ETV Bharat / sports

T20 World Cup: ಜೂನ್ 4 ರಿಂದ ಜೂನ್ 30ರ ವರೆಗೆ ವೆಸ್ಟ್​ ಇಂಡೀಸ್​, ಅಮೆರಿಕದಲ್ಲಿ 2024 ರ ಟಿ20 ವಿಶ್ವಕಪ್​?

author img

By

Published : Jul 29, 2023, 7:09 AM IST

2024 ರ ಟಿ20 ವಿಶ್ವಕಪ್​ ಅನ್ನು ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸಲಿವೆ. ಐಸಿಸಿ ಅಂತಿಮ ತೀರ್ಮಾನಕ್ಕಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ತೆರಳಿ ಸ್ಥಳ ಪರೀಕ್ಷೆ ನಡೆಸಲಿದೆ ಎಂದು ತಿಳಿದುಬಂದಿದೆ.

T20 World Cup
T20 World Cup

ನವದೆಹಲಿ: 'ಜಂಟಲ್​ಮನ್​ ಗೇಮ್​' ಕ್ರಿಕೆಟ್​ನ ಚಾರ್ಮ್​ ಅನ್ನೇ ಬದಲಿಸಿದ್ದು ಟಿ20 ಮಾದರಿ. ಈ ಹೊಡಿಬಡಿ ಆಟ ಪ್ರೇಕ್ಷಕರಿಗೆ ಮನರಂಜನೆ ಜೊತೆಗೆ ಹಣದ ಹೊಳೆಯನ್ನೇ ಹರಿಸಿದೆ. ಇದರಿಂದ ಪ್ರೇರೇಪಿತರಾಗಿ ಹಲವಾರು ಲೀಗ್​ ಪಂದ್ಯಾವಳಿಗಳು ಹುಟ್ಟಿಕೊಂಡಿವೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ(ಐಸಿಸಿ) ಕೂಡ ಏಕದಿನದಂತೆ ಟಿ20ಗೂ ವಿಶ್ವಕಪ್​ ನಡೆಸುತ್ತಿದ್ದು, 2024 ರ ಟಿ20 ವಿಶ್ವಕಪ್​ ಅನ್ನು ವೆಸ್ಟ್ ಇಂಡೀಸ್​ ಮತ್ತು ಅಮೆರಿಕದಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಐಸಿಸಿ ಪುರುಷ ವಿಶ್ವಕಪ್​ 2024 ಜೂನ್ 4 ರಿಂದ ಜೂನ್ 30ರ ವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಆಯೋಜನೆಯಾಗುವ ಸಾಧ್ಯತೆಯಿದೆ. ಐಸಿಸಿ ನಿಯೋಗವು ಅಮೆರಿಕಕ್ಕೆ ಭೇಟಿ ನೀಡಿದ್ದು, ಐದು ಮೈದಾನಗಳನ್ನು ಶಾರ್ಟ್​ ಲಿಸ್ಟ್​ ಮಾಡಿದೆ. ಈ ಸ್ಥಳಗಳು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಆಯೋಜಿಸಲಿವೆ ಎಂದು ತಿಳಿದು ಬಂದಿದೆ.

ಐಸಿಸಿ ನಿಯೋಗವು ಮೋರಿಸ್ವಿಲ್ಲೆ, ಡಲ್ಲಾಸ್ ಮತ್ತು ನ್ಯೂಯಾರ್ಕ್ ಮೈದಾನಗಳನ್ನು ಪಂದ್ಯಗಳ ಆಯೋಜನೆಗೆ, ಫ್ಲೋರಿಡಾದ ಲಾಡರ್‌ಹಿಲ್ ಸ್ಟೇಡಿಯಂ ಅಭ್ಯಾಸ ಪಂದ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಮಾರಿಸ್ವಿಲ್ಲೆ ಮತ್ತು ಡಲ್ಲಾಸ್ ಮೈದಾನಗಳಲ್ಲಿ ಅಮೆರಿಕದಲ್ಲಿ ಪರಿಚಯಿಸಲಾಗಿರುವ ಮೇಜರ್ ಲೀಗ್ ಕ್ರಿಕೆಟ್‌ನ ಚೊಚ್ಚಲ ಆವೃತ್ತಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಹೀಗಾಗಿ ಇವುಗಳು ಐಸಿಸಿ ಕಡ್ಡಾಯ ನಿಯಮಗಳ ಅನುಸಾರ ಅಂತಾರಾಷ್ಟ್ರೀಯ ಮೈದಾನದ ಸ್ಥಾನಮಾನವನ್ನು ಪಡೆಯಬೇಕಾಗಿಲ್ಲ. ಮುಂದಿನ ತಿಂಗಳಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮತ್ತು ಅಮೆರಿಕ ಕ್ರಿಕೆಟ್ ಸಂಸ್ಥೆಯ ಜೊತೆ ಐಸಿಸಿ ಮಾತುಕತೆ ನಡೆಸಿ ಮೈದಾನಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ.

