ETV Bharat / sports

ಅಗ್ನಿಪರೀಕ್ಷೆ ಗೆಲ್ತಾರಾ ವಿರಾಟ್ ಕೊಹ್ಲಿ​, ರೋಹಿತ್​ ಶರ್ಮಾ?: ಸಾಮರ್ಥ್ಯ ಸಾಬೀತಿಗೆ ಆಫ್ಘನ್​ ಸರಣಿ ವೇದಿಕೆ

author img

By ETV Bharat Karnataka Team

Published : Jan 10, 2024, 2:02 PM IST

ಒಂದೂವರೆ ವರ್ಷದ ಬಳಿಕ ಟಿ20 ತಂಡಕ್ಕೆ ಮರಳಿರುವ ವಿರಾಟ್​ ಕೊಹ್ಲಿ ಮತ್ತು ನಾಯಕ ರೋಹಿತ್​ ಶರ್ಮಾ ಆಫ್ಘಾನಿಸ್ತಾನ ಸರಣಿಯಲ್ಲಿ ನೀಡುವ ಪ್ರದರ್ಶನ ಮೇಲೆ ನಿರೀಕ್ಷೆ ಹೆಚ್ಚಿದೆ.

ಅಗ್ನಿಪರೀಕ್ಷೆ ಗೆಲ್ತಾರಾ ವಿರಾಟ್ ಕೊಹ್ಲಿ
ಅಗ್ನಿಪರೀಕ್ಷೆ ಗೆಲ್ತಾರಾ ವಿರಾಟ್ ಕೊಹ್ಲಿ

ಮೊಹಾಲಿ (ಪಂಜಾಬ್): ಬ್ಯಾಟಿಂಗ್​ ಕಿಂಗ್ ವಿರಾಟ್​ ಕೊಹ್ಲಿ, ಹಿಟ್​ಮ್ಯಾನ್​ ರೋಹಿತ್​ ಶರ್ಮಾ. ಈ ಹೆಸರು ಕೇಳಿದ್ರೆ ಕ್ರಿಕೆಟ್​ ಅಭಿಮಾನಿಗಳ ಕಿವಿ ಅರಳುತ್ತೆ. ಇಬ್ಬರೂ ಮೈದಾನದಲ್ಲಿದ್ದಾಗ ನಿರೀಕ್ಷೆ ಆಕಾಶದಷ್ಟಿರುತ್ತೆ. ವರ್ಷಗಳ ಬಳಿಕ ಚುಟುಕು ಮಾದರಿಯ ಟಿ20ಗೆ ಮರಳಿರುವ ಕ್ರಿಕೆಟಿಗರು, ನಾಳೆಯಿಂದ ಆರಂಭವಾಗುವ ಆಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ನೀಡುವ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದೆ.

14 ತಿಂಗಳ ಬಳಿಕ ಮತ್ತೆ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಇಬ್ಬರೂ ಆಟಗಾರರು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕಿದೆ. ಸರಣಿಯಲ್ಲಿ ಸಿಡಿದು ತಾವು ವಿಶ್ವಕಪ್​ಗೂ ರೆಡಿ ಎಂಬುದನ್ನು ಸಾಬೀತು ಮಾಡಬೇಕು. ಅವಕಾಶಕ್ಕಾಗಿ ಕಾಯುತ್ತಿರುವ ಯುವ ಕ್ರಿಕೆಟಿಗರ ದಂಡಿನಲ್ಲಿ ಹಿರಿಯ ಆಟಗಾರರು ಎಷ್ಟರ ಮಟ್ಟಿಗೆ ಪ್ರದರ್ಶನ ನೀಡಲಿದ್ದಾರೆ ಎಂಬುದು ಕ್ರಿಕೆಟ್​ ಲೋಕದ ಕುತೂಹಲವಾಗಿದೆ.

ವಿರಾಟ್​ ಮತ್ತು ರೋಹಿತ್​ ಏಕದಿನ ಮತ್ತು ಟೆಸ್ಟ್​ನಲ್ಲಿ ತೋರಿದ ಪರಾಕ್ರಮ ಕಳೆದೆರಡು ವರ್ಷಗಳಿಂದ ಟಿ20 ಮಾದರಿಯಲ್ಲಿ ತೋರಿಸಿಲ್ಲ. ಹೊಡಿಬಡಿ ಮಾದರಿಯ ಬ್ಯಾಟಿಂಗ್​ ಇಬ್ಬರಿಂದ ಬಂದಿಲ್ಲ. ವಿಶ್ವಕಪ್​ಗೆ ಯುವ ಆಟಗಾರರ ಬದಲಿಗೆ ಹಿರಿತನ ಆಧಾರದ ಮೇಲೆ ಇಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ, ಅವರ ಪ್ರದರ್ಶನ ಗರಿಷ್ಠ ಮಟ್ಟದಲ್ಲಿರಬೇಕಿದೆ. ಅದು ಆಫ್ಘಾನಿಸ್ತಾನ ಸರಣಿಯಲ್ಲಿ ಗೊತ್ತಾಗಲಿದೆ.

