ETV Bharat / sports

ವಿಶ್ವಕಪ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ನರಿಂದ ನೀರಸ ಪ್ರದರ್ಶನ! ಟೂರ್ನಿಯಿಂದ ಹೊರಬೀಳುತ್ತಾ ಇಂಗ್ಲೆಂಡ್‌?

author img

By ETV Bharat Karnataka Team

Published : Oct 23, 2023, 7:56 PM IST

Updated : Oct 24, 2023, 12:33 PM IST

ಹಾಲಿ ಚಾಂಪಿಯನ್​ ಇಂಗ್ಲೆಂಡ್​ 2023ರ ವಿಶ್ವಕಪ್​ನಲ್ಲಿ ಬಲಿಷ್ಠ ತಂಡವಾದರೂ ಕಳಪೆ ಪ್ರದರ್ಶನ ನೀಡುತ್ತಿದೆ. ಈ ಬಗ್ಗೆ ಕುಮಾರ್​ ಎಸ್​​​​ ಸುಬ್ರಹ್ಮಣ್ಯ ಮಾಡಿರುವ ವಿಶ್ಲೇಷಣೆ ಇಲ್ಲಿದೆ.

Cricket World Cup 2023
Cricket World Cup 2023

ಹೈದರಾಬಾದ್​ (ತೆಲಂಗಾಣ): 2019ರಲ್ಲಿ ಹೆಚ್ಚು ಬೌಂಡರಿ ಮತ್ತು ಸಿಕ್ಸರ್​ ಲೆಕ್ಕಾಚಾರದಿಂದ ನ್ಯೂಜಿಲೆಂಡ್​ ಮಣಿಸಿ ಇಂಗ್ಲೆಂಡ್​ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. 2023ರಲ್ಲಿ ಹೆಚ್ಚೂ ಕಡಿಮೆ ಅದೇ ತಂಡದೊಂದಿಗೆ ಭಾರತ ಪ್ರವಾಸ ಮಾಡಿರುವ ಇಂಗ್ಲೆಂಡ್​ ಯಶಸ್ಸು ಗಳಿಸುವಲ್ಲಿ ಎಡವುತ್ತಿದೆ. ಪ್ರಸ್ತುತ ನಡೆಯುತ್ತಿರುವ ಟೂರ್ನಿಯಲ್ಲಿ 4 ಪಂದ್ಯಗಳ ಪೈಕಿ ಬಾಂಗ್ಲಾದೇಶದ ವಿರುದ್ಧ ಮಾತ್ರ ಜಯ ದಾಖಲಿಸಿದೆ. ಉಳಿದ ಮೂರು ಪಂದ್ಯಗಳಲ್ಲಿ ಸೋತಿದೆ. ಇದರ ಪರಿಣಾಮ, ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ.

  • " class="align-text-top noRightClick twitterSection" data="">

ವಿಶ್ವಕಪ್​ ಆರಂಭಕ್ಕೂ ಮುನ್ನ ಕಪ್​ ಗೆಲ್ಲುವ ಬಲಿಷ್ಠ ತಂಡದಲ್ಲಿ ಒಂದೆಂದು ಕರೆಸಿಕೊಳ್ಳುತ್ತಿದ್ದ ಆಂಗ್ಲರು ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ನೀರಸ ಪ್ರದರ್ಶನ ತೋರುತ್ತಿದ್ದಾರೆ. ದುರ್ಬಲ ತಂಡಗಳ ವಿರುದ್ಧವೂ ಸುಲಭವಾಗಿ ಮಂಡಿಯೂರಿದೆ. ಹೀಗಾಗಿ ಪ್ಲೇ ಆಫ್​ಗೆ ಪ್ರವೇಶ ಪಡೆಯುವುದು ಹಾಲಿ ಚಾಂಪಿಯನ್​ಗೆ ಕಠಿಣವಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ 229 ರನ್​ಗಳಿಂದ ಸೋಲು ಕಂಡ ನಂತರ ನಾಯಕ ಬಟ್ಲರ್​, "ಇನ್ನುಳಿದ ಐದು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡ ನಮ್ಮ ಮೇಲಿದೆ" ಎಂದಿದ್ದಾರೆ. ಆದರೆ, ಐದು ಪಂದ್ಯವನ್ನು ಇಂಗ್ಲೆಂಡ್​ ಸಾಧಾರಣವಾಗಿ ಗೆದ್ದರೆ ಯಾವುದೇ ಪ್ರಯೋಜನ ಆಗದು. ಉತ್ತಮ ರನ್​ರೇಟ್​ನ ಗೆಲುವು ಅಗತ್ಯವಿದೆ.

