ETV Bharat / sports

ಭಾರತ ತಂಡದ ನಾಲ್ಕನೇ ಕ್ರಮಾಂಕದ ಬಿಕ್ಕಟ್ಟು: ಈ ಆಟಗಾರನನ್ನು ಆಡಿಸಲು ರವಿಶಾಸ್ತ್ರಿ ಸಲಹೆ

author img

By

Published : Aug 17, 2023, 1:15 PM IST

ಭಾರತ ಕ್ರಿಕೆಟ್​ ತಂಡದ ಬಗೆಹರಿಯದ ನಾಲ್ಕನೇ ಕ್ರಮಾಂಕಕ್ಕೆ ಮಾಜಿ ಕೋಚ್​ ರವಿಶಾಸ್ತ್ರಿ ಸಲಹೆಯೊಂದನ್ನು ನೀಡಿದ್ದಾರೆ. ಬ್ಯಾಟಿಂಗ್​ ಕಿಂಗ್​ ವಿರಾಟ್​ ಅವರನ್ನು ಆಡಿಸಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Ravi Shastri
Ravi Shastri

ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಏಷ್ಯಾಕಪ್​ ಮತ್ತು ಏಕದಿನ ವಿಶ್ವಕಪ್​ ಆರಂಭವಾಗಲಿದ್ದರೂ, ಭಾರತ ಕ್ರಿಕೆಟ್​ ತಂಡದ ಬ್ಯಾಟಿಂಗ್​ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಅದರಲ್ಲೂ ನಾಲ್ಕನೇ ಕ್ರಮಾಂಕದ ಆಟಗಾರ ಯಾರೆಂಬುದು ನಿರ್ಧಾರವಾಗಿಲ್ಲ. ಸದ್ಯ ಲಯದಲ್ಲಿರುವ ಇಶಾನ್​ ಕಿಶನ್​, ಶುಭ್​ಮನ್​ ಗಿಲ್​ ಆರಂಭಿಕರಾಗಿ ಯಶಸ್ವಿಯಾಗಿದ್ದಾರೆ. ನಾಯಕ ರೋಹಿತ್​ ಶರ್ಮಾ, ಗಾಯದಿಂದ ಚೇತರಿಸಿಕೊಂಡಿರುವ ಕೆಎಲ್​ ರಾಹುಲ್​ ತಂಡ ಸೇರ್ಪಡೆಯಾದರೆ ಆರಂಭಿಕ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಲಿದೆ.

ಈ ಎಲ್ಲ ಗೊಂದಲಕ್ಕೆ ಭಾರತ ತಂಡದ ಮಾಜಿ ಮುಖ್ಯ ಕೋಚ್​​ ರವಿಶಾಸ್ತ್ರಿ ಅವರು, ಉಪಾಯವೊಂದನ್ನು ಹುಡುಕಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಆಡುವ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಅವರನ್ನು ನಾಲ್ಕನೇ ಕ್ರಮಾಂಕಕ್ಕೆ ಆಡಿಸಬೇಕು. ಆಗ ಇನ್ನೊಬ್ಬರನ್ನು ಮೂರನೇ ಸ್ಥಾನದಲ್ಲಿ ಆಡಿಸಬಹುದು ಎಂದು ಸಲಹೆ ನೀಡಿದ್ದಾರೆ.

4 ರಲ್ಲಿ ವಿರಾಟ್​ ಆಡಿಸಿ: ಕ್ರೀಡಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಾಸ್ತ್ರಿ ಅವರು, ನಾನು ಕೋಚ್ ಆಗಿದ್ದಾಗ 2019 ರ ವಿಶ್ವಕಪ್​ ವೇಳೆ ವಿರಾಟ್​ ಕೊಹ್ಲಿಯನ್ನು 4ನೇ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಭಾವಿಸಿದ್ದೆ. ಆದರೆ, ಕೈಗೂಡಿರಲಿಲ್ಲ. ವಿರಾಟ್​ ಪ್ರಸ್ತುತ ಕ್ರಿಕೆಟ್​ನ ಬ್ಯಾಟಿಂಗ್​ ಸ್ಟಾರ್. ಈ ವರ್ಷ ಅದ್ಭುತ ಲಯದಲ್ಲಿದ್ದಾರೆ. ತಂಡದ ಸಮತೋಲನಕ್ಕಾಗಿ ಅವರನ್ನು 4ನೇ ಸ್ಥಾನಕ್ಕೆ ಆಡಿಸಬಹುದು ಎಂದು ಹೇಳಿದ್ದಾರೆ.

