ETV Bharat / sports

U19 World cup: ಆಸ್ಟ್ರೇಲಿಯಾ ಬಗ್ಗುಬಡಿದ ಟೀಂ ಇಂಡಿಯಾ ಫೈನಲ್​ಗೆ ಎಂಟ್ರಿ

author img

By

Published : Feb 3, 2022, 2:24 AM IST

U19 World cup ಸೆಮಿಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ ತಂಡ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಸತತ ನಾಲ್ಕನೇ ಬಾರಿಗೆ ಟೀಂ ಇಂಡಿಯಾ ವಿಶ್ವಕಪ್ ಫೈನಲ್​ಗೆ ತಲುಪಿದೆ. ಇನ್ನು ನಂ.1 ಪಟ್ಟಕ್ಕಾಗಿ ಫೆ.5 ರಂದು ಭಾರತ, ಇಂಗ್ಲೆಂಡ್ ತಂಡಗಳು ಎದುರಾಗಲಿವೆ.

U19CWC2022
U19CWC2022

ಆಂಟಿಗುವಾ: ಅಂಡರ್​ 19 ವಿಶ್ವಕಪ್ ಸೆಮಿಫೈನಲ್​ ಪಂದ್ಯದಲ್ಲಿ 96 ರನ್​ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಟೀಂ ಇಂಡಿಯಾ ಫೈನಲ್​ಗೆ ಲಗ್ಗೆ ಇಟ್ಟಿದೆ. ಈ ಮೂಲಕ ನಾಯಕ ಯಶ್ ಧುಲ್ ಟೀಂ ಟ್ರೋಫಿ ಗೆಲ್ಲುವ ಹಂತಕ್ಕೆ ತಲುಪಿದೆ. ಫೆ.5 ರಂದು ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಭಾರತ, ಇಂಗ್ಲೆಂಡ್ ಸೆಣಸಲಿವೆ.

ಸರ್​ ವಿವಿಯನ್ ರಿಚರ್ಡ್ಸ್​ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ಒದಗಿಸಿಕೊಡುವಲ್ಲಿ ಆರಂಭಿಕರು ವಿಫಲರಾದರು. ಟೂರ್ನಿಯಲ್ಲಿ ಭಾರತದ ಟಾಪ್ ಬ್ಯಾಟರ್​ ಆಗಿದ್ದ ರಘುವಂಶಿ ಇಂದು 30 ಎಸೆತಗಳನ್ನೆದುರಿಸಿ ಕೇವಲ 6 ರನ್​ಗಳಿಸಿದರೆ, ಹರ್ನೂರ್​ ಸಿಂಗ್​ 28 ಎಸೆತಗಳಲ್ಲಿ 3 ಬೌಂಡರಿ ಸಹಿತ 16 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು.

ಭಾರತ ಒಂದು ಹಂತದಲ್ಲಿ 12.3 ಓವರ್​ಗಳಲ್ಲಿ 37 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸುತ್ತಿತ್ತು. ಆದರೆ 3ನೇ ವಿಕೆಟ್​ಗೆ ಒಂದಾದ ನಾಯಕ ಯಶ್​ ಧುಲ್ ಮತ್ತು ಉಪನಾಯಕ ರಶೀದ್​ ನಿಧಾನಗತಿ ಆಟಕ್ಕೆ ಮೊರೆ ಹೋಗಿ ವಿಕೆಟ್​ ಉಳಿಸಿಕೊಂಡರು. 30 ಓವರ್​​ಗಳವರೆಗೆ ಒಂದೊಂದೆ ರನ್​ಗಾಗಿ ಆಡುತ್ತಿದ್ದ ಈ ಜೋಡಿ ನಂತರ ಬೌಂಡರಿಗಳ ಮೂಲಕ ರನ್​ಗತಿಯನ್ನು ಹೆಚ್ಚಿಸಿದರು.

ಯುಶ್​ ಧುಲ್​ ತಾವೆದುರಿಸಿದ 110 ಎಸೆತಗಳಲ್ಲಿ 110 ರನ್ ಗಳಿಸಿ ತಂಡದ ಮೊತ್ತ ಏರಿಸಿದರು. ಆದರೆ 46ನೇ ಓವರ್​ನಲ್ಲಿ ರನ್​ಔಟ್​ ಆಗಿ ನಿರ್ಗಮಿಸಿದರು. ಯಶ್​ ಔಟಾದ ನಂತರದ ಎಸೆತದಲ್ಲೇ ರಶೀದ್​ ಕೂಡ ಕ್ಯಾಚ್​ ಔಟ್​ ಆದರು. ಅವರು 108 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 94 ರನ್​ಗಳಿಸಿ 6 ರನ್​ಗಳಿಂದ ಶತಕವಂಚಿತರಾಗಿ ನಿರಾಶೆ ಅನುಭವಿಸಿದರು.