ಅಹಮದಾಬಾದ್​​ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್​ ಮೊದಲು ಬ್ಯಾಟಿಂಗ್​ ಮಾಡಿ 282 ರನ್​ ಕಲೆಹಾಕಿತ್ತು. ಜೋ ರೂಟ್​ (77) ಅರ್ಧಶತಕದ ಇನ್ನಿಂಗ್ಸ್​ ಆಡಿದರೆ, ನಾಯಕ ಜೋಸ್​ ಬಟ್ಲರ್​ 43 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಆದರೆ ಈ ಗುರಿಯನ್ನು ಎದುರಾಳಿ ನ್ಯೂಜಿಲೆಂಡ್ ​13 ಓವರ್ ಮತ್ತು 9 ವಿಕೆಟ್‌​ ಉಳಿಸಿಕೊಂಡೇ ಗೆದ್ದು ಬೀಗಿತ್ತು.

ಎರಡನೇ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡಿದ ಇಂಗ್ಲೆಂಡ್​ ತಂಡ ಬಾಂಗ್ಲಾದೇಶದ ವಿರುದ್ಧ ಡೇವಿಡ್​ ಮಲನ್​, ಜಾನಿ ಬೈರ್ಸ್ಟೋವ್ ಮತ್ತು ಜೋ ರೂಟ್​ ಅವರ ಇನ್ನಿಂಗ್ಸ್​ ಬಲದಿಂದ 364 ರನ್​ ಗಳಿಸಿತ್ತು. ಆದರೆ 307 ರನ್​ಗಳಿಗೆ ಮೂರು ವಿಕೆಟ್​ ಕಳೆದುಕೊಂಡಿದ್ದ ತಂಡ ನಂತರ 57 ರನ್​ ಕಲೆಹಾಕುವಷ್ಟರಲ್ಲಿ 6 ವಿಕೆಟ್​ ಕಳೆದುಕೊಂಡಿತ್ತು. ಬ್ಯಾಟಿಂಗ್​ ರೀತಿಯಲ್ಲೇ ಬೌಲಿಂಗ್​​ನಲ್ಲೂ ಸಾಧಾರಣ ಪ್ರದರ್ಶನ ನೀಡಿದ ಆಂಗ್ಲರು 137 ರನ್‌ಗಳ​ ಗೆಲುವು ದಾಖಲಿಸಿದ್ದರು. ದೆಹಲಿಯ ಫಿರೋಜ್​ ಶಾ ಕೋಟ್ಲಾ ಮೈದಾನದಲ್ಲಿ ಅಫ್ಘಾನಿಸ್ತಾನ ನೀಡಿದ್ದ 284 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತುವಲ್ಲಿ ಇಂಗ್ಲೆಂಡ್​ ವಿಫಲವಾಗಿತ್ತು. ಹ್ಯಾರಿ ಬ್ರೂಕ್​ 66 ರನ್​ಗಳ ಇನ್ನಿಂಗ್ಸ್​​ ಆಡಿದ್ದು ಬಿಟ್ಟರೆ ಮತ್ತಾವ ಬ್ಯಾಟರ್ ಕೂಡಾ​ ದೊಡ್ಡ ಇನ್ನಿಂಗ್ಸ್ ಆಡಿರಲಿಲ್ಲ.

