ETV Bharat / sports

Virat Kohli: ಮೊದಲ ರನ್​ ಹೊಡೆಯಲು ಕೊಹ್ಲಿ ಎದುರಿಸಿದ ಎಸೆತಗಳು ಎಷ್ಟು ಗೊತ್ತೇ?

author img

By

Published : Jul 21, 2023, 8:31 PM IST

500ನೇ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿರುವ ವಿರಾಟ್ ಕೊಹ್ಲಿ ಮತ್ತೊಂದು ಶತಕದ ನಿರೀಕ್ಷೆಯಲ್ಲಿದ್ದು, ತಾಳ್ಮೆಯಿಂದ ಆಟವಾಡುತ್ತಿದ್ದಾರೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಪೋರ್ಟ್ ಆಫ್ ಸ್ಪೇನ್ : ವೆಸ್ಟ್ ಇಂಡೀಸ್‌ ತಂಡದ ದೈತ್ಯ ವೇಗದ ಬೌಲರ್‌ಗಳಿಗೆ ವಿಶ್ವದ ಅನೇಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ರನ್​ ಹೊಡೆಯಲು ಭಯಪಡುತ್ತಿದ್ದ ಕಾಲವೊಂದಿತ್ತು. ಆದರೇ ಈಗ ವಿಂಡೀಸ್​ ಬೌಲಿಂಗ್‌ ವಿಭಾಗದಲ್ಲಿ ಹಳೆಯ ಖದರ್​ ಕಾಣಿಸುತ್ತಿಲ್ಲ. ಹೀಗಾಗಿ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಮಾತ್ರವಲ್ಲದೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿ ಬ್ಯಾಟ್ಸ್‌ಮನ್‌ಗಳು ಸರಾಗವಾಗಿ ರನ್​ ಹೊಡೆಯುತ್ತಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಬಹಳ ಚಿಂತೆ ರಹಿತ ಬ್ಯಾಟಿಂಗ್ ಮಾಡುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಉತ್ತಮ ಆರಂಭದ ನಂತರ ಹಠಾತ್ 4 ವಿಕೆಟ್‌ಗಳ ಪತನದಿಂದ ತಂಡ ಸ್ವಲ್ಪ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಶತಕದ ಜೊತೆಯಾಟದಿಂದ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಆದರೆ, ಇದಕ್ಕೂ ಮುಂಚೆ ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಮತ್ತೆ ಮೊದಲ ರನ್​ ಹೊಡೆಯಲು 21 ಬಾಲ್​ ಎದುರಿಸಿದ್ದಾರೆ. ಹೌದು ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ 7ಕ್ಕಿಂತ ಹೆಚ್ಚು ಓವರ್​ ಆದರೂ ರನ್​ ಗಳಿಸದೇ ಆಟ ಮುಂದುವರೆಸಿದ್ದರು. ಇದಾದ ನಂತರ ಅಲ್ಜಾರಿ ಜೋಸೆಫ್ ಅವರ ಬೌಲಿಂಗ್​ನಲ್ಲಿ ಕೊಹ್ಲಿ ಎದುರಿಸಿದ 21ನೇ ಎಸೆತದಲ್ಲಿ ತಮ್ಮ ಟ್ರೇಡ್‌ಮಾರ್ಕ್ ಆಫ್-ಡ್ರೈವ್ ಮೂಲಕ ಬೌಂಡರಿ ಹೊಡೆದು ಮೊದಲ ರನ್ ಗಳಿಸಿದರು. ಬಳಿಕ ಪಿಚ್‌ ಬಗ್ಗೆ ಗಮನ ಹರಿಸಿದ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ಸ್ಕೋರ್ ಮಾಡಲು ಪ್ರಾರಂಭಿಸಿದ್ದು, ಸ್ವಲ್ಪವೂ ಆಕ್ರಮಣಕಾರಿ ಆಟವಾಡದೇ ದುರ್ಬಲ ಬಾಲ್​ ಸಿಕ್ಕಾಗ ಮಾತ್ರ ಬೌಂಡರಿ ಬಾರಿಸಲು ಯತ್ನಿಸಿದರು.