ವಿಶ್ವಕಪ್​ನಲ್ಲಿ 20 ತಂಡಗಳು ಭಾಗಿ: 2024 ರ ಟಿ20 ವಿಶ್ವಕಪ್​ ಸ್ವರೂಪ ತುಸು ಬದಲಾಗಲಿದೆ. 2022 ರ ವಿಶ್ವಕಪ್​ ವೇಳೆ 12 ತಂಡಗಳು ಭಾಗಿಯಾಗಿದ್ದವು. ಆದರೆ, ಮುಂದಿನ ಸಲದ ಟೂರ್ನಿಯಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಹೀಗಾಗಿ ಅರ್ಹತಾ ಪಂದ್ಯಗಳನ್ನು ನಡೆಸಲಾಗುತ್ತದೆ. ಯುರೋಪ್​ ವಲಯದ ಅರ್ಹತಾ ಪಂದ್ಯಗಳಲ್ಲಿ ಐರ್ಲೆಂಡ್​ ಮತ್ತು ಸ್ಕಾಟ್ಲೆಂಡ್ ಈಗಾಗಲೇ ಅಗ್ರ 2 ತಂಡಗಳಾಗಿ ಅರ್ಹತೆ ಪಡೆದಿದ್ದರೆ, ಪಪುವಾ ನ್ಯೂಗಿನಿ ಕೂಡ ಪಟ್ಟಿಯಲ್ಲಿದೆ.

ಮುಂಬರುವ ದಿನಗಳಲ್ಲಿ ಅಮೆರಿಕ (ಒಂದು ಸ್ಥಾನಕ್ಕಾಗಿ), ಆಫ್ರಿಕಾ (ಎರಡು ಸ್ಥಾನ) ಮತ್ತು ಏಷ್ಯಾ (ಎರಡು ಸ್ಥಾನ) ಖಂಡಗಳ ತಂಡಗಳು ಅರ್ಹತೆಗಾಗಿ ಸೆಣಸಾಡಲಿವೆ. ಕಳೆದ ಸಲದ ಟಿ20 ವಿಶ್ವಕಪ್‌ನ ಅಗ್ರ 8 ತಂಡಗಳು ಸೇರಿದಂತೆ ಹನ್ನೆರಡು ದೇಶಗಳು ಈಗಾಗಲೇ ಸ್ಪರ್ಧೆಗೆ ಅರ್ಹತೆ ಪಡೆದಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂ​ಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ. ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ತಂಡಗಳು ಸ್ಥಾನ ಪಡೆದಿವೆ.

ಟೂರ್ನಿ ಸ್ವರೂಪ ಬದಲು: 2024 ರ ಟಿ20 ವಿಶ್ವಕಪ್ ಹಿಂದಿನ ಆವೃತ್ತಿಗಳಿಗಿಂತ ವಿಭಿನ್ನ ಸ್ವರೂಪವನ್ನು ಹೊಂದಿರುತ್ತದೆ. ಸೂಪರ್ 12 ತಂಡಗಳು ಸೇರಿ 20 ತಂಡಗಳನ್ನು ತಲಾ 5 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8 ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ತಂಡಗಳು ನಂತರ ತಲಾ ನಾಲ್ಕರ ಎರಡು ಗುಂಪುಗಳಾಗಿ ವಿಭಜಿಸಲ್ಪಡುತ್ತವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿವೆ. ಬಳಿಕ ಫೈನಲ್​ಗೆ 2 ತಂಡಗಳು ಹೋಗಲಿವೆ.

ಇದನ್ನೂ ಓದಿ; ರ್‍ಯಾಂಕಿಂಗ್​ ಆಧಾರದಲ್ಲಿ ನೇರ ಆಯ್ಕೆ ಪಡೆದ ಭಾರತ, ಹರ್ಮನ್​ಪ್ರೀತ್​​ಗೆ ನಿಷೇಧದ ಅಡ್ಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.