ಅಕ್ಟೋಬರ್ 21ರ ಶನಿವಾರ ಮುಂಬೈನಲ್ಲಿ ಹಾಲಿ ಚಾಂಪಿಯನ್​ಗಳು ಬೌಲಿಂಗ್​​ನಲ್ಲಿ ಧಾರಾಳವಾದರೆ, ಬ್ಯಾಟಿಂಗ್​ನಲ್ಲಿ ನಿರಾಶಾದಾಯಕ ಪ್ರದರ್ಶನ ತೋರಿದರು. ಇಂಗ್ಲೆಂಡ್​ನ 6 ಬೌಲರ್​ಗಳು 5ಕ್ಕೂ ಹೆಚ್ಚಿನ ಎಕಾನಮಿಯಲ್ಲಿ ಬೌಲಿಂಗ್​ ಮಾಡಿದರೆ, ಅದರಲ್ಲಿ ಇಬ್ಬರು 10 ಎಕಾನಮಿಯಲ್ಲಿ ಕಳಪೆ ಬೌಲಿಂಗ್​ ಪ್ರದರ್ಶಿಸಿ 400 ರನ್ ಗುರಿ ಪಡೆದಿದ್ದರು. ಇದನ್ನು ಬೆನ್ನತ್ತಿದ ತಂಡ 17 ಓವರ್​ಗೆ 100 ರನ್​ಗೆ 8 ವಿಕೆಟ್ ಕಳೆದುಕೊಂಡಿತ್ತು. ಕೊನೆಯ ಇಬ್ಬರು ಬೌಲರ್​ಗಳು 70 ರನ್​ಗಳ ಜತೆಯಾಟ ಮಾಡಿದ್ದಕ್ಕೆ ತಂಡ 170 ರನ್ ಗಳಿಸಿತು.

ನಾಲ್ಕರಲ್ಲಿ ಮೂರನ್ನು ಸೋತಿರುವ ತಂಡ -1.24 ನೆಟ್​ ರನ್​ರೇಟ್​ ಪಡೆದುಕೊಂಡಿದೆ. ಇನ್ನುಳಿದ ಐದು ಪಂದ್ಯದಲ್ಲಿ ದೊಡ್ಡ ಗೆಲುವು ಸಾಧಿಸಿದರೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲು ಸಾಧ್ಯ. ಇನ್ನೊಂದು ಪಂದ್ಯದಲ್ಲಿ ಮುಗ್ಗರಿಸಿದರೂ ತಂಡ ವಿಶ್ವಕಪ್​​ನಿಂದ ಹೊರಬೀಳಲಿದೆ.

ಏಕದಿನದಲ್ಲಿ ನಡೆಯದ ಬೇಸ್​ಬಾಲ್​ ನೀತಿ: ಇಂಗ್ಲೆಂಡ್​ ಟೆಸ್ಟ್​ನಲ್ಲಿ ಬೇಸ್‌ ಬಾಲ್​ ನೀತಿಯನ್ನು ಅಳವಡಿಸಿಕೊಂಡು ವೇಗವಾಗಿ ಇನ್ನಿಂಗ್ಸ್​ ಆಡುವುದನ್ನು ಅಭ್ಯಾಸ ಮಾಡಿತ್ತು. ಟೆಸ್ಟ್​ನಲ್ಲಿ ಲೀಲಾಜಾಲವಾಗಿ ಸಿಕ್ಸರ್‌ಗಳನ್ನು ಬ್ಯಾಟರ್​ಗಳು ಎತ್ತುತ್ತಿದ್ದರು. ಆದರೆ ಏಕದಿನ ಮಾದರಿಯಲ್ಲಿ ಅದೇ ಆಟಗಾರರು 20ಕ್ಕೂ ಹೆಚ್ಚಿನ ರನ್​ ಗಳಿಸುವಲ್ಲಿ ಎಡವುತ್ತಿದ್ದಾರೆ.

ಆರಂಭಿಕರ ವೈಫಲ್ಯ: ಬಾಂಗ್ಲಾದೇಶದ ವಿರುದ್ಧ ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ಮಲಾನ್ 115 ರನ್​ ಆರಂಭಿಕ ಜತೆಯಾಟ ಬಿಟ್ಟರೆ, ಉಳಿದ ಪಂದ್ಯದಲ್ಲಿ 50 ರನ್​ ಪಾಲುದಾರಿಕೆ ಸಹ ಬರಲಿಲ್ಲ. ಮಲಾನ್​ ಬ್ಯಾಟ್​ನಿಂದ ಬಾಂಗ್ಲಾ ವಿರುದ್ಧ ಶತಕ ಬಂದಿದ್ದು ಬಿಟ್ಟರೆ ದೊಡ್ಡ ಇನ್ನಿಂಗ್ಸ್​ ಆಡಲೇ ಇಲ್ಲ. ಜಾನಿ ಬೈರ್‌ಸ್ಟೋವ್ ನಾಲ್ಕು ಇನ್ನಿಂಗ್ಸ್​ನಿಂದ ಒಂದು ಅರ್ಧಶತಕ ಸೇರಿ 97 ರನ್​ ಕಲೆಹಾಕಿದ್ದಾರೆ.

