ನಯಾಗಡ್(ಒಡಿಶಾ): ಹೋರಾಟವಿಲ್ಲದೆ ಯಶಸ್ಸು ಅಸಾಧ್ಯ. ಕಠಿಣ ಪರಿಶ್ರಮ ಮನುಷ್ಯನಿಗೆ ಮುಂದೊಂದು ದಿನ ಯಶಸ್ಸನ್ನು ತಂದುಕೊಡುತ್ತದೆ. ಮನೋಬಲ ದೃಢವಾಗಿದ್ದರೆ ಯಾವುದೇ ಕೆಸಲವಾದರೂ ಅಸಾಧ್ಯವಲ್ಲ ಎನ್ನುವುದಕ್ಕೆ ಒಡಿಶಾದ ನಯಾಗಡ್ ಜಿಲ್ಲೆಯ ಮಾದಾಪುರ ಗ್ರಾಮದ ಪ್ರಶಾಂತ್ ರಾಣಾ ಸಾಕ್ಷಿಯಾಗಿದ್ದಾರೆ.
ಈತನ ಯಶಸ್ವಿ ಕಥೆ ಸಾವಿರಾರು ಯುವಕರಿಗೆ ಮಾದರಿಯಾಗಿದೆ. ಕ್ರಿಕೆಟ್ ಆಡಲು ತೆರಳಿದರೆ ಥಳಿಸುತ್ತಿದ್ದ ಅವರ ತಂದೆಯೇ ಇಂದು ಮೈದಾನದ ಹೊರಗೆ ನಿಂದು ಚೆಪ್ಪಾಳೆ ತಟ್ಟುತ್ತಾ ಹುರಿದುಂಬಿಸುತ್ತಿದ್ದಾರೆ.
ಒಡಿಶಾದ ಪ್ರಶಾಂತ್ ರಾಣಾ 9 ವರ್ಷಗಳ ಕಾಲ ಪ್ಲಂಬರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಇದೇ ತಿಂಗಳಿಂದ ಆರಂಭವಾಗಲಿರುವ ರಣಜಿ ಟ್ರೋಫಿಯಲ್ಲಿ ವೇಗದ ಬೌಲರ್ ಆಗಿ ತಮ್ಮ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ತನ್ನ ಹಳ್ಳಿಯ ರಸ್ತೆ, ಪುಟ್ಟ ಮೈದಾನದಲ್ಲಿ ಟೆನಿಸ್ ಚೆಂಡಿನಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕ ಶೀಘ್ರದಲ್ಲೇ ಸ್ಟೇಡಿಯಂನಲ್ಲಿ ವಿಜೃಂಬಿಸಲಿದ್ದಾರೆ.
ಮಗನನ್ನ ಗದರಿಸುತ್ತಿದ್ದ ತಂದೆ: ಪ್ರಶಾಂತ್ ನಯಾಗಡ್ ಜಿಲ್ಲೆಯ ಮಾದಪುರ್ ಗ್ರಾಮದಲ್ಲಿ ತಮ್ಮ ತಂದೆ ಮತ್ತು ತಾಯಿಯೊಡನೆ ಚಿಕ್ಕ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಬಡತನದ ಬೇಗೆಯಲ್ಲೇ ಬೆಳೆದ ಪ್ರಶಾಂತ್ ಶಾಲೆಗೆ ಹೋಗುತ್ತಿದ್ದಾಗ ಕ್ರಿಕೆಟ್ ಆಡುತ್ತಿದ್ದರು. ಆದರೆ, ಓದುವುದನ್ನು ಬಿಟ್ಟು ಕ್ರಿಕೆಟ್ ಆಡುವುದನ್ನು ಕಂಡ ತಂದೆ ಸನಾತನ ರಾಣಾ ಮಗನನ್ನು ಗದರಿಸುತ್ತಿದ್ದರು. ಕೆಲವು ದಿನಗಳ ನಂತರ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರಿಂದ ಪ್ರಶಾಂತ್ ಊರನ್ನು ತ್ಯಜಿಸಿ ಸಿಲ್ವರ್ ಸಿಟಿ ಕಟಕ್ಗೆ ಆಗಮಿಸಿದ್ದರು.
ಯುನಿಯನ್ ಕ್ಲಬ್ನಲ್ಲಿ ಬೌಲಿಂಗ್ ಅಭ್ಯಾಸ : ಮೊದಲು ಕಟಕ್ನಲ್ಲಿ ಪ್ಲಂಬರ್ ಆಗಿ ಕೆಲಸವನ್ನು ಆರಂಭಿಸಿದ್ದರು. ಆದರೆ, ಕ್ರಿಕೆಟಿಗನಾಗುವ ಕನಸನ್ನು ಮಾತ್ರ ಅವರು ಬಿಟ್ಟಿರಲಿಲ್ಲ. ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್, ಅದೇ ಯುನಿಯನ್ ಕ್ಲಬ್ನಲ್ಲಿ ಬೌಲಿಂಗ್ ಕೂಡ ಅಭ್ಯಾಸ ಮಾಡಲಾರಂಭಿಸಿದರು.
