ETV Bharat / sports

ಟ್ರೋಫಿ ಜೊತೆ ನಾಯಕರ ಫೋಟೋ ಶೂಟ್​: ಈ ಐತಿಹಾಸಿಕ ಸ್ಥಳ ಯಾವುದೆಂದು ಬಲ್ಲಿರಾ?

author img

By ETV Bharat Karnataka Team

Published : Nov 18, 2023, 4:16 PM IST

Photo Shoot in Adalaj Stepwell: ಅಕ್ಟೋಬರ್​ 5 ರಂದು ಆರಂಭವಾಗಿದ್ದ ವಿಶ್ವಕಪ್​ ಟೂರ್ನಿಗೆ ತೆರೆಬೀಳಲು ಇನ್ನೂ ಒಂದು ದಿನ ಮಾತ್ರ ಬಾಕಿ ಇದೆ. ಈ ವೇಳೆ ಇಬ್ಬರು ನಾಯಕರು ಐತಿಹಾಸಿಕ ಸ್ಥಳದಲ್ಲಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ.

Team india captain rohit sharma
Team india captain rohit sharma

ಗಾಂಧಿನಗರ (ಗುಜರಾತ್​): ಒಂದೂವರೆ ತಿಂಗಳ ಕಾಲ ಭಾರತದಲ್ಲಿ ಏಕದಿನ ಕ್ರಿಕೆಟ್​ನ ಜಾತ್ರೆ ವಿಜೃಭಣೆಯಿಂದ ನಡೆಯಿತು. ನಾಳೆ (ನವೆಂಬರ್​ 19) ಈ ಜಾತ್ರೆಗೆ ತೆರೆ ಬೀಳಲಿದೆ. ಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ಆಗುತ್ತಿದ್ದು, ಗೆದ್ದ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಲಿದೆ. ಇದಕ್ಕೂ ಮುನ್ನ ಎರಡು ತಂಡದ ನಾಯಕರು ಅದಲಾಜ್ ಸ್ಟೆಪ್​ನಲ್ಲಿ ವಿಶ್ವಕಪ್​ ಜೊತೆಗೆ ಫೋಟೋ ಶೂಟ್​ ಮಾಡಿಸಿದ್ದಾರೆ.

ಅದಲಾಜ್ ಸ್ಟೆಪ್​ನಲ್ಲಿ ಫೋಟೋಶೂಟ್: ಐಸಿಸಿ ಪ್ರೋಟೋಕಾಲ್ ಪ್ರಕಾರ ಫೈನಲ್ ಪಂದ್ಯದ ಉಭಯ ತಂಡಗಳ ನಾಯಕರು ಪಂದ್ಯ ಆರಂಭಕ್ಕೂ ಮುನ್ನ ಫೋಟೋ ಶೂಟ್ ಮಾಡಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಇಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಫೋಟೋ ಶೂಟ್ ಮಾಡಿದ್ದಾರೆ. ಫೋಟೋ ಶೂಟ್​ ಹಿನ್ನೆಲೆಯಲ್ಲಿ ಗಾಂಧಿನಗರ ಪೊಲೀಸರು ಬೆಳಗ್ಗೆ 10 ಗಂಟೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಫೋಟೋಶೂಟ್ ಸುಮಾರು 30 ನಿಮಿಷಗಳ ಕಾಲ ನಡೆಸಲಾಯಿತು.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್: ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಎರಡೂ ತಂಡಗಳ ನಾಯಕರು ಗಾಂಧಿನಗರದ ಅದಲಾಜ್ ಸ್ಟೆಪ್​ವೆಲ್​ನಲ್ಲಿ ಫೋಟೋ ಶೂಟ್​​ಗೆ ಬರುತ್ತಾರೆ ಎಂದು ತಿಳಿದ ಕ್ರಿಕೆಟ್​ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ರೋಹಿತ್​ ಶರ್ಮಾ ಮತ್ತು ಪ್ಯಾಟ್​​ ಕಮಿನ್ಸ್​ ಸ್ಟೆಪ್​ನಲ್ಲಿ ಇಳಿಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅದಲಾಜ್ ಸ್ಟೆಪ್​ವೆಲ್​ ವಿಶೇಷತೆ ಏನು?: ಅದಲಾಜ್ ಸ್ಟೆಪ್‌ವೆಲ್ ಅಥವಾ ರುಡಾಬಾಯಿ ಸ್ಟೆಪ್‌ವೆಲ್ ಎಂಬುದು ಗುಜರಾತ್​ನ ಗಾಂಧಿನಗರ ನಗರಕ್ಕೆ ಸಮೀಪ ಇರುವ ಸಣ್ಣ ಪಟ್ಟಣ. ಇದೊಂದು ಮೆಟ್ಟಿಲುಗಳ ಬಾವಿಯಾಗಿದೆ. ಇದನ್ನು 1498ರಲ್ಲಿ ರಾಣಾ ವೀರ್ ಸಿಂಗ್ ನೆನಪಿಗಾಗಿ ಅವರ ಪತ್ನಿ ರಾಣಿ ರುದಾದೇವಿ ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ.

ಗೆದ್ದ ನಂತರ ರೋಡ್​ ಶೋ: ವಿಶ್ವಕಪ್ ಪಂದ್ಯ ಮುಗಿದ ಬಳಿಕ ಭಾರತದ ಪರ ಫಲಿತಾಂಶ ಬಂದರೆ ಅಹಮದಾಬಾದ್ ಪೊಲೀಸರು ರೋಡ್ ಶೋ ನಡೆಸಲು ಸಿದ್ಧತೆ ನಡೆಸಿದ್ದು, ತೆರೆದ ಬಸ್​​ನಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಯಮುನಾ ನದಿಯ ತಟವಾದ ಒಸ್ಮಾನ್‌ಪುರ ರಸ್ತೆಯಿಂದ ಆರಂಭವಾಗಿ ಪಾಲ್ಡಿ ವರೆಗೆ ನಡೆಯಲಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಅಟಲ್ ಸೇತುವೆಯ ಮೇಲೆ ಟೀಮ್ ಇಂಡಿಯಾದ ಫೋಟೋ ಶೂಟ್​ ನಡೆಯಲಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಫೈನಲ್​ ಪಂದ್ಯಕ್ಕೆ ಕ್ಷಣಗಣನೆ: 2023ರ ವಿಶ್ವಕಪ್​ ಫೈನಲ್​ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಕೇವಲ 24 ಗಂಟೆಗಳ ಅಂತರದಲ್ಲಿ ಪಂದ್ಯ ಆರಂಭವಾಗಲಿದ್ದು, 130,000 ಜನ ಪ್ರೇಕ್ಷಕರು ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣ ಸಂಪೂರ್ಣ ಭರ್ತಿ ಆಗಲಿದೆ. 2011ರ ವಿಶ್ವಕಪ್​ ಫೈನಲ್ ಪಂದ್ಯ ಭಾರತದಲ್ಲೇ ನಡೆದಿತ್ತು. ಈಗ ಆಕ್ಷಣ ಮತ್ತೆ ಬಂದಿದ್ದು, ರೋಹಿತ್​ ಪಡೆ ಚಾಂಪಿಯನ್​ ಆಗುತ್ತಾ ಕಾದುನೋಡಬೇಕಿದೆ.

ಇದನ್ನೂ ಓದಿ: ಭಾರತ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಕನ್ನಡಿಗ; 'ಡಿಸಿಷನ್ ರಾಹುಲ್ ಸಿಸ್ಟಮ್' ಬಗ್ಗೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.