ಪುನಃ ಬೌಲಿಂಗ್ ದಾಳಿಗಿಳಿದ ಅಲ್ಜಾರಿ ಓವರ್​ನಲ್ಲಿ ಕೊಹ್ಲಿ ಆಡಿದ 28ನೇ ಎಸೆತದಲ್ಲಿ ಎರಡನೇ ಬೌಂಡರಿ ಬಾರಿಸಿದರು. ಈ ಬೌಂಡರಿಯೊಂದಿಗೆ ಕೊಹ್ಲಿ ಎರಡಂಕಿ ಮೊತ್ತ​ ತಲುಪಿದರು. ಇದಾದ ಬಳಿಕ ಮುಂದಿನ 9 ಓವರ್​ಗಳಲ್ಲಿ ಕೊಹ್ಲಿಗೆ ಮಾತ್ರವಲ್ಲ, ಟೀಂ ಇಂಡಿಯಾಗೂ ಬೌಂಡರಿ ಸಿಗಲಿಲ್ಲ. ನಂತರ ಕೊಹ್ಲಿ ತಮ್ಮ ಇನ್ನಿಂಗ್ಸ್‌ನ 59ನೇ ಎಸೆತದಲ್ಲಿ ಮೂರನೇ ಬೌಂಡರಿ ಬಾರಿಸಿದರು. ಇದಾದ ಮೇಲೆ ಕೊಹ್ಲಿ 68 ಮತ್ತು 69ನೇ ಎಸೆತಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಕೆಮರ್ ರೋಚ್ ಬೌಲಿಂಗ್​ನಲ್ಲಿ ಸತತ 2 ಬೌಂಡರಿಗಳನ್ನು ಹೊಡೆದರು. ಇದರಿಂದಾಗಿ ಕೊಹ್ಲಿಗೆ ರನ್​ ಹೊಡೆಯುವ ಒತ್ತಡ ಸ್ವಲ್ಪ ಕಡಿಮೆಯಾಗ ತೊಡಗಿತು.

ಇನ್ನು ವಾರಿಕನ್ ಎಸೆತದಲ್ಲೂ ಕೊಹ್ಲಿ ಎದುರಿಸಿದ 97ನೇ ಎಸೆತದಲ್ಲಿ ಅದ್ಭುತವಾಗಿ ಕವರ್ ಡ್ರೈವ್ ಮೂಲಕ ಬಾಲ್​ನನ್ನು ಬೌಂಡರಿ ಗೆರೆಗೆ ಕಳುಹಿಸಿದರು. ಬಳಿಕ 118 ನೇ ಎಸೆತವನ್ನು ಕೊಹ್ಲಿ ಆಡುವಾಗ ಅಲ್ಜಾರಿ ಜೋಸೆಫ್ ಅವರ ಬೌನ್ಸರ್ ಅನ್ನು ಫೈನ್ ಲೆಗ್ ಬೌಂಡರಿ ಕಡೆಗೆ ಕಳುಹಿಸುವ ಮೂಲಕ ತಮ್ಮ ಮೊದಲ ಇನ್ನಿಂಗ್ಸ್‌ನ 7ನೇ ಫೋರ್‌ ದಾಖಲಿಸಿದ್ದರು. ಮೊದಲ ದಿನದ ಕೊನೆಯ ಆಟದ ಅಂತ್ಯದಲ್ಲಿ ವಿರಾಟ್ ಕೊಹ್ಲಿ ಅವರ 8ನೇ ಬೌಂಡರಿ 142ನೇ ಎಸೆತದಲ್ಲಿ ವಾರಿಕಾನ್ ಬೌಲಿಂಗ್​ ಮಾಡುವಾಗ ಬಂದಿತು. ಇದರೊಂದಿಗೆ ತಂಡಕ್ಕಾಗಿ ಕೊಹ್ಲಿ ಜಡೇಜಾ ಅವರೊಂದಿಗೆ 100 ರನ್ ಜೊತೆಯಾಟ ಪೂರ್ಣಗೊಳಿಸಿದರು.

ಇದನ್ನು ನೋಡಿದರೇ ವಿಂಟೇಜ್​ ಕೊಹ್ಲಿ ಆಟ ಮರುಕಳಿಸಿರುವುದು ಕಂಡು ಬರುತ್ತಿದೆ. ಆಕ್ರಮಣಕಾರಿ ಆಟವಾಡುವುದರೊಂದಿಗೆ ವೇಗವಾಗಿ ರನ್​ಗಳಿಸಲು ಹೋಗಿ ವಿಕೆಟ್ ಕಳೆದುಕೊಳ್ಳುವ ಬದಲು ಮೈದಾನದಲ್ಲಿ ನಿಂತು ದುರ್ಬಲ ಎಸೆತಗಳಿಗೆ ಕಾಯ್ದು ರನ್​ ಹೊಡೆಯುವ ಪ್ರಯತ್ನವನ್ನು ಕೊಹ್ಲಿ ಮಾಡುತ್ತಿದ್ದಾರೆ. ಮೊದಲ ಟೆಸ್ಟ್​ನಲ್ಲಿ ಅರ್ಧಶತಕ ಸಿಡಿಸಿದ್ದ ಕೊಹ್ಲಿ ಎರಡನೇ ಟೆಸ್ಟ್ ನಲ್ಲಿ ಶತಕದತ್ತ ಸಾಗುತ್ತಿದ್ದು, ಇಂದು ವೃತ್ತಿಜೀವನದ 76ನೇ ಶತಕ ಸಿಡಿಸುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ : Virat Kohli: ಜಾಕ್ವೆಸ್​ ಕಾಲಿಸ್​ ದಾಖಲೆ ಮುರಿದು ಮುನ್ನುಗ್ಗಿದ ಕೊಹ್ಲಿ; 25,500 ರನ್​ ಪೂರ್ಣಗೊಳಿಸಿದ ಭಾರತದ 2ನೇ ಆಟಗಾರ​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.