ETV Bharat / sports

ಅಂಡರ್​ 19 ವನಿತೆಯರ ವಿಶ್ವಕಪ್​: ಗೆಲುವಿನ ರನ್​ ಬಾರಿಸಿದ ಸೌಮ್ಯ ತಿವಾರಿ, ಫ್ಯಾಮಿಲಿ ಖುಷ್​

author img

By

Published : Jan 30, 2023, 4:13 PM IST

19 ವರ್ಷದೊಳಗಿನವರ ವನಿತೆಯರ ವಿಶ್ವಕಪ್ - ಇಂಗ್ಲೆಂಡ್​ ವಿರುದ್ಧ ಭಾರತಕ್ಕೆ ಜಯ - ಗೆಲುವಿನ ರನ್​ ಬಾರಿಸಿದ ಸೌಮ್ಯಾ ತಿವಾರಿ - ಸೌಮ್ಯಾ ತಿವಾರಿ ಕುಟುಂಬದ ಜೊತೆ ಈಟಿವಿ ಭಾರತ್​ ಸಂಭಾಷಣೆ

u19-womens-t20
ಗೆಲುವಿನ ರನ್​ ಬಾರಿಸಿದ ಸೌಮ್ಯಾ ತಿವಾರಿ

ಭೋಪಾಲ್(ಮಧ್ಯಪ್ರದೇಶ): 19 ವರ್ಷದೊಳಗಿನವರ ವನಿತೆಯರ ವಿಶ್ವಕಪ್​ ಭಾರತದ ಮುಡಿಗೇರಿದೆ. ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ವನಿತೆಯರ ಮೇಲೆ ಸವಾರಿ ಮಾಡಿದ ಭಾರತದ ವನಿತೆಯರು ಪ್ರಶಸ್ತಿ ಎತ್ತಿ ಹಿಡಿದರು. 66 ರನ್​ಗಳ ಅಲ್ಪಮೊತ್ತಕ್ಕೆ ಇಂಗ್ಲೆಂಡ್​ ಅನ್ನು ಕಟ್ಟಿಹಾಕಿದ ಭಾರತ 14 ಓವರ್​ಗಳಲ್ಲಿ ಜಯಭೇರಿ ಬಾರಿಸಿತು. ಅಜೇಯ ಬ್ಯಾಟಿಂಗ್​ ಮಾಡಿ ಪ್ರಶಸ್ತಿ ಗೆಲ್ಲಲು ನೆರವಾದ ಸೌಮ್ಯಾ ತಿವಾರಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮಧ್ಯಪ್ರದೇಶದ ಭೋಪಾಲ್​ ಮೂಲದ ಸೌಮ್ಯಾ ತಿವಾರಿ ಅವರ ಕುಟುಂಬದ ಜೊತೆ "ಈಟಿವಿ ಭಾರತ್​" ಸಂಭಾಷಣೆ ನಡೆಸಿದ್ದು, ಅವರು ಸಂತಸ ಹಂಚಿಕೊಂಡರು. ಸೌಮ್ಯಾ ಅವರ ತಾಯಿ ಭಾರತಿ ಮಾತನಾಡಿ, ಸೌಮ್ಯಾಳ ಕನಸಷ್ಟೇ ಅಲ್ಲ, ನಮ್ಮ ಕನಸೂ ನೆರವೇರಿತು. ಚೊಚ್ಚಲ ವಿಶ್ವಕಪ್​ ಗೆದ್ದ ಭಾರತ ತಂಡದಲ್ಲಿ ತಮ್ಮ ಮಗಳು ಇದ್ದಾಳೆ ಎಂಬುದೇ ನಮಗೆ ಹಿರಿಮೆ ಎಂದು ಅವರು ಹೇಳಿದರು. ಇದೇ ವೇಳೆ ತಂದೆ ಮನೀಶ್ ತಿವಾರಿ ಅವರು ಸೌಮ್ಯ ಅವರಿಗೆ ವಿಡಿಯೋ ಕರೆ ಮಾಡಿ ಖುಷಿ ವ್ಯಕ್ತಪಡಿಸಿದರು.

"ಫೈನಲ್​ ಪಂದ್ಯ ಎಂದ ಮೇಲೆ ಒತ್ತಡ ಇದ್ದೇ ಇರುತ್ತದೆ. ಇದೆಲ್ಲವನ್ನು ತಮ್ಮ ಮಗಳು ದೃಢವಾಗಿ ನಿಭಾಯಿಸಿದಳು. ಒತ್ತಡ ಮಧ್ಯೆಯೂ ಉತ್ತಮ ಪ್ರದರ್ಶನ ನೀಡಿದಳು. ಆಟದ ಪೂರ್ವ ಯೋಜನೆಯಿಂದಾಗಿ ಉತ್ತಮ ಆಟ ಮೂಡಿಬರಲು ಸಾಧ್ಯವಾಯಿತು. 19 ವರ್ಷದೊಳಗಿನ ಮಹಿಳಾ ತಂಡಕ್ಕೆ ಜನರು ತೋರಿಸಿದ ಬೆಂಬಲಕ್ಕಾಗಿ ಧನ್ಯವಾದ" ಎಂದು ಹೇಳಿದರು.

