ETV Bharat / sports

T20 World Cup: ಟೀಂ ಇಂಡಿಯಾದ ಫೈನಲ್​ ಕನಸು ಭಗ್ನ... ಇಂಗ್ಲೆಂಡ್​ಗೆ 10 ವಿಕೆಟ್​ಗಳ ಭರ್ಜರಿ ಗೆಲುವು

author img

By

Published : Nov 10, 2022, 3:12 PM IST

Updated : Nov 10, 2022, 4:47 PM IST

ಟಿ20 ವಿಶ್ವಕಪ್​​ನ ಎರಡನೇ ಸೆಮಿ ಫೈನಲ್​ ಪಂದ್ಯದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ಜಯ ದಾಖಲಿಸಿದ್ದು, ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.

ಟಿ20 ವಿಶ್ವಕಪ್
T20 World Cup

ಅಡಿಲೇಡ್​ (ಆಸ್ಟ್ರೇಲಿಯಾ): ಟಿ20 ವಿಶ್ವಕಪ್​​ನಲ್ಲಿ ಟೀಂ ಇಂಡಿಯಾದ ಫೈನಲ್​ ಕನಸು ಭಗ್ನವಾಗಿದೆ. ಎರಡನೇ ಸೆಮಿ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ರೋಹಿತ್​ ಶರ್ಮಾ ಪಡೆ ಹೀನಾಯ ಸೋಲು ಕಂಡಿದೆ. 10 ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸಿದ ಬಟ್ಲರ್​ ಪಡೆ ಫೈನಲ್​ಗೆ ಲಗ್ಗೆ ಇಟ್ಟಿದೆ.

ಅಡಿಲೇಡ್​ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಟಾಸ್​ ಗೆದ್ದು ಮೊದಲ ಬೌಲಿಂಗ್​​ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್​ ಮಾಡಿದ ಟೀಂ ಇಂಡಿಯಾ 20 ಓವರ್​ಗಳಲ್ಲಿ ಆರು ವಿಕೆಟ್​ ನಷ್ಟಕ್ಕೆ 168 ರನ್​ಗಳನ್ನು ಗಳಿಸಿತ್ತು. ಈ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ ಆಟಗಾರರು ವಿಕೆಟ್​ ನಷ್ಟವಿಲ್ಲದೇ ಕೇವಲ 16 ಓವರ್​ಗಳಲ್ಲಿ 170 ರನ್ ಸಿಡಿಸಿ ಜಯ ದಾಖಲಿಸಿದರು. ನಾಯಕ ಜೋಸ್ ಬಟ್ಲರ್ (80) ಮತ್ತು ಅಲೆಕ್ಸ್ ಹೇಲ್ಸ್ (86 ರನ್​) ಅಜೇಯ ಆಟವಾಡಿ ಮಿಂಚಿದರು.

ಮೊದಲು ಬ್ಯಾಟಿಂಗ್ ಮಾಡಿದ್ದ​ ಟೀಂ ಇಂಡಿಯಾ ಪರ ಆರಂಭಿಕರಾಗಿ ವಿರಾಟ್​ ಕೊಹ್ಲಿ ಜೊತೆಗೆ ಕಣಕ್ಕೆ ಇಳಿದ್ದ ಕೆಎಲ್​ ರಾಹುಲ್​ ಬೇಗ ಔಟಾಗಿ ನಿರಾಶೆ ಮೂಡಿಸಿದ್ದರು. 5 ಬಾಲ್​ಗಳನ್ನು ಎದುರಿಸಿ ಕೇವಲ 5 ರನ್​ಗಳನ್ನಷ್ಟೇ ಗಳಿಸಿ ರಾಹುಲ್ ಕ್ರಿಸ್ ವೋಕ್ಸ್ ಬೌಲಿಂಗ್​ನಲ್ಲಿ​ ವಿಕೆಟ್​ ಒಪ್ಪಿಸಿದ್ದರು.

ಮೂರನೇ ಕ್ರಮದಲ್ಲಿ ಕ್ರೀಸ್​ಗೆ ಬಂದ ನಾಯಕ ರೋಹಿತ್​ ಶರ್ಮಾ, ವಿರಾಟ್​ ಜೊತೆಗೂಡಿ ತಂಡವನ್ನು ಆರಂಭಿಕ ಕುಸಿತದಿಂದ ಮೇಲೆತ್ತುವ ಯತ್ನ ಮಾಡಿದ್ದರು. ತಂಡದ ಮೊತ್ತ 59 ರನ್​ಗಳಾಗಿದ್ದಾಗ 27 ರನ್​ ಗಳಿಸಿದ್ದ ರೋಹಿತ್, ಕ್ರಿಸ್ ಜೋರ್ಡಾನ್ ಬೌಲಿಂಗ್​ನಲ್ಲಿ ಓಟಾದರು. ನಂತರ ಬಂದ ಸೂರ್ಯಕುಮಾರ್ ಯಾದವ್​ 14 ರನ್​ ಗಳಿಸಿ ಆದಿಲ್ ರಶೀದ್ ಬೌಲಿಂಗ್​ನಲ್ಲಿ ​ವಿಕೆಟ್​ ಒಪ್ಪಿಸಿ ಪೆವಿಲಿಯನ್ ಸೇರಿದ್ದರು.

