ETV Bharat / sports

ವಿಶ್ವಕಪ್​ನಲ್ಲಿ ಭಾರತ ತಂಡ ಮುನ್ನಡೆಸುತ್ತಿರೋದು ದೊಡ್ಡ ಗೌರವ: ನಾಯಕ ರೋಹಿತ್​ ಶರ್ಮಾ

author img

By ETV Bharat Karnataka Team

Published : Oct 7, 2023, 10:17 PM IST

ಏಕದಿನ ವಿಶ್ವಕಪ್​ನಲ್ಲಿ ನಾಳೆ ಆಸ್ಟ್ರೇಲಿಯಾ ವಿರುದ್ಧ ಭಾರತ ಚೆನ್ನೈನಲ್ಲಿ ಮೊದಲ ಪಂದ್ಯವಾಡುತ್ತಿದೆ. ಅದಕ್ಕೂ ಮೊದಲು ನಡೆದ ಮಾಧ್ಯಮಗೋಷ್ಠಿಯಲ್ಲಿ ನಾಯಕ ರೋಹಿತ್​ ಭಾಗಿಯಾಗಿ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಾಯಕ ರೋಹಿತ್​ ಶರ್ಮಾ
ನಾಯಕ ರೋಹಿತ್​ ಶರ್ಮಾ

ಚೆನ್ನೈ (ತಮಿಳುನಾಡು) : ಭಾರತದಲ್ಲಿ ಕ್ರಿಕೆಟ್​ಗೆ ಇರುವ ಕ್ರೇಜ್​ ಯಾವ ಕ್ರೀಡೆಗೂ ಇಲ್ಲ. ಭಾರತ ತಂಡಕ್ಕೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇದೀಗ ಭಾರತದಲ್ಲಿ ವಿಶ್ವಕಪ್​ ನಡೆಯುತ್ತಿದ್ದು, ನಿರೀಕ್ಷೆ ಬೆಟ್ಟದಷ್ಟಿದೆ. ವಿಶ್ವಕಪ್​ ಗೆಲ್ಲುವ ಹೊಣೆಗಾರಿಕೆಯೂ ತಂಡದ ಮೇಲಿದೆ. ಅಂತಹ ತಂಡಕ್ಕೆ ರೋಹಿತ್​ ಶರ್ಮಾ ನಾಯಕನಾಗಿದ್ದಾರೆ. ಅವರ ಮೇಲಿರುವ ಒತ್ತಡ ಮತ್ತು ನಿರೀಕ್ಷೆ ಏನೆಂಬುದನ್ನು ಅವರು ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಭಾರತ ತಂಡದ ನಾಯಕತ್ವ ವಹಿಸುವುದು ಸುಲಭವಲ್ಲ. ಅದರಲ್ಲೂ ವಿಶ್ವಕಪ್ ತಂಡದ ನಾಯಕನಾಗಿರುವುದು ದೊಡ್ಡ ಗೌರವ. ಶ್ರೇಷ್ಠ ಕ್ರಿಕೆಟಿಗ, ಕ್ರಿಕೆಟ್​ ದೇವರಾದ ಸಚಿನ್​ ತೆಂಡೂಲ್ಕರ್​ ಅವರು ವಿಶ್ವಕಪ್​ ಗೆಲ್ಲದೇ ಇರುವುದು ಅಪೂರ್ಣ ಎಂದು ಭಾವಿಸಿದ್ದರು. ಅದರಂತೆ ನನ್ನ ವೃತ್ತಿ ಜೀವನದಲ್ಲಿ ವಿಶ್ವಕಪ್​ ಗೆಲುವು ಕಂಡಿಲ್ಲ. ಈಗ ನಾನು ತಂಡದ ನಾಯಕನಾಗಿದ್ದೇನೆ, ಹಾಗಾಗಿ, ಇದು ನನಗೆ ದೊಡ್ಡ ವಿಷಯವಾಗಿದೆ ಎಂದು ಅವರು ಶನಿವಾರ ಚೆನ್ನೈನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಹೇಳಿದರು.

ತಂಡದ ಕೌಶಲ್ಯದ ಬಗ್ಗೆ ವಿಶ್ವಾಸವಿದೆ; ತಂಡದ ಕೌಶಲ್ಯದ ಬಗ್ಗೆ ಸಾಕಷ್ಟು ವಿಶ್ವಾಸವಿದೆ. ನಾವು ಈ ಹಿಂದೆ ಸಾಧಿಸಿದ್ದರ ಬಗ್ಗೆ ಯೋಚಿಸಲ್ಲ. ಉತ್ತಮ ಕ್ರಿಕೆಟ್ ಆಡಬೇಕು. ಆಸೀಸ್ ತಂಡ ಬಲಿಷ್ಠವಾಗಿದೆ. ಅವರು ಹೇಗೆ ಆಡುತ್ತಾರೆ ಎಂಬ ಅರಿವಿದೆ. ಇಲ್ಲಿನ ಪಿಚ್ ಸವಾಲಿನದ್ದಾಗಿರಬಹುದು. ನಾವು ಹೇಗೆ ಆಡುತ್ತೇವೆ, ಯಾವ ಸ್ಟ್ರೋಕ್‌ಗಳನ್ನು ಆಡಬೇಕು. ಸ್ಕೋರ್​ ಎಷ್ಟೆಂಬುದನ್ನು ನಿರ್ಣಯಿಸಬೇಕಾಗಿದೆ ಎಂದು ಅವರು ಹೇಳಿದರು.

