ಇಂದು 3ನೇ ಟಿ -20: 6 ರನ್​ ಗಳಿಸಿದರೆ ವಿರಾಟ್​ ಕೊಹ್ಲಿ ದಾಖಲೆ ಪಟ್ಟಿಗೆ ಮತ್ತೊಂದು ಗರಿ

author img

By ETV Bharat Karnataka Desk

Published : Jan 17, 2024, 4:46 PM IST

ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ ಗಳಿಸುವ ಒಂದೊಂದು ರನ್​ ದಾಖಲೆಯ ಪುಟಗಳಲ್ಲಿ ಸೇರುತ್ತಿವೆ. ಆಫ್ಘನ್​ ವಿರುದ್ಧದ ಇಂದಿನ ಟಿ-20ಯಲ್ಲಿ 6 ರನ್​ ಗಳಿಸಿದರೆ, ದಾಖಲೆ ರಚನೆಯಾಗಲಿದೆ.

ನವದೆಹಲಿ: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್​ ಕೊಹ್ಲಿ ಅವರ ಹೆಸರಿನಲ್ಲಿ ಹಲವು ದಾಖಲೆಗಳಿವೆ. ಇದೀಗ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅವರ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಲಿದೆ. ಟಿ-20 ಕ್ರಿಕೆಟ್‌ನಲ್ಲಿ ಈವರೆಗೂ 11,994 ರನ್ ಗಳಿಸಿದ್ದು, ಇಂದು ನಡೆಯುವ ಮೂರನೇ ಮತ್ತು ಕೊನೆಯ ಟಿ-20 ಪಂದ್ಯದಲ್ಲಿ 6 ರನ್ ಗಳಿಸಿದರೆ ಚುಟುಕು ಮಾದರಿಯಲ್ಲಿ ವೇಗವಾಗಿ 12 ಸಾವಿರ ರನ್ ಗಳಿಸಿದ ದಾಖಲೆಯನ್ನು ವಿರಾಟ್ ಬರೆಯಲಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 116 ಪಂದ್ಯಗಳಲ್ಲಿ 108 ಇನ್ನಿಂಗ್ಸ್‌ ಆಡಿರುವ ಕೊಹ್ಲಿ 4037 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಆರಂಭದಿಂದಲೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರವಾಗಿ 237 ಪಂದ್ಯಗಳನ್ನಾಡಿದ್ದು, 229 ಇನ್ನಿಂಗ್ಸ್‌ಗಳಲ್ಲಿ 7263 ರನ್ ಬಾರಿಸಿದ್ದಾರೆ. ಒಟ್ಟಾರೆಯಾಗಿ ಅವರು 375 ಪಂದ್ಯಗಳಲ್ಲಿ 11,994 ರನ್ ಗಳಿಸಿದ್ದಾರೆ. ಇನ್ನು ಆರು ರನ್​ ಗಳಿಸಿದಲ್ಲಿ 12 ಸಾವಿರ ರನ್ ಪೂರೈಸಲಿದ್ದಾರೆ. ಜೊತೆಗೆ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಯ್ನೂ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.

12 ಸಾವಿರ ರನ್​ ಬಾರಿಸಿದ ಕ್ರಿಕೆಟಿಗರು: ಚುಟುಕು ಕ್ರಿಕೆಟ್​ನ ಅನಭಿಷಿಕ್ತ ದೊರೆ, ವೆಸ್ಟ್ ಇಂಡೀಸ್‌ ದಿಗ್ಗಜ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅಂತಾರಾಷ್ಟ್ರೀಯ, ದೇಶಿ ಸೇರಿದಂತೆ 463 ಟಿ20 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 14,562 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಆ ನಂತರ ಪಾಕಿಸ್ತಾನದ ಶೋಯೆಬ್ ಮಲಿಕ್ 525 ಪಂದ್ಯಗಳಲ್ಲಿ 12,993 ರನ್, ಇನ್ನೊಬ್ಬ ಕೆರೆಬಿಯನ್​ ಆಟಗಾರ ಕೀರಾನ್ ಪೊಲಾರ್ಡ್ 639 ಪಂದ್ಯಗಳಲ್ಲಿ 12,430 ರನ್ ಗಳಿಸಿದ್ದಾರೆ. ಇದೀಗ ಕೊಹ್ಲಿ 12,000 ರನ್ ಪೂರೈಸಿದ ನಾಲ್ಕನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ.

ಬ್ಯಾಟಿಂಕ್​ ಕಿಂಗ್​ ಎಂದೇ ಕರೆಯಿಸಿಕೊಳ್ಳುವ ಹಿರಿಯ ಕ್ರಿಕೆಟಿಗ ಕೊಹ್ಲಿ, 14 ತಿಂಗಳ ನಂತರ ಟಿ-20 ಮಾದರಿಯ ಕ್ರಿಕೆಟ್‌ಗೆ ಮರಳಿದ್ದಾರೆ. ಇದಕ್ಕೂ ಮೊದಲು ಅವರು 2022 ರ ಟಿ 20 ವಿಶ್ವಕಪ್‌ ಬಳಿಕ ಚುಟುಕು ಮಾದರಿಯ ಕ್ರಿಕೆಟ್​​ನಿಂದ ದೂರವುಳಿದಿದ್ದರು. ಇದೀಗ ಮುಂಬರುವ ಟಿ-20 ವಿಶ್ವಕಪ್​ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ಮೊದಲ ಪಂದ್ಯದಿಂದ ಅವರು ಹೊರಗುಳಿದಿದ್ದರು. ಎರಡನೇ ಟಿ20 ಪಂದ್ಯದಲ್ಲಿ ಕೊಹ್ಲಿ 16 ಎಸೆತಗಳಲ್ಲಿ 29 ರನ್‌ಗಳನ್ನು ಗಳಿಸಿದ್ದರು.

ಇದನ್ನೂ ಓದಿ: ಟಿ20: ಒಂದು ಪಂದ್ಯ ಗೆದ್ದರೆ ಪಾಕ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದೆ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.