ETV Bharat / sports

ಭಾರತದ ವಿರುದ್ಧ ಕಣಕ್ಕಿಳಿಯಲಿದ್ದಾರೆ ವಿಶ್ವಕಪ್ ಹೀರೋ ಉನ್ಮುಖ್ತ್​ ಚಾಂದ್!

author img

By

Published : Apr 12, 2022, 6:29 PM IST

ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಉನ್ಮುಖ್ತ್ ಚಾಂದ್​ ಕ್ರಿಕೆಟ್​ ಜಗತ್ತಿನಲ್ಲಿ ಕಣ್ಣುಬಿಡುತ್ತಿರುವ ಅಮೆರಿಕದಲ್ಲಿ ಅವಕಾಶಕ್ಕಾಗಿ ವಲಸೆ ಹೋಗಿದ್ದರು. ಈಗಾಗಲೆ ಅಲ್ಲಿನ ಸ್ಥಳೀಯ ಮೈನರ್ ಕ್ರಿಕೆಟ್​ ಲೀಗ್​ನಲ್ಲಿ ಅವರು ಆಡುತ್ತಿದ್ದಾರೆ. ಆದರೆ ಇಲ್ಲಿ ಮುಖ್ಯ ಸಂಗತಿ ಬೇರೆನೇ ಇದೆ.

USA get direct qualification for T20 WC 2024
ಉನ್ಮುಖ್ತ್ ಚಾಂದ್ ಟಿ20 ವಿಶ್ವಕಪ್

ನವದೆಹಲಿ: ಉನ್ಮುಖ್ತ್​ ಚಾಂದ್. ಭಾರತಕ್ಕೆ 2012ರ ಅಂಡರ್ 19 ವಿಶ್ವಕಪ್​ ಗೆದ್ದು ಕೊಟ್ಟ ನಾಯಕ. ಆ ಸಮಯದಲ್ಲಿ ಅವರನ್ನು 'ಭಾರತದ ಭವಿಷ್ಯ' ಎಂದೇ ಬಿಂಬಿಸಲಾಗಿತ್ತು. ವಿರಾಟ್​ ಕೊಹ್ಲಿ, ಯುವರಾಜ್​ ಸಿಂಗ್ ಅವರಂತೆ 19 ವರ್ಷದೊಳಗಿನ ವಿಶ್ವಕಪ್​ ಗೆದ್ದ ನಂತರ ಚಾಂದ್​ ಕೂಡ ಭಾರತ ತಂಡದಲ್ಲಿಯೇ ಯಶಸ್ವಿ ಕ್ರಿಕೆಟಿಗನಾಗಬಹುದು ಎಂದು ಹೇಳಲಾಗಿತ್ತು. ಆದರೆ, ಅವರಿಗೆ ಅದೃಷ್ಟ ಕೂಡಿಬರಲಿಲ್ಲ.

2008ರ ಕಿರಿಯರ ವಿಶ್ವಕಪ್ ಗೆದ್ದ ಕೂಡಲೇ ವಿರಾಟ್​ ಕೊಹ್ಲಿ ಭಾರತ ತಂಡದ ಭಾಗವಾದರು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಇಂದು ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ಬೆಳೆದುನಿಂತಿದ್ದಾರೆ. ಅದೇ ನಾಲ್ಕು ವರ್ಷಗಳ ನಂತರ ಉನ್ಮುಖ್ತ್ ಚಾಂದ್ ಕೂಡ ಭಾರತಕ್ಕೆ 3ನೇ ಕಿರಿಯರ ವಿಶ್ವಕಪ್​ ಗೆದ್ದುಕೊಟ್ಟರು. ಆದರೆ, ಆ ನಂತರ ಅವರು ರಣಜಿ, ಐಪಿಎಲ್​ಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರಾದರೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು.

ಕೊನೆಗೆ ಐಪಿಎಲ್​, ದೆಹಲಿ ರಣಜಿ ತಂಡದಿಂದಲೂ ಹೊರಬಿದ್ದರು. ಉತ್ತರಾಖಂಡ ರಣಜಿ ತಂಡದಲ್ಲಿ ಒಂದಷ್ಟು ದಿನ ಆಡಿದ ಚಾಂದ್, ಕೊನೆಗೆ ಭಾರತ ತಂಡದಲ್ಲಿ ಆಡುವ ಅವಕಾಶವಿಲ್ಲ, ತಮ್ಮ ಕ್ರಿಕೆಟ್​ ಭವಿಷ್ಯವನ್ನು ಅಂತ್ಯಗೊಳಿಸುವ ಬದಲು ಅವಕಾಶ ಇರುವ ಕಡೆಗೆ ಪಯಣಿಸುವ ನಿರ್ಧಾರ ತೆಗೆದುಕೊಂಡರು. ಈ ಕಾರಣಕ್ಕೆ ತಮ್ಮ 28ನೇ ವಯಸ್ಸಿಗೆ ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ನಂತರ ಕ್ರಿಕೆಟ್​ ಜಗತ್ತಿನಲ್ಲಿ ಕಣ್ಣುಬಿಡುತ್ತಿರುವ ಅಮೆರಿಕಕ್ಕೆ ಅವಕಾಶಕ್ಕಾಗಿ ವಲಸೆ ಹೋಗಿರುವ ಚಾಂದ್​, ಈಗಾಗಲೆ ಅಲ್ಲಿನ ಸ್ಥಳೀಯ ಮೈನರ್ ಕ್ರಿಕೆಟ್​ ಲೀಗ್​ನಲ್ಲಿ ಆಡುತ್ತಿದ್ದಾರೆ.