ತಂಡಕ್ಕೆ ಆಸರೆಯಾಗದ ಸ್ಟೋಕ್ಸ್​: ಇಂಗ್ಲೆಂಡ್​ ಟೆಸ್ಟ್​ ಟೀಮ್​ ಕ್ಯಾಪ್ಟನ್​, ಬೆಸ್ಟ್​ ಆಲ್​ರೌಂಡರ್ ಬೆನ್​ ಸ್ಟೋಕ್ಸ್​​ ಗಾಯದಿಂದ ಚೇತರಿಸಿಕೊಂಡ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದರು. ಆದರೆ ಇನ್ನಿಂಗ್ಸ್​ನಲ್ಲಿ ಕೇವಲ 5 ರನ್​ ಗಳಿಸಿ ವಿಕೆಟ್​ ಕೊಟ್ಟರು. 2019ರ ವಿಶ್ವಕಪ್​ನ ಸ್ಟಾರ್ ಪ್ಲೇಯರ್​ ಹಾಗೂ ತಂಡ ಚಾಂಪಿಯನ್​ ಆಗಲು ಪ್ರಮುಖ ಕಾರಣರಾಗಿದ್ದ ಸ್ಟೋಕ್ಸ್ ಸಂಕಷ್ಟದಲ್ಲಿ ತಂಡಕ್ಕೆ ನೆರವಾಗಲಿಲ್ಲ. ಮುಂದಿನ ಐದು ಪಂದ್ಯಗಳಲ್ಲಿ ಸ್ಟೋಕ್ಸ್ ಮೇಲೆ ನಿರೀಕ್ಷೆಗಳು ಹೆಚ್ಚಿವೆ.

ಕ್ಲಿಕ್​ ಆಗದ ಬೌಲಿಂಗ್​: ಇಂಗ್ಲೆಂಡ್​ ಬೌಲರ್​ಗಳು ನಾಲ್ಕು ಪಂದ್ಯದಿಂದ 1,193 ರನ್ ಬಿಟ್ಟುಕೊಟ್ಟಿದ್ದಾರೆ. ಬಾಂಗ್ಲಾವನ್ನು 227 ನಿಯಂತ್ರಿಸಿದ್ದು ಬಿಟ್ಟರೆ ಮತ್ತೆರಡು 300ರ ಗಡಿ ಸಮೀಪಿಸಿದರೆ, ದಕ್ಷಿಣ ಆಫ್ರಿಕಾ ವಿರುದ್ಧ 399 ರನ್​ ಬಿಟ್ಟುಕೊಟ್ಟರು. ವಿಕೆಟ್​ ಪಡೆದರೂ ರನ್​ಗೆ ಕಡಿವಾಣ ಹಾಕುದರಲ್ಲಿ ಬೌಲರ್​ಗಳು ಎಡವುತ್ತಿದ್ದಾರೆ.

ಮುಂದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಅಕ್ಟೋಬರ್ 26 ಶ್ರೀಲಂಕಾ, ಅ.29 ಭಾರತ, ನ. 4 ಆಸ್ಟ್ರೇಲಿಯಾ, ನ.8 ನೆದರ್ಲೆಂಡ್​ ಮತ್ತು ನ. 11 ಪಾಕಿಸ್ತಾನವನ್ನು ಎದುರಿಸಲಿದೆ. ಇದರಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಪ್ರಬಲ ಮುಖಾಮುಖಿ ಆಗಿರಲಿದೆ. (ವರದಿ -ಕುಮಾರ್​ ಎಸ್​​​​ ಸುಬ್ರಹ್ಮಣ್ಯ)

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​​: ಬಾಬರ್, ಶಫೀಕ್ ಅರ್ಧಶತಕ: ಅಫ್ಘಾನಿಸ್ತಾನಕ್ಕೆ 283 ರನ್​ ಗುರಿ​ ನೀಡಿದ ಪಾಕಿಸ್ತಾನ

Last Updated : Oct 24, 2023, 12:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.