ಇದನ್ನೂ ಓದಿ: ಹಾರ್ದಿಕ್​ ಫಿಟ್ನೆಸ್​ ಸೀಕ್ರೆಟ್: ವಿದೇಶ ಪ್ರವಾಸಕ್ಕೂ ಅಡುಗೆ ಭಟ್ಟರೊಂದಿಗೆ ತೆರಳುವ ಪಾಂಡ್ಯ

ಆದರೆ, ಭರವಸೆಯ ಆಟಗಾರ ವಿರಾಟ್​ ಕೊಹ್ಲಿ ಉತ್ತಮ ಬ್ಯಾಟಿಂಗ್​ ಮಾಡಿದ್ದರು. ಸೂರ್ಯಕುಮಾರ್ ಬಳಿಕ ಬಂದ ಹಾರ್ದಿಕ್​ ಪಾಂಡ್ಯ ಸಹ ಬಿರುಸಿದ ಬ್ಯಾಟಿಂಗ್​ ಪ್ರದರ್ಶಿಸಿದ್ದರು. 40 ಎಸೆತಗಳಲ್ಲಿ ಒಂದು ಸಿಕ್ಸರ್​ ಮತ್ತು 4 ಬೌಂಡರಿಗಳ ಸಮೇತ 50 ರನ್​ ಸಿಡಿಸಿದ್ದ ವಿರಾಟ್​, ಅರ್ಧ ಶತಕದ ಪೂರೈಸಿದ ನಂತರದ ಬಾಲ್​ನಲ್ಲೇ ಕ್ರಿಸ್ ಜೋರ್ಡಾನ್ ಕ್ಯಾಚ್​ ಕೊಟ್ಟಿದ್ದರು.

ಇತ್ತ, ಹಾರ್ದಿಕ್​ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ್ದರು. ಕೇವಲ 33 ಎಸೆತಗಳಲ್ಲಿ 5 ಸಿಕ್ಸರ್​ ಮತ್ತು 4 ಬೌಂಡರಿಗಳನ್ನು ಬಾರಿಸಿದ್ದ ಪಾಂಡ್ಯ ಕೊನೆಯಲ್ಲಿ ಹಿಟ್​ ವಿಕೆಟ್​ ಆದರು. ಆದರೂ, ತಮ್ಮ 63 ರನ್​ಗಳೊಂದಿಗೆ ತಂಡದ ಉತ್ತಮ ಮೊತ್ತಕ್ಕೆ ಪಾಂಡ್ಯ ಕಾರಣವಾಗಿದ್ದರು. ರಿಷಬ್ ಪಂತ್ 6 ರನ್​ಗಳಿಗೆ ಓಟಾಗಿದ್ದರು. ಒಟ್ಟಾರೆ, ಟೀಂ ಇಂಡಿಯಾ 20 ಓವರ್​ಗಳಲ್ಲಿ 168 ರನ್​ಗಳನ್ನು ಗಳಿಸಿತ್ತು.

ಇಂಗ್ಲೆಂಡ್​ ಪರ ಕ್ರಿಸ್ ಜೋರ್ಡಾನ್ ಮೂರು ವಿಕೆಟ್​ ಪಡೆದು ಮಿಂಚಿದ್ದರು. ಆದಿಲ್ ರಶೀದ್ ಮತ್ತು ಕ್ರಿಸ್ ವೋಕ್ಸ್ ತಲಾ ಒಂದು ವಿಕೆಟ್​ ಪಡೆದಿದ್ದರು.

ಇದನ್ನೂ ಓದಿ: ಟಿ20 ವಿಶ್ವಕಪ್: ಫೈನಲ್​ನಲ್ಲಿ ನಮಗೆ ಭಾರತವೇ ಎದುರಾಳಿಯಾಗಿ ಸಿಗಬೇಕು; ಪಾಕ್​ ಮೆಂಟರ್​ ಹೇಡನ್​​

Last Updated : Nov 10, 2022, 4:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.