ಇಶಾನ್ ಕಿಶನ್ ಆರಂಭಿಕನಾಗಿ ಬ್ಯಾಟಿಂಗ್ ಆರಂಭಿಸಬೇಕು. ವಿರಾಟ್, ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಹೊಸ ಸ್ಥಾನಗಳಿಗೆ ಹೊಂದಿಕೊಳ್ಳಬೇಕು. ವಿರಾಟ್​ರನ್ನು ಮೂರರಿಂದ ನಾಲ್ಕನೇ ಸ್ಥಾನಕ್ಕೆ ಆಡಿಸಿದರೆ, ಮಧ್ಯಮ ಕ್ರಮಾಂಕಕ್ಕೆ ಅನುಭವ ಮತ್ತು ಬ್ಯಾಟಿಂಗ್ ಬಲ ಹೆಚ್ಚಲಿದೆ ಎಂದು ಶಾಸ್ತ್ರಿ ಹೇಳಿದರು.

ನಾಯಕ ರೋಹಿತ್​ ಅನುಭವಿಯಾಗಿದ್ದು, ಅವರು ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಆಡಬಹುದು. ಗಿಲ್​, ಕಿಶನ್​ ಆರಂಭಿಕರಾಗಲಿ. ಆರಂಭಿಕನಾಗಿರುವ ಗಿಲ್​ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಆಡಿಸಲು ಕಷ್ಟಸಾಧ್ಯ. ಹೀಗಾಗಿ ಅನುಭವಿ ವಿರಾಟ್​ರನ್ನೇ ನಾಲ್ಕನೇ ಸ್ಥಾನ ಆಡಿಸಬಹುದು. ಅವರು ಆ ಕ್ರಮಾಂಕದಲ್ಲೂ ಉತ್ತಮ ದಾಖಲೆ ಹೊಂದಿದ್ದಾರೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ದಾಖಲೆ ಹೇಗಿದೆ?: ವಿಶ್ವದ ಫ್ಯಾಬ್​ 4 ಬ್ಯಾಟರ್​ಗಳಲ್ಲಿ ಒಬ್ಬರಾದ ವಿರಾಟ್​ 3 ಮತ್ತು 4ನೇ ಕ್ರಮಾಂಕದಲ್ಲಿ 50+ ಸರಾಸರಿ ರನ್​ ದಾಖಲೆ ಹೊಂದಿದ್ದಾರೆ. 275 ಏಕದಿನ ಪಂದ್ಯಗಳಲ್ಲಿ 57.32 ರ ಸರಾಸರಿಯಲ್ಲಿ 12,898 ರನ್‌ಗಳನ್ನು ಗಳಿಸಿದ್ದಾರೆ. 46 ಶತಕ ಮತ್ತು 65 ಅರ್ಧ ಶತಕ ಬಾರಿಸಿದ್ದಾರೆ.

ಹಲವು ವರ್ಷಗಳಿಂದ ಮೂರನೇ ಸ್ಥಾನದಲ್ಲಿ ಆಡುತ್ತಿರುವ ವಿರಾಟ್​ 210 ಇನ್ನಿಂಗ್ಸ್‌ಗಳಲ್ಲಿ 60.20 ಸರಾಸರಿಯಲ್ಲಿ 39 ಶತಕ ಮತ್ತು 55 ಅರ್ಧಶತಕಗಳೊಂದಿಗೆ 10,777 ರನ್ ದಾಖಲಿಸಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಆಡಿದ 39 ಇನ್ನಿಂಗ್ಸ್‌ಗಳಲ್ಲಿ 55.21 ಸರಾಸರಿಯಲ್ಲಿ 7 ಶತಕ ಮತ್ತು 8 ಅರ್ಧಶತಕಗಳೊಂದಿಗೆ 1,767 ರನ್ ಗಳಿಸಿದ್ದಾರೆ.

ಓದಿ: ಏಷ್ಯಾಕಪ್‌ - 2023: ಶ್ರೀಲಂಕಾ ಚರಣದ ಟಿಕೆಟ್‌ ಮಾರಾಟ ಇಂದಿನಿಂದ ಶುರು; ಭಾರತ -ಪಾಕಿಸ್ತಾನ ಪಂದ್ಯದ ಟಿಕೆಟ್​ ಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.