ETV Bharat / sports

ಅಶ್ವಿನ್​ ಮ್ಯಾಜಿಕ್​ ಬೌಲಿಂಗ್! ಕಣ್ಣು ಮಿಟುಕಿಸುವುದರೊಳಗೆ ವೆಸ್ಟ್‌ ಇಂಡೀಸ್‌ ಬ್ಯಾಟರ್‌ ಔಟ್‌​: ವಿಡಿಯೋ ನೋಡಿ

author img

By

Published : Jul 23, 2023, 9:55 AM IST

ಭಾರತ ಕ್ರಿಕೆಟ್‌ ತಂಡದ ಹಿರಿಯ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​ ತಮ್ಮ ಆಕರ್ಷಕ ಬೌಲಿಂಗ್‌ ​ಮೂಲಕ ವಿಂಡೀಸ್​ ಆಟಗಾರರನ್ನು ಸದೆಬಡಿಯುತ್ತಿದ್ದಾರೆ. ನಿನ್ನೆಯೂ ಮ್ಯಾಜಿಕ್​ ಡೆಲಿವರಿ ಮಾಡಿ ನೆಲಕಚ್ಚಿ ಆಡುತ್ತಿದ್ದ ಕೆರಿಬಿಯನ್​ ನಾಯಕನನ್ನು ಔಟ್​ ಮಾಡಿದರು. ವಿಡಿಯೋ ಇಲ್ಲಿದೆ ನೋಡಿ.

ಅಶ್ವಿನ್​ ಮ್ಯಾಜಿಕ್​ ಬೌಲಿಂಗ್
ಅಶ್ವಿನ್​ ಮ್ಯಾಜಿಕ್​ ಬೌಲಿಂಗ್

ಪೋರ್ಟ್​ ಆಫ್​ ಸ್ಪೇನ್​: ಕ್ರಿಕೆಟ್​ನಲ್ಲಿ ಸ್ಪಿನ್​ ಅಂದ್ರೇನೆ ಹಾಗೆ. ಅದ್ಯಾವಾಗ ಚೆಂಡು ತಿರುವು ಪಡೆದು ಒಳನುಗ್ಗಿ ವಿಕೆಟ್​ ಉರುಳಿಸುತ್ತದೆ ಎಂಬುದು ತಿಳಿಯದು. ಕ್ರಿಕೆಟ್ ಲೋಕ ಕಂಡ ಅಪ್ರತಿಮ ಸ್ಪಿನ್​ ಮಾಂತ್ರಿಕರೆಂದರೆ, ಅದು ಶ್ರೀಲಂಕಾದ ಮುತ್ತಯ್ಯ ಮುರಳೀಧರ್​, ಆಸ್ಟ್ರೇಲಿಯಾದ ಶೇನ್​ ವಾರ್ನ್ ಮತ್ತು ಭಾರತದ ಅನಿಲ್​ ಕುಂಬ್ಳೆ. ಕುಂಬ್ಳೆ ನಿವೃತ್ತಿ ಬಳಿಕ ಹರ್ಭಜನ್​ ಸಿಂಗ್​ ಭಾರತ ಕ್ರಿಕೆಟ್​ನ ಸ್ಪಿನ್ ಮಾಂತ್ರಿಕರಾಗಿದ್ದರು. ಹರ್ಭಜನ್​ ತೆರೆಮರೆಗೆ ಸರಿದ ಬಳಿಕ ಉದಯಿಸಿದ್ದು ರವಿಚಂದ್ರನ್​ ಅಶ್ವಿನ್​.

ತಮಿಳುನಾಡಿನ ರವಿಚಂದ್ರನ್​ ಅಶ್ವಿನ್​ ಭಾರತ ಕ್ರಿಕೆಟ್​ನ ಸದ್ಯದ ಟಾಪ್​ ಸ್ಪಿನ್​ ಬೌಲರ್​. ತಮ್ಮ ಕೇರಂ ಶೈಲಿಯ ಮೂಲಕ ವಿಶ್ವಮಾನ್ಯರಾಗಿದ್ದಾರೆ. ಟೆಸ್ಟ್​ ಕ್ರಿಕೆಟ್​ನ ನಂಬರ್​ 1 ಬೌಲರ್​ ಆಗಿರುವ ಈ ಆಫ್​ ಸ್ಪಿನ್ನರ್,​ ಸದ್ಯ ನಡೆಯುತ್ತಿರುವ ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಲ್ಲಿ ತಮ್ಮೆಲ್ಲ ಪಟ್ಟುಗಳನ್ನು ಪ್ರದರ್ಶಿಸುತ್ತಿದ್ದಾರೆ. ಮೊದಲ ಟೆಸ್ಟ್​ ಪಂದ್ಯದಲ್ಲಿ 11 ವಿಕೆಟ್​ ಉರುಳಿಸಿ ಕೆರಿಬಿಯನ್ನರನ್ನು ಪುಡಿಗಟ್ಟಿದ್ದ ಸ್ಪಿನ್​ ಮಾಂತ್ರಿಕ, 2ನೇ ಟೆಸ್ಟ್​ನಲ್ಲಿ ಪಡೆದಿದ್ದು ಒಂದು ವಿಕೆಟ್​ ಆದರೂ, ಉತ್ತಮವಾಗಿ ಆಡುತ್ತಿದ್ದ ನಾಯಕ ಕ್ರೆಗ್​ ಬ್ರಾಥ್​ವೇಟ್​ರನ್ನು ಕಣ್ಣುಮಿಟುಕಿಸುವ ಅವಧಿಯೊಳಗೆ ಪೆವಿಲಿಯನ್​ಗೆ ಕಳುಹಿಸಿದ್ದರು.

