ETV Bharat / sports

IND vs WI: ಮೆಕಾಯ್​, ಕಿಂಗ್​ ಆಟಕ್ಕೆ ಮಂಡಿಯೂರಿದ ಭಾರತ.. ವಿಂಡೀಸ್​ಗೆ 5 ವಿಕೆಟ್​ ಗೆಲುವು

author img

By

Published : Aug 2, 2022, 7:02 AM IST

ಭಾರತ ವಿರುದ್ಧದ ಸರಣಿಯಲ್ಲಿ ವೆಸ್ಟ್​​ ಇಂಡೀಸ್​ ಮೊದಲ ಗೆಲುವು ದಾಖಲಿಸಿದೆ. ನಿನ್ನೆ ನಡೆದ 2ನೇ ಟಿ-20 ಪಂದ್ಯದಲ್ಲಿ ಅಧಿಕಾರಯುತ ಜಯ ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 1-1 ರಲ್ಲಿ ಸಮ ಮಾಡಿಕೊಂಡಿತು.

west-indies
ವಿಂಡೀಸ್​ಗೆ 5 ವಿಕೆಟ್​ ಗೆಲುವು

ಟ್ರಿನಿಡಾಡ್​(ವೆಸ್ಟ್ ಇಂಡೀಸ್​): ಒಬೆಡ್​ ಮೆಕಾಯ್​, ಬ್ರೆಂಡೆನ್​ ಕಿಂಗ್​ರ ಅದ್ಭುತ ಪ್ರದರ್ಶನದಿಂದ ವೆಸ್ಟ್​ ಇಂಡೀಸ್​, ಭಾರತ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಸುಲಭ ಜಯ ದಾಖಲಿಸಿತು. ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ವಿಂಡೀಸ್​ 20 ಓವರ್​ಗಳಲ್ಲಿ 138 ರನ್​ಗಳಿಗೆ ಭಾರತವನ್ನು ಕಟ್ಟಿಹಾಕಿತು. ಅಲ್ಪಮೊತ್ತವನ್ನು ಕೆರೆಬಿಯನ್ನರು 19.2 ಓವರ್​ಗಳಲ್ಲಿ ದಾಟಿದರು.

ಮೆಕಾಯ್​ ರೋಷಾವೇಷ: ಬ್ಯಾಟಿಂಗ್​ಗೆ ಇಳಿದ ಭಾರತದ ಆಟಗಾರರನ್ನು ವಿಂಡೀಸ್​ನ ಒಬೆಡ್​ ಮೆಕಾಯ್​ ಅಕ್ಷರಶಃ ಕಾಡಿದರು. ಇನಿಂಗ್ಸ್​ನ ಮೊದಲ ಎಸೆತದಲ್ಲಿ ನಾಯಕ ರೋಹಿತ್ ಶರ್ಮಾ ಅವರನ್ನು ಔಟ್​ ಮಾಡುವ ಮೂಲಕ ತಂಡದ ಅವನತಿಗೆ ನಾಂದಿ ಹಾಡಿದರು. ಮೆಕಾಯ್​ ಬೆಂಕಿ ಚೆಂಡಿಗೆ ಬ್ಯಾಟ್ಸ್​ಮನ್​ಗಳು ತರಗೆಲೆಗಳಂತೆ ಉದುರಿದರು.

ಮೆಕಾಯ್​ 4 ಓವರ್​ಗಳ ಕೋಟಾದಲ್ಲಿ 17 ರನ್​ ನೀಡಿ 6 ವಿಕೆಟ್​ ಕಿತ್ತರು. ರೋಹಿತ್​, ಸೂರ್ಯಕುಮಾರ್​, ರವೀಂದ್ರ ಜಡೇಜಾ, ದಿನೇಶ್​ ಕಾರ್ತಿಕ್​, ಆರ್​. ಅಶ್ವಿನ್​, ಭುವನೇಶ್ವರ್​ ಕುಮಾರ್​ ಅವರನ್ನು ಔಟ್​ ಮಾಡುವ ಮೂಲಕ ಟಿ-20ಯಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದರು.

