ETV Bharat / sports

'400 ರನ್​ ನೀಡುವ ಪಿಚ್​ ಆಗಿರಲಿಲ್ಲ': ದ.ಆಫ್ರಿಕಾ ವಿರುದ್ಧದ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ರೋಹಿತ್​

author img

By ANI

Published : Dec 29, 2023, 8:08 AM IST

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಸೋತ ಬಳಿಕ ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಪ್ರದರ್ಶನದ ಕುರಿತಂತೆ ಮಾತನಾಡಿದ್ದಾರೆ.

rohit-sharmas-assess-india-bowling-performance-in-1st-test-loss-against-south-africa
400 ರನ್​ ನೀಡುವ ಪಿಚ್​ ಆಗಿರಲಿಲ್ಲ: ದ.ಆಫ್ರಿಕಾ ವಿರುದ್ಧದ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ರೋಹಿತ್​

ಸೆಂಚುರಿಯನ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಸೋಲಿಗೆ ಭಾರತ ತಂಡದ ಕಳಪೆ ಬೌಲಿಂಗ್​ ಕಾರಣ ಎಂದು ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅವರು, ನಾವು ಚೆನ್ನಾಗಿ ಬೌಲಿಂಗ್​​ ಮಾಡಲಿಲ್ಲ, ಇಲ್ಲಿನ ಪಿಚ್​​ 400 ರನ್ ಬಿಟ್ಟುಕೊಡುವ ಮಟ್ಟದಲ್ಲಿ ಇರಲಿಲ್ಲ ಎಂಬುದನ್ನು ನಾಯಕ ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯವನ್ನು ಮೂರೇ ದಿನಗಳಲ್ಲಿ ಇನ್ನಿಂಗ್ಸ್ ಮತ್ತು 32 ರನ್‌ಗಳಿಂದ ಭಾರತ ತಂಡ ಸೋತಿದೆ. ವಿದಾಯದ ಸರಣಿ ಆಡುತ್ತಿರುವ ಡೀನ್ ಎಲ್ಗರ್ ಮೊದಲ ಇನ್ನಿಂಗ್ಸ್‌ನಲ್ಲಿ ಬಂಡೆಯಂತೆ ನಿಂತು, 185 ರನ್​ ಬಾರಿಸಿದರು. ಹೀಗಾಗಿ ಹರಿಣಗಳ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 408 ರನ್​ ಪೇರಿಸಿದ್ದಲ್ಲದೆ,163 ರನ್​ಗಳ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಟೀಂ ಇಂಡಿಯಾ ಬೌಲರ್‌ಗಳ ಗುಣಮಟ್ಟದ ಪ್ರದರ್ಶನದ ನಡುವೆಯೂ ಎಲ್ಗರ್​ ಬ್ಯಾಟಿಂಗ್​ ಪಾರಮ್ಯ ಮೆರೆದರು.

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್​, 'ನಾವು ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ. ಇದು 400 ರನ್​ ಬಿಟ್ಟುಕೊಂಡುವ ವಿಕೆಟ್ ಆಗಿರಲಿಲ್ಲ. ನಾವು ಕೇವಲ ಓರ್ವ ಬೌಲರ್​ ಮೇಲೆ ಹೆಚ್ಚು ಅವಲಂಬಿತರಾಗಲು ಆಗದು. ಉಳಿದ ಬೌಲರ್‌ಗಳು ಕೂಡ ತಕ್ಕ ಸಾಥ್​ ನೀಡಬೇಕಿದೆ. ಎದುರಾಳಿ ತಂಡದ ಬೌಲಿಂಗ್ ಪ್ರದರ್ಶನದಿಂದ ನಾವು ಸಾಕಷ್ಟು ಕಲಿಯಬೇಕಿದೆ' ಎಂದರು.