ಚೆಪಾಕ್‌ನಲ್ಲಿನ ಪಿಚ್ ಸಾಕಷ್ಟು ತಿರುವು ಪಡೆಯುತ್ತದೆ. ಪಂದ್ಯದ ದಿನದಂದು ಆಟದ ತಂತ್ರವನ್ನು ನಿರ್ಧರಿಸುತ್ತೇವೆ. ಆ ಸಮಯದಲ್ಲಿ ಆಟದ ತಂತ್ರವನ್ನು ರೂಪಿಸಿ ಅದನ್ನು ಮೈದಾನದಲ್ಲಿ ಅಳವಡಿಸಿಕೊಳ್ಳಬೇಕು. ಬ್ಯಾಟರ್​, ಬೌಲರ್​​ಗಳು ಕೂಡ ಪರಿಸ್ಥಿತಿಗೆ ತಕ್ಕಂತೆ ಯೋಜನೆ ರೂಪಿಸಬೇಕು ಎಂದು ರೋಹಿತ್​ ಹೇಳಿದರು.

ಸರಣಿ, ಟೂರ್ನಿ ಬೇರೆ ಬೇರೆ: ದ್ವಿಪಕ್ಷೀಯ ಸರಣಿ ಮತ್ತು ವಿಶ್ವಕಪ್ ವೇಳೆಯ ಒತ್ತಡ ವಿಭಿನ್ನ ಎಂಬುದನ್ನು ರೋಹಿತ್​ ಒತ್ತಿ ಹೇಳಿದರು. ಕ್ರಿಕೆಟ್​ ಸರಣಿಗಳಲ್ಲಿ ಒತ್ತಡ ದೊಡ್ಡದಾಗಿರುವುದಿಲ್ಲ. ಅದನ್ನು ನಿಭಾಯಿಸುವ ಕೌಶಲ ಇರುತ್ತದೆ. ಆದರೆ, ಇಂತಹ ಮಹತ್ವದ ಟೂರ್ನಿಗಳು ಬ್ಯಾಟರ್​ಗಳಿಗೆ ಡಬಲ್ ಹೊಡೆತ ನೀಡುತ್ತದೆ. 16 ವರ್ಷ ಕ್ರಿಕೆಟ್ ಆಡಿದ ಅನುಭವ ಇದೆ. ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಮತ್ತು ಒತ್ತಡವನ್ನು ಹೇಗೆ ಎದುರಿಸುತ್ತೀರಿ ಎಂಬುದನ್ನು ಕಲಿತಿದ್ದೇವೆ. ಒತ್ತಡವನ್ನು ಎದುರಿಸುವ ಮಾನಸಿಕ ಶಕ್ತಿ ನಮಗೆ ಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಬ್ಯಾಟರ್ ಆಗಿ, ನಾನು ಉತ್ತಮ ಆರಂಭವನ್ನು ನೀಡುತ್ತೇನೆ. ತಂಡದ ಅಗತ್ಯಕ್ಕೆ ತಕ್ಕಂತೆ ಆಡುತ್ತೇನೆ. ಸಿಕ್ಕ ದೊಡ್ಡ ಅವಕಾಶವನ್ನು ಬಳಸಿಕೊಳ್ಳುವ ಬಯಕೆ ಹೊಂದಿದ್ದೇನೆ ಎಂದು ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ 5 ಶತಕಗಳನ್ನು ಬಾರಿಸಿದ ಅನುಭವಿ ಹೇಳಿದರು. ಜೊತೆಗೆ ತವರಿನಲ್ಲಿ ಟೂರ್ನಿ ನಡೆಯುತ್ತಿರುವುದು ತಂಡಕ್ಕೆ ಅನುಕೂಲವೇ ಎಂಬ ಪ್ರಶ್ನೆಯನ್ನು ತಳ್ಳಿಹಾಕಿದ ಅವರು, ಎಲ್ಲ ತಂಡಕ್ಕೂ ತನ್ನದೇ ಆದ ಒತ್ತಡಗಳಿರುತ್ತವೆ. ಹೀಗಾಗಿ ಇದ್ಯಾವುದೂ ಲಾಭವಾಗಲ್ಲ ಎಂದರು.

ಇದನ್ನೂ ಓದಿ: ಆಸೀಸ್​ ವಿರುದ್ಧ ಶುಭ್​ಮನ್​ ಗಿಲ್​ ಆಡ್ತಾರಾ?: ಮಾಧ್ಯಮಗೋಷ್ಟಿಯಲ್ಲಿ ನಾಯಕ ರೋಹಿತ್ ಶರ್ಮಾ ಹೇಳಿದ್ದಿಷ್ಟು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.