಷರ ಐಪಿಎಲ್​ ಫ್ರಾಂಚೈಸಿಗಳು ಕೂಡ ಇದರಲ್ಲಿ ಭಾಗವಹಿಸಲಿದ್ದು, ಹೆಚ್ಚಿನ ಮೊತ್ತಕ್ಕೆ ತಂಡಗಳು ಬಿಕರಿಯಾಗಲಿವೆ ಎಂದು ಬಿಸಿಸಿಐ ಅಂದಾಜಿಸಿದೆ.

ನವದೆಹಲಿ: ಮಹಿಳಾ ಕ್ರಿಕೆಟ್​ನಲ್ಲಿ ಹೊಸ ಭಾಷ್ಯ ಬರೆಯಲಿದೆ ಎಂದೇ ಭಾವಿಸಲಾಗಿರುವ ಮಹಿಳಾ ಐಪಿಎಲ್​ನ ಹರಾಜು ಪ್ರಕ್ರಿಯೆ ನಾಳೆ ನಡೆಯಲಿದೆ. ಪುರುಷ ಐಪಿಎಲ್​ನ ಫ್ರಾಂಚೈಸಿಗಳು ಸೇರಿದಂತೆ ಹಲವಾರು ಕಂಪನಿಗಳು ಮಹಿಳಾ ತಂಡಗಳ ಖರೀದಿಗೆ ಮುಗಿಬೀಳಲಿವೆ. ಇದರಿಂದ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ಭರ್ಜರಿ ಆದಾಯದ ನಿರೀಕ್ಷೆಯಲ್ಲಿದೆ.

ಬಿಡ್ಡಿಂಗ್​ನಲ್ಲಿ 5 ತಂಡಗಳು ಖರೀದಿಗೆ ಮುಕ್ತವಿದ್ದು, ಹಲವಾರು ಫ್ರಾಂಚೈಸಿಗಳು ಅಧಿಕ ಮೊತ್ತ ಹೂಡಲಿವೆ. 4 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ಬಿಸಿಸಿಐಗೆ ಹರಿದು ಬರಲಿದೆ ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಹರಾಜಿನಲ್ಲಿ ಪ್ರತಿ ತಂಡ 500 ರಿಂದ 600 ಕೋಟಿ ರೂಪಾಯಿಗೆ ಬಿಕರಿಯಾಗುವ ಸಾಧ್ಯತೆ ಇದೆ. ಕೆಲ ಕಂಪನಿಗಳು 800 ಕೋಟಿ ರೂಪಾಯಿ ನೀಡಿ ತಂಡ ಖರೀದಿಗೆ ಮುಂದಾಗಲಿವೆ ಎಂದೂ ಹೇಳಲಾಗಿದೆ.

ಅದಾನಿ ಗ್ರೂಪ್, ಟೊರೆಂಟ್ ಗ್ರೂಪ್, ಹಲ್ದಿರಾಮ್ಸ್ ಪ್ರಭುಜಿ, ಕ್ಯಾಪ್ರಿ ಗ್ಲೋಬಲ್, ಕೋಟಕ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌, ಪುರುಷರ ಐಪಿಎಲ್​ನ ಎಲ್ಲಾ 10 ಫ್ರಾಂಚೈಸಿಗಳು ಸೇರಿದಂತೆ 30ಕ್ಕೂ ಹೆಚ್ಚು ಕಂಪನಿಗಳು ಆರಂಭಿಕ 5 ಲಕ್ಷ ರೂಪಾಯಿ ಮೌಲ್ಯದ ಹರಾಜು ಅರ್ಜಿ ಖರೀದಿಸಿವೆ. 2021ರಲ್ಲಿ ಎರಡು ಹೊಸ ಪುರುಷರ ತಂಡಗಳಿಗೆ ಬಿಸಿಸಿಐ ಹರಾಜು ಪ್ರಕ್ರಿಯೆಗೆ ಆಹ್ವಾನಿಸಿದಾಗ ಇಲ್ಲಿ ಪಾಲ್ಗೊಂಡಿದ್ದ​ಕಂಪನಿಗಳು ತಂಡಗಳನ್ನು ಖರೀದಿಸಲು ವಿಫಲವಾಗಿದ್ದವು.

ಹರಾಜಿನಲ್ಲಿ ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಗಳು ಈಗಾಗಲೇ ಹಲವಾರು ತಂಡಗಳನ್ನು ಕೊಂಡುಕೊಂಡಿವೆ. ಮಹಿಳಾ ಐಪಿಎಲ್​ನಲ್ಲೂ ಈ ಫ್ರಾಂಚೈಸಿಗಳು ಹೂಡಿಕೆ ಮಾಡಲು ಮುಂದೆ ಬಂದಿವೆ. ಮಹಿಳಾ ಐಪಿಎಲ್ ಋತುವಿನ ಅಧಿಕೃತ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಮಹಿಳಾ ಲೀಗ್ ಈ ವರ್ಷದ ಮಾರ್ಚ್ 3 ರಿಂದ 26 ರವರೆಗೆ ನಡೆಯುವ ಸಾಧ್ಯತೆಯಿದೆ. ಈ ಋತುವಿನಲ್ಲಿ ಒಟ್ಟು 22 ಪಂದ್ಯಗಳನ್ನು ನಡೆಸಲು ಯೋಜಿಸಲಾಗಿದೆ.