ಮೊದಲ ಇನ್ನಿಂಗ್ಸ್‌ನಲ್ಲಿ, ತಂಡವು ವಿಕೆಟ್‌ ಕಳೆದುಕೊಳ್ಳುತ್ತ ಸಾಗಿದ್ದರೂ, ರಾಹುಲ್ ಏಕಾಂಗಿ ಹೋರಾಟ ಪ್ರದರ್ಶಿಸಿದರು. ಅಲ್ಲದೆ, ತಂಡದ ಮೊತ್ತವನ್ನು 245 ಕ್ಕೆ ಕೊಂಡೊಯ್ದರು. ತಂಡವು ಪಿಚ್​ ಪರಿಸ್ಥಿತಿಗೆ ತಕ್ಕಂತೆ ಆಡಬೇಕಿದೆ. ರಾಹುಲ್​ 70ರ ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡಿದರು. ನಾವು ಪಂದ್ಯದ ಗತಿಯನ್ನು ಅರಿತು ಆಡಬೇಕು, ಬ್ಯಾಟಿಂಗ್​ಗಿಳಿದ ತಕ್ಷಣ ಆಕ್ರಮಣಕಾರಿಯಾಗಿ ಆಡಬೇಕಿಲ್ಲ. ಅದು ಯಾವಾಗಲೂ ಸಾಧ್ಯ ಆಗುವುದಿಲ್ಲ. ಈ ಬಗ್ಗೆ ಉದ್ದೇಶ ತಿಳಿದುಕೊಂಡು ಬ್ಯಾಟಿಂಗ್​ ಶಿಸ್ತು ತೋರಬೇಕಿದೆ ಎಂದು ರೋಹಿತ್ ಹೇಳಿದರು.

ಟಾಸ್​​ ಸೋತು ಬ್ಯಾಟಿಂಗ್​ ನಡೆಸಿದ ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಕೆಎಲ್​ ರಾಹುಲ್​ ಶತಕದ ಬಲದಿಂದ 245 ರನ್​ ಗಳಿಸಿತ್ತು. ಬಳಿಕ ಆಕ್ರಮಣಕಾರಿ ಬೌಲಿಂಗ್​ ನಡೆಸುವಲ್ಲಿ ವಿಫಲವಾದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಗೆ 408 ರನ್​ ಬಿಟ್ಟುಕೊಟ್ಟಿತು. ಡೀನ್​ ಎಲ್ಗರ್​ 185 ರನ್​ ಬಾರಿಸಿದರೆ, ಇವರಿಗೆ ತಕ್ಕ ಸಾಥ್​ ನೀಡಿದ ಬೆಡಿಂಘಮ್ (56) ಹಾಗೂ ಮಾರ್ಕೋ ಜಾನ್ಸೆನ್​ (85) ತಲಾ ಅರ್ಧಶತಕ ಬಾರಿಸಿದರು. ಇದರಿಂದಾಗಿ ಹರಿಣ ಪಡೆ 163 ರನ್​ ಮುನ್ನಡೆ ಪಡೆಯಿತು. ಬಳಿಕ ಬ್ಯಾಟ್​ ಮಾಡಿದ ಭಾರತ ಮತ್ತೆ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದು, 131 ರನ್​ಗೆ ಆಲೌಟ್​ ಆಗಿ, ಇನ್ನಿಂಗ್ಸ್ ಹಾಗೂ 32 ರನ್​ಗಳ ಹೀನಾಯ ಸೋಲುಂಡಿದೆ. ತಂಡದ ಪರ ವಿರಾಟ್ ಕೊಹ್ಲಿ 76 ರನ್​ ಗಳಿಸಿದರೂ ಇನ್ನಿಂಗ್ಸ್​ ಮುಖಭಂಗದಿಂದ ಪಾರು ಮಾಡಲಾಗಲಿಲ್ಲ.

ಇದನ್ನೂ ಓದಿ: 'ಬಾಕ್ಸಿಂಗ್ ಡೇ ಟೆಸ್ಟ್‌' ಗೆದ್ದ ದಕ್ಷಿಣ ಆಫ್ರಿಕಾ; ಭಾರತದ ಬ್ಯಾಟಿಂಗ್ ವೈಫಲ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.