ಅಂತರ್ ಜಿಲ್ಲಾ ಟೂರ್ನಿಯಲ್ಲಿ ಆಡಿದ ಅವರು ಜೂನಿಯರ್ ಹಂತದಲ್ಲಿ ಕ್ರಿಕೆಟ್ ಆಡದೇ ನೇರವಾಗಿ 28 ಸದಸ್ಯರ ಸೀನಿಯರ್ ತಂಡದ ಶಿಬಿರಕ್ಕೆ ಆಯ್ಕೆಯಾದರು. ಇವರ ಬೌಲಿಂಗ್ ಪ್ರದರ್ಶನವನ್ನು ಕಂಡ ಕೋಚ್ಗಳು ಮತ್ತು ಆಯ್ಕೆಗಾರರು ರಣಜಿ ಟ್ರೋಫಿಗೆ ವೇಗದ ಬೌಲರ್ ಆಗಿ ಆಯ್ಕೆ ಮಾಡಿದ್ದಾರೆ.
ಕಠಿಣ ಶ್ರಮಕ್ಕೊಲಿದ ಯಶಸ್ಸು: ಪ್ರಶಾಂತ್ ಕ್ಲಬ್ನಲ್ಲಿ ತಂಡದ ಕೋಚ್ಗಳು ಮತ್ತು ಆಟಗಾರರೊಂದಿಗೆ ನಿರಂತರ ಅಭ್ಯಾಸ ಮಾಡಲು ಶುರು ಮಾಡಿದರು. ಅವರ ಕಠಿಣ ಶ್ರಮ ಇಂದು ಅವರನ್ನು ಒಡಿಶಾ ತಂಡದ ಪ್ರಮುಖ ಆಟಗಾರನನ್ನಾಗಿ ರೂಪಿಸಿದೆ. ಯುನಿಯನ್ ಕ್ಲಬ್ ಕೋಚ್ ಪ್ರಶಾಂತ್ಗೆ ಕೇವಲ ತರಬೇತಿ ನೀಡಿದ್ದಲ್ಲದೆ, ಅವರಿಗೆ ಆರ್ಥಿಕ ನೆರವನ್ನು ನೀಡಿ ಬೆಂಬಲ ನೀಡಿದೆ.
ಇಂತಹ ಅತ್ಯುತ್ತಮ ಪ್ರತಿಭೆಯನ್ನು ತಯಾರು ಮಾಡಿ ರಾಜ್ಯ ತಂಡಕ್ಕೆ ನೀಡಿದ್ದಕ್ಕೆ ಒಡಿಶಾ ಕ್ರಿಕೆಟ್ ಅಸೋಸಿಯೇಷನ್ ಯೂನಿಯನ್ ಕ್ಲಬ್ಗೆ ಧನ್ಯವಾದ ತಿಳಿಸಿದೆ. ಜೊತೆಗೆ ಒಸಿಎ ಕಾರ್ಯದರ್ಶಿ ಸಂಜಯ್ ಬೆಹೆರಾ ಮುಂಬರುವ ದಿನಗಳಲ್ಲಿ ಪ್ರಶಾಂತ್ ರಾಜ್ಯ ಕ್ರಿಕೆಟ್ ಮಂಡಳಿಯಿಂದ ಪ್ರಶಾಂತ್ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂದು ಈಗಾಗಲೇ ತಿಳಿಸಿದ್ದಾರೆ.
ಕಡುಬಡತನದಲ್ಲಿ ಹುಟ್ಟಿ, ಜೀವನೋಪಾಯಕ್ಕಾಗಿ ನಗರ ಸೇರಿದ ಯುವಕ ಕಷ್ಟಪಟ್ಟು ದುಡಿಯುವುದರ ಜೊತೆಗೆ ಕಠಿಣ ಪರಿಶ್ರಮದಿಂದ ಕ್ರಿಕೆಟಿಗನಾಗುವ ಗುರಿಯನ್ನು ಇಡೇರಿಸಿಕೊಂಡಿರುವುದು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.
ಇದನ್ನೂ ಓದಿ:ಭವಿಷ್ಯದ ತಾರೆ ಚೇತನ್ ಸಕಾರಿಯಾರನ್ನ 4.2 ಕೋಟಿ ರೂ ನೀಡಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್