ಕೊನೆಯಲ್ಲಿ ಅಬ್ಬರಿಸಿದ ವಿಕೆಟ್ ಕೀಪರ್ ದಿನಾ ಬಾನಾ ಕೇವಲ 4 ಎಸೆತಗಳಲ್ಲಿ ತಲಾ 2 ಸಿಕ್ಸರ್​ ಮತ್ತು ಬೌಂಡರಿ ಸಹಿತ 20ರನ್​, ನಿಶಾಂತ್ ಸಿಂಧು 10 ಎಸೆತಗಳಲ್ಲಿ 12, ರಾಜವರ್ಧನ್​ 10 ಎಸೆತಗಳಲ್ಲಿ 13 ರನ್​ ಗಳಿಸಿದರು. ಭಾರತ ತಂಡ 50 ಓವರ್​ಗಳಲ್ಲಿ 5 ವಿಕೆಟ್ ಕಳೇದುಕೊಂಡು 290 ರನ್ ​ಗಳಿಸಿತು.

ಆಸ್ಟ್ರೇಲಿಯಾ ಪರ ಜ್ಯಾಕ್​ ನಿಸ್ಬೆಟ್​ 41ಕ್ಕೆ 2, ವಿಲಿಯಮ್​ ಸಾಲ್ಜ್​ಮನ್​ 57ಕ್ಕೆ 2 ವಿಕೆಟ್​ ಪಡೆದರು.

ಬಳಿಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಭಾರತದ ವೇಗಿ ರವಿಕುಮಾರ್ ಆರಂಭಿಕ ಆಘಾತ ನೀಡಿದರು. ಆಸೀಸ್ ತಂಡದ ಮೊತ್ತ 3 ಆಗಿದ್ದಾಗ ತೇಗೂ ವೈಲ್ಲೈ (1) ವಿಕೆಟ್ ಕಬಳಿಸಿದರು. ಬಳಿಕ ಕ್ಯಾಂಪಬೆಲ್ ಕೆಲ್ಲಿ (30) ಹಾಗೂ ಕೊರೆ ಮಿಲ್ಲರ್ (38) ರನ್ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಆದ್ರೆ ತಂಡದ ಮೊತ್ತ 71 ಆಗಿದ್ದಾಗ ರಘುವಂಶಿ ಎಸೆತದಲ್ಲಿ ಮಿಲ್ಲರ್ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಹಿಂದೆಯೇ ಕ್ಯಾಂಪಬೆಲ್​ ಕೂಡ ಔಟಾದರು. ಬಳಿಕ ಬಂದ ಲಚ್ಲಾನ್ ಶಾ (51) ಹೊರತು ಪಡಿಸಿ ಇನ್ನುಳಿದ ಆಟಗಾರರು ರನ್ ಗಳಿಸಲಾಗದೇ ವಿಕೆಟ್ ಒಪ್ಪಿಸಿ ಹೊರನಡೆದರು.

ಆಸ್ಟ್ರೇಲಿಯಾ 41.5 ಓವರ್​ಗಳಲ್ಲಿ 194 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಭಾರತ 96 ರನ್​ಗಳ ಜಯ ದಾಖಲಿಸಿತು.

ಭಾರತ ಪರ ವಿಕ್ಕಿ ಓಸ್ಟಾಲ್ 3, ನಿಶಾಂತ್ ಸಿಂಧು ಹಾಗೂ ರವಿ ಕುಮಾರ ತಲಾ 2 ಕಬಳಿಸಿದ್ರೆ, ಕೌಶಾಲ್ ತಾಂಬೆ ಮತ್ತು ರಘುವಂಶಿ ತಲಾ 1 ವಿಕೆಟ್ ಕಿತ್ತರು.

ಪ್ಲೇಯರ್ ಆಫ್ ದಿ ಮ್ಯಾಚ್: ಯಶ್ ಧುಲ್

ಸ್ಕೋರ್ ವಿವರ:

ಇಂಡಿಯಾ - 290/5(50)

ಆಸ್ಟ್ರೇಲಿಯಾ - 194 (41.5)

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.