ಮ್ಯಾಜಿಕ್ ಡೆಲಿವರಿ: ​ಭಾರತ ನೀಡಿರುವ ಬೃಹತ್​ ಮೊತ್ತಕ್ಕೆ ಉತ್ತರವಾಗಿ ವಿಂಡೀಸ್​ ಪಡೆ ಉತ್ತಮವಾಗಿ ಬ್ಯಾಟ್​ ಮಾಡುತ್ತಿದೆ. ಕೆರಿಬಿಯನ್​ ನಾಯಕ ಕ್ರೆಗ್​ ಬ್ರಾಥ್​​ವೆಟ್​ 75 ರನ್​ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. 5 ಬೌಂಡರಿ 1 ಸಿಕ್ಸರ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಆರ್. ಅಶ್ವಿನ್​ 72ನೇ ಓವರ್​​ನ 4 ನೇ ಎಸೆತದಲ್ಲಿ ವಿಂಡೀಸ್​ ನಾಯಕನಿಗೆ ಶಾಕ್ ನೀಡಿದರು.

ಅಶ್ವಿನ್, ರವೀಂದ್ರ ಜಡೇಜಾ, ಮೊಹಮದ್​ ಸಿರಾಜ್​, ಮುಕೇಶ್​ ಕುಮಾರ್​ ಅವರ ಬಿಗು ದಾಳಿಯಲ್ಲಿ 235 ಎಸೆತಗಳನ್ನು ಎದುರಿಸಿದ್ದ ಬ್ರಾಥ್​ವೇಟ್​ ಅದೊಂದು ಮ್ಯಾಜಿಕ್​ ಎಸೆತವನ್ನು ಮಾತ್ರ ತಡೆಯಲಾಗಲಿಲ್ಲ. ಅಶ್ವಿನ್​ ಎಸೆದ ಆಫ್​ ಸ್ಪಿನ್​ ಬ್ಯಾಟ್​ ಮತ್ತು ಪ್ಯಾಡಿನ ಮಧ್ಯೆ ನುಸುಳಿ ನೇರವಾಗಿ ವಿಕೆಟ್​ ಬೇಲ್​ ಎಗರಿಸಿತು. ಇದನ್ನು ಕಂಡು ಕೆರಿಬಿಯನ್​ ಆಟಗಾರ ಕೆಲಕ್ಷಣ ಅವಾಕ್ಕಾಗಿದ್ದರು.

ಎಲ್ಲ ಎಸೆತಗಳನ್ನು ಸರಾಗವಾಗಿ ಎದುರಿಸಿ ನಿಂತಿದ್ದ ಬ್ರಾಥ್​ವೇಟ್​ಗೆ ಆಫ್​ಸೈಡ್​ನಿಂದ ದೊಡ್ಡ ತಿರುವು ಪಡೆದ ಈ ಚೆಂಡು ಮಾತ್ರ ಬಲಿ ಪಡೆದುಕೊಂಡಿತು. ಈ ಮೂಲಕ ಅಶ್ವಿನ್​ ಮೊದಲ ವಿಕೆಟ್​ ಪಡೆದರು. ಇದು ಪಂದ್ಯದ ಹೈಲೈಟ್​ ಕೂಡ ಆಗಿದೆ.

ಸದ್ಯ ವಿಂಡೀಸ್​ 5 ವಿಕೆಟ್​ಗೆ 229 ರನ್​ ಗಳಿಸಿದ್ದು, ಇನ್ನೂ 209 ರನ್​ಗಳ ಹಿನ್ನಡೆಯಲ್ಲಿದೆ. ಅಲಿಕ್​ ಅಥಾಂಜೆ, ಜಾಸನ್​ ಹೋಲ್ಡರ್​ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಬಾಕಿ ಇರುವ ಇನ್ನೆರಡು ದಿನಗಳಲ್ಲಿ ಮೂರು ಇನಿಂಗ್ಸ್​ ಮುಗಿದು ಫಲಿತಾಂಶ ಬರಬೇಕಿದೆ.

ಇದನ್ನೂ ಓದಿ: India vs West Indies 2nd Test: ವಿಂಡೀಸ್​ಗೆ ನಾಯಕ ಕ್ರಿಗ್​ ಬ್ರಾಥ್​ವೇಟ್​ ಅರ್ಧಶತಕದ ಬಲ; 3ನೇ ದಿನದಾಂತ್ಯಕ್ಕೆ 229/5

ETV Bharat Logo

Copyright © 2024 Ushodaya Enterprises Pvt. Ltd., All Rights Reserved.