ಕಳೆದ ಸಲದ ತಪ್ಪು ಸರಿಯಾಗುತ್ತಾ?: 2022 ರ ಟಿ20 ವಿಶ್ವಕಪ್​ನಲ್ಲಿ ತಂಡದ ಪ್ರಮುಖ ಸಮಸ್ಯೆಯಾಗಿದ್ದೇ ಆರಂಭಿಕ ಮೂವರು ಆಟಗಾರರು. ಕ್ಷಿಪ್ರಗತಿಯಲ್ಲಿ ರನ್​ ಕಲೆಹಾಕುವ ಬದಲಿಗೆ ನಿಧಾನಗತಿಯಲ್ಲಿ ಬ್ಯಾಟಿಂಗ್ ಬೀಸಿದ್ದೇ ಪಂದ್ಯಗಳ ಸೋಲಿಗೆ ಕಾರಣವಾಗಿತ್ತು. ಹೀಗಾಗಿ ವಿರಾಟ್​ ಮತ್ತು ರೋಹಿತ್​ ಸ್ಟ್ರೈಕ್​ರೇಟ್​ ರಾಕೆಟ್​ನಂತೆ ಮೇಲೇರಬೇಕಿದೆ. ಈಗಿನ ಯುವ ಆಟಗಾರರು ತೋರುತ್ತಿರುವ ಪ್ರದರ್ಶನ ಹೊರತಾಗಿಯೂ ಹಿರಿಯ ಆಟಗಾರರಿಗೆ ಆಯ್ಕೆ ಸಮಿತಿ ಮಣೆ ಹಾಕಿದ್ದು, ಕೆಲವರ ಕೆಂಗಣ್ಣಿಗೆ ಕಾರಣವಾಗಿದೆ. ಇದೆಲ್ಲದಕ್ಕೂ ಉತ್ತರ ಸಿಗಬೇಕಿದೆ.

ಬ್ಯಾಟಿಂಗ್​ ಗನ್​ಗಳಾದ ಶುಭ್​ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕ ಸ್ಥಾನ ಪಡೆಯುವರೇ ಅಥವಾಗಿ ಇಬ್ಬರಲ್ಲಿ ಒಬ್ಬರು ರೋಹಿತ್​ ಜೊತೆ ಇನಿಂಗ್ಸ್​ ಆರಂಭಿಸಲಿದ್ದಾರೆಯೇ ಎಂಬುದು ನಿಖರವಾಗಿಲ್ಲ. ಮೂರನೇ ಕ್ರಮಾಂಕದಲ್ಲಿ ವಿರಾಟ್​ ಇಳಿದರೆ, ಜೈಸ್ವಾಲ್​ ಅಥವಾ ಗಿಲ್​ ಕೆಳಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಇಶಾನ್ ಕಿಶನ್‌ ಸರಣಿಯಿಂದ ದೂರ ಉಳಿದಿದ್ದು, ಜಿತೇಶ್ ಶರ್ಮಾ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಆಗಿ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ರಿಂಕು ಸಿಂಗ್ ಅಥವಾ ಶಿವಂ ದುಬೆ ಫಿನಿಶರ್‌ ಸ್ಥಾನ ತುಂಬಬೇಕಿದೆ. ಯುವ ಆಟಗಾರ ಅರ್ಷದೀಪ್ ಸಿಂಗ್ ವೇಗಿಗಳ ನೇತೃತ್ವ ವಹಿಸಿದರೆ, ಅವೇಶ್ ಖಾನ್, ಮುಖೇಶ್ ಕುಮಾರ್ ತಮ್ಮ ಸಾಥ್​ ನೀಡಬೇಕಿದೆ.

ಮೊದಲ ಪಂದ್ಯ ಪಂಜಾಬ್​ನ ಮೊಹಾಲಿ ಕ್ರೀಡಾಂಗಣದಲ್ಲಿ ನಾಳೆ ನಡೆದರೆ, ಇನ್ನೆರಡು ಪಂದ್ಯಗಳು ಮಧ್ಯಪ್ರದೇಶ ಇಂದೋರ್ ಮತ್ತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ತಂಡ ಇಂತಿದೆ; ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್.

ಇದನ್ನೂ ಓದಿ: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ಸಿದ್ಧ: ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.