ETV Bharat / sports

ಉತ್ತರ ಪ್ರದೇಶದಲ್ಲಿ ಸಿದ್ಧವಾಗುತ್ತಿದೆ ಮೂರನೇ ಅಂತಾರಾಷ್ಟ್ರೀಯ ಕ್ರಿಕೆಟ್​ ಕ್ರೀಡಾಂಗಣ

author img

By

Published : Mar 19, 2023, 9:00 PM IST

ಉತ್ತರ ಪ್ರದೇಶಕ್ಕೆ ಶೀಘ್ರದಲ್ಲೇ ಮೂರನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, 2024ರ ಅಂತ್ಯದ ವೇಳೆಗೆ ಸಿದ್ಧವಾಗಲಿದೆ.

Etv Bharat
Etv Bharat

ನವದೆಹಲಿ: ಕಾನ್ಪುರ, ಲಕ್ನೋ ನಂತರ ಇದೀಗ ಉತ್ತರ ಪ್ರದೇಶ ವಾರಣಾಸಿಯಲ್ಲಿ ಮೂರನೇ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ಹೊಂದಲಿದೆ. ಇದಕ್ಕಾಗಿ ಜಾಗದ ವ್ಯವಸ್ಥೆ ಮಾಡಲಾಗಿದ್ದು, ಈ ವರ್ಷದ ಮೇ-ಜೂನ್ ಅಂತ್ಯಕ್ಕೆ ಕ್ರೀಡಾಂಗಣದ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಉತ್ತರ ಪ್ರದೇಶ ಸರ್ಕಾರವು ರಜತಲಾಬ್ ತಹಸಿಲ್‌ನ ಗಂಜಾರಿ ಗ್ರಾಮದಲ್ಲಿ 31 ಎಕರೆ ಭೂಮಿಯನ್ನು ಖರೀದಿಸಿದೆ. ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೇರಿ ನಿರ್ಮಾಣ ಮಾಡಲಿದೆ.

ಈ ವಾರದ ಆರಂಭದಲ್ಲಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ವಾರಣಾಸಿಗೆ ಭೇಟಿ ನೀಡಿ ಕ್ರೀಡಾಂಗಣದ ಸಿದ್ಧತೆಗಳನ್ನು ಪರಿಶೀಲಿಸಿದ್ದರು. ಯುಪಿಸಿಎ ನಿರ್ದೇಶಕ ಯುಧವೀರ್ ಸಿಂಗ್ ಭಾನುವಾರ ಈ ಬಗ್ಗೆ ತಿಳಿಸಿದ್ದಾರೆ. "ವಾರಣಾಸಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕಾಗಿ ಉತ್ತರ ಪ್ರದೇಶ ಸರ್ಕಾರವು ರಜತಲಾಬ್ ತಹಸಿಲ್‌ನ ಗಂಜಾರಿ ಗ್ರಾಮದಲ್ಲಿ ಸುಮಾರು 31 ಎಕರೆ ಭೂಮಿಯನ್ನು ಗುರುತಿಸಿದೆ" ಎಂದಿದ್ದಾರೆ.

ವಾರಣಾಸಿ ಕಮಿಷನರ್ ಕೌಶಲ್ ರಾಜ್ ಶರ್ಮಾ ಮಾತನಾಡಿ,'ರಾಜತಲಾಬ್ ತಹಸಿಲ್‌ನ ಗಂಜಾರಿ ಗ್ರಾಮದಲ್ಲಿ ಯುಪಿ ಸರ್ಕಾರವು ರೈತರಿಂದ ಸುಮಾರು 120 ಕೋಟಿ ರೂ.ಗೆ 31 ಎಕರೆ ಭೂಮಿಯನ್ನು ಖರೀದಿಸಿದೆ. ಈ ಭೂಮಿಯನ್ನು ಯುಪಿಸಿಎಗೆ 30 ವರ್ಷಗಳ ಗುತ್ತಿಗೆಗೆ ಈ ತಿಂಗಳ ಕೊನೆಯಲ್ಲಿ ನೀಡಲಾಗುವುದು. ಗುತ್ತಿಗೆಗೆ ಬದಲಾಗಿ ಯುಪಿಸಿಎ ಯುಪಿ ಸರಕಾರಕ್ಕೆ ಪ್ರತಿ ವರ್ಷ 10 ಲಕ್ಷ ರೂಪಾಯಿಗಳನ್ನು ನೀಡುತ್ತದೆ. ಇದರ ನಂತರ ಯುಪಿಸಿಎ ನಿಯಂತ್ರಣಕ್ಕೆ ಕ್ರೀಡಾಂಗಣ ಒಳಪಡಲಿದೆ.