ಕೆರೆಬಿಯನ್ನರ ಬೌಲಿಂಗ್​ ದಾಳಿಗೆ ಯಾವೊಬ್ಬ ಭಾರತೀಯ ಬ್ಯಾಟ್ಸ್​ಮನ್​ ಕನಿಷ್ಠ ಒಂದು ಅರ್ಧಶತಕವೂ ಸಿಡಿಸಲಿಲ್ಲ. ಹಾರ್ದಿಕ್​ ಪಾಂಡ್ಯಾ 31, ರವೀಂದ್ರ ಜಡೇಜಾ 27, ರಿಷಬ್​ ಪಂತ್​ 24 ರನ್​ ಗಳಿಸಿದರು. ವಿಂಡೀಸ್​ನ ಮೆಕಾಯ್​ಗೆ ಸಾಥ್​ ನೀಡಿದ ಜಾಸನ್​ ಹೋಲ್ಡರ್​ 2 ವಿಕೆಟ್​ ಕಿತ್ತರು.

ಭಾರತಕ್ಕೆ "ಕಿಂಗ್​" ಆದ ಬ್ರೆಂಡೆನ್​: 138 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ವಿಂಡೀಸ್​ಗೆ ಆರಂಭಿಕ ಆಟಗಾರ ಬ್ರೆಂಡೆನ್​ ಕಿಂಗ್​, ಡೆವೋನ್​ ಥಾಮಸ್​ ನೆರವಾದರು. ಏಕದಿನ ಸರಣಿಯಲ್ಲಿ ವಿಫಲವಾಗಿದ್ದ ಬ್ರೆಂಡೆನ್​ 2 ಸಿಕ್ಸರ್​, 8 ಬೌಂಡರಿ ಬಾರಿಸಿ 68 ರನ್​ ಗಳಿಸಿದರು. ಡೆವೋಸ್​ ಥಾಮ್ಸನ್​ 31 ರನ್​ ಮಾಡಿದರು.

ಏಕದಿನದ ಸ್ಟಾರ್​ ಕೈಲ್​ ಮೇಯರ್ಸ್​ 8, ನಿಕೋಲಸ್​ ಪೂರನ್​ 14, ಶಿಮ್ರಾನ್​ ಹೆಟ್ಮಾಯಿರ್ 6 ರನ್​ಗೆ ಸುಸ್ತಾದರು. ಅಂತಿಮವಾಗಿ ವಿಂಡೀಸ್​ 4 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತು.

ಸಂಕ್ಷಿಪ್ತ ಸ್ಕೋರ್‌: ಭಾರತ: 19.3 ಓವರ್‌ಗಳಲ್ಲಿ 138 ಆಲೌಟ್ (ಹಾರ್ದಿಕ್ ಪಾಂಡ್ಯ 31, ಒಬೆಡ್​ ಮೆಕಾಯ್ 6- 17) ವೆಸ್ಟ್ ಇಂಡೀಸ್: 19.2 ಓವರ್‌ಗಳಲ್ಲಿ 5 ವಿಕೆಟ್‌ಗೆ 141 (ಬ್ರೆಂಡೆನ್ ಕಿಂಗ್ 68, ರವೀಂದ್ರ ಜಡೇಜಾ 1/16).

ಓದಿ: ಕಾಮನ್ವೆಲ್ತ್ ಗೇಮ್ಸ್​: ಭಾರತಕ್ಕೆ ಮತ್ತೆರಡು ಪದಕ; ಬೆಳ್ಳಿ ಗೆದ್ದ ಸುಶೀಲಾ, ಕಂಚಿಗೆ ಮುತ್ತಿಕ್ಕಿದ ವಿಜಯ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.