ಐಪಿಎಲ್​ಗೂ ಮೊದಲು ಮಹಿಳಾ ಟಿ20 ಚಾಲೆಂಜ್ ಪಂದ್ಯಾವಳಿಯನ್ನು ಆಡಿಸಲಾಗಿತ್ತು. ಇದರಲ್ಲಿ ಒಟ್ಟು 3 ತಂಡಗಳು ಭಾಗವಹಿಸಿದ್ದವು. ಕೇವಲ 5 ಪಂದ್ಯಗಳಿಗೆ ಸೀಮಿತವಾಗಿದ್ದ ಟೂರ್ನಿ ಇದಾಗಿತ್ತು. ಮಹಿಳಾ ಐಪಿಎಲ್ ಕುರಿತು ಬಿಸಿಸಿಐ ನೀಡಿದ ಮಾಹಿತಿ ಪ್ರಕಾರ, ಡಬ್ಲ್ಯುಐಪಿಎಲ್- 2023 ದೇಶೀಯ ಮತ್ತು ಅಂತಾರಾಷ್ಟ್ರೀಯ ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಫ್ರಾಂಚೈಸಿಗಳ ಎದುರಾಳಿ ತಂಡದ ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸುವುದು ಸವಾಲಿನದ್ದಾಗಿದೆ. ಆದ್ದರಿಂದ ಮೊದಲ 10 ಪಂದ್ಯಗಳನ್ನು ಒಂದು ಮೈದಾನದಲ್ಲಿ ಹಾಗೂ ಉಳಿದ 10 ಪಂದ್ಯಗಳನ್ನು ಇನ್ನೊಂದು ಮೈದಾನದಲ್ಲಿ ನಡೆಸಲು ಯೋಜಿಸಲಾಗಿದೆ.

ಪ್ರಸಾರ ಹಕ್ಕು ವಯಾಕಾಮ್​ 18ಗೆ: ಪುರುಷರ ಕ್ರಿಕೆಟ್​ನ ಇಂಡಿಯನ್​ ಪ್ರೀಮಿಯರ್​ ಲೀಗ್​ ಡಿಜಿಟಲ್​ ಪ್ರಸಾರ ಹಕ್ಕು ಪಡೆದಿದ್ದ ವಯಾಕಾಮ್​ 18 ಸಂಸ್ಥೆ, ಮಹಿಳಾ ಐಪಿಎಲ್​ನ ಮಾಧ್ಯಮ ಹಕ್ಕುಗಳನ್ನು ಪಡೆದುಕೊಂಡಿದೆ. 951 ಕೋಟಿ ರೂಪಾಯಿ ಬಿಡ್​ ಮಾಡಿರುವ ಈ ಸಂಸ್ಥೆ ಮೊದಲ 5 ವರ್ಷ ಗುತ್ತಿಗೆ ಪ್ರಸಾರದ ಹಕ್ಕು ತನ್ನದಾಗಿಸಿಕೊಂಡಿದೆ. ಈ ಮೂಲಕ ಬಿಸಿಸಿಐ ಪ್ರತಿ ಪಂದ್ಯಕ್ಕೆ 7.10 ಕೋಟಿ ರೂಪಾಯಿ ಗಳಿಸಲಿದೆ.

ಫ್ರಾಂಚೈಸಿಗಳು ಹಣ ಗಳಿಸುವುದು ಹೀಗೆ: ಬಿಸಿಸಿಐ ತನ್ನ ಮಾಧ್ಯಮ ಪ್ರಸಾರದ ಆದಾಯವನ್ನು ಫ್ರಾಂಚೈಸಿಗಳಿಗೆ ವಿತರಿಸುತ್ತದೆ. ಇದು ಪ್ರಮುಖ ಗಳಿಕೆಯ ಭಾಗವಾಗಿದ್ದರೆ, ಬಿಸಿಸಿಐನ ಪ್ರಾಯೋಜಕತ್ವದಿಂದಲೂ ಪಾಲು ಬರುತ್ತದೆ. ಫ್ರಾಂಚೈಸಿಯ ಸ್ವಂತ ಪ್ರಾಯೋಜಕತ್ವದ ಗಳಿಕೆ, ಮೈದಾನದ ಟಿಕೆಟ್​ಗಳ ಮಾರಾಟದಲ್ಲೂ ಹಣ ಬರಲುತ್ತದೆ. 150 ಕೋಟಿ ರೂಪಾಯಿ ಹೂಡಿದ ಪ್ರತಿ ಫ್ರಾಂಚೈಸಿಯು 5 ವರ್ಷಗಳ ಅವಧಿಯಲ್ಲಿ ವರ್ಷಕ್ಕೆ ಸುಮಾರು 50 ಕೋಟಿ ರೂಪಾಯಿಗಳನ್ನು ಆದಾಯವಾಗಿ ಪಡೆಯುತ್ತದೆ.

ಇದನ್ನೂ ಓದಿ: ವಯಾಕಾಮ್​ 18 ಸಂಸ್ಥೆಗೆ ಮಹಿಳಾ ಐಪಿಎಲ್​ ಪ್ರಸಾರದ ಹಕ್ಕು.. ₹951 ಕೋಟಿ ರೂಪಾಯಿಗೆ ಬಿಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.