ಅಮೆರಿಕಗೆ ವಿಶ್ವಕಪ್​ ಆತಿಥ್ಯ; ಚಾಂದ್​ಗೆ ಅವಕಾಶ? ಸೋಮವಾರ ಐಸಿಸಿ 2024ರ ಟಿ20 ವಿಶ್ವಕಪ್ ಆತಿಥ್ಯ ವಹಿಸುವ ರಾಷ್ಟ್ರಗಳನ್ನು ಹೆಸರಿಸಿದ್ದು, ವೆಸ್ಟ್​ ಇಂಡೀಸ್ ಮತ್ತು ಯುಎಸ್​ ಕ್ರಿಕೆಟ್​ ಮಂಡಳಿಗಳಿಗೆ ಈ ಬಹುರಾಷ್ಟ್ರಗಳ ಟೂರ್ನಿ ಆಯೋಜಿಸುವ ಅವಕಾಶ ಸಿಕ್ಕಿದೆ. ಐಸಿಸಿ ನಿಯಮಗಳ ಪ್ರಕಾರ, ಟೂರ್ನಿ ಆಯೋಜಿಸುವ ತಂಡಗಳು ನೇರ ಅರ್ಹತೆ ಪಡೆದುಕೊಳ್ಳುತ್ತವೆ. ಹಾಗಾಗಿ, ವಿಂಡೀಸ್ ಮತ್ತು ಯುಎಸ್ಎ​ ತಂಡಗಳು ವಿಶ್ವಕಪ್​ ಭಾಗವಾಗಲಿದ್ದು, ಭಾರತ ಬಿಟ್ಟು ಅಮೆರಿಕಗೆ ತೆರಳಿರುವ ಉನ್ಮುಖ್ತ್​ ಚಾಂದ್​ 2024ಕ್ಕೆ ಅಮೆರಿಕ ಪರ ಆಡುವ ಸಾಧ್ಯತೆಯಿದೆ.

ಅಮೆರಿಕದಲ್ಲಿ 3 ವರ್ಷಗಳ ಕಾಲ ನೆಲೆಸಿದ ನಂತರ ರಾಷ್ಟ್ರೀಯ ತಂಡದ ಪರ ಆಡುವುದಕ್ಕೆ ಅರ್ಹತೆ ಪಡೆಯಲಿದ್ದಾರೆ. ಇವರ ಜೊತೆ, ಅವರ ಅಂಡರ್​ 19 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಸ್ಮಿತ್ ಪಟೇಲ್, ಹರ್ಮೀತ್ ಸಿಂಗ್ ಕೂಡ ಯುಎಸ್​​ಎಗೆ ಸ್ಥಳಾಂತರಗೊಂಡಿದ್ದಾರೆ. ಯುಎಸ್ ತಂಡದಲ್ಲಿ ಕೇವಲ ಭಾರತೀಯ ಆಟಗಾರರು ಮಾತ್ರವಲ್ಲ, ಕಿವೀಸ್ ಆಲ್​ರೌಂಡರ್ ಕೋರಿ ಆ್ಯಂಡರ್ಸನ್​, ಪಾಕಿಸ್ತಾನ ಮತ್ತು ಶ್ರೀಲಂಕಾದ ಕೆಲವು ಆಟಗಾರರು ಕೂಡ ತಮ್ಮ 2ನೇ ಇನ್ನಿಂಗ್ಸ್​ ಆರಂಭಿಸಲು ಕಾಯುತ್ತಿದ್ದಾರೆ.

ಇದನ್ನೂ ಓದಿ;ಕೊಹ್ಲಿ ಟಿ20 ಕ್ರಿಕೆಟ್​ಗೆ ತಕ್ಕಂತೆ ಪವರ್​ಫುಲ್ ಶಾಟ್​ ಆಡುವ ಪವರ್​ ಕಳ್ಕೊಂಡಿದ್ದಾರೆ : ಸಂಜಯ್ ಮಂಜ್ರೇಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.