ಗೆಲ್ಲಲು ಪ್ರಾರ್ಥಿಸಿ ಪಂದ್ಯ ನೋಡದ ತಾಯಿ: ಮಗಳು ಮತ್ತು ಟೀಂ ಇಂಡಿಯಾಕ್ಕಾಗಿ ಪ್ರಾರ್ಥನೆಯಲ್ಲಿ ನಿರತರಾಗಿದ್ದರಿಂದ ಪಂದ್ಯವನ್ನು ವೀಕ್ಷಿಸಲಿಲ್ಲ ಎಂದು ತಾಯಿ ಭಾರತಿ ಅವರು ಹೇಳಿದರು. ಮಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಆಕೆಯ ಯಶಸ್ಸಿಗೆ ಆಕೆಯ ಶ್ರಮವೇ ಕಾರಣ. ಸೌಮ್ಯ ಟೂರ್ನಿಗೂ ಮೊದಲೇ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಳು. ವಿಶ್ವಕಪ್ ಅನ್ನು ಮನೆಗೆ ತರುವುದಾಗಿ ಭರವಸೆ ನೀಡಿದ್ದಳು. ಅದರಂತೆಯೇ ನಡೆದುಕೊಂಡಳು ಎಂದು ಹೇಳಿದರು.

ಮಗಳ ಸಾಧನೆಗೆ ಹಮ್ಮೆ ಇದೆ: ಗೆಲುವಿನ ರನ್​ ಸೌಮ್ಯ ಬಾರಿಸಿದ್ದು ನಮಗೆ ಇನ್ನಿಲ್ಲದ ಸಂತಸ ತಂದಿದೆ. ಮಗಳ ಸಾಧನೆಯನ್ನು ಬಣ್ಣಿಸಲು ಪದಗಳೇ ಸಾಲುತ್ತಿಲ್ಲ. ವಿಶ್ವಕಪ್‌ನಲ್ಲಿ ಆಡುವುದು ಅವಳ ಕನಸಾಗಿತ್ತು. ಅವಳ ಗೆಲುವಿನಿಂದಾಗಿ ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ ಎಂದು ಸೌಮ್ಯ ಅವರ ತಂದೆ ಹೇಳಿದರು.

ಗೆಲುವಿನ ರನ್​ ಬಾರಿಸಿದ ಸೌಮ್ಯಾ: ಇಂಗ್ಲೆಂಡ್​ ವಿರುದ್ಧ ನಡೆದ ಫೈನಲ್​ ಪಂದ್ಯದಲ್ಲಿ 37 ಎಸೆತಗಳನ್ನು ಎದುರಿಸಿದ ಸೌಮ್ಯ ತಿವಾರಿ ಅಜೇಯ 24 ರನ್ ಗಳಿಸಿದರು. ಸಾಧಾರಣ ಗುರಿ ಬೆನ್ನಟ್ಟಿದರೂ, ಒತ್ತಡದಿಂದಾಗಿ ವಿಕೆಟ್​ ಕಳೆದುಕೊಂಡಿತ್ತು. ಈ ವೇಳೆ ತಂಡಕ್ಕೆ ಬೆನ್ನೆಲುಬಾಗಿ ನಿಂತ ಸೌಮ್ಯ ಕೊನೆಯವರೆಗೂ ಹೋರಾಡಿ ಪಂದ್ಯ ಗೆಲ್ಲಿಸಿದರು. ಇವರಿಗೆ ಗೋಂಗಡಿ ತ್ರಿಶಾ ಉತ್ತಮ ಬೆಂಬಲ ನೀಡಿದರು. 29 ಎಸೆತಗಳಲ್ಲಿ 24 ರನ್​ ಮಾಡಿದ ತ್ರಿಶಾ ಕೊನೆಯಲ್ಲಿ ಗೆಲುವಿನ ರನ್​ ಬಾರಿಸುವ ಅವಸರಲ್ಲಿ ಔಟಾದರು. ಚೊಚ್ಚಲ ಅಂಡರ್​ 19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸೌಮ್ಯಾ ಫಿನಿಶರ್ ಆಗಿ ಗುರುತಿಸಿಕೊಂಡರು.

ಓದಿ: ಕ್ಯಾನ್ಸರ್​ಗೆ ತಂದೆ, ಹಾವಿಗೆ ತಮ್ಮ ಬಲಿ: ಪಟ್ಟುಬಿಡದೇ ಬೆಳೆದ ಪ್ರತಿಭೆ ಅರ್ಚನಾ ದೇವಿಯ ಕ್ರಿಕೆಟ್​ಗಾಥೆಯಿದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.