ಈ ವರ್ಷದ ಮೇ-ಜೂನ್‌ನಲ್ಲಿ ಪೂರ್ವ ಉತ್ತರ ಪ್ರದೇಶದ ಈ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಅಡಿಪಾಯವನ್ನು ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದ ಹಾಕುವ ಸಾಧ್ಯತೆಯಿದೆ ಎಂದು ಶರ್ಮಾ ಹೇಳಿದರು. ಕಾಶಿಯಲ್ಲಿ ನಿರ್ಮಾಣವಾಗಲಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಯುಪಿಸಿಎ ನಿರ್ದೇಶಕ ಸಿಂಗ್ ಮಾತನಾಡಿ, ಕಾನ್ಪುರ ಮತ್ತು ಲಕ್ನೋ ನಂತರ ಯುಪಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯಲಿರುವ ಮೂರನೇ ಕ್ರೀಡಾಂಗಣ ಇದಾಗಲಿದೆ. ಈಗಾಗಲೇ ಕಾನ್ಪುರದಲ್ಲಿ ಗ್ರೀನ್ ಪಾರ್ಕ್ ಮತ್ತು ಲಕ್ನೋದಲ್ಲಿ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣಗಳು ಉತ್ತರ ಪ್ರದೇಶದಲ್ಲಿದೆ" ಎಂದಿದ್ದಾರೆ.

ವಾರಣಾಸಿಯಲ್ಲಿ ನಿರ್ಮಾಣವಾಗಲಿರುವ ಈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ನಿರ್ಮಾಣವು ಈ ವರ್ಷ ಮೇ-ಜೂನ್‌ನಿಂದ ಪ್ರಾರಂಭವಾಗಲಿದ್ದು, 2024 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಉದ್ದೇಶಿತ ಅಂತಾರಾಷ್ಟ್ರೀಯ ಕ್ರೀಡಾಂಗಣದ ಸಾಮರ್ಥ್ಯವು 30 ಸಾವಿರ ಪ್ರೇಕ್ಷಕರನ್ನು ಹೊಂದಿರಲಿದೆ ಮತ್ತು ಇದನ್ನು ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ನಿರ್ಮಿಸಲಾಗುವುದು ಎಂದು ಸಿಂಗ್ ಹೇಳಿದರು. ಈ ಕ್ರೀಡಾಂಗಣ ನಿರ್ಮಾಣಕ್ಕೆ ಸುಮಾರು ಮುನ್ನೂರು ಕೋಟಿ ರೂ. ಕ್ರೀಡಾಂಗಣವು ಆಧುನಿಕ ಸೌಲಭ್ಯಗಳು ಮತ್ತು ಸಂಪನ್ಮೂಲಗಳೊಂದಿಗೆ ಸುಸಜ್ಜಿತವಾಗಿರುತ್ತದೆ.

ಈ ವಾರದ ಆರಂಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರು ವಾರಣಾಸಿಗೆ ಭೇಟಿ ನೀಡಿ ಈ ಕ್ರೀಡಾಂಗಣದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ ಎಂದು ಯುಪಿಸಿಎ ಕಾರ್ಯದರ್ಶಿ ಅರವಿಂದ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ. ಶಾ ಮತ್ತು ಶುಕ್ಲಾ ಭೇಟಿಯನ್ನು ಖಚಿತಪಡಿಸಿದ ಆಯುಕ್ತ ಶರ್ಮಾ, ಬಿಸಿಸಿಐ ಮತ್ತು ಯುಪಿಸಿಎ ಅಧಿಕಾರಿಗಳು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ ನಂತರ ಕ್ರೀಡಾಂಗಣ ನಿರ್ಮಾಣದ ಸಿದ್ಧತೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಈಗ ಈ ತಿಂಗಳ ಕೊನೆಯ ವಾರದಲ್ಲಿ, 10 ಲಕ್ಷ ರೂ.ಗಳ ಗುತ್ತಿಗೆ ಶುಲ್ಕವನ್ನು ಠೇವಣಿ ಮಾಡಿದ ನಂತರ, ಭೂಮಿಯನ್ನು ಯುಪಿಸಿಎಗೆ ಹಸ್ತಾಂತರಿಸಲಾಗುವುದು ಮತ್ತು ನಂತರ ಕ್ರೀಡಾಂಗಣವನ್ನು ನಿರ್ಮಿಸಲು ಬಿಸಿಸಿಐ ತನ್ನ ನಿರ್ಮಾಣ ಸಂಸ್ಥೆಗೆ ಕೆಲಸವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾಕ್ಕೆ 10 ವಿಕೆಟ್​ಗಳ ಗೆಲುವು: 11 ನೇ ಓವರ್​ನಲ್ಲೇ ಮ್ಯಾಚ್​​ ವಿನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.